ಕರ್ನಾಟಕ

ರಸ್ತೆ ಮಧ್ಯೆ ಹೊಂಡದಲ್ಲಿ ಮೊಸಳೆ ಕಂಡು ಬೆಚ್ಚಿಬಿದ್ದ ಬೆಂಗಳೂರಿಗರು!

Pinterest LinkedIn Tumblr

crocodile-fi

ಬೆಂಗಳೂರು: ಎತ್ತು, ಎಮ್ಮೆ, ಕೋಣ, ರಸ್ತೆ ಮಧ್ಯೆ ಕುಳಿತು, ರೈಲು ತಡೆದು ಹೀಗೆ ಹಲವು ವಿಧದ ಪ್ರತಿಭಟನೆಗಳ ಬಗ್ಗೆ ಓದಿದ್ದೀರಿ…ಆದರೆ ಬೆಂಗಳೂರು ನಗರ ಪ್ರದೇಶದಲ್ಲಿ ದೃಶ್ಯಮಾಧ್ಯಮ ಚಿತ್ರ ಕಲಾವಿದರೊಬ್ಬರು ನಡೆಸಿದ ಪ್ರತಿಭಟನೆ ಮಾತ್ರ ಸಾರ್ವಜನಿಕರನ್ನು ತಬ್ಬಿಬ್ಬುಗೊಳಿಸಿದ್ದಂತು ಸತ್ಯ!

ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ, ರಸ್ತೆ ಮಧ್ಯೆ ನಿರ್ಮಾಣವಾದ ದೊಡ್ಡ ಹೊಂಡವನ್ನು ಮುಚ್ಚುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸ್ಥಳೀಯರು ಸಾಕಷ್ಟು ಬಾರಿ ಮನವಿ ಮಾಡಿದ್ದರು. ಆದರೆ ಅಧಿಕಾರಿಗಳು ಅದಕ್ಕೆ ಸ್ಪಂದಿಸಿರಲಿಲ್ಲವಾಗಿತ್ತು.

ಆ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳ ಗಮನ ಸೆಳೆಯಲು ಗುರುವಾರ ಮೈಸೂರು ಮೂಲದ ಕಲಾವಿದ ಬಾದಲ್ ನಂಜುಂಡಸ್ವಾಮಿ, ಸುಲ್ತಾನ್ ಪಾಳ್ಯ ಮುಖ್ಯ ರಸ್ತೆಯ ಮಧ್ಯೆ ಉಂಟಾದ ದೊಡ್ಡ ಹೊಂಡದೊಳಗೆ 12 ಅಡಿ ಉದ್ದದ ಕೃತಕ ಮೊಸಳೆಯನ್ನು ತಂದು ಇಟ್ಟು ಮೌನ ಪ್ರತಿಭಟನೆ ನಡೆಸಿದ್ದಾರೆ.

ಈ ಪ್ರತಿಭಟನೆ ಬಿಬಿಎಂಪಿ ಅಧಿಕಾರಿಗಳ ಗಮನಸೆಳೆಯುವಲ್ಲಿ ಹೆಚ್ಚು ಪರಿಣಾಮಕಾರಿಯಾಗೋದಕ್ಕಿಂತ, ಆ ರಸ್ತೆಯಲ್ಲಿ ಸಂಚರಿಸುವ ನೂರಾರು ಪ್ರಯಾಣಿಕರು, ಪಾದಚಾರಿಗಳಿಗೆ ಮಾತ್ರ ಅಚ್ಚರಿಯಾಗಿ ಕಂಡಿದ್ದಂತು ಸುಳ್ಳಲ್ಲ.

ಸುಮಾರು ಒಂದು ತಿಂಗಳ ಹಿಂದೆ ಕುಡಿಯುವ ನೀರಿನ ಪೈಪ್ ಒಡೆದು ಹೋಗಿತ್ತು. ಅಲ್ಲದೇ ಮಳೆ ಮತ್ತು ಟ್ರಾಫಿಕ್ ಒತ್ತಡದಿಂದ ಅದು ರಸ್ತೆ ಮಧ್ಯೆದಲ್ಲಿಯೇ ದೊಡ್ಡ ಹೊಂಡವಾಗಿ ಮಾರ್ಪಟ್ಟಿತ್ತು. ಈ ಬಗ್ಗೆ ಬಿಬಿಎಂಪಿ ಮತ್ತು ಬೆಂಗಳೂರು ಜಲಮಂಡಳಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಕೂಡಾ ಯಾವ ಅಧಿಕಾರಿಯೂ ಸ್ಪಂದಿಸಿಲ್ಲವಾಗಿತ್ತು. ತನ್ನ ಈ ಪ್ರತಿಭಟನೆಯಿಂದಾಗಿ ಅಧಿಕಾರಿಗಳು ಕ್ರಮ ಕೈಗೊಳ್ಳಬಹುದು ಎಂಬ ವಿಶ್ವಾಸ ಕಲಾವಿದ ನಂಜುಂಡಸ್ವಾಮಿಯದ್ದು.

ಸ್ವಂತವಾಗಿ ತಯಾರಿಸಿದ ಮೊಸಳೆ ಇದು:
ಈ ಕೃತಕ ಮೊಸಳೆ 12 ಅಡಿ ಉದ್ದ, 18ರಿಂದ 20ಕೆಜಿ ಭಾರ ಹೊಂದಿದೆ. ನಂಜುಂಡಸ್ವಾಮಿ ಈ ಮೊಸಳೆಯನ್ನು ವಾರಗಳ ಕಾಲ ಶ್ರಮವಹಿಸಿ ರಚಿಸಿದ್ದಾರೆ. ಇದಕ್ಕಾಗಿ ಆರು ಸಾವಿರ ರೂಪಾಯಿ ವ್ಯಯಿಸಿದ್ದಾರಂತೆ.

ಪ್ರತಿಭಟನೆಗಾಗಿ ಹಾಕಿದ್ದ ಈ ಕೃತಕ ಮೊಸಳೆ ನಿಜವಾದ ಮೊಸಳೆ ಎಂದು ಭಾವಿಸಿ ಸ್ಥಳೀಯ ನಿವಾಸಿ ಮಹೇಶ್ ಕಾವೇರಿ ಎಂಬುವವರು ನೆರವಿಗಾಗಿ ಕೂಗಿಕೊಂಡ ಘಟನೆ ನಡೆದಿತ್ತು ಎಂದು ವರದಿ ತಿಳಿಸಿದೆ. ಅಂತೂ ಕೊನೆಗೂ ಈ ಪ್ರತಿಭಟನೆಯಿಂದ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ಮ್ಯಾನ್ ಹೋಲ್ ಮುಚ್ಚಿದ್ದಾರೆ. ಹೀಗೆ ಬಿಬಿಎಂಪಿ ಅಧಿಕಾರಿಗಳನ್ನು ಎಚ್ಚರಿಸಿದ್ದಕ್ಕೆ ಕಲಾವಿದ ನಂಜುಂಡಸ್ವಾಮಿಗೆ ಎಲ್ಲರೂ ಅಭಿನಂದನೆ ಹೇಳಿದ್ದಾರೆ.
-ಉದಯವಾಣಿ

Write A Comment