ಕರ್ನಾಟಕ

ಹುಲಿಗನಮರಡಿ ಪ್ರಕೃತಿಯ ಸೊಬಗ ನೋಡೋಣ ಬನ್ನಿ

Pinterest LinkedIn Tumblr

hulignamaradi_1

ಪ್ರವಾಸ ಅಂದ್ರೆ  ಸಾಕು  ಹಲವಾರು ಪ್ರಸಿದ್ಧ ತಾಣಗಳ  ಪಟ್ಟಿ ಸಿದ್ದ ಆಗುತ್ತೆ , ಪ್ರವಾಸಿಗರೂ ಸಹ  ನೋಡಿದ ಸ್ಥಳಗಳನ್ನೇ  ನೋಡಿದ್ರೂ  ಕೂಡ    ಹೊಸ ಜಾಗಗಳ  ಪರಿಚಯವಿಲ್ಲದ ಕಾರಣ ಅನಿವಾರ್ಯವಾಗಿ  ಮತ್ತೆ ಅದೇ ತಾಣಗಳತ್ತ  ಮುಖಮಾಡುತ್ತಾರೆ , ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಅಂದ್ರೆ  ಸಾಕು ನೆನಪಾಗೋದು  ಹಿಮವದ್ ಗೋಪಾಲ ಸ್ವಾಮಿ  ಬೆಟ್ಟ  ಬಂಡೀಪುರ , ಊಟಿ  ಇತ್ಯಾದಿ,   ಆದರೆ ಅಲ್ಲೇ  ಗುಂಡ್ಲುಪೇಟೆ ಹತ್ತಿರದ  ತೆರಕಣಾಂಬಿ  ಊರಿನಿಂದ  ಹತ್ತು ಕಿಲೋಮೀಟರು ದೂರದಲ್ಲಿರುವ    ಹುಲಿಗನ ಮರಡಿ  ಎಂಬ ಒಂದು ರಮ್ಯ ತಾಣ   ಹೆಚ್ಚಿನವರಿಗೆ  ತಿಳಿದಿಲ್ಲಾ . ಬನ್ನಿ ಈ ವಾರ  ಆ  ತಾಣದ ಪರಿಚಯ ಮಾಡಿಕೊಳ್ಳೋಣ .

ಹುಲಿಗನ ಮರಡಿ ಯನ್ನು  ವ್ಯಾಘ್ರಾಚಲ  ಅಥವಾ ಹುಲಿಗಾಧ್ರಿ  ಎಂದೂ ಸಹ  ಕರೆಯಲಾಗುತ್ತದೆ. ಈ  ಹುಲಿಗನ ಮರಡಿಗೆ ಹುಲಿಗಾದ್ರಿ / ವ್ಯಾಘ್ರಾಚಲ  ಎಂಬ ಹೆಸರು ಬರಲು ಒಂದು  ಘಟನೆ  ಯನ್ನು ಹೇಳುತ್ತಾರೆ  ಇಲ್ಲಿನ ಸ್ಥಳೀಯರು .  ಅಗಸ್ತ್ಯ ಮಹರ್ಷಿಗಳು  ಒಮ್ಮೆ ಇಲ್ಲಿಗೆ ಬಂದಾಗ  ವ್ಯಾಘ್ರಾಸುರ  ಎಂಬ  ರಕ್ಕಸ  ತೊಂದರೆ ಕೊಡುತ್ತಾನೆ, ಇದರಿಂದ  ಕೋಪಗೊಂಡ  ಅಗಸ್ತ್ಯರು   ಆ ರಕ್ಕಸನನ್ನು ಹುಲಿಯಾಗುವಂತೆ ಶಪಿಸಿದ ಕಾರಣ ಈ ಜಾಗಕ್ಕೆ  ವ್ಯಾಘ್ರಾಚಲ /ಹುಲಿಗಾಧ್ರಿ ಎಂಬ ಹೆಸರು ಬಂತೆಂದು  ತಿಳಿದು ಬರುತ್ತದೆ . ಈ  ಹುಲಿಗನ ಮರಡಿ ಬೆಟ್ಟದ ಮೇಲೆ  ಶ್ರೀನಿವಾಸನ ದೇಗುಲವಿದ್ದು   ವಿಜಯನಗರ ಶೈಲಿಯಲ್ಲಿನ  ವೈವಿಧ್ಯತೆಯಿಂದ  ಕೂಡಿ ಬಹಳ ಸುಂದರವಾಗಿದೆ .   ದೇಗುಲದ ಗರ್ಭಗುಡಿಯಲ್ಲಿ  ಸುಂದರವಾದ ಶ್ರೀನಿವಾಸನ ಮೂರ್ತಿ ಇದ್ದು ಎಡಭಾಗದಲ್ಲಿ  ಕುಳಿತ ಪಧ್ಮಾವತಿ ಅಮ್ಮನವರ ಸನ್ನಿಧಿ ಇದೆ .  ಹಾಗೆ ಮುಂದೆ ಬಲಭಾಗಕ್ಕೆ ಬಂದರೆ  ಉತ್ಸವ ಮೂರ್ತಿ ಕಣ್ಣಿಗೆ ಬೀಳುತ್ತದೆ , ಗರ್ಭಗೃಹದ  ಮುಂಭಾಗ  ಅರ್ಧಮಂಟಪ  ನಂತರ ವಿಶಾಲವಾದ  ನವರಂಗ ದರ್ಶನ ಆಗುತ್ತದೆ . ಇಲ್ಲಿ ವಿಜಯನಗರ ಶೈಲಿಯ  ಕೆತ್ತನೆ ಉಳ್ಳ ಕಂಬಗಳನ್ನು ಕಾಣಬಹುದು . ಮಾಂಡವ್ಯ ಋಷಿಯ  ತಪ್ಪಸ್ಸಿಗೆ ಮೆಚ್ಚಿ ಶ್ರೀನಿವಾಸನು ಇಲ್ಲಿ ನೆಲೆಸಿದನೆಂದು  ಪುರಾಣ ಕಥೆಯನ್ನು ಹೇಳಲಾಗುತ್ತದೆ .

ದೇಗುಲದ  ಹೊರಗಡೆ  ಪ್ರದಕ್ಷಿಣೆ ಹಾಗುತ್ತಾ ಬಂದರೆ ಹಿಂಭಾಗದಲ್ಲಿ  ಒಂದು ಬಾಗಿಲು ಸಿಗುತ್ತದೆ   ಅಲ್ಲಿನ ಮೆಟ್ಟಿಲುಗಳನ್ನು  ಇಳಿದು ಮುಂದೆ ಸಾಗಿದರೆ   ನಿಮಗೆ  ಎರಡು  ಪುಟ್ಟ ಕೊಳಗಳು   ಕಾಣಸಿಗುತ್ತವೆ ಹಾಗು ಒಂದು ಕಲ್ಲಿನ ಮಂಟಪ ಕಾಣಸಿಗುತ್ತದೆ  ಅದರಲ್ಲಿ ಪ್ರಮುಖವಾಗಿ   ಕಲ್ಲಿನ ಮಂಟಪದ  ಹತ್ತಿರ ಒಂದು ಕೊಳ ವಿದ್ದು ಅದನ್ನಿ ಧನುಷ್ಕೋಟಿ  ಎಂದು ಕರೆಯುತ್ತಾರೆ. ಶ್ರೀ ರಾಮ ತನ್ನ ವನವಾಸ ಕಾಲದಲ್ಲಿ ಈ ಕ್ಷೇತ್ರಕ್ಕೆ ಬಂದಾಗ  ಶ್ರೀನಿವಾಸ  ದರ್ಶನ ಮಾಡುವ ಮೊದಲು  ಸ್ನಾನ ಮಾಡಲು   ತನ್ನ ಬಾಣದಿಂದ   ಭೂಮಿಯಿಂದ ನೀರು ಚಿಮ್ಮಿಸಿ ಕೊಳವನ್ನು ಸೃಜಿಸಿದನೆಂದು ಹೇಳಲಾಗುತ್ತದೆ .   ಅಲ್ಲೇ ಸನಿಹದಲ್ಲಿರುವ ಮತ್ತೊಂದು ಕೊಳವನ್ನು ವೇದ ಪುಷ್ಕರಿಣಿ  ಎಂದು ಕರೆಯಲಾಗುತ್ತದೆ . ದೇಗುಲದಲ್ಲಿ  ದರ್ಶನ ಪಡೆದು   ಪ್ರವಾಸಿಗರು   ಈ ಪ್ರದೇಶದಲ್ಲಿ ಬೆಟ್ಟದ ಮೇಲಿಂದ    ಕಾಣುವ ಸುತ್ತಮುತ್ತಲಿನ  ಸುಂದರ  ದೃಶ್ಯಗಳನ್ನು   ನೋಡಿ ಆನಂದಿಸಬಹುದು . ಹೆಚ್ಚಿನ ಪ್ರವಾಸಿಗರಿಲ್ಲದ  ಈ ಪ್ರದೇಶ  ಹಲವು  ಜಾತಿಯ ಪಕ್ಷಿಗಳಿಗೆ  ಮನೆಯಾಗಿದೆ,  ಪಕ್ಷಿ ವೀಕ್ಷಣೆ  ಮಾಡಲು, ಪ್ರಕೃತಿಯ  ರಮ್ಯ ದರ್ಶನ ಮಾಡಲು, ಛಾಯಾಗ್ರಾಹಕರಾದರೆ  ಒಳ್ಳೆಯ ಪರಿಸರದ ಚಿತ್ರ ತೆಗೆಯಲು ಒಳ್ಳೆಯ ತಾಣ .  ಪ್ರವಾಸಿಗಳು ಕುಟುಂಬದೊಡನೆ  ಸಂತಸದಿಂದ  ಈ ಜಾಗದಲ್ಲಿ ಒಂದು ದಿನ ಕಳೆಯಬಹುದು.  ಊಟ ತಿಂಡಿ ವ್ಯವಸ್ಥೆ  ಮಾಡಿಕೊಂಡು  ಹೋಗುವುದು ಒಳ್ಳೆಯದು,.


ಹುಲಿಗನ ಮರಡಿ ಕ್ಷೇತ್ರ ಬೆಂಗಳೂರಿನಿಂದ  ಚನ್ನಪಟ್ಟಣ , ಮದ್ದೂರು, ಮಳವಳ್ಳಿ, ಕೊಳ್ಳೇಗಾಲ , ಚಾಮರಾಜನಗರ , ತೆರಕಣಾಂಬಿ  ಮಾರ್ಗವಾಗಿ  ೨೦೫ ಕಿಲೋಮೀಟರು ಆಗುತ್ತದೆ , ಮೈಸೂರಿನಿಂದ  ನಂಜನಗೂಡು, ಗುಂಡ್ಲುಪೇಟೆ  , ತೆರಕಣಾಂಬಿ  ಮಾರ್ಗವಾಗಿ ೮೧ ಕಿಲೋಮೀಟರು ಆಗುತ್ತದೆ .   ಗುಂಡ್ಲುಪೇಟೆ  ಹಾಗು ಚಾಮರಾಜನಗರ ರಸ್ತೆಯಲ್ಲಿ  ಸಿಗುವ ತೆರಕಣಾಂಬಿ  ಊರಿನಿಂದ  ಹತ್ತುಕಿಲೋಮೀಟರ್  ದೂರದಲ್ಲಿದೆ ಹುಲಿಗನ ಮರಡಿ . ಶುದ್ಧವಾದ  ಪರಿಸರ , ಪ್ರಕೃತಿಯ ನೋಟದ ಸೊಬಗು  ಅನುಭವಿಸಲು ಒಮ್ಮೆ ಹೋಗಿ ಬನ್ನಿ

– ಚಿತ್ರ, ಲೇಖನ : ನಿಮ್ಮೊಳಗೊಬ್ಬ ಬಾಲು
-KANNADAPRABHA

Write A Comment