ಕರ್ನಾಟಕ

ಇಂಟರ್ ನೆಟ್ ಮಕ್ಕಳ ಭವಿಷ್ಯಕ್ಕೆ ಮುಳ್ಳಾಗದಿರಲಿ

Pinterest LinkedIn Tumblr

kid_internet

ವಿದ್ಯಾರ್ಥಿ ಜೀವನ ಮನುಷ್ಯನ ಜೀವನದ ಸುವರ್ಣ ದಿನಗಳು. ಮುಗ್ಧತೆ, ಕುತೂಹಲ, ತುಂಟತನಗಳು ಮೇಳೈಸಿ ಆ ವಯಸ್ಸಿನ ಜೀವನವನ್ನು ಮುದಗೊಳಿಸುತ್ತವೆ. ವಿದ್ಯಾರ್ಥಿ ಜೀವನವೆಂದರೆ ಕಲಿಕೆಯ ಜೊತೆಗೆ ಶಾಲೆಯ ಬಗ್ಗೆ ಕಾಲೇಜಿನ ಬಗ್ಗೆ ಒಂದು ರೀತಿಯ ಪ್ರೀತಿ ಇನ್ನೊಂದು ರೀತಿಯ ಅಸಡ್ಡೆ, ಶಿಕ್ಷಕರ ಬಗ್ಗೆ ಉಡಾಫೆ, ಶಿಕ್ಷಕರನ್ನು ಗೋಳು ಹುಯ್ದುಕೊಳ್ಳುವ ತುಂಟತನ ಇತ್ಯಾದಿಗಳು.

ತಂತ್ರಜ್ಞಾನದ ಈ ಯುಗದಲ್ಲಿ  ಇವೆಲ್ಲ ಚೇಷ್ಟೆಗಳು ಮತ್ತೊಂದು ಮಟ್ಟಕ್ಕೆ ಏರಿವೆ. ಆಗ ನಮ್ಮ ನಮ್ಮ ಅಂದರೆ ವಿದ್ಯಾರ್ಥಿಗಳ ನಡುವೆ ಇರುತ್ತಿದ್ದ ಇಂತಹ ಚೇಷ್ಟೆಗಳು ವಿಶ್ವದ ಪ್ರತಿ ಮನುಷ್ಯನನ್ನು ಮುಟ್ಟಬಲ್ಲ ಇಂಟರ್ ನೆಟ್ ಮುಖಾಂತರ “ಗ್ಲೋಬಲ್” ಆಯಾಮವನ್ನು ಪಡೆದುಕೊಂಡಿವೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಬಗ್ಗೆ ತಮಾಷೆ ಮಾಡಲು ಫೇಸ್ ಬುಕ್ ಅಥವಾ ವಾಟ್ಸಾಪ್ ನಲ್ಲಿ ಒಂದು ವಿಶೇಷ ಗುಂಪನ್ನೇ ಸೃಷ್ಟಿಸಿಕೊಂಡಿರುತ್ತಾರೆ. ಇದರಲ್ಲಿ ಶಿಕ್ಷಕರ ಬಗ್ಗೆ ಮತ್ತು ಶಾಲೆಯ ಬಗ್ಗೆ ಮೆಮೆಗಳನ್ನು ಸೃಷ್ಟಿಸಲಾಗುತ್ತದೆ. ಶಿಕ್ಷಕರಿಗೆ ಗೊತ್ತಾಗದಂತೆ ಕೆಲವೊಮ್ಮೆ ಅವರ ಚಿತ್ರಗಳನ್ನು ತೆಗೆದು ವಿರೂಪಗೊಳಿಸಿ ಇದರಲ್ಲಿ ಅಪ್ ಲೋಡ್ ಮಾಡಲಾಗುತ್ತದೆ. ಇವು ಕೆಲವೊಮ್ಮೆ ದುರುಪಯೋಗವೂ ಆಗುವುದುಂಟು.

ಇಂತಹ ಕುಚೇಷ್ಟೆಗಳಿಂದ ಶಿಕ್ಷಕರಿಗಾಗಲೀ ಶಾಲೆಗಳಿಗಾಗಲೀ ಯಾವುದೇ ನಷ್ಟವಿಲ್ಲ.ಒಂದು ಹಂತಕ್ಕೆ ವಿದ್ಯಾರ್ಥಿಗಳ ಎಲ್ಲ ತುಂಟಾಟಗಳು ಶಿಕ್ಷಕರಿಗೆ ಸಹ್ಯ ಹಾಗೂ ಖುಷಿ ಕೊಡುವ ವಿಚಾರಗಳೇ! ಆದರೆ ಇಂತಹ ಕೆಲ ಕುಚೇಷ್ಟೆಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕೇ ಕುತ್ತು ತಂದುಕೊಳ್ಳುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರದ ವಿಷಯ. ಫೇಸ್ ಬುಕ್ ನಂತಹ ವೇದಿಕೆಯ ಮೂಲಕ ವಿದ್ಯಾರ್ಥಿಗಳು ವಿಶ್ವಕ್ಕೆ ತಮ್ಮನ್ನು ತಾವು ತೆರೆದುಕೊಳ್ಳುತ್ತಿದ್ದಾರೆ ಹಾಗೂ ವಿಶ್ವವು ಮಕ್ಕಳಿಗಾಗಿ ತೆರೆದುಕೊಳ್ಳುತ್ತಿದೆ. ಇಂಟರ್ ನೆಟ್ ನಲ್ಲಿ ವಿದ್ಯಾರ್ಥಿಯು ಹೆಕ್ಕುವ ಹಾಗೂ ಹಾಕುವ ಮಾಹಿತಿಯು ವಿಶ್ವದ ಎಲ್ಲರಿಗೂ  ಲಭ್ಯವಿರುತ್ತದೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಥವಾ ಉದ್ಯೋಗಕ್ಕಾಗಿ ಹೊರದೇಶಕ್ಕೆ ಹೋಗುವಾಗ ವಿದ್ಯಾರ್ಥಿಯ ಹಿನ್ನೆಲೆಯನ್ನು ಅಭ್ಯಸಿಸಲಾಗುತ್ತದೆ. ಅದಕ್ಕಾಗಿ ಅವರ ಓದಿನ ಹಿನ್ನೆಲೆ, ಮನೆಯವರ ಹಿನ್ನೆಲೆ ಇತ್ಯಾದಿಗಳ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ. ಮೊದಲಾದರೆ ಯಾವುದಾದರೂ ಸಂಸ್ಥೆ ಖುದ್ದು ಭೇಟಿ ನೀಡಿ ಇವುಗಳನ್ನೆಲ್ಲ ಸಂಗ್ರಹಿಸಬೇಕಿತ್ತು. ಈಗ ವಿದ್ಯಾರ್ಥಿಯ ಬಹುತೇಕ ವಯಕ್ತಿಕ ಚಟುವಟಿಕೆಗಳು ಅವರ ಇಂಟರ್ ನೆಟ್ ಚಟುವಟಿಕೆಗಳ ಮೂಲಕ ಸೈಬರ್ ಲೋಕದಲ್ಲಿ ದಾಖಲಾಗುತ್ತವೆ. ಯಾವ ಸಮಯದಲ್ಲಿ ವಿದ್ಯಾರ್ಥಿ ಎಲ್ಲಿದ್ದ  ಎಂಬುದರಿಂದ ಹಿಡಿದು ಅವನ ವಯಕ್ತಿಕ ಆಸಕ್ತಿಗಳ ವರೆಗೂ ಪ್ರತಿಯೊಂದೂ ಅವರ ಚಟುವಟಿಕೆಗಳ ಮೂಲಕ ವಿಶ್ವದ ಎಲ್ಲರಿಗೂ ಲಭ್ಯ. ಈಗಾಗಲೇ ಹಿನ್ನೆಲೆ ಪ್ರಮಾಣಿಸಲು ವಿದ್ಯಾರ್ಥಿಯ ಫೇಸ್ ಬುಕ್, ಟ್ವಿಟರ್ ಮತ್ತು ವಾಟ್ಸಾಪ್ ಗಳನ್ನು ವಿಮರ್ಶಿಸುವ ಪರಿಪಾಠ ಕೆಲೆವೆಡೆ ಶುರುವಾಗಿದೆ. ವಿದ್ಯಾರ್ಥಿಯು ಯಾವುದೇ ಸಂದರ್ಭದಲ್ಲಿ ತನ್ನ ಗುರುವಿನ ಬಗ್ಗೆ ಮತ್ತು ಸಹೋದ್ಯೋಗಿಗಳ ಬಗ್ಗೆ ಅಸಭ್ಯ ರೀತಿಯಲ್ಲಿ ಪೋಸ್ಟ್ ಮಾಡಿದ್ದಲ್ಲಿ ಅದು ಉದ್ಯೋಗದಾತರಿಗೆ ಅಥವಾ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತೆರಳಲಿರುವ ಸಂಸ್ಥೆಗಳಿಗೆ ಗೊತ್ತಾಗಿ ಹೋಗುತ್ತದೆ. ಒಂದು ವೇಳೆ ವಿದ್ಯಾರ್ಥಿ ತನ್ನ ಎಲ್ಲ ಚಟುವಟಿಕೆಗಳನ್ನು ಡಿಲೀಟ್ ಮಾಡಿದ್ದರೂ ಅದು ಸರ್ವರ್ ನಲ್ಲಿ ಭದ್ರವಾಗಿ ಕೂತು ಯಾವುದೇ ಸಮಯದಲ್ಲಿ ವಿಶ್ವಕ್ಕೆ ಎಟಕುವ ಎಲ್ಲ ಸಾಧ್ಯತೆಗಳಿವೆ. ಬಹುತೇಕ ಸಂದರ್ಭದಲ್ಲಿ ಹೀಗೆ ತನ್ನ ಅಸಭ್ಯತೆಯಿಂದ ಬಯಲಾದ ವಿದ್ಯಾರ್ಥಿಗಳನ್ನು ಯಾರು ಹತ್ತಿರ ಸೇರಿಸುವುದಿಲ್ಲ. ಪ್ರತಿಷ್ಠಿತ ವಿದ್ಯಾಲಯಗಳಲ್ಲಿ ಪ್ರವೇಶ ಪಡೆದವರು ಇದೇ ಕಾರಣಕ್ಕಾಗಿ ಹೊರ ಬಿದ್ದ ಅನೇಕ ಉದಾಹರಣೆಗಳಿವೆ! ಪೋಷಕರು ಬಂದು ಶಿಕ್ಷಕರಲ್ಲಿ ಕ್ಷಮೆಯಾಚಿಸಿ ಶಾಲೆಯಿಂದ ಕ್ಷಮಾ ಪತ್ರ ಹಾಗು ಒಳ್ಳೇಯ ನಡತೆಯ ಪತ್ರವನ್ನು ಸಲ್ಲಿಸಿದರೂ ಅದನ್ನು ಒಪ್ಪದ ವಿಶ್ವವಿದ್ಯಾಲಯಗಳು ಪ್ರವೆಶವನ್ನು ತಿರಸ್ಕರಿಸಿವೆ.

ಇಂದಿನ ದಿನಗಳಲ್ಲಿ ವಿದ್ಯಾರ್ಥಿಯ ಚಟುವಟಿಕೆಗಳನ್ನು ಗಮನದಲ್ಲಿಡುವುದು ಹಾಗೂ ನಿಯಂತ್ರಿಸುವುದು ಬಹಳವೇ ಕಷ್ಟಕರವಾಗಿರುತ್ತದೆ. ಅದರಲ್ಲೂ ಬೆಂಗಳೂರಿನಂತಹ ಊರಿನಲ್ಲಿ ಮಕ್ಕಳು ಬೆರಳ ಸಂದಿಯಿಂದ ನುಸುಳುವ ಉಸುಕಿನಂತಾಗಿಬಿಡುತ್ತಾರೆ. ಇನ್ನೂ ದೊಡ್ಡ ಸಮಸ್ಯೆಯೇನೆಂದರೆ ಮಕ್ಕಳನ್ನು ಸರಿದಾರಿಗೆ ತರಲು ತಂದೆ ತಾಯಿಗಳು ಕೊಂಚ ಬೈಯುವಂತೆಯೂ ಇಲ್ಲ. ಚಿಕ್ಕಂದಿನಿಂದ ಮುದ್ದಾಗಿ ಬೆಳೆದ ಮಕ್ಕಳು ಹರೆಯಕ್ಕೆ ಬರುತ್ತಿದ್ದಂತೆ ನಿಯಂತ್ರಣಕ್ಕೆ ಬಾರದ ಹಟಮಾರಿಗಳಾಗಿಬಿಡುತ್ತವೆ! ಪೋಷಕರು ಯಾವುದೇ ನಿಯಂತ್ರಣ ಕ್ರಮ ಕೈಗೊಂಡರೆ ಆತ್ಮಹತ್ಯೆಗೆ ಮುಂದಾಗುವ ಬೆದರಿಕೆ ಒಡ್ಡುತ್ತವೆ. ಇಂತಹ ಸಮಯದಲ್ಲಿ ಪೋಷಕರು ಅಸಹಾಯಕರಾಗಿ ಅವರು ಕೇಳಿದ್ದನ್ನು ಕೊಡುತ್ತಾರೆ. ಶಿಕ್ಷಕರ ಬಳಿ ಬಂದು ಗೋಳು ಹೇಳಿಕೊಳ್ಳುವ ಹೊತ್ತಿಗೆ ಪರಿಸ್ಥಿತಿ ಕೈ ಮೀರಿರುತ್ತದೆ.

ಇಂತಹ ಪರಿಸ್ಥಿತಿ ಬರದಿರಲು ಸರಿಯಾದ ಸಂಸ್ಕಾರವನ್ನು ಚಿಕ್ಕಂದಿನಲ್ಲೆ ಕೊಡಲು ಪೋಷಕರು ಮನಸ್ಸು ಮಾಡಬೇಕು. ಇಂಟರ್ ನೆಟ್ ಮನೆಯಲ್ಲಿ ಮಾತ್ರ ಬಳಕೆ ಮಾಡುವಂತೆ ನೋಡಿಕೊಳ್ಳಬೇಕು. ಯಾವತ್ತಿಗೂ ಮಕ್ಕಳ ಬಳಕೆಯ ಕಂಪ್ಯೂಟರ್ ಎಲ್ಲರಿಗೂ ಕಾಣುವಂತೆ ಹಜಾರದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಒಂದು ಹಂತದ ಪ್ರಭುದ್ದತೆ ಬರುವವರೆಗೆ ಮೊಬೈಲ್ ಬಳಸದಂತೆ ನೋಡಿಕೊಳ್ಳಬೇಕು. ಅನಿವಾರ್ಯವೆಂಬಂತೆ ಮೊಬೈಲ್ ಬಳಸಿದರೂ ಅದರಲ್ಲಿ ಇಂಟರ್ ನೆಟ್ ಇರಬಾರದು. ಕೇವಲ ಕರೆ ಮಾಡುವ ಮತ್ತು ಸಂದೇಶ ಕಳಿಸುವ ಸೌಲಭ್ಯ ಮಾತ್ರ ಇರುವ ಕಡಿಮೆ ಸೌಕರ್ಯದ ಮೊಬೈಲನ್ನು ಕೊಡಿಸಬೇಕು. ಮಕ್ಕಳ ಮನಸ್ಸು ದುರ್ಬಲವಾಗದಂತೆ ಎಚ್ಚರಿಕೆ ವಹಿಸಬೇಕು.

-ಸಿಂಧು

Write A Comment