ಕರ್ನಾಟಕ

ವೇಶ್ಯಾವಾಟಿಕೆಗೆ ತೊಡಗುವಂತೆ ಒತ್ತಾಯ; ಮನೆಯೊಂದರಲ್ಲಿ ಬೀಗ ಹಾಕಿ ಕೂಡಿಹಾಕಿದ್ದ ಐವರು ಯುವತಿಯರ ರಕ್ಷಣೆ

Pinterest LinkedIn Tumblr

wamansa

ಬೆಂಗಳೂರು, ಜು. 3; ಬಾರ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಸರ್ವರ್ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆತಂದು ಚಂದ್ರಲೇಔಟ್‍ನ ಮನೆಯೊಂದರಲ್ಲಿ ಬೀಗ ಹಾಕಿ ಕೂಡಿಹಾಕಿದ್ದ ಹೊರ ರಾಜ್ಯದ ಐವರು ಯುವತಿಯರನ್ನು ಸಿಸಿಬಿ ಪೊಲೀಸರು ರಕ್ಷಿಸಿದ್ದಾರೆ.

ರಕ್ಷಿಸಿರುವ ಪಂಜಾಬ್‍ನ ನಾಲ್ವರು ಹಾಗೂ ನೇಪಾಳದ ಓರ್ವ ಯವತಿಯರನ್ನು ಕರೆತಂದಿದ್ದ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿ ರಾಜೀವ್ ಗುಪ್ತ ಕಳೆದ ಮೂರು ತಿಂಗಳ ಹಿಂದೆ ಚಂದ್ರಲೇಔಟ್‍ನಲ್ಲಿ ಬಾಡಿಗೆಗೆ ಪಡೆದುಕೊಂಡ ಮನೆಯಲ್ಲಿ ಹೊರರಾಜ್ಯ ಮತ್ತು ಹೊರ ದೇಶದ ಹುಡುಗಿಯರಿಗೆ ರಿದಂ ಲೈವ್ ಬ್ಯಾಂಡ್‍ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಕರೆತಂದು ಅಕ್ರಮ ಬಂಧನದಲ್ಲಿರಿಸಿ, ಅವರುಗಳನ್ನು ವೇಶ್ಯಾವಾಟಿಕೆಗೆ ತೊಡಗುವಂತೆ ಒತ್ತಾಯಪಡಿಸಿರುವುದು ವಿಚಾರಣೆಯಲ್ಲಿ ಕಂಡು ಬಂದಿದೆ.

ಆರೋಪಿಗಳಾದ ರಾಜೀವ್ ಗುಪ್ತ, ರಿದಂ ಪಬ್‍ನ ಮಾಲಿಕ ಪ್ರದೀಪ್ ಕುಮಾರ್ ಹಾಗೂ ಮ್ಯಾನೇಜರ್ ತಿಲಕ್ ನಗರದ ಬಾರ್ ರೆಸ್ಟೋರೆಂಟ್‍ಗಳಲ್ಲಿ ಸರ್ವಿಸ್ ಕೆಲಸ ಕೊಡಿಸುವುದಾಗಿ ಹುಡುಗಿಯರನ್ನು ಪಂಜಾಬ್ ಮತ್ತು ನೇಪಾಳದಿಂದ ಕರೆದುಕೊಂಡು ಬಂದು, ಅವರುಗಳಿಗೆ ವಾಸ್ಥವ್ಯಕ್ಕೆ ಬಾಡಿಗೆ ಮನೆಯನ್ನು ಮಾಡಿಕೊಟ್ಟು, ಬಾರ್‍ನಲ್ಲಿ ಲೇಡಿಸ್ ಸರ್ವರ್ ಹಾಗೂ ಡ್ಯಾನ್ಸ್ ಕೆಲಸಕ್ಕೆ ನೇಮಿಸುತ್ತಿದ್ದರು.

ಹುಡುಗಿಯರು ಕೆಲಸವನ್ನು ಮಾಡುತ್ತಿರುವ ಸಮಯದಲ್ಲಿ, ಹೋಟೆಲ್‍ಗೆ ಬಂದ ಗಿರಾಕಿಗಳು, ಅವರು ಇಷ್ಟ ಪಟ್ಟ ಹುಡುಗಿಯರ ಜೊತೆ ಲೈಂಗಿಕ ಸಂಪರ್ಕಕ್ಕೆ ಒತ್ತಾಯ ಮಾಡಿದ್ದು, ಇದಕ್ಕೆ ಒಪ್ಪದಿದ್ದಾಗ, ಗಿರಾಕಿಗಳು ಬಾರ್ & ರೆಸ್ಟೋರೆಂಟ್‍ನ ಮಾಲೀಕ ಹಾಗೂ ಮ್ಯಾನೇಜರ್‍ಗೆ ವಿಷಯ ತಿಳಿಸಿದಾಗ, ಹೋಟೆಲ್‍ನವರು ಹುಡುಗಿಯರಿಗೆ ಬಲವಂತವಾಗಿ ಪುಸಲಾಯಿಸಿ, ಅವರ ಜೊತೆ ಹೋಗುವಂತೆ ಒತ್ತಾಯ ಮಾಡಿದ್ದರು. ಇದಕ್ಕೆ ಹುಡುಗಿಯರು ಒಪ್ಪದಿದ್ದಾಗ ಅವರುಗಳನ್ನು ಮನೆಯಲ್ಲಿ ಅಕ್ರಮ ಬಂಧನದಲ್ಲಿಟ್ಟು, ಮನೆಯ ಬಾಗಿಲಿಗೆ ಹೊರಗಿನಿಂದ ಬೀಗ ಹಾಕಿರುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಡಿಸಿಪಿ ರಮೇಶ್ ತಿಳಿಸಿದ್ದಾರೆ.

ವೇಶ್ಯಾವಾಟಿಕೆ

ಮಹದೇವಪುರದ ಪೈ ಲೇಔಟ್‍ನ 16ನೇ ಕ್ರಾಸ್‍ನಲ್ಲಿರುವ ಮನೆಯೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯ ಮೇಲೆ ದಾಳಿ ನಡೆಸಿ ಕೊಲ್ಕತ್ತ ಮೂಲದ ಮೂವರು ಹೆಣ್ಣುಮಕ್ಕಳನ್ನು ರಕ್ಷಿಸಿ, ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ವಿಷ್ಣು ಮತ್ತು ಸುಮಂತ್ ಹಾಗೂ ಮನೆಯ ಮಾಲೀಕರಿಗಾಗಿ ತೀವ್ರ ಶೋಧ ನಡೆಸಲಾಗಿದೆ.

ಹೊರ ರಾಜ್ಯದ ಹೆಣ್ಣುಮಕ್ಕಳನ್ನು ಕೆಲಸ ಕೊಡಿಸುವ ನೆಪದಲ್ಲಿ ಕರೆತಂದು ಮನೆಯಲ್ಲಿಟ್ಟುಕೊಂಡು ಅವರಿಗೆ ಹೆಚ್ಚಿನ ಹಣದ ಆಮಿಷ ತೋರಿಸಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ನಡೆಸಲಾಗಿದೆ.

Write A Comment