ಕರ್ನಾಟಕ

ಶಾಲಾ ಪಠ್ಯದಲ್ಲಿ ಯೋಗ ಶಿಕ್ಷಣ ಅಳವಡಿಕೆ : ಸಿಎಂ ಸಿದ್ದರಾಮಯ್ಯ

Pinterest LinkedIn Tumblr

siddu1

ಬೆಂಗಳೂರು,ಜೂ.21: ಧರ್ಮ ಹಾಗೂ ಜಾತಿ ರಹಿತವಾದ ಯೋಗದಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ರಕ್ಷಣೆ ಸಾಧ್ಯವಿದೆ. ಯೋಗ ಶಿಕ್ಷಣವನ್ನು ಶಾಲಾ ಪಠ್ಯಕ್ರಮದಲ್ಲಿ ಐಚ್ಛಿಕ ವಿಷಯವಾಗಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ವಿಧಾನಸೌಧದ ಎದುರು ಆಯುಷ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯೋಗ ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಹ ಮತ್ತು ಮನಸ್ಸುಗಳ ಒತ್ತಡ ಮುಕ್ತವಾಗಿರಬೇಕಾದರೆ ಯೋಗಾಸನ ರಾಮಬಾಣ. ದಿನದ ೨೪ ಗಂಟೆಯಲ್ಲಿ ಯೋಗಾಸನಕ್ಕಾಗಿ ಒಂದು ಗಂಟೆ ಮೀಸಲಿಟ್ಟರೆ ಬದುಕಿರುವಷ್ಟು ದಿನವೂ ಆರೋಗ್ಯವಂತರಾಗಿರಬಹುದು ಎಂದರು.

cmmm

ಯೋಗ ಶಿಕ್ಷಣವನ್ನು ಪಠ್ಯ ಕ್ರಮಗಳಲ್ಲಿ ಅಳವಡಿಸಬೇಕು ಎಂಬ ಬೇಡಿಕೆ ಹೆಚ್ಚಗಿ ಕೇಳಿಬರುತ್ತಿದೆ. ಆಯುಷ್ ಇಲಾಖೆ ಈಗಾಗಲೇ ೧೨ ಸಾವಿರ ಶಿಕ್ಷಕರಿಗೆ ಅನೌಪಚಾರಿಕವಾಗಿ ಯೋಗ ತರಬೇತಿ ನೀಡಿದೆ. ಅದನ್ನು ಕ್ರಮಬದ್ಧಗೊಳಿಸಲು ಶಾಲಾ ಪಠ್ಯ ಕ್ರಮದಲ್ಲಿ ಯೋಗವನ್ನು ಅಳವಡಿಸಲು ಅಯುಷ್ ಇಲಾಖೆ ಕ್ರಮ ಕೈಗೊಳ್ಳಬೇಕೆಮದು ಹೇಳಿದರು. ಮೈಸೂರಿನಲ್ಲಿ ಯೋಗ ಶಿಕ್ಷಣದಲ್ಲಿ ಪದವಿ ನೀಡುವ ಕೋರ್ಸ್ ಲಭ್ಯವಿದೆ. ಅದನ್ನು ಮೇಲ್ದರ್ಜೆಗೇರಿಸಿ ಯೋಗ ಸ್ನಾತಕೋತ್ತರ ಪದವಿ ಆರಂಭಿಸುವ ಚಿಂತನೆಗಳು ನಡೆದಿವೆ. ಜಿಗಣಿಯಲ್ಲಿರುವ ದೇಶದ ಮೊದಲ ವಿವೇಕಾನಂದ ಯೋಗ ಅನುಸಂಧಾನ ವಿವಿಗೆ ರಾಜ್ಯ ಸರ್ಕಾರ ಸಂಪೂರ್ಣ ನೆರವು ನೀಡುತ್ತಿದೆ ಎಂದು ತಿಳಿಸಿದರು.

cm yoga

ನಾನು ಈ ಮೊದಲು ಚಿಕಿತ್ಸೆಗಾಗಿಬೆಂಗಳೂರಿನ ಜಿಂದಾಲ್ , ದರ್ಮಸ್ಥಳದ ನ್ಯಾಚುರೋಪತಿ ಚಿಕಿತ್ಸಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದೆ. ಅಲ್ಲಿರುವಾಗ ಯೋಗ ಮಾಡಿ ಬಂದ ನಂತರ ಬಿಟ್ಟುಬಿಡುತ್ತಿದ್ದೆ. ಆದರೆ ಕಳೆದ ಏಳೆಂಟು ತಿಂಗಳಿನಲ್ಲಿ ನಿರಂತರ ಯೋಗಾಸನ ಆರಂಭಿಸಿದ್ದೇನೆ. ಅದರ ಪರಿಣಾಮ ಮತ್ತು ಲಾಭಗಳು ನನ್ನ ಗಮನಕ್ಕೆ ಬಂದಿವೆ ಎಂದು ಹೇಳಿದ ಅವರು, ಧರ್ಮಸ್ಥಳ ಚಿಕಿತ್ಸಾ ಕೇಂದ್ರಕ್ಕೆ ನಟಿ ತಾರಾ ಬರುತ್ತಿದ್ದನ್ನು ಸ್ಮರಿಸಿಕೊಂಡರು. ಯೋಗ ಶಿಕ್ಷಣಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಬಿ.ಕೆ.ಎಸ್.ಅಯ್ಯಂಗಾರ್, ಪಟ್ಟಾಬಿ ಜೋಯಿಸ್ ಮತ್ತಿತರ ಯೋಗಾಚಾರ್ಯರ ಕೊಡುಗೆ ಅಪಾರವಾಗಿದೆ. ಭಾರತದಲ್ಲೇ ಹುಟ್ಟಿದ ಯೋಗ ಧರ್ಮಾತೀತ ಮತ್ತು ಜಾತ್ಯತೀತ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದರು.

ಯೋಗ ಕುರಿತು ಅಂತಾರಾಷ್ಟ್ರೀಯ ದಿನಾಚರಣೆ ಮಾಡಲು ಮತ್ತು ವಿಶ್ವದ 127 ದೇಶಗಳು ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ಕಾರಣಕರ್ತರಾದ ಪ್ರಧಾನಿ ಮೋದಿ ಅಭಿನಂದನಾರ್ಹರು ಎಂದು ಹೇಳಿದರು.

ಯಾವುದೇ ವಯೋಮಾನದ ಮಿತಿಯಿಲ್ಲದೆ ಎಲ್ಲರೂ ಯೋಗ ಮಾಡಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮಗಳಾಗುವುದಿಲ್ಲ ಎಂದು ಸಲಹೆ ನೀಡದರು. ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್, ಯೋಗವನ್ನು ಪಠ್ಯಕ್ರಮದಲ್ಲಿ ಸೇರಿಸುವ ಭರವಸೆ ನೀಡಿರುವ ಮುಖ್ಯಮಂತ್ರಿಗೆ ಅಭಿನಂದನೆ ತಿಳಿಸಿದರು.

ವೈಯಕ್ತಿಕವಾಗಿ ಹಾಗೂ ಗುಂಪು ಗುಂಪುಗಳಾಗಿ ಹೊಸ ದಾಖಲೆಗಳನ್ನು ಬರೆಯುವುದು ಸಾಮಾನ್ಯ. ಆದರೆ ಇಂದು ಇಡೀ ವಿಶ್ವವೇ ಹೊಸ ದಾಖಲೆ ನಿರ್ಮಿಸಿದೆ. 127 ದೇಶಗಳು ಏಕಕಾಲಕ್ಕೆ ಯೋಗಾ ದಿನಚರಣೆಯಲ್ಲಿ ಭಾಗವಹಿಸಿವೆ ಎಂದು ಅ ಭಿಪ್ರಾಯಪಟ್ಟರು. ಯೋಗ ಶಿಕ್ಷಣವನ್ನು ಪಠ್ಯಕ್ರಮದಲ್ಲಿ ಅಳವಡಿಸುವ ಜೊತೆಗೆ ಜೀವನ ಶೈಲಿಯನ್ನು ಕಲಿಸುವ ಕೆಲಸವಾಗಬೇಕು. ಹಾಗಾದಾಗ ಮಾತ್ರ ಬಹಳಷ್ಟು ಕಾಯಿಲೆಗಳನ್ನು ಸಹಜವಾಗಿ ತಡೆಯಬಹುದು. ವಿಶ್ವದಲ್ಲೇ ಯೋಗ ಮತ್ತು ಜೀವನ ಶೈಲಿಯನ್ನು ಪಠ್ಯ ಕ್ರಮದಲ್ಲಿ ಅಳವಡಿಸಿದ ಮೊದಲ ರಾಜ್ಯವೆಂಬ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಮಾತನಾಡಿ, ರೋಗಗಳನ್ನು ದೂರ ಇಡಲು ಯೋಗದಿಂದ ಸಾಧ್ಯ. ಯೋಗವನ್ನು ಮೊದಲ ಆದ್ಯತೆಯನ್ನಾಗಿಸಿಕೊಂಡು ಜೀವನ ನಡೆಸಿದರೆ ಅನಾರೋಗ್ಯದಿಂದ ದೂರವಿರಬಹುದು. ಕಾಯಿಲೆ ಬಂದಾಗ ಎಲ್ಲ ಆಸ್ಪತ್ರೆಗಳಿಗೂ ಸುತ್ತಾಡಿ ಹಣ ಖರ್ಚುಮಾಡಿಕೊಂಡು ಕೊನೆಯದಾಗಿ ಯೋಗಕ್ಕೆ ಮೊರೆ ಹೋಗುವ ಬದಲು ಮೊದಲಿನಿಂದಲೂ ಯೋಗಾಭ್ಯಾಸ ಆರಂಭಿಸಿದರೆ ಕಾಯಿಲೆಯಿಂದ ದೂರವಿರಬಹುದು ಎಂದು ಹೇಳಿದರು.

ಎನ್‌ಸಿಸಿಯ ಕರ್ನಾಟಕ ಮತ್ತು ಗೋವಾ ವಲಯದ ಕಮಾಂಡರ್ ಇನ್ ಚೀಪ್ ಮತನಾಡಿ, ದೇಶದ ೧೨ ಲಕ್ಷ ಎನ್‌ಸಿಸಿ ಕೆಡೆಟ್‌ಗಳು ಇಂದು ಯೋಗ ಶಿಕ್ಷಣದಲ್ಲಿ ಭಾಗವಹಿಸಿದ್ದಾರೆ. ರಾಜ್ಯದ ೩,೧೨೦ ಕೆಡೆಟ್‌ಗಳು ಈ ಕಾರ್ಯಕ್ರಮದಲ್ಲಿ ಭಾಗಹಿಸಿದ್ದಾರೆ ಎಂದು ವಿವರಿಸಿದರು.

ಕೇಂದ್ರ ಸಚಿವ ಅನಂತಕುಮಾರ್, ಆರ್.ವಿ.ದೇಶಪಾಂಡೆ, ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತಿತರರು ಯೋಗಾಸನದಲ್ಲಿ ಭಾಗವಹಿಸಿದ್ದರು.

ಇದೇ ವೇಳೆ ಎನ್‌ಸಿಸಿ ಸಂಸ್ಥೆಗೆ ಸರ್ಟಿಫಿಕೇಟ್ ಆಫ್ ಅಪ್ರಿಷಿಯೇಷನ್ ಪ್ರಶಸ್ತಿ ಪತ್ರವನ್ನು ಮುಖ್ಯಮಂತ್ರಿಗಳು ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ವೃಕ್ಷಾಸನ, ತಾಡಾಸನ, ಅರ್ಧ ಚಕ್ರಾಸನ, ಶಶಂಕಾಸನ, ಮಕರಾಸನ, ಶವಾಸನ, ಕಪಾಲಬಾತಿ ಮತ್ತಿತರ ಆಸನಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಗಣ್ಯರು ಕೂಡ ವಿದ್ಯಾರ್ಥಿಗಳ ಜೊತೆ ಯೋಗಪಟ್ಟುಗಳನ್ನು ಹಾಕಿದರು.

Write A Comment