ಬೆಂಗಳೂರು, ಮೇ 27- ಯಾವುದೇ ಕಾರಣಕ್ಕೂ ಅಕ್ರಮ ಲಾಟರಿ, ಮಟ್ಕಾ ದಂಧೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದ ರಾಜ್ಯ ಸರ್ಕಾರ ಇದ್ದಕ್ಕಿದ್ದಂತೆ ಯೂಟರ್ನ್ ತೆಗೆದುಕೊಂಡಿದ್ದು ಏಕೆ ? ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ ಸರ್ಕಾರದ ಈ ನಡೆ.
ಒಂದು ವೇಳೆ ಕರ್ನಾಟಕ ಸರ್ಕಾರ ಅಕ್ರಮ ಲಾಟರಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸದಿದ್ದರೆ ಉಂಟಾಗಬಹುದಾದ ಮುಜುಗರವನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ಈ ತೀರ್ಮಾನ ತೆಗೆದುಕೊಂಡಿತು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅದೇನೆಂದರೆ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಕೊಡಲು ತೀರ್ಮಾನಿಸಿದ್ದು, ಕೆಲ ಆಘಾತಕಾರಿ ಅಂಶಗಳು ಹೊರ ಬಿದ್ದಾಗ. ಈಗಾಗಲೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇವೆಯಿಂದ ಅಮಾನತುಗೊಂಡಿರುವ ಅಲೋಕ್ಕುಮಾರ್ ನೀಡಿದ ಹೇಳಿಕೆ ಸರ್ಕಾರವನ್ನೇ ಬೆಚ್ಚಿಬೀಳಿಸಿತ್ತು. ಶನಿವಾರ ಸಂಜೆ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ಕುಮಾರ್ ಅವರನ್ನು ಸರ್ಕಾರ ಅಮಾನತು ಮಾಡಿತು. ಭಾನುವಾರ ಸಿಐಡಿ ತನಿಖಾ ತಂಡದ ಅಧಿಕಾರಿಗಳ ಮುಂದೆ ಅವರು ಕೊಟ್ಟ ಹೇಳಿಕೆಯಲ್ಲಿ ಅಕ್ರಮ ಲಾಟರಿಯ ಕಬಂಧ ಬಾಹುವಿನ ಹಿಂದೆ ಯಾರ್ಯಾವರು ಇದ್ದಾರೆ ಎಂಬುದನ್ನು ಬಹಿರಂಗ ಮಾಡಿತ್ತು.
ಬೆಚ್ಚಿಬಿದ್ದ ಸರ್ಕಾರ:
ಯಾವಾಗ ಅಲೋಕ್ಕುಮಾರ್ ಆಘಾತಕಾರಿ ಹೇಳಿಕೆಗಳನ್ನು ತನಿಖಾಧಿಕಾರಿಗಳ ಮುಂದೆ ಹೇಳಿದರೋ ಸರ್ಕಾರ ಇದರ ತೀವ್ರತೆಯನ್ನು ಅರಿಯಲು ಮುಂದಾಯಿತು. ಈ ಪ್ರಕರಣದಲ್ಲಿ ನಾನೊಬ್ಬನೇ ಶಾಮೀಲಾಗಿಲ್ಲ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮತ್ತು ಪಾಂಡಿಚೆರಿಯ ರಾಜಕಾರಣಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ. ನನ್ನನ್ನು ಮಾತ್ರ ಏಕೆ ಬಲಿಪಶುಮಾಡುತ್ತಿದ್ದೀರಿ ಎಂದು ತಮ್ಮ ದುಃಖವನ್ನು ತೋಡಿಕೊಂಡರು. 2015 ಮಾರ್ಚ್ 28ರಂದು ನಾನು ಕೆಜಿಎಫ್ನ ಸಬ್ಇನ್ಸ್ಪೆಕ್ಟರ್ ಪ್ರಕಾಶ್ಗೆ ದೂರವಾಣಿ ಕರೆ ಮಾಡಿದ್ದು ನಿಜ. ಕಾನೂನಿನ ಪ್ರಕಾರ ಪಾರಿರಾಜನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾನು ಸೂಚನೆ ಕೊಟ್ಟಿದ್ದು ನಿಜ. ಆದರೆ, ಪಾರಿರಾಜನ್ನನ್ನು ರಕ್ಷಣೆ ಮಾಡುವಂತೆ ಎಲ್ಲಿಯೂ ಹೇಳಿಲ್ಲ. ಈ ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಮಹಾನಿರ್ದೇಶಕರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಡಿವೈಎಸ್ಪಿಗಳು, ಇನ್ಸ್ಪೆಕ್ಟರ್, ಸಬ್ಇನ್ಸ್ಪೆಕ್ಟರ್ಗಳು ಸೇರಿದಂತೆ ಮತ್ತಿತರ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಅಲೋಕ್ಕುಮಾರ್ ಹೇಳಿಕೆ ಕೊಟ್ಟರು. ಕರ್ನಾಟಕವಲ್ಲದೆ ಅಕ್ರಮ ಲಾಟರಿ ಕಬಂಧ ಬಾಹು ಕೇರಳ, ತಮಿಳುನಾಡು, ಪಾಂಡಿಚೇರಿ, ಮಹಾರಾಷ್ಟ್ರಕ್ಕೂ ವ್ಯಾಪಿಸಿಕೊಂಡಿದೆ. 2007ರಿಂದ ಈವರೆಗೂ 5ಸಾವಿರ ಕೋಟಿಗೂ ಅಧಿಕ ಅಕ್ರಮ ಲಾಟರಿ ವಹಿವಾಟು ನಡೆದಿದೆ ಎಂದು ಹೇಳಿದ್ದರು.
ಸಚಿವರ ಪುತ್ರನ ಶಾಮೀಲು:
ಮೂಲಗಳ ಪ್ರಕಾರ ಸಿಐಡಿ ತನಿಖಾ ಅಧಿಕಾರಿಗಳ ಮುಂದೆ ಹೇಳಿಕೆ ಕೊಡುವಾಗ ಪ್ರಭಾವಿ ಸಚಿವರ ಪುತ್ರನೊಬ್ಬ ತಮ್ಮ ಮೇಲೆ ಸಾಕಷ್ಟು ಒತ್ತಡ ಹಾಕುತ್ತಿದ್ದ. ನಿಮಗೆ ಯಾವುದೇ ರೀತಿಯ ತೊಂದರೆಯಾಗದಂತೆ ರಕ್ಷಣೆ ಮಾಡುವ ಜವಾಬ್ದಾರಿ ನನ್ನದು. ಪಾರಿರಾಜನ್ಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಈತ ಅಲೋಕ್ಕುಮಾರ್ ಮೇಲೆ ರಾಜಕೀಯ ಪ್ರಭಾವ ಬಳಸಿದ್ದ. ಸಚಿವರ ಪುತ್ರ ಮತ್ತು ವಿಧಾನಪರಿಷತ್ ಸದಸ್ಯರೊಬ್ಬರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಕೋಲಾರ, ಕೆಜಿಎಫ್, ಚಿಕ್ಕಬಳ್ಳಾಪುರ, ಮೈಸೂರು, ಚಾಮರಾಜನಗರ ಮತ್ತಿತರ ಕಡೆ ಒಂದಂಕಿ ಲಾಟರಿ ಮಾರಾಟವಾಗಲು ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದೇ ಸಚಿವರ ಪುತ್ರ ಎಂದು ಅಲೋಕ್ಕುಮಾರ್ ಹೇಳಿರುವುದಾಗಿ ತಿಳಿದು ಬಂದಿದೆ.
ಯಾವಾಗ ಅಲೋಕ್ಕುಮಾರ್ ಹೇಳಿಕೆ ಅಲ್ಲೋಲಕಲ್ಲೋಲ ಸೃಷ್ಟಿಮಾಡಿತೋ ಸರ್ಕಾರ ಎಚ್ಚೆತ್ತುಕೊಂಡಿತು. ಈ ಪ್ರಕರಣ ನಕಲಿ ಛಾಪಕಾಗದದಷ್ಟೇ ದೊಡ್ಡದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅರಿತ ನಂತರ ಸಿಬಿಐ ತನಿಖೆ ನಡೆಸಲು ತೀರ್ಮಾನಿಸಿದರು. ಹಾಗೊಂದು ವೇಳೆ ಸರ್ಕಾರ ಸಿಬಿಐ ತನಿಖೆಗೆ ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬಹುದೆಂಬ ಭಯದಿಂದ ಸಿಬಿಐ ತನಿಖೆಗೆ ಸೂಚನೆ ನೀಡಿತು. ಇನ್ನೊಂದು ಮೂಲಗಳ ಪ್ರಕಾರ, ಕೇರಳ ಹಾಗೂ ತಮಿಳುನಾಡು ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಲು ಆಗಲೇ ಕಾರ್ಯೋನ್ಮುಖವಾಗಿದ್ದವು ಎಂದು ತಿಳಿದು ಬಂದಿದೆ.