ಕೆ.ಆರ್.ಪೇಟೆ, ಜೂ.24: ತಾಲೂಕಿನ ಮುರುಕನಹಳ್ಳಿ ಗ್ರಾಮದ ಬಳಿ ಸೇತುವೆಗೆ ಕೆಎಸ್‌ಆರ್‌ಟಿಸಿ ಬಸ್ಸೊಂದು ಡಿಕ್ಕಿಯಾಗಿದ್ದು, ಅದೃಷ್ಟವಶಾತ್ ಎಲ್ಲಾ ಪ್ರಯಾಣಿಕರು ಪಾರಾಗಿದ್ದಾರೆ. ನಿನ್ನೆ ಮಧ್ಯಾಹ್ನ ಶಿವಮೊಗ್ಗ ಡಿಪೋಗೆ ಸೇರಿದ ಬಸ್ ಮೈಸೂರಿನಿಂದ ಶಿವಮೊಗ್ಗಕ್ಕೆ ಹೊರಟಿತ್ತು.
ಮುರುಕನಹಳ್ಳಿ ಸಮೀಪದ ಸೇತುವೆ ಬಳಿ ಇರುವ ತಿರುವಿನಲ್ಲಿ ಬ್ರೇಕ್ ವೈಫಲ್ಯಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ ಸೇತುವೆಗೆ ಡಿಕ್ಕಿಯಾಯಿತು. ಅದೃಷ್ಟವಶಾತ್ ಚಾಲಕ- ನಿರ್ವಾಹಕ ಸೇರಿದಂತೆ ಪ್ರಯಾಣಿಕರು ಪವಾಡ ಸದೃಶ್ಯ ರೀತಿಯಲ್ಲಿ ಸಣ್ಣವೂ ಆಗದೆ ಅಪಾಯದಿಂದ ಪಾರಾಗಿದ್ದಾರೆ.
ಅರ್ಧ ಅಡಿ ಬಲಕ್ಕೆ ಬಸ್ ಚಲಿಸಿದ್ದರೂ ಹಳ್ಳಕ್ಕೆ ಮಗುಚಿ ಬಿದ್ದು ಭಾರೀ ಅಪಾಯ ಸಂಭವಿಸುತಿತ್ತು. ಚಾಲಕನು ಅಪಾಯದ ಸುಳಿವು ಅರಿತು ಧೈರ್ಯದಿಂದ ಬಸ್ಸನ್ನು ಸೇತುವೆಗೆ ಡಿಕ್ಕಿಯಾಗಿಸಿದ ಪರಿಣಾಮ ಭಾರೀ ಅನಾಹುತ ತಪ್ಪಿತ್ತೆಂದು ಪ್ರಯಾಣಿಕ ಮಹೇಶ್ ನಿಟ್ಟುಸಿರುಬಿಟ್ಟರು.
ಘಟನೆ ಕುರಿತು ಚಾಲಕ ಆನಂದ್ ನಿರ್ವಾಹಕ ಯಶವಂತ್ ಅವರು ಪಟ್ಟಣ ಪೊಲೀಸರಿಗೆ ದೂರು ನೀಡಿದ್ದರ ಮೇರೆಗೆ ಸಬ್‌ಇನ್ಸ್‌ಪೆಕ್ಟರ್ ಹೆಚ್.ಎನ್.ವಿನಯ್ ಸ್ಥಳ ಪರಿಶೀಲನೆ ನಡೆಸಿದರು. ನಂತರ ಮಂಡ್ಯದಿಂದ ಕ್ರೇನ್ ಮೂಲಕ ಬಸ್ಸನ್ನು ಕೆ.ಆರ್.ಪೇಟೆ ಡಿಪೋಗೆ ಸಾಗಿಸಲಾಯಿತು.
