ಕರ್ನಾಟಕ

ಅಗತ್ಯ ಬಿದ್ದರೆ ಸರ್ಕಾರಕ್ಕೆ ಚಾಟಿ ಬೀಸುವೆ : ಸ್ಪೀಕರ್ ಕಾಗೋಡು ತಿಮ್ಮಪ್ಪ

Pinterest LinkedIn Tumblr

Kagodu-timmappaಬೆಳಗಾವಿ, ಜೂ.28-ಅಗತ್ಯ ಕಂಡು ಬಂದರೆ ಮನೆಯ ಯಜಮಾನನಾಗಿ ಸರ್ಕಾರದ ವಿರುದ್ದ ಚಾಟಿ ಬೀಸಲು ನಾನು ಹಿಂದೆ ಮುಂದೆ ನೋಡುವುದಿಲ್ಲ ಎಂದು ವಿಧಾನಸಭೆ  ಸ್ಪೀಕರ್ ಕಾಗೋಡು ತಿಮ್ಮಪ್ಪ  ಅವರು  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ನಾನು ಮನೆಯ ಯಜಮಾನನಾಗಿ ಏನು ಹೇಳಬೇಕೋ ಅದನ್ನೇ ಹೇಳೆಯೇ ತಿರುತ್ತೇನೆ. ಚುನಾವಣೆಯಲ್ಲಿ ಟೋಪಿ ಹಾಕೊಕೊಂಡು ಗೆದ್ದು ಬಂದವನಲ್ಲ. ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿರುತ್ತದೆ. ಮಾತಿಗೆ ತಪ್ಪಿದಾಗ ಏನು ಹೇಳಬೇಕೋ ಮುಲಾಜಿಲ್ಲದೆ ಹೇಳುವೆ ಎಂದು ಸರ್ಕಾರಕ್ಕೆ ಬೀಸಿ ಮುಟ್ಟಿಸಿದರು.

ನಾಳೆಯಿಂದ ಇಲ್ಲಿನ ಸುವರ್ಣಸೌಧದಲ್ಲಿ ಪ್ರಾರಂಭವಾಗಲಿರುವ ಅಧಿವೇಶನ ಕುರಿತಂತೆ ಪತ್ರಿಕಾಗೋಷ್ಠಿ ನಡೆಸಿದ ಕಾಗೋಡು  ತಿಮ್ಮಪ್ಪ ಅವರು, ಜನರಿಗೆ ಸ್ಪಂದಿಸುವುದು  ಪ್ರತಿಯೊಂದು ಸರ್ಕಾರದ  ಜವಬ್ದಾರಿ. ನಾನು ಪ್ರತಿಪಕ್ಷದ ನಾಯಕರ ಕೆಲಸ ಮಾಡುವುದಿಲ್ಲ.  ಒಬ್ಬ ಜನಪ್ರತಿನಿಧಿಯಾಗಿ ಮಾಡಬೇಕಾದ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು. ಅರಣ್ಯ ಭೂಮಿ ಹಕ್ಕು ಕಾಯ್ದೆ ಅನುಷ್ಟಾನವಾಗಬೇಕೆಂಬುದು ತಮ್ಮ ಆಶಯ. ಸಮಾಜ ಕಲ್ಯಾಣ ಸಚಿವರಿಗೆ ಇದರ ಬಗ್ಗೆ ಪತ್ರ ಬರೆದು ಈಗಾಗಲೇ ತಿಳಿಸಿದ್ದೇನೆ. ಅಧಿಕಾರಿಗಳು ಅದಷ್ಟು ಬೇಗ ಈ ಕಾಯ್ದೆಯನ್ನು ಜಾರಿ ಮಾಡಲು ಮುಂದಾಗಬೇಕೆಂದು ಮನವಿ ಮಾಡಿದರು.

ಇದೇ ವೇಳೆ ಪ್ರತಿಪಕ್ಷಗಳು ಸದನದಲ್ಲಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು. ಸದನದ ಒಳಗೆ ಚರ್ಚೆ. ಸದನದ ಹೊರಗೆ ಹೋರಾಟ ಮಾಡಬೇಕು. ಉಭಯ ಸದನಗಳಲ್ಲಿ ಅರ್ಥಪುರ್ಣ ಚರ್ಚೆ ನಡೆಯಬೇಕೆಂಬುದು ತಮ್ಮ ಆಶಯವಾಗಿದೆ ಎಂದು ತಿಳಿಸಿದರು.
ಕಬ್ಬು ಬೆಳೆಗಾರರ ಸಮಸ್ಯೆ ಇಲ್ಲವೇ ರೈತರ ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಮಾಡಿಕೊಳ್ಳುವುದೇ ಪರಿಹಾರವಾಗುವುದಿಲ್ಲ.  ಬೆಳಗಾವಿ ಅಧಿವೇಶನದ  ವೇಳೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಯಾವುದೇ ಸಂಬಂಧವಿಲ್ಲ. ಇದೊಂದು ಕಾಕತಾಳೀಯ ಅಷ್ಟೇ. ಸಾಯುತ್ತೇರೆಂದು ಹುಟ್ಟಿಸುವುದನ್ನು ನಿಲ್ಲಿಸಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು. ಆತ್ಮಹತ್ಯೆ ಎಂಬುದು ನಿರಂತರ ಪ್ರಕ್ರಿಯೆ. ಇಂತಹ ಘಟನೆಗಳು ನಡೆಯಬಾರದು. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬಾರದು. ರೈತರ ಸಮಸ್ಯೆಗಳನ್ನು ಸರ್ಕಾರ ಪರಿಹರಿಸಲು ಮುಂದಾಗಬೇಕೆಂದು ಸಲಹೆ ಮಾಡಿದರು. ಪ್ರತಿಪಕ್ಷಗಳು ಎತ್ತುವ ಪ್ರತಿಯೊಂದು ಪ್ರಶ್ನೆಗೆ ಸರ್ಕಾರ ಸಮರ್ಪಕವಾದ ಉತ್ತರ ನೀಡಬೇಕು. ಒಂದು ವೇಳೆ ನಾಳೆಯೇ ನಿಲುವಳಿ ಸೂಚನೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದರೆ ಪರಿಶೀಲನೆ ಮಾಡಿ ಸದನ ಸಲಹಾ ಸಮಿತಿಯಲ್ಲಿ ಚರ್ಚೆಸಿ ಕ್ರಮಕೈಗೊಳ್ಳಲಾಗುವುದು ಎಂದರು.

10 ದಿನ ಕಲಾಪ :
ಇಲ್ಲಿನ ಸುವರ್ಣಸೌಧದಲ್ಲಿ ಒಟ್ಟು 10 ದಿನಗಳ ಕಾಲ ಅಧಿವೇಶನ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಬಿಬಿಎಂಪಿ ಚುನಾವಣೆಗೂ ಅಧಿವೇಶನಕ್ಕೂ ಯಾವುದೇ ಸಂಬಂಧವಿಲ್ಲ. ಚುನಾವಣೆಯನ್ನು ಸಂಬಂಧ ಪಟ್ಟವರು ನೋಡಿಕೊಳ್ಳುವರು. ಜನರ ಸಮಸ್ಯೆಗಳು ಮುಖ್ಯವಾಗಬೇಕೇ ಹೊರತು ಚುನಾವಣೆಯಲ್ಲ ಎಂದು ಅಭಿಪ್ರಾಯಪಟ್ಟರು.  29 ರಿಂದ ಸುವರ್ಣಸೌಧದಲ್ಲಿ ಅಧಿವೇಶನ ನಡೆದರೆ ಉಳಿದ ಹತ್ತು ದಿನಗಳ ಕಲಾಪ ಬೆಂಗಳೂರಿನಲ್ಲಿ 24 ರಿಂದ ಪ್ರಾರಂಭವಾಗಲಿದೆ. ಈಗಾಗಲೇ ತೆಗೆದುಕೊಂಡ ತೀರ್ಮಾನದಂತೆ ಕಾರ್ಯಕಲಾಪಗಳು ಜರುಗಲಿವೆ ಎಂದು ವಿವರಿಸಿದರು.

ವಿಧೇಯಕ ಮಂಡನೆ :
ಈ ಬಾರಿಯ ಅಧಿವೇಶನದಲ್ಲಿ  2015 ನೇ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ( ತಿದ್ದುಪಡಿ) ವಿಧೇಯಕ ಹಾಗೂ 2015 ನೇ ಸಾಲಿನ ಕರ್ನಾಟ ವೃತ್ತಿ ಶಿಕ್ಷಣ ಸಂಸ್ಥೆಗಳ ( ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ವಿಧೇಯಕ ಮಂಡಿಸಲು ಸರ್ಕಾರಿದಂದ ಪ್ರಸ್ತಾವನೆ ಬಂದಿದೆ ಎಂದರು. ಉಳಿದಂತೆ ಅಂಗೀಕಾರಕ್ಕೆ ಬಾಕಿ ಇರುವ ಕರ್ನಾಟಕ ಕಾಕಂಬಿ ನಿಯಂತ್ರಣ ವಿಧೇಯಕ 2014, ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ (ತಿದ್ದುಪಡಿ)  ವಿಧೇಯಕ 2015, ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ವಿಧೇಯಕ 2015, ಹಾಗೂ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ 2015 ಬಾಕಿ ಇವೆ ಎಂದು ಹೇಳಿದರು. ಬೆಂಗಳೂರು ವಿಶ್ವವಿದ್ಯಾನಿಲಯವನ್ನು ವಿಭಜಿಸುವ ವೇಳೆ ವರನಟ ಡಾ, ರಾಜ್‌ಕುಮಾರ್ ಹೆಸರು ಇಡುವ ಬಗ್ಗೆ ಹಾಗೂ ವಿಧಾನಪರಿಷತ್ತನ್ನು ವಿಸರ್ಜಿನೆ ಮಾಡಬೇಕೆಂದು ಸದಸ್ಯ ಎಂ.ಟಿ ಕೃಷ್ಣಪ್ಪ, ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಅದ್ದೂರಿ ವಿವಾಹಗಳಿಗೆ ನಿರ್ಭಂದಿಸುವ ಖಾಸಗಿ ವಿಧೇಯಕವನ್ನು ಸ್ವೀಕರಿಸಲಾಗಿದೆ. ಮುಖ್ಯವಾಗಿ 2015- 16 ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ 28 ಇಲಾಖಾ ಬೇಡಿಕೆಗಳ ಮೇಲೆ ಚರ್ಚೆ ನಡೆಯಲಿದೆ. ಜುಲೈ 31 ರವರೆಗೆ ಲೇಖಾನುದಾನ ಅಂಗೀಕರಿಸಿರುವುದರಿಂದ ಪ್ರಸಕ್ತ ಅಧಿವೇಶನದಲ್ಲಿ 2015- 16 ನೇ ಸಾಲಿನ ಆಯವ್ಯಯ ಮತ್ತು ಧನವಿನಿಯೋಗ ವಿಧೇಯಕವನ್ನು ಅಂಗೀಕರಿಸಬೇಕಾಗಿದೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ವಿಧಾನಸಭೆ ಕಾರ್ಯದರ್ಶಿ ಎಂ ಗುರುರಾಜ್, ಜಿಲ್ಲಾಧಿಕಾರಿ ಜಯರಾಂ, ನಗರ ಪೊಲೀಸ್ ಆಯುಕ್ತ ಎಸ್. ರವಿ ಮತ್ತಿತರರು ಹಾಜರಿದ್ದರು.

Write A Comment