ಕರ್ನಾಟಕ

ಕುಣಿಗಲ್ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಕಾರು; ನಾಲ್ವರ ದುರ್ಮರಣ

Pinterest LinkedIn Tumblr

kuni acxcident

ಕುಣಿಗಲ್, ಜು.1: ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿ ವೇಗವಾಗಿ ಚಲಿಸಿದ ಮಾರುತಿ ಆಲ್ಟೊ ಕಾರು ರಸ್ತೆ ವಿಭಜಕ ಹಾರಿ ಎದುರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.

ಮೃತಪಟ್ಟವರನ್ನು ಬೆಳ್ಳೂರು ಕ್ರಾಸ್ ನಿವಾಸಿ ಸುನಿಲ್ (50), ನಾಗಮಂಗಲದ ಜಗದೀಶ್ (40), ಕೆಆರ್ ನಗರದ ಕುಮಾರಸ್ವಾಮಿ (48) ಮತ್ತು ರಾಜು (30) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಮರಳು ಲಾರಿಗಳಿಗೆ ಬೆಂಗಾವಲು ಪಡೆಯಾಗಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ಎಂದಿನಂತೆ ಮಧ್ಯರಾತ್ರಿ ಮರಳು ಲಾರಿಗಳನ್ನು ನೆಲಮಂಗಲದವರೆಗೆ ಪಾಸ್‌ಮಾಡಿಸಿ ಆರು ಗಂಟೆ ಸುಮಾರಿಗೆ ವಾಪಸ್ ಊರಿಗೆ ಕಾರಿನಲ್ಲಿ ಹೋಗುವಾಗ ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ಉರ್ಕೆಂಹಳ್ಳಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.

ಅತಿ ವೇಗವಾಗಿ ಚಲಿಸುತ್ತಿದ್ದ ಮಾರುತಿ ಆಲ್ಟೊ ಕಾರು ರಸ್ತೆ ವಿಭಜಕಕ್ಕೆ ಗುದ್ದಿದ್ದು, ನಂತರ ಪಕ್ಕದ ರಸ್ತೆಗೆ ಚಲಿಸಿ ಎದುರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ.

ಈ ಭೀಕರ ಅಪಘಾತದಲ್ಲಿ ಚಾಲಕ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಗಂಭೀರವಾಗಿ ಗಾಯಗೊಂಡಿದ್ದ ರಾಜು ಎಂಬಾತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್‌ಪಿ ಚಂದ್ರಶೇಖರ್, ಎಸ್‌ಐ ಜಯಣ್ಣ ಭೇಟಿ ನೀಡಿ ಪರಿಶೀಲಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಸಿ ರಸ್ತೆ ತೆರವುಗೊಳಿಸಿದರು. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment