ಕರ್ನಾಟಕ

ರಾಜೀನಾಮೆ ನೀಡಲು ಇಷ್ಟವಿಲ್ಲದಿದ್ದರೆ ರಜೆ ಮೇಲೆ ತೆರಳಲಿ : ಸಂತೋಷ್ ಹೆಗಡೆ ಸಲಹೆ

Pinterest LinkedIn Tumblr

santosh_hegdeಬೆಂಗಳೂರು, ಜು.1-ಎಷ್ಟೇ ಒತ್ತಡ ಹೆಚ್ಚಾದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸುತ್ತಿರುವ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್‌ರಾವ್ ಅವರು ದೀರ್ಘಕಾಲದ ರಜೆಯ ಮೇಲಾದರೂ ತೆರಳಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಸಲಹೆ ನೀಡಿದ್ದಾರೆ.

ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತ ಸಂಸ್ಥೆಗೆ ತನ್ನದೇ ಆದ ಇತಿಹಾಸ ಇದೆ. ಈಗ ಸ್ವತಃ ಲೋಕಾಯುಕ್ತರ ವಿರುದ್ಧವೇ ಭ್ರಷ್ಟಾಚಾರದ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಭಾಸ್ಕರ್‌ರಾವ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ. ಆದರೆ, ಲೋಕಾಯುಕ್ತರು ರಾಜೀನಾಮೆ ನೀಡಲು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ದೀರ್ಘ ರಜೆಯ ಮೇಲಾದರೂ ತೆರಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಗಣಿ ಅಕ್ರಮ ಬಯಲು ಮಾಡಿರುವುದು, ಸರ್ಕಾರಿ ಅಧಿಕಾರಿಗಳ ಅಕ್ರಮ ಆಸ್ತಿ ಪತ್ತೆ ಹಚ್ಚಿರುವುದು ಸೇರಿದಂತೆ ಹಲವಾರು ತನಿಖೆಗಳನ್ನು ನಡೆಸಿದ ಲೋಕಾಯುಕ್ತ ಸಂಸ್ಥೆ ಜನಸಾಮಾನ್ಯರಲ್ಲಿ ಉತ್ತಮ ಸ್ಥಾನ ಪಡೆದಿದೆ. ಈಗ ಸಂಸ್ಥೆಯ ಮುಖ್ಯಸ್ಥರ ವಿರುದ್ಧವೇ ಭ್ರಷ್ಟಾಚಾರದ ಆರೋಪ ಕೇಳಿಬಂದಿರುವುದು ಆ ಸಂಸ್ಥೆಗೆ ಕಪ್ಪುಚುಕ್ಕೆ ಬಳಿದಂತಾಗಿದೆ. ಹೀಗಾಗಿ ಲೋಕಾಯುಕ್ತರು ಇಡೀ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಿ ಎಂದು ಸಲಹೆ ನೀಡಿದರು. ಉಪಲೋಕಾಯುಕ್ತ ಸುಭಾಷ್ ಬಿ.ಆಡಿ ಅವರು ಲೋಕಾಯುಕ್ತ ಸಂಸ್ಥೆಯ ಭ್ರಷ್ಟಾಚಾರ ಕುರಿತು ತನಿಖೆ ನಡೆಸುವಂತೆ ಎಸ್‌ಪಿ ಸೋನಿಯಾನಾರಂಗ್ ಅವರಿಗೆ ಆದೇಶಿಸಿರುವುದನ್ನು ರದ್ದುಪಡಿಸುವ ಹಕ್ಕು ಲೋಕಾಯುಕ್ತರಿಗೆ ಇಲ್ಲ ಎಂಬುದು ಹೆಗಡೆಯವರ ವಾದವಾಗಿದೆ.

ಹಲವಾರು ಸಂಘ-ಸಂಸ್ಥೆಗಳು, ಆರ್‌ಟಿಐ ಕಾರ್ಯಕರ್ತರು, ವಕೀಲರ ಪರಿಷತ್ ಪದಾಧಿಕಾರಿಗಳು, ಲಾಯರ್‌ಗಳು, ಕೆಲವು ಸಂಘಟನೆಗಳ ಮುಖಂಡರು ಲೋಕಾಯುಕ್ತರ ರಾಜೀನಾಮೆಗೆ ಒತ್ತಾಯಿಸುತ್ತಿರುವುದರಿಂದ ಹಾಗೂ ಲೋಕಾಯುಕ್ತ ಸಂಸ್ಥೆಯ ಹಿತದೃಷ್ಟಿಯಿಂದ ಭಾಸ್ಕರ್‌ರಾವ್ ಅವರು ದೀರ್ಘಕಾಲದ ರಜೆ ಮೇಲೆ ತೆರಳುವುದು ಸೂಕ್ತ ಎಂದು ಸಂತೋಷ್ ಹೆಗಡೆ ಸುದ್ದಿಗಾರರಿಗೆ ತಿಳಿಸಿದರು.

Write A Comment