ಕರ್ನಾಟಕ

ಆಸ್ಪತ್ರೆಯಿಂದ ಅಪಹರಣಗೊಂಡಿದ್ದ ಒಂದೂವರೆ ತಿಂಗಳ ಮಗು ಸುರಕ್ಷಿತವಾಗಿ ತಾಯಿ ಮಡಿಲು

Pinterest LinkedIn Tumblr

child12

ದಾವಣಗೆರೆ: ಚಿಗಟೇರಿ ಜಿಲ್ಲಾ ಆಸ್ಪತ್ರೆಯಿಂದ ಬುಧವಾರ ರಾತ್ರಿ ಅಪಹರಣಗೊಂಡಿದ್ದ ಒಂದೂವರೆ ತಿಂಗಳ ಹೆಣ್ಣುಮಗು ಶನಿವಾರ ಸುರಕ್ಷಿತವಾಗಿ ತಾಯಿ ಮಡಿಲು ಸೇರಿದೆ. ಚಿತ್ರದುರ್ಗದ ದಂಪತಿಯೊಬ್ಬರ ಮನೆಯಲ್ಲಿ ಮಗು ಪತ್ತೆಯಾಗಿದ್ದು, ಅಲ್ಲಿಂದ ಮಗುವನ್ನು ದಾವಣಗೆರೆಗೆ ಕರೆತಂದ ಪೊಲೀಸರು ಪೋಷಕರಿಗೆ ಹಸ್ತಾಂತರಿಸಿದ್ದಾರೆ.

ಮಗುವಿನ ಅಪಹರಣಕಾರ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಚಿಗಟೇರಿ ಜಿಲ್ಲಾ ಆಸ್ಪತ್ರೆಯಿಂದ ಮಗುವನ್ನು ಅಪಹರಿಸಿದ ವ್ಯಕ್ತಿಯೊಬ್ಬ ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯಲ್ಲಿರುವ ಮಕ್ಕಳಿಲ್ಲದ ದಂಪತಿಗೆ ಮಗುವನ್ನು ನೀಡಿದ್ದಾನೆ.

ಮಗು ಕಾಣೆಯಾದ ಸುದ್ದಿ 2 ದಿನಗಳಿಂದ ಮಾಧ್ಯಮಗಳಲ್ಲಿ ನೋಡಿದ್ದ ಅಲ್ಲಿನ ಸ್ಥಳೀಯರು ದಂಪತಿ ಮನೆಯಲ್ಲಿ ಹಸುಳೆಯನ್ನು ನೋಡಿ ಅನುಮಾನಗೊಂಡು, ಚಿತ್ರದುರ್ಗದ ಕೋಟೆ ಪೊಲೀಸ್‌ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ನಂತರ ಪೊಲೀಸರು ದಂಪತಿಯ ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ.

ಚಿತ್ರದುರ್ಗದಿಂದ ಮಗುವನ್ನು ಕರೆತಂದ ದಾವಣಗೆರೆ ಪೊಲೀಸರು ಎಸ್‌.ಪಿ.ಬೋರಲಿಂಗಯ್ಯ, ಸಿಜಿ ಆಸ್ಪತ್ರೆ ಅಧೀಕ್ಷಕಿ ನೀಲಾಂಬಿಕೆ ಅವರ ಸಮ್ಮುಖದಲ್ಲಿ ಮಗುವನ್ನು ಪೋಷಕರಿಗೆ ಹಸ್ತಾಂತರಿಸಿದರು. ಮಗು ಸಿಕ್ಕ ಖುಷಿಯಲ್ಲಿ ಮಾಧ್ಯಮದವರಿಗೆ ಹಾಗೂ ಪೊಲೀಸರಿಗೆ ಪೋಷಕರು ಧನ್ಯವಾದ ಸಲ್ಲಿಸಿದರು.

Write A Comment