ಕರ್ನಾಟಕ

ದಕ್ಷಿಣ ಭಾರತದಲ್ಲಿ ಕಮಲಾ ಅರಳಿಸಲು ಅಮಿತ್ ಶಾ ಕಾರ್ಯತಂತ್ರ

Pinterest LinkedIn Tumblr

ami

ಬೆಂಗಳೂರು, ಜು.5: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈ ರಾಜ್ಯಗಳಲ್ಲಿ ಕಮಲ ಅರಳಿಸಲು ಸಂಕಲ್ಪ ತೊಟ್ಟಿದ್ದಾರೆ. ಅದಕ್ಕಾಗಿ ದಕ್ಷಿಣ ಭಾರತ ರಾಜ್ಯಗಳ ಮಹಾ ಸಂಪರ್ಕ ಅಭಿಯಾನವನ್ನು ನೆಪವಾಗಿಟ್ಟುಕೊಂಡು ಮುಂದೆ ಅನುಸರಿಸಬೇಕಾದ ಕ್ರಮಗಳು ಕುರಿತಂತೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಪಾಂಡಿಚೆರಿ ಕೇಂದ್ರಾಡಳಿತ ಪ್ರದೇಶ ಸೇರಿದಂತೆ 8 ರಾಜ್ಯಗಳ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಮತ್ತು ಜನಪ್ರತಿನಿಧಿಗಳೊಂದಿಗೆ ನಗರದ ಅರಮನೆ ಮೈದಾನದಲ್ಲಿ ದಿನಪೂರ ಸಭೆ ನಡೆಸಿ, ಪಕ್ಷದ ಸಂಘಟನೆಗೆ ಒತ್ತು ನೀಡುವ ಜತೆಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸಿ ಎಂದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪಕ್ಷ ಸಂಘಟನೆಗೆ ಕೈಗೊಳ್ಳಬೇಕಾದ ಕ್ರಮಗಳು, ರಾಜ್ಯಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಅದಕ್ಕೆ ಪರಿಹಾರ ಸೇರಿದಂತೆ ಹಲವು ವಿಷಯಗಳೊಂದಿಗೆ ಎಲ್ಲಾ ರಾಜ್ಯಗಳ ಪಕ್ಷದ ಪದಾಧಿಕಾರಿಗಳು ಜಿಲ್ಲಾಧ್ಯಕ್ಷರು ಮತ್ತು ಶಾಸಕರು ಮತ್ತು ಸಂಸದರ ಜತೆ ಮೂರು ಸುತ್ತಿನಲ್ಲಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.

ಪಕ್ಷವನ್ನು ಸಂಘಟಿಸುವ ಜತೆ ಜತೆಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಹೆಚ್ಚು ಮಂದಿಯನ್ನು ಪಕ್ಷದತ್ತ ಆಕರ್ಷಿಸುವಂತೆ ಮಾಡಿ ಅದಕ್ಕಾಗಿ ಎಲ್ಲಾ ನಾಯಕರು, ಮುಖಂಡರು ಶ್ರಮ ಹಾಕಿ ಎಂದು ಕಿವಿ ಮಾತು ಹೇಳಿದ್ದಾರೆ.

ದೇಶದಲ್ಲಿ ಆರಂಭಿಸಿದ ಸದಸ್ಯತ್ವ ಅಭಿಯಾನಕ್ಕೆ ಎಲ್ಲಡೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಮಿತ್ ಶಾ, ನಿರೀಕ್ಷಿತ ಮಟ್ಟದಲ್ಲಿ ಸದಸ್ಯತ್ವ ಮಾಡದ ರಾಜ್ಯಗಳಲ್ಲಿ ಸದಸತ್ವ ನೊಂದಣಿಗೆ ಆದ್ಯತೆ ನೀಡುವಂತೆಯೂ ಸೂಚನೆ ನೀಡಿದ್ದಾರೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶಾದ್ಯಂತ 11 ಕೋಟಿ ಹೊಸ ಸದಸ್ಯರನ್ನಾಗಿ ಮಾಡಿರುವುದು ಹೆಮ್ಮೆಯ ಸಂಗತಿ, ಹೊಸ ಸದಸ್ಯರಿಗೆ ಪಕ್ಷದ ತತ್ವ, ಸಿದ್ಧಾಂತ ಮತ್ತು ಉದ್ದೇಶಗಳನ್ನು ಮನವರಿಕೆ ಮಾಡಿಕೊಡಲು ಹೊಸ ಸದಸ್ಯರಿಗೆ ತರಬೇತಿಯನ್ನು ಆಯಾ ರಾಜ್ಯಗಳ ಕೇಂದ್ರ ಸ್ಥಳಗಳು ಇಲ್ಲವೆ, ಜಿಲ್ಲಾ ಸ್ಥಳಗಳಲ್ಲಿ ಆಯೋಜಿಸುವ ಕುರಿತಂತೆಯೂ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.

ಅಮಿತ್ ಶಾ ಅವರ ಕಾರ್ಯಕ್ರಮದಿಂದ ರಾಜ್ಯದ ಬಿಜೆಪಿ ನಾಯಕರೆಲ್ಲಾ ಒಟ್ಟುಗೂಡಿ ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ.

ಸಭೆಯಲ್ಲಿ ಪಕ್ಷದ ಉಪಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ರಾಜ್ಯದ ಉಸ್ತುವಾರಿ ಕೆ. ಮುರುಳೀಧರ ರಾವ್, ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ, ಕೇಂದ್ರದ ಸಚಿವರಾದ ಅನಂತ್ ಕುಮಾರ್, ಡಿ.ವಿ. ಸದಾನಂದಗೌಡ, ವಿಧಾನ ಮಂಡಲದ ವಿರೋಧ ಪಕ್ಷದ ಉಭಯ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಸೇರಿದಂತೆ 8 ರಾಜ್ಯಗಳ ಪಕ್ಷದ ಅಧ್ಯಕ್ಷರು, ಮುಖಂಡರು ಸೇರಿದಂತೆ 800ಕ್ಕೂ ಹೆಚ್ಚು ಮುಖಂಡರು ಪಾಲ್ಗೊಂಡಿದ್ದರು.

Write A Comment