ಕರ್ನಾಟಕ

ಲಾಟರಿ ಹಗರಣ: ಗಮನಕ್ಕೆ ಬಂದ 3 ದಿನಗಳಲ್ಲಿ ಡಿ.ಕೆ ರವಿ ಸಾವು

Pinterest LinkedIn Tumblr

ravi-ಮುಖ್ಯಮಂತ್ರಿಗೆ ದೂರು ನೀಡಿದ್ದ ಲಾಟರಿ ಮಾರಾಟಗಾರರ ಸಂಘ-
-ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತರಾಗಿದ್ದ ಡಿ.ಕೆ ರವಿಗೂ ದೂರು ಸಲ್ಲಿಸಲಾಗಿತ್ತು-
ಬೆಂಗಳೂರು: ಬೇರೆ ರಾಜ್ಯದ ಲಾಟರಿ ಮಾರಾಟಗಾರರು ರಾಜ್ಯ ಸರಕಾರಕ್ಕೆ ಸಾವಿರಾರು ಕೋಟಿ ರೂ. ತೆರಿಗೆ ವಂಚಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿಗೆ ದೂರು ನೀಡಿದ್ದರೂ ಸರಕಾರ ಕ್ರಮ ಜರುಗಿಸದಿರುವುದು ಬಯಲಾಗಿದೆ.

ಮಾರ್ಚ್‌ನಲ್ಲಿಯೇ ಮುಖ್ಯಮಂತ್ರಿಗೆ, ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ. ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಡಿ.ಕೆ. ರವಿಗೆ ದೂರು ಸಲ್ಲಿಸಿದ ಕೇವಲ ಮೂರು ದಿನಗಳಲ್ಲೇ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಪ್ರಕರಣ ಅಲ್ಲಿಗೆ ಮುಚ್ಚಿಹೋಗಿತ್ತು. ಒಂದಂಕಿ ಲಾಟರಿ ಅಕ್ರಮ ಬಯಲಿಗೆ ಬಂದ ಬಳಿಕ, ದೂರು ಮತ್ತೊಮ್ಮೆ ಸುದ್ದಿಯಾಗಿದೆ.

ಕರ್ನಾಟಕ ರಾಜ್ಯ ಚಿಲ್ಲರೆ ಲಾಟರಿ ಮಾರಾಟಗಾರರ ಸಂಘದ ಅಧ್ಯಕ್ಷ ಸಿ. ರಾಮಕೃಷ್ಣ ಎಂಬುವವರು, 2015ರ ಮಾ.17ರಂದು ಸಲ್ಲಿಸಿದ್ದ ದೂರಿನಲ್ಲಿ ಸವಿಸ್ತಾರವಾಗಿ ವಿವರಿಸಿ ದಾಖಲೆಯನ್ನೂ ನೀಡಿದ್ದರು. ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ(ಜಾರಿ)ರಾಗಿದ್ದ ಡಿ.ಕೆ. ರವಿ ಅವರಿಗೆ ಮಾ.13ರಂದು ಸಂಘ ದೂರು ಸಲ್ಲಿಸಿತ್ತು.

ಸಿಕ್ಕಿಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಿಜೋರಾಂ, ಮಣಿಪುರ, ಮೇಘಾಲಯ, ಭೂತಾನ್ ಮತ್ತಿತರ ಸರಕಾರಗಳ ಲಾಟರಿಗಳಿಗೆ ಮೊದಲು ಕರ್ನಾಟಕ ರಾಜ್ಯದಲ್ಲಿ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಒಂದಂಕಿ ಆನ್‌ಲೈನ್ ಲಾಟರಿಯು 10 ರೂ.ಗಳಿಂದ 200 ರೂ.ಗಳವರೆಗೆ ಪ್ರತಿ 15 ನಿಮಿಷಕ್ಕೆ ಒಂದರಂತೆ ಡ್ರಾ ನಡೆಯುತ್ತಿತ್ತು. ಪ್ರತಿ ಡ್ರಾ ನಡೆದಾಗ 1 ಲಕ್ಷ ರೂ. ಪಾವತಿಸಬೇಕೆಂದು ವಾಣಿಜ್ಯ ತೆರಿಗೆ ಇಲಾಖೆ ಆದೇಶ ಹೊರಡಿಸಿತ್ತು. ಬೆಂಗಳೂರಿನಲ್ಲಿದ್ದ ಕೆಲವು ವಿತರಕರು ಹೊರರಾಜ್ಯದ ಲಾಟರಿ ದಾಸ್ತಾನುಗಾರರು, ಹಣ ಸಂಗ್ರಹಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಖಾಸಗಿ ಬ್ಯಾಂಕ್‌ಗಳ ಡಿ.ಡಿ ಮೂಲಕ ವಾಣಿಜ್ಯ ತೆರಿಗೆ ಇಲಾಖೆಗೆ ಪ್ರತಿ ಡ್ರಾಕ್ಕೆ ಹಣ ಪಾವತಿಸಿರುವುದಾಗಿ ವಾಣಿಜ್ಯ ತೆರಿಗೆ ಇಲಾಖೆ ಸೀಲ್ ಹಾಕಿದ ದಾಖಲೆಯನ್ನು ಲಾಟರಿ ಏಜೆಂಟರಿಗೆ ತೋರಿಸಿ, ವ್ಯಾಪಾರ ವಹಿವಾಟನ್ನು ಅಕ್ರಮವಾಗಿ ನಡೆಸುತ್ತಿದ್ದರು. ಆದರೆ, ಯಾವುದೇ ಮೊತ್ತವನ್ನೂ ವಾಣಿಜ್ಯ ತೆರಿಗೆ ಇಲಾಖೆಗೆ ಪಾವತಿಸಿರಲಿಲ್ಲ ದಾಸ್ತಾನುಗಾರರು ಸುಳ್ಳು ದಾಖಲೆ ಪ್ರದರ್ಶನ ಮಾಡಿ ಸಾವಿರಾರು ಕೋಟಿ ರೂ. ವಾಣಿಜ್ಯ ತೆರಿಗೆ ವಂಚಿಸಿದ್ದಾರೆ ಎಂದು ವಿವರಿಸಿದ ದೂರುದಾರರು, ಇಲಾಖೆಯ ಸೀಲ್ ದುರುಪಯೋಗಪಡಿಸಿಕೊಂಡವರ ವಿರುದ್ಧ ಮೋಸ ಮತ್ತು ವಂಚನೆ ಪ್ರಕರಣ ದಾಖಲಿಸಬೇಕೆಂದು ಮನವಿ ಮಾಡಿದ್ದರು.

Write A Comment