ಕರ್ನಾಟಕ

ಲೋಕಾಯುಕ್ತರ ಪದಚ್ಯುತಿ ಗವರ್ನರ್ ನಿರ್ಧಾರಕ್ಕೆ ಬಿಟ್ಟದ್ದು: ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

cm

ಬೆಂಗಳೂರು/ಬೆಳಗಾವಿ, ಜು.6: ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ಅವರನ್ನು ಪದಚ್ಯುತಿಗೊಳಿಸುವಂತೆ ಬಿಜೆಪಿ, ಜೆಡಿಎಸ್ ಶಾಸಕರು ಸಹಿ ಹಾಕಿ ಸ್ಪೀಕರ್ ಗೆ ಪ್ರಸ್ತಾವನೆ ಸಲ್ಲಿಸಿರುವ ವಿಷಯದ ಕುರಿತು ಇಂದು ಸುದ್ದಿಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯವರನ್ನು ಪ್ರಶ್ನಿಸಿದಾಗ, ಕಾನೂನಿನ ಪ್ರಕಾರ ಇದು ರಾಜ್ಯಪಾಲರಿಗೆ ಸಂಬಂಧಿಸಿದ ವಿಚಾರ. ಹಾಗಾಗಿ ಲೋಕಾಯುಕ್ತರ ವಿಷಯದಲ್ಲಿ ರಾಜ್ಯಪಾಲರು ತೆಗೆದುಕೊಳ್ಳುವ ನಿರ್ಧಾರಕ್ಕೆ ಸರ್ಕಾರ ಬದ್ಧ ಎಂದು ಹೇಳಿದರು.

ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಅವರನ್ನು ಪದಚ್ಯುತಿಗೊಳಿಸಲು ಆಮ್ ಆದ್ಮಿ ಪಕ್ಷ, ಜೆಡಿಎಸ್ ಮತ್ತು ಬಿಜೆಪಿ ಪಟ್ಟು ಹಿಡಿದಿವೆ. ರಾಜೀನಾಮೆ ಪಡೆಯುವುದು ರಾಜ್ಯಪಾಲರಿಗೆ ಬಿಟ್ಟ ವಿಷಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ರಾಜೀನಾಮೆ ವಿಚಾರ ನಮಗೆ ಸಂಬಂಧಿಸಿದ್ದಲ್ಲ. ಲೋಕಾಯುಕ್ತರನ್ನು ಪದಚ್ಯುತಿಗೊಳಿಸುವ ನಿರ್ಧಾರ ರಾಜ್ಯಪಾಲರಿಗೆ ಬಿಟ್ಟಿದ್ದು. ಇದು ಕಾನೂನಿಗೆ ಸಂಬಂಧಿಸಿದ ವಿಷಯ, ನಾವು ಮಧ್ಯಪ್ರವೇಶಿಸುವುದು ಸರಿಯಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಲೋಕಾಯುಕ್ತರ ಪದಚ್ಯುತಿಗೆ ವಿಧಾನಮಂಡಲದಲ್ಲಿ ಅವಕಾಶ ನೀಡಬೇಕೆಂದು ಬಿಜೆಪಿ, ಜೆಡಿಎಸ್ ಸದಸ್ಯರು ಸಹಿ ಸಂಗ್ರಹಿಸಿ ಪ್ರಸ್ತಾವನೆ ಸಲ್ಲಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಪೀಕರ್ ಕಾಗೋಡು ತಿಮ್ಮಪ್ಪ, ಈ ಬಗ್ಗೆ ನಾನೇನೂ ಹೇಳಲು ಸಾಧ್ಯವಿಲ್ಲ. ನೀತಿ ನಿಯಮದಡಿ ಚರ್ಚೆ ನಡೆಯಬೇಕಾಗಿದೆ ಎಂದಷ್ಟೇ ಹೇಳಿದರು. ಇದೊಂದು ಸೂಕ್ಷಪ್ರಕರಣವಾಗಿರುವುದರಿಂದ ಎಳ್ಳಷ್ಟು ಅನುಮಾನಕ್ಕೆ ಆಸ್ಪದ ಕೊಡದೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿರುವುದರಿಂದ ಲೋಕಾಯುಕ್ತ ಭವಿಷ್ಯ ಡೋಲಾಯಮಾನವಾಗಿದೆ.

ಭಾಸ್ಕರ್‌ರಾವ್ ಪದಚ್ಯುತಿಗೆ ಒತ್ತಾಯಿಸಿ ವಿಧಾನಪರಿಷತ್ ಸದಸ್ಯರು ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಶಾಸಕರ ಸಹಿಯುಳ್ಳ ಮನವಿ ಪತ್ರ ನೀಡಿದ್ದಾರೆ. ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಪತ್ರವನ್ನು ನೀಡಲಾಗಿದೆ. ಲೋಕಾಯುಕ್ತರನ್ನು ಪದಚ್ಯುತಿಗೊಳಿಸುವ ನಿರ್ಣವನ್ನು ಮಂಡಿಸಬೇಕಾದರೆ ೫೦ ಶಾಸಕರು ಅಥವಾ ೩೩ ವಿಧಾನಪರಿಷತ್ ಸದಸ್ಯರ ಸಹಿ ಇರುವ ಪತ್ರ ಬೇಕು. ಸದ್ಯ, ೩೩ ಸದಸ್ಯರ ಸಹಿ ಇರುವ ಪತ್ರ ಡಿ.ಎಚ್.ಶಂಕರಮೂರ್ತಿ ಅವರ ಕೈಸೇರಿದೆ. ಸುಮಾರು ೬೦ ಶಾಸಕರ ಸಹಿ ಇರುವ ಪತ್ರವನ್ನು ಕಾಗೋಡು ತಿಮ್ಮಪ್ಪ ಅವರಿಗೆ ನೀಡಲಾಗಿದೆ.

Write A Comment