ಕರ್ನಾಟಕ

ಗೆಳೆಯನ ಬೈಕ್ ಕದ್ದು ಸಿಕ್ಕಿ ಬಿದ್ದ ಉಪನ್ಯಾಸಕ

Pinterest LinkedIn Tumblr

bikeಮೈಸೂರು; ಮದುವೆ ಖರ್ಚಿಗೆ ಹಣವಿಲ್ಲವೆಂದು ಪರದಾಡುತ್ತಿದ್ದ ಉಪನ್ಯಾಸಕನೊಬ್ಬ ತನ್ನ ಪ್ರಾಣ ಸ್ನೇಹಿತನ ಬೈಕ್‌ನ್ನೇ ಕದ್ದು ಸಿಕ್ಕಿಬಿದ್ದ ಘಟನೆ ಮೈಸೂರಿನಲ್ಲಿ ನಡೆದಿದೆ.  ಚಾಮುಂಡಿನಗರದ ನಿವಾಸಿಯಾಗಿರುವ ಆರೋಪಿ ರಾಘವೇಂದ್ರ ಮೈಸೂರಿನ ಕಾಲೇಜೊಂದರಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕನಾಗಿದ್ದಾನೆ.

ಅತೀವ ಸಾಲ ಮಾಡಿಕೊಂಡಿದ್ದ ರಾಘವೇಂದ್ರ ವಿವಾಹ ಕೂಡ ಸದ್ಯದಲ್ಲಿಯೇ ನೆರವೇರುವುದಿತ್ತು. ಮಾಡಿಕೊಂಡ ಸಾಲವನ್ನು ತೀರಿಸಲಾಗದೆ ಒದ್ದಾಡುತ್ತಿದ್ದ ರಾಘವೇಂದ್ರ ಮತ್ತೆ ಮದುವೆ ಖರ್ಚನ್ನು ಹೇಗೆ ತೂಗಿಸುವುದು ಎಂಬ ಚಿಂತೆಯಲ್ಲಿದ್ದ. ಆಗ ಆತನ ತಲೆಯಲ್ಲಿ ಒಂದು ಕ್ರಿಮಿನಲ್ ಯೋಚನೆ ಹೊಳೆದಿದೆ. ಅಂತೆಯೇ ತನ್ನ ಗೆಳೆಯ ವಿನೋದ್ ಬಳಸುತ್ತಿದ್ದ ದುಬಾರಿ ಬೆಲೆಯ ಬೈಕ್ ಕದ್ದು, ಮಾರಿ ಬಂದ ಹಣದಿಂದ ಸಾಲ ತೀರಿಸುವ ಯೋಜನೆಯನ್ನು ರೂಪಿಸಿದ್ದಾನಾತ. ಪೂರ್ವ ಯೋಜನೆಯಂತೆ ಬೈಕ್‌ನ ನಕಲಿ ಬೀಗದ ಕೈಯನ್ನು ಸಿದ್ಧಪಡಿಸಿಕೊಂಡು ಮತ್ತೊಬ್ಬ ಸ್ನೇಹಿತ ಗುರುಪ್ರಸಾದ್ ಬಳಿ ನೀಡಿದ್ದಾನೆ.

ಅಂತೆಯೇ ವಿನೋದ್ ಜತೆ ಸುತ್ತಾಡಲು ಹೊರಟ ಆತ ನಗರದಲ್ಲಿರುವ ಹಾಂಗ್‌ಕಾಂಗ್ ಬಜಾರ್ ಒಳಕ್ಕೆ ಆತನನ್ನು ಕರೆದುಕೊಂಡು ಹೋಗಿದ್ದಾನೆ. ಆ ಸಮಯದಲ್ಲಿ ಬೈಕ್‌ನ್ನು ಹೊರಗೆ ನಿಲ್ಲಿಸಲಾಗಿತ್ತು. ಅವರಿಬ್ಬರು ಒಳಗೆ ಹೋಗುತ್ತಿದ್ದಂತೆ ರಾಘವೇಂದ್ರನ ಸ್ನೇಹಿತ ಗುರುಪ್ರಸಾದ್ ನಕಲಿ ಕೀ ಬಳಸಿ ಬೈಕ್ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ.

ಹೊರಗೆ ಬಂದು ನೋಡಿದಾಗ ಬೈಕ್ ಇಲ್ಲದಿದ್ದುದನ್ನು ಕಂಡ ವಿನೋದ್ ಹೌಹಾರಿ ಹೋಗಿದ್ದಾನೆ. ಈ ಕುರಿತು ದೂರು ನೀಡಲು ಪೊಲೀಸ್ ಠಾಣೆಗೆ ಹೊರಟಾಗ ಸ್ನೇಹಿತ ರಾಘವೇಂದ್ರ ಬೇಡ ಎಂದು ತಡೆದು ಒತ್ತಾಯಪೂರ್ವಕವಾಗಿ ಎಳೆದೊಯ್ದಿದ್ದಾನೆ.

ಮರುದಿನ ಮತ್ತೆ ಪೊಲೀಸ್ ಠಾಣೆಗೆ ಹೋದ ವಿನೋದ್ ಬೈಕ್ ಕಳುವಾದ ದೂರು ದಾಖಲಿಸಿ ರಾಘವೇಂದ್ರನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾನೆ.

ಆತ ನೀಡಿದ ದೂರಿನ ಅನ್ವಯ ರಾಘವೇಂದ್ರನನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಸತ್ಯ ಸಂಗತಿ ಬಯಲಾಗಿದೆ.

ಹಸೆಮಣೆ ಏರಬೇಕಿದ್ದ ರಾಘವೇಂದ್ರ ಮಿತ್ರ ದ್ರೋಹವೆಸಗಿದ ತಪ್ಪಿಗೆ ಸದ್ಯ ಕಂಬಿ ಎಣಿಸುತ್ತಿದ್ದಾನೆ.

Write A Comment