ಕರ್ನಾಟಕ

ಅತ್ಯಾಚಾರ ಪ್ರಕರಣದ ವಿಚಾರಣೆಗೆ ರಾಮಚಂದ್ರಾಪುರ ಮಠಕ್ಕೆ ಸಿಐಡಿ ತಂಡ ಭೇಟಿ

Pinterest LinkedIn Tumblr

4878premalatha-and-raghaweshwarಶಿವಮೊಗ್ಗ: ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ತಂಡ, ಸೋಮವಾರ ಬೆಳಿಗ್ಗೆ ಹೊಸನಗರ ತಾಲೂಕಿನ ರಾಮಚಂದ್ರಾಪುರ ಮಠಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿತು.

ಸಿಐಡಿ ಡಿವೈಎಸ್ಪಿ ಪುರುಷೋತ್ತಮ ಅವರ ನೇತೃತ್ವದ ನಾಲ್ವರು ಅಧಿಕಾರಿಗಳ ತಂಡ ಬೆಳಿಗ್ಗೆ 9 ರ ಸುಮಾರಿಗೆ ಮಠಕ್ಕೆ ತೆರಳಿ, ಮಠದ ಕೆಲವು ಪ್ರಮುಖರು ಸೇರಿದಂತೆ ಹಲವರ ಹೇಳಿಕೆ ದಾಖಲಿಸಿಕೊಂಡಿದೆ. ಅಲ್ಲದೆ ಪ್ರೇಮಲತಾ ದೂರಿನಲ್ಲಿ ಉಲ್ಲೇಖಿಸಿರುವ ಸ್ಥಳಗಳ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಪ್ರೇಮಲತಾ ಹಾಗೂ ದಿವಾಕರ ಶಾಸ್ತ್ರಿ ಕೂಡ ಆಗಮಿಸಿದ್ದರು.

ಸಿಐಡಿ ತಂಡ ಭೇಟಿ ವೇಳೆ ರಾಘವೇಶ್ವರ ಸ್ವಾಮೀಜಿ ಮಠದಲ್ಲಿ ಇರಲಿಲ್ಲ ಎನ್ನಲಾಗಿದ್ದು, ಅವರ ಆಪ್ತರು ಮತ್ತು ಮಠದ ಸೇವಕರು ತಂಡದ ತನಿಖೆಗೆ ಸ್ಪಂದಿಸಿ ಕೇಳಲಾದ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರೇಮಲತಾ ಶಾಸ್ತ್ರಿಯವರ ಗಂಭೀರ ಆರೋಪದ ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ತನಿಖೆ ಚುರುಕುಗೊಳಿಸಿರುವ ಸಿಐಡಿ ಯ ಒಂದು ತಂಡ, ಭಾನುವಾರ ಶಿರಸಿ-ಸಿದ್ದಾಪುರದ ಬಾನ್ಕುಳಿ ಹಾಗೂ ಅಂಬಾಗಿರಿ ಮಠಗಳಿಗೆ ದೂರುದಾರರಾದ ಪ್ರೇಮಲತಾ ಹಾಗೂ ಅವರ ಪತಿ ದಿವಾಕರ ಶಾಸ್ತ್ರಿಯೊಂದಿಗೆ ಭೇಟಿ ನೀಡಿ ವಿಚಾರಣೆ ನಡೆಸಿತ್ತು.

ಕಳೆದ ವಾರವಷ್ಟೇ ಸಮಾನ ಮನಸ್ಕ ಹವ್ಯಕ ವೇದಿಕೆಯವರು, ಪ್ರೇಮಲತಾ ಅತ್ಯಾಚಾರ ಪ್ರಕರಣದ ತನಿಖೆ ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ತನಿಖೆ ಚುರುಕಿಗೆ ಆಗ್ರಹಿಸಿದ್ದರು. ಆ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಸಿಐಡಿ ತಂಡ, ಪ್ರೇಮಲತಾ ಅವರು ರಾಘವೇಶ್ವರ ಸ್ವಾಮೀಜಿ ತಮ್ಮ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ದೂರಿನಲ್ಲಿ ನಮೂದಿಸಿರುವ ಮಠ-ಮಾನ್ಯಗಳಿಗೆ ಭೇಟಿ ನೀಡಿ ತನಿಖೆ ನಡೆಸುತ್ತಿದೆ.

Write A Comment