ಬೆಂಗಳೂರು: ನಿವೇಶನಕ್ಕಾಗಿ ತನ್ನ ಜತೆ ಕಾನೂನು ಹೋರಾಟ ನಡೆಸುತ್ತಿದ್ದ ವೃದ್ಧ ದಂಪತಿ ಹಾಗೂ ಅವರ ಬೆಂಬಲಿಗನನ್ನು ಜೈಲಿಗೆ ಕಳುಹಿಸಲು ಸಂಚು ರೂಪಿಸಿ ಚರ್ಚ್ಗೆ ಬೆಂಕಿ ಇಟ್ಟಿದ್ದ ಕಟ್ಟಡದ ಮಾಲೀಕ ಡಿ.ಕೃಷ್ಣಪ್ಪ (67) ಈಗ ವಿದ್ಯಾರಣ್ಯಪುರ ಪೊಲೀಸರ ಅತಿಥಿಯಾಗಿದ್ದಾನೆ.
ಕೃಷ್ಣಪ್ಪನಿಗೆ ನೆರವು ನೀಡಿದ್ದ ಆತನ ಮನೆಯ ಭದ್ರತಾ ಸಿಬ್ಬಂದಿ ಬಾಲಕೃಷ್ಣ (32) ಸಹ ಕಂಬಿ ಎಣಿಸುತ್ತಿದ್ದಾನೆ. ಪ್ರಕರಣದ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇವರು, ಶನಿವಾರ ಬೆಳಗಿನ ಜಾವ 2.30ರ ಸುಮಾರಿಗೆ ‘ತಬೇಹಾ ಫುಲ್ ಗಾಸ್ಪೆಲ್’ ಚರ್ಚ್ಗೆ ಬೆಂಕಿ ಇಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ನರಸೀಪುರ ಬಡಾವಣೆಯಲ್ಲಿ ಕೃಷ್ಣಪ್ಪನಿಗೆ ಸೇರಿದ ಎರಡು ಅಂತಸ್ತಿನ ಕಟ್ಟಡವಿದೆ. ನೆಲಮಹಡಿಯ ಮನೆಯಲ್ಲಿ ಆತನ ಕುಟುಂಬ ನೆಲೆಸಿದೆ. ಪಾಸ್ಟರ್ ರಾಜರಾಜನ್ ಎಂಬುವರು ಎರಡನೇ ಮಹಡಿಯನ್ನು 5 ಸಾವಿರಕ್ಕೆ ಬಾಡಿಗೆ ಪಡೆದು, ಪ್ರಾರ್ಥನಾ ಮಂದಿರ ನಡೆಸುತ್ತಿದ್ದರು. ಸುತ್ತಮುತ್ತಲ 85 ಕುಟುಂಬದ 250ಕ್ಕೂ ಹೆಚ್ಚು ಸದಸ್ಯರು ಇಲ್ಲಿ ಪ್ರಾರ್ಥನೆಗೆ ಬರುತ್ತಿದ್ದರು.
ಕೃಷ್ಣಪ್ಪನ ಮನೆಯ ಹಿಂಭಾಗದಲ್ಲಿರುವ ಖಾಲಿ ನಿವೇಶನದಲ್ಲಿ ಶಾರದಮ್ಮ ಮತ್ತು ಯಲ್ಲಪ್ಪ ಎಂಬ ವೃದ್ಧ ದಂಪತಿ ಶೆಡ್ ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಆ ನಿವೇಶನದ ಒಡೆತನದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ನಾಲ್ಕು ದಶಕಗಳಿಂದ ಗಲಾಟೆ ನಡೆಯುತ್ತಿದೆ. ಇಳಿ ವಯಸ್ಸಿನವರಾದ ಕಾರಣ ದಂಪತಿ ನಿವೇಶನದ ಹೊಣೆಯನ್ನು ಪರಿಚಿತ ಫಯಾಜ್ಗೆ ವಹಿಸಿದ್ದಾರೆ.
ಆ ಜಾಗ ತಮಗೆ ಸೇರಬೇಕು ಎಂದು ಇತ್ತೀಚೆಗೆ ನ್ಯಾಯಾಲಯದ ಮೆಟ್ಟಿಲು ಏರಿದ್ದ ಕೃಷ್ಣಪ್ಪ, ಅಲ್ಲಿ ಕಟ್ಟಡ ನಿರ್ಮಿಸಲು ಸಿದ್ಧತೆ ಸಹ ಮಾಡಿಕೊಂಡಿದ್ದ. ಇದಕ್ಕೆ ಪ್ರತಿಯಾಗಿ ‘ಕೃಷ್ಣಪ್ಪ ಕುತ್ತಿಗೆ ಹಿಸುಕಿ ನನ್ನನ್ನು ಕೊಲ್ಲಲು ಯತ್ನಿಸಿದ’ ಎಂದು ಶಾರದಮ್ಮ ಸಹ ವಿದ್ಯಾರಣ್ಯಪುರ ಠಾಣೆಗೆ ದೂರು ಕೊಟ್ಟಿದ್ದರು.
ನಿವೇಶನ ಕಬಳಿಸಲು ತಂತ್ರ: ಮೊದಲ ಮಹಡಿಯಲ್ಲಿರುವ ಪ್ರಾರ್ಥನಾ ಮಂದಿರಕ್ಕೆ ತಾನೇ ಬೆಂಕಿ ಇಟ್ಟು, ಅದನ್ನು ವೃದ್ಧ ದಂಪತಿ ಮತ್ತು ಫಯಾಜ್ ಮೇಲೆ ಹೊರಿಸಲು ಎರಡು ತಿಂಗಳ ಹಿಂದೆಯೇ ಕೃಷ್ಣಪ್ಪ ಸಂಚು ರೂಪಿಸಿಕೊಂಡಿದ್ದ. ಪಾಸ್ಟರ್ ರಾಜರಾಜನ್ ಶುಕ್ರವಾರ ಸಂಜೆ 5.30ಕ್ಕೆ ಮಂದಿರಕ್ಕೆ ಬೀಗ ಹಾಕಿಕೊಂಡು ಹೋಗಿದ್ದರು. ನಂತರ ಬಾಲಕೃಷ್ಣನ ಮೂಲಕ ಪರಿಚಿತ ಇಬ್ಬರು ಹುಡುಗರನ್ನು ಮನೆಗೆ ಕರೆಸಿಕೊಂಡ ಕೃಷ್ಣಪ್ಪ, ತಂತ್ರದ ಬಗ್ಗೆ ವಿವರಿಸಿದ್ದ.
ಬೆಳಗಿನ ಜಾವ 2.30ಕ್ಕೆ ತಾನೇ ಭದ್ರತಾ ಸಿಬ್ಬಂದಿಯ ಕೈಕಾಲುಗಳನ್ನು ಕಟ್ಟಿದ ಕೃಷ್ಣಪ್ಪ, ಮತ್ತಿಬ್ಬರು ಹುಡುಗರ ಮೂಲಕ ಮಂದಿರದ ಬೀಗ ಮುರಿಸಿದ್ದ. ನಂತರ ಸ್ಫೋಟಕ ವಸ್ತುಗಳನ್ನು ಬಳಸಿ ಅವರ ಮೂಲಕವೇ ಮಂದಿರಕ್ಕೆ ಬೆಂಕಿ ಹಚ್ಚಿಸಿದ್ದ. ಬೆಂಕಿಯ ಜ್ವಾಲೆ ಹೆಚ್ಚಾಗುತ್ತಿದ್ದಂತೆಯೇ ಮನೆಯೊಳಗೆ ಸೇರಿಕೊಂಡ ಕೃಷ್ಣಪ್ಪ, ಸ್ವಲ್ಪ ಸಮಯದ ನಂತರ ಪುನಃ ಹೊರಬಂದು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದ.
ಮೂರು ವಾಹನಗಳಲ್ಲಿ ಸ್ಥಳಕ್ಕೆ ಬಂದ ಸಿಬ್ಬಂದಿ, ಒಂದು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದರು. ಈ ವೇಳೆಗಾಗಲೇ ಪೀಠೋಪಕರಣ, ಪ್ರಾರ್ಥನಾ ಪುಸ್ತಕಗಳು, ವಾದ್ಯಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿದ್ದವು.
ನಂತರ ಪೊಲೀಸರು ಭದ್ರತಾ ಸಿಬ್ಬಂದಿ ಬಾಲಕೃಷ್ಣನನ್ನು ವಿಚಾರಣೆಗೆ ಒಳಪಡಿಸಿದರು. ‘ಮೂವರು ಅಪರಿಚಿತರು ನನ್ನ ಮೇಲೆ ಹಲ್ಲೆ ನಡೆಸಿ, ಕೈ–ಕಾಲು ಕಟ್ಟಿ ಹಾಕಿದರು. ನಂತರ ಮಂದಿರಕ್ಕೆ ನುಗ್ಗಿ ಬೆಂಕಿ ಇಟ್ಟು ಪರಾರಿಯಾದರು. ಆ ತಂಡದಲ್ಲಿ ಫಯಾಜ್ ಕೂಡ ಇದ್ದ’ ಎಂದು ಸುಳ್ಳು ಹೇಳಿಕೆ ಕೊಟ್ಟಿದ್ದ. ಆತನ ಹೇಳಿಕೆ ಆಧರಿಸಿ ಪೊಲೀಸರು ಫಯಾಜ್ನನ್ನು ವಶಕ್ಕೆ ಪಡೆದಿದ್ದರು.
ಕಿಡಿಗೇಡಿಗಳ ಕೃತ್ಯದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಮಂದಿರದ ಮುಂದೆ ಜಮಾಯಿಸಿದ್ದರಿಂದ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಪಿ.ಹರಿಶೇಖರನ್, ಡಿಸಿಪಿ ಟಿ.ಆರ್.ಸುರೇಶ್ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ದೌಡಾಯಿಸಿ, ಮುಂಜಾಗ್ರತಾ ಕ್ರಮವಾಗಿ 50 ಪೊಲೀಸರನ್ನು ಭದ್ರತೆಗೆ ನಿಯೋಜಿಸಿದ್ದರು.
ಬಾಯ್ಬಿಟ್ಟ ಬಾಲಕೃಷ್ಣ
‘ಆರೋಪಿಗಳ ಪತ್ತೆಗೆ ಐದು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಭದ್ರತಾ ಸಿಬ್ಬಂದಿಯ ಹೇಳಿಕೆ ಆಧರಿಸಿ ಮೊದಲು ಫಯಾಜ್ನನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ, ಫಯಾಜ್, ವೃದ್ಧ ದಂಪತಿ ಹಾಗೂ ಕೆಲ ಸ್ಥಳೀಯರು ಕೃಷ್ಣಪ್ಪನ ಮೇಲೆಯೇ ಅನುಮಾನ ವ್ಯಕ್ತಪಡಿಸಿದರು. ಹೀಗಾಗಿ ಬಾಲಕೃಷ್ಣನನ್ನು ಮತ್ತೊಮ್ಮೆ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿತು’ ಎಂದು ನಿಖಾಧಿಕಾರಿಗಳು ಮಾಹಿತಿ ನೀಡಿದರು.