ಕರ್ನಾಟಕ

ಕಬ್ಬಿನ ಬಾಕಿ ಹಣಕ್ಕಾಗಿ ೨೯ರಂದು ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ

Pinterest LinkedIn Tumblr

Suvarna-soudha-belagavi-1

ಬೆಂಗಳೂರು, ಜೂ.15- ಎರಡು ವರ್ಷಗಳಿಂದ ಕಾರ್ಖಾನೆಗಳು ಉಳಿಸಿಕೊಂಡಿರುವ ಕಬ್ಬು ಬೆಳೆಗಾರರ ಬಾಕಿಯನ್ನು ಹತ್ತು ದಿನಗಳೊಳಗೆ  ಬಿಡುಗಡೆ ಮಾಡದಿದ್ದರೆ 29ರಿಂದ ಬೆಳಗಾವಿಯಲ್ಲಿ ಆರಂಭವಾಗುವ ಅಧಿವೇಶನದಲ್ಲಿ ಸುವರ್ಣಸೌಧ ಮುತ್ತಿಗೆ ಹಾಕಲು ಕಬ್ಬು ಬೆಳೆಗಾರರ ಸಂಘ ತೀರ್ಮಾನಿಸಿದೆ.

ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿಂದು ನಡೆದ ಕಬ್ಬು ಬೆಳೆಗಾರರ ಪದಾಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತತ್ವದಲ್ಲಿ ನಡೆದ ಸಭೆಗೆ ರಾಜ್ಯದ ವಿವಿಧ ಭಾಗಗಳಿಂದ ರೈತ ಮುಖಂಡರು, ಕಬ್ಬು ಬೆಳೆಗಾರರು ಆಗಮಿಸಿದ್ದರು.

ಸಭೆಯಲ್ಲಿ ಪ್ರಮುಖವಾಗಿ ಎರಡು ವರ್ಷಗಳಿಂದ ಕಾರ್ಖಾನೆಗಳು ಉಳಿಸಿಕೊಂಡಿರುವ 4600 ಕೋಟಿ ಬಾಕಿ ಹಣವನ್ನು 10 ದಿನಗಳೊಳಗೆ ಬಿಡುಗಡೆ ಮಾಡುವುದು, ಬೆಳೆ ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಗುರುನಾಥ್ ಕುಟುಂಬಕ್ಕೆ 10 ಲಕ್ಷ ಪರಿಹಾರ, ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂಬ ನಿರ್ಣಯ ಕೈಗೊಳ್ಳಲಾಯಿತು. ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕುರುಬೂರು ಶಾಂತಕುಮಾರ್ ಎರಡು ವರ್ಷಗಳಿಂದ ಬಾಕಿ ಇರುವ 4600 ಕೋಟಿ ಹಣವನ್ನು ಹತ್ತು ದಿನಗಳೊಳಗೆ ರೈತರಿಗೆ ಪಾವತಿಸಬೇಕೆಂದು ಆಗ್ರಹ ಮಾಡಿದರು.

ರಾಜ್ಯಸರ್ಕಾರ ತಕ್ಷಣವೇ ರೈತರ ಹಣವನ್ನು ಪಾವತಿಸಬೇಕು. ಹತ್ತು ದಿನಗಳೊಳಗೆ ನೀಡದಿದ್ದರೆ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಈ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆದರೆ ಅದಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಎರಡು ವರ್ಷಗಳಿಂದ ಬಾಕಿ ಇರುವ ಹಣ ಬಿಡುಗಡೆ ಮಾಡದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತೀಚೆಗಷ್ಟೆ ಬೆಳಗಾವಿಯಲ್ಲಿ ಬೆಳೆ ನಷ್ಟದಿಂದ ಗುರುನಾಥ್ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ಎಷ್ಟು ಜನ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳ ವಿರುದ್ಧ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಸರ್ಕಾರ ಕಾರ್ಖಾನೆಗಳ ಮಾಲೀಕರ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳುತ್ತಲೇ ಬಂದಿದೆ. ಆದರೆ, ಇದುವರೆಗೂ ಒಬ್ಬ ಮಾಲೀಕನ ವಿರುದ್ಧವೂ ಕಾನೂನು ಕ್ರಮ ಏಕೆ ಜರುಗಿಸಿಲ್ಲ ಎಂದು ಪ್ರಶ್ನಿಸಿದರು. ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಅವರ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯವಾಗಬೇಕಿತ್ತು. ಆದರೆ ಮಾಲೀಕರ ಜತೆ ಶಾಮೀಲಾಗಿರುವ ಸರ್ಕಾರ ನಾಡಿನ ಅನ್ನದಾತನಿಗೆ ವಂಚನೆ ಮಾಡಿದೆ ಎಂದು ದೂರಿದರು. ಆನೆ ತುಳಿದು ಪ್ರಾಣ ಕಳೆದುಕೊಂಡರೆ 5 ಲಕ್ಷ ಪರಿಹಾರ ನೀಡಲಾಗುತ್ತದೆ. ಅದೇ ಒಬ್ಬ ರೈತ ಬೆಳೆನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡರೆ ಒಂದು ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ರೈತನ ಜೀವಕ್ಕೆ ಬೆಲೆ ಇಲ್ಲವೆ ಎಂದು ಹರಿಹಾಯ್ದರು.

ತಕ್ಷಣವೇ ಗುರುನಾಥ್ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಣೆ ಮಾಡಬೇಕು. ಈ ಹಣವನ್ನು 10 ದಿನಗಳಲ್ಲಿ ನೀಡದಿದ್ದರೆ ಅವರ ಕುಟುಂಬದ ಸದಸ್ಯರ ಜತೆ ಪ್ರತಿಭಟನೆ ನಡೆಸಲಾಗುವುದು. ರಾಜ್ಯಸರ್ಕಾರ ಪ್ರತಿಭಟನೆ, ಮನವಿ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಹೀಗಾಗಿ ಬೀದಿಗಿಳಿಯುವುದು ಅನಿವಾರ್ಯ ಎಂದು ಶಾಂತಕುಮಾರ್ ಎಚ್ಚರಿಕೆ ನೀಡಿದರು.

Write A Comment