ಕರ್ನಾಟಕ

24 ಕೋಟಿ ರೂ. ವೆಚ್ಚದಲ್ಲಿ ಕಬಿನಿ ಮುಂಭಾಗ ಬೃಂದಾವನ: ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

siddu

ಮೈಸೂರು, ಜೂ.28: ಕಬಿನಿ ಜಲಾಶಯದ ಮುಂಭಾಗದಲ್ಲಿರುವ 2884 ಎಕರೆ ಪ್ರದೇಶವನ್ನು ಕೆಆರ್‌ಎಸ್ ಬೃಂದಾವನ ಮಾದರಿಯಲ್ಲಿ ಅಭಿವೃದ್ಧಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಜೂನ್ ತಿಂಗಳಲ್ಲಿ ಇದೇ ಮೊದಲ ಬಾರಿಗೆ ಭರ್ತಿಯಾಗಿರುವ ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಇಂದು ಬೆಳಿಗ್ಗೆ ಬಾಗಿನ ಅರ್ಪಿಸಿದ ನಂತರ ಮಾತನಾಡಿದ ಅವರು, ಜಲಾಶಯದ ಮುಂಭಾಗವನ್ನು 24 ಕೋಟಿ ರೂ. ವೆಚ್ಚದಲ್ಲಿ ಬೃಂದಾವನ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದೆಂದರು.

ಸದ್ಯದಲ್ಲೇ ಈ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದೆಂದು ಸಿದ್ದರಾಮಯ್ಯ ತಿಳಿಸಿದರು.

ಜೂನ್ ತಿಂಗಳಲ್ಲಿ ಕಬಿನಿ ತುಂಬಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು ಎಂದ ಅವರು, ಇದೊಂದು ಶುಭಸಂಕೇತ. ವರುಣನ ಕೃಪೆಯಿಂದ ಕಳೆದ ವರ್ಷಗಳಲ್ಲಿ ಎಲ್ಲಾ ಜಲಾಶಯಗಳು ತುಂಬಿವೆ. ಈ ವರ್ಷವೂ ತುಂಬುವ ವಿಶ್ವಾಸವಿದೆ ಎಂದರು.

ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಸಂಗ್ರಹ 100 ಅಡಿ ದಾಟಿದೆ. ಎಲ್ಲ ಜಲಾಶಯಗಳು ತುಂಬಿದರೆ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದರು. ಕಬಿನಿ ಜಲಾಶಯದಲ್ಲಿ 19.5 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಇರುವುದರಿಂದ ಬಹುಬೇಗನೆ ತುಂಬುತ್ತದೆ. ಇದರಿಂದ 1.13 ಲಕ್ಷ ಎಕರೆಗೆ ನೀರುಣಿಸಲಾಗುತ್ತಿದೆ ಎಂದರು.

ಕಾಲುವೆಗಳ ಆಧುನೀಕರಣ

ಜಲಾಶಯದ ನೀರು ಹರಿಯುವ ಕಾಲುವೆಗಳ ಆಧುನೀಕರಣಗೊಳಿಸಲು 1,800 ಕೋಟಿ ರೂ. ಮೀಸಲಿಡಲಾಗಿದೆ. ರಾಮಾಪುರ, ನುಗು ಹಾಗೂ ಹುಲ್ಲಹಳ್ಳಿ ಕಾಲುವೆಗಳನ್ನು ಅಭಿವೃದ್ಧಿಪಡಿಸಲಾಗುವುದೆಂದರು. ಎಲ್ಲೂ ಕಳಪೆ ಕಾಮಗಾರಿಗಳು ನಡೆಯಬಾರದು, ನ‌ಡೆದಿದ್ದೇ ಆದರೆ ಸಂಬಂಧಪಟ್ಟ ಇಂಜಿನಿಯರುಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು.

ಪ್ರಚಾರದ ತಂತ್ರ

ರೈತರ ಸಮಸ್ಯೆಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರು, ಕೇವಲ ಪ್ರಚಾರ ಪಡೆಯುವ ತಂತ್ರವಾಗಿ ವಿವಿಧ ಕಡೆಗಳಿಂದ ಬೆಳಗಾವಿಗೆ ಪಾದಯಾತ್ರೆ ಮಾಡುತ್ತಿದ್ದಾರೆಂದು ಲೇವಡಿ ಮಾಡಿದರು.

ಬಳ್ಳಾರಿಗೆ ನೀವು ಮಾಡಿದ ಪಾದಯಾತ್ರೆಯೂ ಪ್ರಚಾರಕ್ಕಾಗಿಯೇ ಎಂಬ ಬಗ್ಗೆ ಅವರ ಗಮನ ಸೆಳೆದಾಗ, ಬಳ್ಳಾರಿಗೆ ಬರಲು ಅವಕಾಶ ನೀಡುವುದಿಲ್ಲ ಎಂದು ಗಣಿ-ಧಣಿಗಳು ಅಬ್ಬರಿಸಿದ್ದರು. ಅದನ್ನು ಸವಾಲಾಗಿ ಸ್ವೀಕರಿಸಿ, ಸಾಮಾಜಿಕ ನ್ಯಾಯಕ್ಕಾಗಿ ಪಾದಯಾತ್ರೆ ಮಾಡಲಾಗಿತ್ತೆಂದರು.

ಪ್ರತಿ ಪಕ್ಷಗಳ ನಾಯಕರು ಪ್ರತಿಯೊಂದು ಸಣ್ಣಪುಟ್ಟ ವಿಷಯಗಳನ್ನು ಸಿಬಿಐಗೆ ವಹಿಸಿ ಎನ್ನುತ್ತಿದ್ದಾರೆ. ಗಣಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿ ಎಂದು ನಾವು ಮಾಡಿದ ಒತ್ತಾಯಕ್ಕೆ ಅಂದಿನ ಬಿಜೆಪಿ ಸರ್ಕಾರ ಸ್ಪಂದಿಸಿರಲಿಲ್ಲ ಎಂದು ತಿರುಗೇಟು ನೀಡಿದರು. ತಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 2 ವರ್ಷಗಳಲ್ಲಿ ಯಾವುದೇ ಹಗರಣ ನಡೆದಿಲ್ಲ, ಯಾವುದೇ ಅವ್ಯವಹಾರ ಆರೋಪಗಳೂ ತಮ್ಮ ಮೇಲಿಲ್ಲ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಪ್ರಸಾದ್, ಸಕ್ಕರೆ ಸಚಿವ ಎಚ್.ಎಸ್. ಮಹದೇವಪ್ರಸಾದ್, ಸಂಸದರಾದ ಧೃವ ನಾರಾಯಣ್, ಪ್ರತಾಪ್ ಸಿಂಹ, ಶಾಸಕ ಚಿಕ್ಕಮಾದು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮತ್ತಿತರರು ಉಪಸ್ಥಿತರಿದ್ದರು.

Write A Comment