ಬೆಂಗಳೂರು: ಮೂರು ವರ್ಷಗಳೊಳಗೆ ಎತ್ತಿನ ಹೊಳೆ ಯೋಜನೆ ಅಡಿಯಲ್ಲಿ ಕುಡಿಯುವ ನೀರು ಒದಗಿಸಿದಲ್ಲಿ ನಾನು ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಹಾಕಿರುವ ಸವಾಲ್ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ತಲೆಯಲ್ಲಿ ಕೂದಲೇ ಇಲ್ಲ ಇನ್ನೇನು ಬೋಳಿಸಿಕೊಳ್ತಾರೆ ಎಂದು ಲೇವಡಿ ಮಾಡಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ವತಿಯಿಂದ ನಗರದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಸಂಘಟನಾ ಸಬೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದು, ಇಂದಿನ ಸರ್ಕಾರ ಇನ್ನು ಮುಂದಿನ ಮೂರು ವರ್ಷಗಳೊಳಗೆ ಎತ್ತಿನ ಹೊಳೆ ಯೋಜನೆ ಅಡಿಯಲ್ಲಿ ಕುಡಿಯುವ ನೀರು ಒದಗಿಸಿದಲ್ಲಿ ನಾನು ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದರು
ಸಬೆಯಲ್ಲಿ ಮಾತನಾಡಿದ್ದ ಅವರು, ರಾಜ್ಯದಲ್ಲಿ ಆಡಳಿತದ ಗದ್ದುಗೆ ಹಿಡಿದಿರುವ ಕಾಂಗ್ರೆಸ್ ಸರ್ಕಾರ ಲೂಟಿ ಸರ್ಕಾರವಾಗಿದೆ ಎಂದ ಅವರು, ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ಅವರು ಕುಡಿಯುವ ನೀರಿನ ವಿಚಾರದಲ್ಲಿ ಲಘು ಮಾತುಗಳನ್ನಾಡುತ್ತಿದ್ದು, ಅದನ್ನು ಅವರು ನಿಲ್ಲಿಸಲಿ ಎಂದು ತಾಕೀತು ಮಾಡಿದ್ದರು.
ಇದೇ ವೇಳೆ, ಸರ್ಕಾರ ಕೋಟಿ ಗಟ್ಟಲೆ ಹಣ ಮೀಸಲಿಟ್ಟಿದ್ದು, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ತರುವುದಾಗಿ ಘೋಷಿಸಿದೆ. ಆದರೆ ಇನ್ನು ಉಳಿದ ಮೂರು ವರ್ಷಗಳಲ್ಲಿ ಜಿಲ್ಲೆಗಳ ಜನತೆಗೆ ನೀರು ಒದಗಿಸಿದಲ್ಲಿ ನಾನು ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕಿದರು.
ಗ್ರಾಮ ಪಂಚಾಯತ್ ಚುನಾವಣೆಯು ಮೇ 29 ಹಾಗೂ ಜೂನ್ 2ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪಕ್ಷವನ್ನು ಸಂಘಟಿಸಿ ಗೆಲವು ಸಾಧಿಸುವ ಸಲುವಾಗಿ ಸಂಘಟನಾ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಕುಮಾರಸ್ವಾಮಿ ಕೇಶಮುಂಡನದ ಬಗ್ಗೆ ಮಾತನಾಡಿದ್ದರು.