ಬೆಂಗಳೂರು,ಮೇ 27-ಕಲುಷಿತಗೊಂಡಿರುವ ಬೆಳ್ಳಂದೂರು ಮತ್ತು ವರ್ತೂರು ಕೆರೆಯಿಂದ ಉತ್ಪತ್ತಿಯಾಗುತ್ತಿರುವ ನೊರೆ ಸೃಷ್ಟಿಸುತ್ತಿರುವ ಅವಾಂತರ ಅಷ್ಟಿಷ್ಟಲ್ಲ. ನೊರೆಯಿಂದ ದಿನಕ್ಕೊಂದು ಅನಾಹುತ ಸೃಷ್ಟಿಯಾಗುತ್ತಿದೆ. ಈ ಭಾಗದಲ್ಲಿ ಸಂಚರಿಸುವವರ ಮೇಲೆ ನೊರೆ ಬಿದ್ದರೆ ಅಲರ್ಜಿ ಉಂಟಾಗುತ್ತಿದೆ.
ವಾಹನಗಳ ಬಣ್ಣವೇ ಬದಲಾಗುತ್ತಿದೆ. ರಾಸಾಯನಿಕ ಮಿಶ್ರಿತ ನೊರೆ ಮನುಷ್ಯನ ಕಣ್ಣಿಗೆ ಬಿದ್ದರೆ ಕಣ್ಣೇ ನಾಶವಾಗುವ ಅಪಾಯವಿದೆ ಎನ್ನಲಾಗಿದೆ. ಇಷ್ಟೆಲ್ಲ ಅಪಾಯದ ಬೆನ್ನಲ್ಲೇ ಬೆಳ್ಳಂದೂರು ಮತ್ತು ವರ್ತೂರು ಸುತ್ತಮುತ್ತಲ ಅಂತರ್ಜಲ ಸಂಪೂರ್ಣ ವಿಷಮಯವಾಗಿ ಪರಿವರ್ತನೆಯಾಗಿದೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ.
ಬೆಳ್ಳಂದೂರು ಮತ್ತು ವರ್ತೂರು ಕೆರೆ ಮಲಿನಗೊಂಡಿರುವುದರಿಂದ ಸುತ್ತಮುತ್ತಲ ಪ್ರದೇಶದ ಅಂತರ್ಜಲ ವಿಷಯುಕ್ತವಾಗಿ ಕುಡಿಯಲು ಯೋಗ್ಯವಲ್ಲ ಎಂಬುದು ಪರೀಕ್ಷೆಯಿಂದ ಸಾಬೀತಾಗಿದೆ ಎನ್ನುತ್ತಾರೆ ವರ್ತೂರಿನ ವೈದ್ಯ ಡಾ.ಕೃಷ್ಣಪ್ಪ. ಕೆರೆ ಮಲಿನಗೊಂಡಿರುವುದರಿಂದ ಸುತ್ತಮುತ್ತಲ ಬೋರ್ವೆಲ್ ನೀರನ್ನು ಪರೀಕ್ಷೆ ನಡೆಸಲಾಗಿದ್ದು, ಕುಡಿಯಲು ಯೋಗ್ಯಕರವಲ್ಲ ಎಂಬುದು ಸಾಬಿತಾಗಿದೆ. ಹೀಗಾಗಿ ಎಚ್ಚರ ವಹಿಸುವಂತೆ ಇಲ್ಲಿನ ನಿವಾಸಿಗಳಿಗೆ ಸೂಚಿಸಲಾಗಿದೆ ಎನ್ನುತ್ತಾರೆ. ಎರಡು ವಾರಕ್ಕೊಮ್ಮೆ ನೀರನ್ನು ಪರಿಶೀಲನೆಗೊಳಪಡಿಸಲಾಗುತ್ತಿದೆ. ಕೆರೆಯಿಂದ ಉತ್ಪತ್ತಿಯಾಗುವ ನೊರೆ ಮನುಷ್ಯನ ಕಣ್ಣಿಗೆ ಘಾತಕವಾಗಲಿದೆಯೇ ಎಂಬುದನ್ನು ದೃಢಪಡಿಸಲು ನೊರೆಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಅದನ್ನು ದೃಢಪಡಿಸಬಹುದಾಗಿದೆ ಎಂದು ಕೃಷ್ಣಪ್ಪ ಹೇಳಿದರು.
ಆದರೆ ಕಲುಷಿತ ನೀರು ಸೇವಿಸಿ ಸ್ಥಳೀಯರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದು , ಪ್ರತಿನಿತ್ಯ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ ಎಂಬುದನ್ನು ವೈದ್ಯರು ಖಚಿತಪಡಿಸಿದ್ದಾರೆ. ಅಲರ್ಜಿ ಗ್ಯಾರಂಟಿ: ನೊರೆ ಸೃಷ್ಟಿಸುತ್ತಿರುವ ಅವಾಂತರ ಅಷ್ಟಿಷ್ಟಲ್ಲ ಸ್ವಾಮಿ..ಈ ಭಾಗದಲ್ಲಿ ಮೂಗು ಮುಚ್ಚಿಕೊಂಡೇ ಓಡಾಡಬೇಕಾಗಿದೆ. ಮೈಮೇಲೆ ನೊರೆ ಬಿದ್ದರೆ ತುರಿಕೆ ಉಂಟಾಗಿ ಅಲರ್ಜಿಯಾಗುತ್ತದೆ. ಇಲ್ಲಿ ಜೀವನ ಮಾಡುವುದು ಹೇಗೆ ಎಂಬುದೇ ಚಿಂತೆಯಾಗಿದೆ ಎನ್ನುತ್ತಾರೆ ಯಮಲೂರು ನಿವಾಸಿ ವೆಂಕಟೇಶ್.
ಕೆಲವರ ಕಣ್ಣಿಗೆ ನೊರೆ ಬಿದ್ದು ದೃಷ್ಟಿ ದೋಷ ಉಂಟಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಇರೋಬರೋ ಆಸ್ತಿನೆಲ್ಲ ಮಾರಿಕೊಂಡು ದೇಶಾಂತರ ಹೋಗಬೇಕೆನ್ನಿಸುತ್ತಿದೆ ಎಂದು ಅವರು ಅಲವತ್ತುಕೊಂಡಿದ್ದಾರೆ.
ಬಣ್ಣ ಬದಲು:
ಈ ಭಾಗದಲ್ಲಿ ಸಂಚರಿಸುವ ವಾಹನಗಳ ಮೇಲೆ ನೊರೆ ಬಿದ್ದು ನನ್ನ ಬೈಕ್ನ ಬಣ್ಣವೇ ಬದಲಾಗಿ ಹೋಗಿದೆ ಎನ್ನುತ್ತಾರೆ ಏಂಜಾಲಪ್ಪ. ಇತ್ತೀಚೆಗಷ್ಟೇ ಸಾಲಸೋಲ ಮಾಡಿ ಹೊಸ ಬೈಕ್ ಖರೀದಿಸಿದ್ದೆ. ಪ್ರತಿನಿತ್ಯ ಇದೇ ರಸ್ತೆಯಲ್ಲಿ ಓಡಾಡಬೇಕಾಗಿರುವುದರಿಂದ ಹೊಸ ಬೈಕ್ ಬಂದು ತಿಂಗಳು ಕಳೆಯುವುದರೊಳಗಾಗಿ ಹತ್ತು ವರ್ಷದ ಹಳೆಯ ಬೈಕ್ನಂತಾಗಿದೆ ಎಂದು ಅವರು ತಮ್ಮ ಅಸಮಾಧಾನ ತೋಡಿಕೊಂಡಿದರು. ನೊರೆ ಬಿದ್ದು ಈ ಭಾಗದ ಬಹುತೇಕ ವಾಹನಗಳು ಬಣ್ಣದ ಕಳೆದುಕೊಂಡಿರುವುದನ್ನು ಬಹುತೇಕರು ಈ ಸಂಜೆಗೆ ಖಚಿತಪಡಿಸಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿಯೇ ಕಾರಣ: ಬೆಂಗಳೂರಿಗರಿಗೆ ಸ್ವಚ್ಚತೆಯ ಅರಿವಿಲ್ಲದಿರುವುದು ಹಾಗೂ ಕಾರ್ಖಾನೆಗಳು ತ್ಯಾಜ್ಯ ನೀರನ್ನು ರಾಜಕಾಲುವೆಗಳಿಗೆ ಹರಿಸುತ್ತಿರುವುದೇ ಇಂದು ಬೆಳ್ಳಂದೂರು ಮತ್ತು ವರ್ತೂರು ಕೆರೆ ಮಲಿನಗೊಳ್ಳಲು ಕಾರಣ. ಇಷ್ಟೆಲ್ಲ ಗೊತ್ತಿದ್ದರೂ ಕಣ್ಮುಚ್ಚಿ ಕುಳಿತಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯೇ ಇದರ ಹೊಣೆ ಹೊರಬೇಕು ಎನ್ನುತ್ತಾರೆ ವರ್ತೂರಿನ ಶ್ರೀನಿವಾಸಗೌಡ. ಈ ಕೆರೆಗಳಿಗೆ ಬೆಂಗಳೂರಿನಿಂದ ಬರುವ ನೀರನ್ನು ಪರಿಷ್ಕರಿಸಿ ಬಿಡುವವರೆಗೆ ಹಾಗೂ ತ್ಯಾಜ್ಯ ನೀರನ್ನು ಕೆರೆಗೆ ಹರಿಸುವ ಕಾರ್ಖಾನೆಗಳನ್ನು ಬ್ಯಾನ್ ಮಾಡದ ಹೊರತು ಸಮಸ್ಯೆಗೆ ಪರಿಹಾರ ಸಿಗದು ಎನ್ನುವುದು ಅವರ ವಾದ.
ಖಾಲಿ ಖಾಲಿ:
ಬೆಳ್ಳಂದೂರು ಮತ್ತು ವರ್ತೂರು ಕೆರೆ ಸಂಪೂರ್ಣ ಕಲುಷಿತಗೊಂಡು ಸುತ್ತಮುತ್ತಲ ಪ್ರದೇಶಗಳಲ್ಲಿ ದುರ್ವಾಸನೆ ಬೀರುತ್ತಿರುವುದರಿಂದ ಬಾಡಿಗೆ ಮನೆಯವರು ಮನೆ ಖಾಲಿ ಮಾಡಿಕೊಂಡು ಬೇರೆಕಡೆ ತೆರಳುತ್ತಿರುವುದರಿಂದ ನಮ್ಮ ಮನೆಗಳೆಲ್ಲ ಖಾಲಿ ಬಿದ್ದಿವೆ ಎನ್ನುವುದು ಪ್ರಕಾಶ್ ಅವರ ಅಭಿಪ್ರಾಯ. ರಾಮಗೊಂಡನಹಳ್ಳಿ, ಅಗದೂರು, ವರ್ತೂರು, ಇಮ್ಮಡಿಹಳ್ಳಿ, ವೈಟ್ಫೀಲ್ಡ್ , ಮತ್ತಿತರ ಕಡೆ ಬಾಡಿಗೆ ಮನೆಗಳನ್ನು ಕೇಳುವವರೇ ಇಲ್ಲದಂತಾಗಿದ್ದು , ಬಾಡಿಗೆ ಇಲ್ಲದೆ ಪರಿತಪಿಸುವಂತಾಗಿದೆಯಂತೆ. ಒಟ್ಟಾರೆ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಿಂದ ಉತ್ಪತ್ತಿಯಾಗುತ್ತಿರುವ ನೊರೆ ಇಲ್ಲಿನ ಜನಜೀವನದ ಮೇಲೆ ಪ್ರತಿನಿತ್ಯ ಒಂದಿಲ್ಲೊಂದು ದುಷ್ಪರಿಣಾಮದ ಬರೆ ಎಳೆಯುತ್ತಿದ್ದರೂ ಸಂಬಂಧಪಟ್ಟವರು ಸಮಸ್ಯೆ ಬಗೆಹರಿಸಲು ಮುಂದಾಗದಿರುವುದು ಸ್ಥಳೀಯರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
-ರಮೇಶ್ಪಾಳ್ಯ/ಸಂಜೀವ