ಕರ್ನಾಟಕ

ಬೆಂಗಳೂರು ನಗರ ಪ್ರದಕ್ಷಿಣೆ ಸಂದರ್ಭದಲ್ಲಿ ಸಿದ್ದುಗೆ ದೂರಿನ ಮಳೆ

Pinterest LinkedIn Tumblr

CM-bangalore-rounds

ಬೆಂಗಳೂರು,ಜೂ.15- ನಗರಪ್ರದಕ್ಷಿಣೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಂತಿನಗರ ವಿಧಾನಸಭಾ ಕ್ಷೇತ್ರವೂ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು  ಪರಿಶೀಲಿಸಿ ಜನರ ಸಮಸ್ಯೆಗಳನ್ನು ಆಲಿಸಿದರು.  ಇಂದು ಬೆಳಗ್ಗೆ ಗೃಹಕಚೇರಿ ಕೃಷ್ಣಾದಿಂದ ಆರಂಭಗೊಂಡ ನಗರ ಪ್ರದಕ್ಷಿಣೆಯಲ್ಲಿ  ಮುಖ್ಯಮಂತ್ರಿ

ಮೊದಲಿಗೆ ಹಾಸ್ಮಟ್ ವೃತ್ತ ,ಜಾನ್ಸನ್ ಮಾರುಕಟ್ಟೆ , ಆನೆಪಾಳ್ಯ,  ಆಸ್ಟಿನ್‌ಟೌನ್‌ಗಳಲ್ಲಿ ನಡೆಯುತ್ತಿರುವ ಕಾಮಗಾರಿ ಪರಿಶೀಲಿಸಿದರು.  ಮೊದಲಿಗೆ ಹಾಸ್ಮಟ್ ವೃತ್ತಕ್ಕೆ ಬಂದಾಗ ಅಲ್ಲಿ ನಡೆಯುತ್ತಿದ್ದ ಸಿಮೆಂಟ್ ರಸ್ತೆ ಕಾಮಗಾರಿ ಹಾಗೂ ವೈಟ್ ಟಾಪಿಂಗ್ ಕೆಲಸವನ್ನು ಸಿಎಂ ವೀಕ್ಷಿಸಿದರು.  ಹೊಸೂರು ರಸ್ತೆಯನ್ನು ಸಂಪರ್ಕಿಸುವ ಪ್ರಮುಖ ವೃತ್ತ ಇದಾಗಿದ್ದು, ಇಲ್ಲಿ ವಾಹನ ದಟ್ಟಣೆ ಹೆಚ್ಚಿರುವುದರಿಂದ ಪದೇ ಪದೇ ರಸ್ತೆ ಹಾಳಾಗುತ್ತಿತ್ತು. ಹಾಗಾಗಿ ಸಿಮೆಂಟ್ ರಸ್ತೆ ನಿರ್ಮಿಸಲಾಗುತ್ತಿದೆ.  ಎಲ್ಲೆಡೆ ಇಂತಹ ರಸ್ತೆ ನಿರ್ಮಾಣ ಮಾಡುವುದರಿಂದ ರಸ್ತೆ ಅವ್ಯವಸ್ಥೆ ತಡೆಗಟ್ಟಬಹುದು ಎಂದು ಶಾಸಕ ಎನ್.ಎ.ಹ್ಯಾರಿಸ್ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಎಲ್ಲ ರಸ್ತೆಗಳನ್ನು ಕಾಂಕ್ರೀಟೀಕರಣಗೊಳಿಸಲು ದುಡ್ಡು ಬೇಡವೆ ಎಂದು  ಹೇಳುತ್ತಾ ಮುಂದೆ ಸಾಗಿದರು.  ಜಾನ್ಸನ್ ಮಾರ್ಕೆಟ್ ವೀಕ್ಷಿಸಿದ ವೇಳೆ ಹಳೆಯ ಮಾರ್ಕೆಟ್‌ನ್ನು ಆಧುನೀಕರಣಗೊಳಿಸುವ ಬಗ್ಗೆ ಪ್ರಸ್ತಾಪವಿರುವುದನ್ನು ಮುಖ್ಯಮಂತ್ರಿಗಳಿಗೆ ತಿಳಿಸಲಾಯಿತು.  ಇದೇ ವೇಳೆ ಸ್ಥಳೀಯ ನಿವಾಸಿಗಳು ಅಲ್ಲಿ ಆರಂಭವಾಗಿರುವ ಮೆಟ್ರೊ ಕಾಮಗಾರಿಯಿಂದ ತಮ್ಮ ಶ್ರದ್ಧಾ ಕೇಂದ್ರವಾದ ಮಸೀದಿಗೆ ಹಾನಿಯಾಗದಂತೆ ಕಾಮಗಾರಿ ನಡೆಸಲು ಮನವಿ ಮಾಡಿದರು.  ಮನವಿ ಆಲಿಸಿದ ಮುಖ್ಯಮಂತ್ರಿಗಳು ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರುವುದಾಗಿ ಹೇಳಿದರು.

ಆನೆಪಾಳ್ಯ ಮುಖ್ಯರಸ್ತೆಗೆ  ಈಗಾಗಲೇ ನಡೆದಿರುವ 4 ಕಿ.ಮೀ ರಸ್ತೆಯ ಅಗಲೀಕರಣ ವೀಕ್ಷಿಸಿದರಲ್ಲದೆ, 30 ಕಿ.ಮೀ ಉದ್ದದ ರಸ್ತೆ ಅಗಲೀಕರಣಕ್ಕೆ 30 ಎಕರೆ ಜಮೀನು ಅಗತ್ಯವಿರುವ ಬಗ್ಗೆ ರಕ್ಷಣಾ ಇಲಾಖೆಗೆ ಮನವಿ ಮಾಡುವುದಾಗಿ ತಿಳಿಸಿದರು.  ನೀಲಸಂದ್ರದ ಗಜೇಂದ್ರನಗರದಲ್ಲಿ ಹಾದುಹೋಗುವಾಗ ಅಲ್ಲಿನ ವರಸಿದ್ಧಿ ವಿನಾಯಕ ಟ್ರಸ್ಟ್ ನ  ರಾಮಕೃಷ್ಣಪ್ಪನವರು ದೇವಸ್ಥಾನದಲ್ಲಿ ಪೂಜೆ ನೆರವೇರಿಸಿಕೊಂಡು ತೆರಳುವಂತೆ ಮುಖ್ಯಮಂತ್ರಿಗಳಿಗೆ ಕೋರಿದಾಗ, ದಾರಿಯುದ್ದಕ್ಕೂ ದೇವಸ್ಥಾನ, ಮಸೀದಿಗಳಿಗೆಲ್ಲ ಹೋಗುತ್ತಾ ಕೂರಲು  ಆಗುವುದಿಲ್ಲ. ದೇವರೇ ಕಾಪಾಡಪ್ಪ ಎಂದು ಹೊರಗಿನಿಂದಲೇ ಹೇಳಿಕೊಂಡು ಸಿದ್ದರಾಮಯ್ಯ ಮುಂದೆ ಸಾಗಿದರು.

ಗಜೇಂದ್ರನಗರದ ಸ್ಥಳೀಯ ನಿವಾಸಿಗಳಾದ ಯಶೋಧಮ್ಮ ಮತ್ತು ಮುನಿತಾಯಮ್ಮ ಅವರಿದ್ದ ಸ್ಥಳಕ್ಕೆ ಹೋಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಸ್ಯೆಗಳ ಬಗ್ಗೆ ವಿಚಾರಿಸಿದಾಗ ತಾವು ಅನುಭವಿಸುತ್ತಿರುವ ಸಂಕಷ್ಟಗಳ ಸರಮಾಲೆಯನ್ನೇ ಬಿಚ್ಚಿಟ್ಟರು.  ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ನೀರು ಬಂದರೂ ಕೊಳಚೆ ನೀರೇ ಸೇರಿರುತ್ತದೆ. ಚರಂಡಿ ನೀರು ಹರಿಯಲು ಸೂಕ್ತ ವ್ಯವಸ್ಥೆ ಇಲ್ಲ. ಸೊಳ್ಳೆ ಕಾಟ ವಿಪರೀತವಾಗಿದೆ. ಹಾಗಾಗಿ ಮನೆಯಲ್ಲಿ ಒಬ್ಬರಲ್ಲ ಒಬ್ಬರು ದಿನಂಪ್ರತಿ ಜ್ವರದಿಂದ ನರಳುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.  ಆಸ್ಟಿನ್‌ಟೌನ್‌ನ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಬಳಿ ತೆರಳುವಾಗ ಮಕ್ಕಳು ನಾಡಗೀತೆ ಹಾಡುತ್ತಿದ್ದುದ್ದನ್ನು ಗಮನಿಸಿದ ಮುಖ್ಯಮಂತ್ರಿಗಳು, ಅಲ್ಲಿಂದಲೇ ಕೈ ಬೀಸಿ ಶುಭಾಶಯ ಕೋರಿದರು.  ಬಿಡಿಎ ಕಾಂಪ್ಲೆಕ್ಸ್  ಆಧುನೀಕರಣಗೊಳಿಸುವ ಪ್ರಸ್ತಾಪದ ಬಗ್ಗೆ ತಿಳಿದರಲ್ಲದೆ  ಖಾಸಗಿಯವರಿಗೆ 20 ವರ್ಷಕ್ಕೆ ಗುತ್ತಿಗೆ ನೀಡಲು ಮುಂದಾಗಿದ್ದೇವೆ. ಆದರೆ 30 ವರ್ಷ ಗುತ್ತಿಗೆಗೆ ಕೇಳುತ್ತಿದ್ದಾರೆ ಎಂದು ಬಿಡಿಎ ಆಯುಕ್ತ ಶ್ಯಾಮ್‌ಭಟ್ ಹೇಳಿದಾಗ ಸಿದ್ದರಾಮಯ್ಯ, ಆದಾಯ ಬರುವುದು ಮುಖ್ಯ ಎಂದರು.

ಆಸ್ಟಿನ್‌ಟೌನ್‌ನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರ ಅಭ್ಯಾಸಕ್ಕೆ ತಕ್ಕಂತೆ ಇಲ್ಲಿನ ನಂದನ್ ಗ್ರೌಂಡ್ಸ್ ನಲ್ಲಿ ಸ್ವಿಮ್ಮಿಂಗ್‌ಪೂಲ್ ಸೇರಿದಂತೆ ಮತ್ತಿತರ ಸೌಲಭ್ಯ ಕಲ್ಪಿಸುವಂತೆ ಸ್ಥಳೀಯರು ಮನವಿ ಮಾಡಿದಾಗ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದರು.  ಕೃಷ್ಣಪ್ಪ ಗಾರ್ಡನ್ ಮಿಲ್ಟ್ರಿಗೆ ಸೇರಿದ ಜಾಗದಲ್ಲಿ ಸ್ವಲ್ಪ ಭಾಗವನ್ನು 1974ರಲ್ಲಿ ಬಿಬಿಎಂಪಿ ವಶಕ್ಕೆ ಪಡೆದು ಕೊಳಚೆ ಮಂಡಳಿಗೆ ನೀಡಿದೆ. ಆ ಪ್ರದೇಶದಲ್ಲಿ 720 ಮನೆಗಳನ್ನು ಕಟ್ಟಿ ವಾಸಕ್ಕೆ ನೀಡಲಾಗಿದೆ. ಆದರೆ ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರು, ಚರಂಡಿ ವ್ಯವಸ್ಥೆ ಇಲ್ಲದೆ ಜನ ಪರಿತಪಿಸುವಂತಾಗಿದೆ. ಕುಡಿಯುವ ನೀರು ಹಾಗೂ ಚರಂಡಿ ಪೈಪ್‌ಗಳು ಸುತ್ತವಿರುವ ಮಿಲ್ಟ್ರಿ ಜಾಗದ ಮೂಲಕವೇ ಹಾದು ಬರಬೇಕಾಗಿರುವುದರಿಂದ ಮಿಲ್ಟ್ರಿಯವರು ಅವರು ಅದಕ್ಕೆ ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ಸೌಲಭ್ಯಗಳ ಕೊರತೆ ಎದುರಾಗಿದೆ ಎಂದು ಸ್ಥಳೀಯರು ತಮ್ಮ ಸಮಸ್ಯೆ ಹೇಳಿಕೊಂಡರು.  ಮುಖ್ಯಮಂತ್ರಿಗಳು ಅವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.  ಸಚಿವರಾದ ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ರೋಷನ್ ಬೇಗ್, ಶಾಸಕ ಎನ್.ಎ.ಹ್ಯಾರಿಸ್, ಎಚ್.ಎಂ.ರೇವಣ್ಣ, ಉಗ್ರಪ್ಪ ಮತ್ತಿತರರು ಮುಖ್ಯಮಂತ್ರಿ ಅವರ ಜತೆಯಲ್ಲಿದ್ದರು.

——-…
* ಸಿಎಮ್ ನಗರ ಪ್ರದಕ್ಷಿಣೆ ಅನಿರೀಕ್ಷಿತವಾಗಿರಲಿ
ಬೆಂಗಳೂರು,ಜೂ.೧೫- ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಗರಪ್ರದಕ್ಷಿಣೆ ಕಾಟಾಚಾರಕ್ಕೆ ನಡೆಯುತ್ತಿದೆ ಎಂದು ಭಾಸವಾಗುತ್ತಿದೆ. ನಗರ ಪ್ರದಕ್ಷಿಣೆ ಮೊದಲಿದ್ದ ಉತ್ಸಾಹ ಈಗಿಲ್ಲ.  ಮುಖ್ಯಮಂತ್ರಿಗಳು ನಗರ ಪ್ರದಕ್ಷಿಣೆ ಕಾರ್ಯಕ್ರಮವನ್ನು ಅನಿರೀಕ್ಷಿತವಾಗಿ ಇಟ್ಟುಕೊಳ್ಳಬೇಕು. ಆದರೆ ರೂಟ್ ಮ್ಯಾಪ್ ಸಿದ್ಧಪಡಿಸಿ ಪ್ರದಕ್ಷಿಣೆ ಹೋಗುತ್ತಿರುವುದರಿಂದ ನಗರದ ಸಮಸ್ಯೆಗಳಿಗೆ  ಪರಿಹಾರ ದೊರಕುತ್ತಿಲ್ಲ. ಸಾರ್ವಜನಿಕರ ದೂರುಗಳನ್ನು ಆಲಿಸಲಾಗುತ್ತಿಲ್ಲ.   ಅಧಿಕಾರಿಗಳಲ್ಲೂ ನಿರ್ಲಕ್ಷ್ಯ ಧೋರಣೆ ಮನೆ ಮಾಡಿದೆ. ಮುಖ್ಯಮಂತ್ರಿಗಳ ನಗರ ಪ್ರದಕ್ಷಿಣೆ ಇದ್ದದ್ದೆ. ಯಾವುದೇ ಕ್ರಮ ಇಲ್ಲ. ಯಾವ ವಿಷಯನ್ನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಮನೋಭಾವ ಅವರದಾಗಿದೆ. ಏನೋ ಮುಖ್ಯಮಂತ್ರಿಗಳ ಜೊತೆ ಬರಬೇಕು, ಬರುತ್ತಿದ್ದೇವೆ ಎಂಬಂತೆ ವರ್ತಿಸುತ್ತಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯೊಬ್ಬರು ರಾಜಧಾನಿ ಬೆಂಗಳೂರನ್ನು ಪ್ರದಕ್ಷಿಣೆ ಮಾಡುತ್ತಾರೆಂದರೆ ಅದು ಅನಿರೀಕ್ಷಿತವಾಗಿರಬೇಕು. ಯಾವಾಗ, ಯಾವ ಸ್ಥಳಕ್ಕೆ ಬಂದು ಏನು ಕ್ರಮ ಕೈಗೊಳ್ಳುತ್ತಾರೋ ಎಂಬ ಭಯ ಅಧಿಕಾರಿಗಳಲ್ಲಿ ಇರಬೇಕು.  ಮುಖ್ಯಮಂತ್ರಿಗಳು ನಮ್ಮ ಬಳಿ ಬಂದರೆ ನಮ್ಮ ಸಮಸ್ಯೆಯನ್ನು  ಅವರಿಗೆ ಹೇಳಿಕೊಳ್ಳಬೇಕು ಎಂಬ ಅಭಿಪ್ರಾಯ ನಗರ ನಿವಾಸಿಗಳಲ್ಲಿ ಇರಬೇಕು. ಆದರೆ ಇದ್ಯಾವುದೂ ಸಿಎಂ ನಡೆಸುತ್ತಿರುವ ಸಿಟಿ ರೌಂಡ್ಸ್‌ನಲ್ಲಿ ಕಂಡುಬರುತ್ತಿಲ್ಲ. ಮಾಮೂಲಿ ಎಲೆಕ್ಷನ್ ಜಾತ್ರೆಯಂತೆ ಕಾಣುತ್ತಿದೆ.  ಹೋದಲ್ಲಿ , ಬಂದಲೆಲ್ಲ ಹಾರ, ತುರಾಯಿ, ಜೈಕಾರದ ಘೋಷಣೆಗಳು ಮೊಳಗುತ್ತವೆ. ಕಾಂಗ್ರೆಸ್ ಕಾರ್ಯಕರ್ತರು ಒಂದೆಡೆ ಸೇರಿ ಮುಖ್ಯಮಂತ್ರಿಗಳನ್ನು ಹಾಡಿ ಹೊಗಳುತ್ತಾರೆ. ಯಾವ ಸಮಸ್ಯೆಗೂ ಪರಿಹಾರ ಸಿಕ್ಕಿಲ್ಲ. ಬಿಬಿಎಂಪಿ ಚುನಾವಣೆಯನ್ನು ಮುಂದೂಡಬಹುದು ಎಂಬ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ಆಘಾತವನ್ನು ನೀಡಿತ್ತು. ಮುಂದಿನ ಕಾನೂನು ಹೋರಾಟದಲ್ಲಿ ಸುಪ್ರೀಂಕೋರ್ಟ್‌ನಿಂದ ಸರ್ಕಾರಕ್ಕೆ ನಿರೀಕ್ಷಿತ ತೀರ್ಪು ಬರದ ಕಾರಣ ಆ.೫ರೊಳಗೆ ಅನಿವಾರ್ಯವಾಗಿ ಚುನಾವಣೆ ಯನ್ನು ನಡೆಸಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಸಿಟಿ ರೌಂಡ್ಸ್ ಕಾರ್ಯಕ್ರಮವನ್ನು ತೀವ್ರಗೊಳಿಸಿದ್ದಾರೆ. ಪ್ರತಿ ಶನಿವಾರ ನಡೆಯುತ್ತಿದ್ದ ಕಾರ್ಯಕ್ರಮ ಈಗ ಸೋಮವಾರವೂ ನಡೆಯುತ್ತಿದೆ. ಶನಿವಾರ ನಡೆದಿದ್ದರೆ ಸಾರ್ವಜನಿಕರಿಗೆ ಅಷ್ಟು ಸಮಸ್ಯೆಯಾಗುತ್ತಿರಲಿಲ್ಲ. ಸೋಮವಾರವಾದ ಇಂದು ಸಿದ್ದರಾಮಯ್ಯ ಕೈಗೊಂಡ ನಗರ ಪ್ರದಕ್ಷಿಣೆಯಿಂದ ಟ್ರಾಫಿಕ್‌ಜಾಮ್ ಹೆಚ್ಚಾಗಿತ್ತು. ಜನರು ಸಿಎಂ ಸಿಟಿ ರೌಂಡ್ಸ್‌ಗೆ ಶಾಪ ಹಾಕುತ್ತಿದ್ದು ಕಂಡು ಬಂತು.

ಸಮಸ್ಯೆಗಳ ಬಗ್ಗೆ ಆಳವಾಗಿ ಪರಿಶೀಲನೆ ನಡೆಸುವುದಿಲ್ಲ. ಗಂಭೀರವಾದ ಕ್ರಮಗಳನ್ನು ಕೂಡ ಕೈಗೊಳ್ಳುವುದಿಲ್ಲ. ಯಾವ ಪುರುಷಾರ್ಥಕ್ಕೆ ಈ ಸಿಟಿ ರೌಂಡ್ಸ್  ಎಂದು  ಜನರು ಮಾತನಾಡಿಕೊಳ್ಳುತ್ತಿದ್ದುದು ಕೇಳಿಬರುತ್ತಿತ್ತು. ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಸಿಟಿ ರೌಂಡ್ಸ್ ಮಾಡುತ್ತಿದ್ದಾರೆ ಅಷ್ಟೆ. ಈಗಾಗಲೇ ಐದಾರು ಬಾರಿ ನಗರ ಪ್ರದಕ್ಷಿಣೆ ಮಾಡಿದ್ದರೂ ಕೂಡ ಗಂಭೀರ ಸಮಸ್ಯೆಗಳಿಗೆ ಪರಿಹಾರ ದೊರೆತಿಲ್ಲ.  ಕಳೆದ ಬಾರಿ ಸಿಟಿ ರೌಂಡ್ಸ್ ಸಂದರ್ಭದಲ್ಲಿ ಬಿಡಿಎ ಕಾಂಪ್ಲೆಕ್ಸ್ , ಕೊಳಗೇರಿಗಳಿಗೆ ಭೇಟಿ ನೀಡಿದ್ದರು. ವಸತಿ ಯೋಜನೆಯ ಬಗ್ಗೆ ಪ್ರಗತಿ  ಪರಿಶೀಲನೆ ನಡೆಸಿದ್ದರು. ಅಷ್ಟನ್ನು ಬಿಟ್ಟು  ಈ ಕಾರ್ಯಕ್ರಮದಿಂದ ಜನರಿಗೆ ಯಾವುದೇ ಉಪಯೋಗವಾಗಿಲ್ಲ.

Write A Comment