ಬೆಂಗಳೂರು, ಮೇ 27-ರಾಜ್ಯಸರ್ಕಾರ ದೇವೇಗೌಡರ ದೂರವಾಣಿ ಕರೆಗಳನ್ನು ಕದ್ದಾಲಿಸುತ್ತಿಲ್ಲ. ಪದೇ ಪದೇ ಈ ವಿಚಾರವಾಗಿ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಟೀಕಿಸಿದ್ದಾರೆ. ಜವಾಹರಲಾಲ್ ನೆಹರೂ ಅವರ ಪುಣ್ಯಸ್ಮರಣೆ ಅಂಗವಾಗಿ ಇಂದು ವಿಧಾನಸೌಧ ಬಳಿಯ
ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮಾತನಾಡಿದ ಅವರು, ಸರ್ಕಾರ ಅವರ ದೂರವಾಣಿ ಕದ್ದಾಲಿಕೆ ಮಾಡುತ್ತಿಲ್ಲ. ಈ ಬಗ್ಗೆ ನನಗೆ ಮಾಹಿತಿಯೂ ಇಲ್ಲ. ಈ ವಿಚಾರದಲ್ಲಿ ಕೇವಲ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದರು. ಒಂದಂಕಿ ಲಾಟರಿ ಹಗರಣವನ್ನು ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ಇಂದು ಕೇಂದ್ರ ಸರ್ಕಾರಕ್ಕೆ ಈ ಕುರಿತಂತೆ ಸಂಪೂರ್ಣ ವಿವರ ನೀಡಿ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.
ನೆಹರೂ ದೇಶದ ನಿರ್ಮಾತೃಗಳಲ್ಲಿ ಒಬ್ಬರು. ಆಧುನಿಕ ಭಾರತದ ಬಗ್ಗೆ ದೊಡ್ಡ ಕನಸುಗಳನ್ನು ಹೊತ್ತ ಅವರು, ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ, ಶಿಕ್ಷಣ ಕ್ಷೇತ್ರದ ಬೆಳವಣಿಗೆ, ಯೋಜನಾ ಆಯೋಗದಂತಹ ನಾನಾ ಕೊಡುಗೆಗಳನ್ನು ದೇಶಕ್ಕೆ ನೀಡಿದ ಮಹನೀಯರು ಎಂದು ಬಣ್ಣಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಗಾಂಧಿಯವರೊಂದಿಗೆ ಕೈಜೋಡಿಸಿದ ನಾಯಕರಲ್ಲಿ ಮುಂಚೂಣಿಯಲ್ಲಿದ್ದರು. ಅವರ ಆದರ್ಶ ಅನುಕರಣೀಯ ಎಂದು ಕೊಂಡಾಡಿದರು. ಗೃಹ ಸಚಿವ ಕೆ.ಜೆ.ಜಾರ್ಜ್, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.