ಕರ್ನಾಟಕ

ಬೆಳ್ಳಂದೂರು ಕೆರೆಗೆ ಬೆಂಕಿ : ಆತಂಕಗೊಂಡ ಜನ

Pinterest LinkedIn Tumblr

Fire-in-Bangalore-lake ಬೆಂಗಳೂರು, ಮೇ 16- ಬೆಳ್ಳಂದೂರು ಕೆರೆಗೆ ಬೆಂಕಿ ಬಿದ್ದಿದೆ. ಇದು ಪವಾಡವಲ್ಲ… ಸತ್ಯ.  ಕೆರೆಯ ನೀರು ಕಲುಷಿತಗೊಂಡು ರಾಸಾಯನಿಕ ವಸ್ತುಗಳು ಹೆಚ್ಚಾಗಿ ಇಂದು ಬೆಳಗ್ಗೆ ನೀರಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಲ್ಲಿನ ಜನ ಆತಂಕಗೊಂಡಿದ್ದಾರೆ.

ಮೊದಲು ಕೆರೆಯಲ್ಲಿ ಕೆಟ್ಟ ವಾಸನೆ ಬರುತ್ತಿತ್ತು, ನಂತರ ನೊರೆ ಬರುತ್ತಿತ್ತು. ಈಗ ಬೆಂಕಿ ಹೊತ್ತಿ ಉರಿಯತೊಡಗಿದೆ. ಕಾರಣ ಹುಡುಕುತ್ತ ಹೊರಟರೆ ಕೆರೆಗೆ ಹರಿಯುತ್ತಿರುವ ಒಳಚರಂಡಿ ನೀರು ಹೆಚ್ಚಾಗಿ ಇದರಿಂದ ಉತ್ಪತ್ತಿಯಾಗುವ ಮೀಥೈನ್ ಗ್ಯಾಸ್ ಮತ್ತು ಕೆರೆಯ ಸುತ್ತಮುತ್ತ ಇರುವ ಗ್ಯಾರೇಜ್‌ಗಳ ಆಯಿಲ್ ಕೆರೆಗೆ ಹರಿದಿರುವುದು ಕಾರಣ ಎಂದು ತಿಳಿಯಿತು. ಮೊದಲು ಛಲ್ಲಘಟ್ಟ, ಬೆಳ್ಳಂದೂರು, ವರ್ತೂರು ಕೆರೆಗಳ ನೀರು ಕುಡಿಯಲು ಬಳಕೆಯಾಗುತ್ತಿತ್ತು. ಈಗ ಶೌಚಕ್ಕೂ ಬಳಸಲು ಸಾಧ್ಯವಾಗುತ್ತಿಲ್ಲ. ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆರೆಗಳ ಒತ್ತುವರಿ, ಲೇಔಟ್-ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಮತ್ತು ದೊಡ್ಡಮೋರಿಗಳ ನೀರು ಕೆರೆಗೆ ಹರಿಯುತ್ತಿರುವುದು, ಇದರಿಂದ ಉತ್ಪತ್ತಿಯಾಗುವ ರಾಸಾಯನಿಕ ಪದಾರ್ಥಗಳು ಮಿತಿಮೀರಿ ನೀರಿಗೆ ಬೆರೆತು  ಬೆಂಕಿ ಹೊತ್ತಿ ಉರಿಯತೊಡಗಿದೆ.
ಜಲಮಂಡಳಿಯವರು ನೀರು ಸಂಸ್ಕರಣಾ ಘಟಕ ನಿರ್ಮಾಣ ಮಾಡುತ್ತಿದ್ದಾರೆ. ಆದರೆ, ಇದು ಅಂದುಕೊಂಡ ವೇಗದಲ್ಲಿ ಸಾಗುತ್ತಿಲ್ಲ. ವಾಟರ್ ಟ್ರೀಟ್‌ಮೆಂಟ್ ಪ್ಲಾಂಟ್‌ನಲ್ಲಿ ನೀರನ್ನು ಸಂಸ್ಕರಿಸಿ ಕೆರೆಗಳಿಗೆ ಬಿಡಬೇಕು. ಆದರೆ, ಜಲಮಂಡಳಿಯವರು ಇದನ್ನು ಮಾಡುತ್ತಿಲ್ಲ. ಬಹುತೇಕ ಬೆಂಗಳೂರು ನಗರದ ದಕ್ಷಿಣ ಭಾಗದ ದೊಡ್ಡಮೋರಿಗಳ ಕೊಳಚೆ ನೀರು ಈ ಕೆರೆಗಳನ್ನು ಸೇರುತ್ತಿದೆ.   ಆದಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ.  ಬಿಬಿಎಂಪಿಯವರು ಬಿಡಿಎ ಅಧಿಕಾರಿಗಳ ಮೇಲೆ, ಬಿಡಿಎ ಅಧಿಕಾರಿಗಳು ಜಲಮಂಡಳಿ ಅಧಿಕಾರಿಗಳ ಮೇಲೆ ಹೀಗೆ ಒಬ್ಬರು ಒಬ್ಬೊಬ್ಬರ ಮೇಲೆ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಾರೆಯೇ ಹೊರತು ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ಮುಂದಾಗಿಲ್ಲ.

ಇಂದು ಕೂಡ ಇಲ್ಲಿಗೆ ಭೇಟಿ ನೀಡಿದ ಬಿಬಿಎಂಪಿ ಅಧಿಕಾರಿ ಕೋದಂಡರೆಡ್ಡಿ, ಜಲಮಂಡಳಿ ಅಧಿಕಾರಿಗಳೇ ಈ ಸಮಸ್ಯೆಗೆ ನೇರ ಹೊಣೆ ಎಂದು ಆರೋಪಿಸಿದರು. ಈ ಬಗ್ಗೆ ಜಲಮಂಡಳಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ಎಲ್ಲರ ಸಹಯೋಗ ಬೇಕಾಗುತ್ತದೆ. ಬಿಡಿಎ, ಬಿಬಿಎಂಪಿ, ಜಲಮಂಡಳಿ ಪರಸ್ಪರ  ಸಹಯೋಗದಲ್ಲಿ ಕೆಲಸ ಮಾಡಬೇಕು. ಬಿಡಿಎ ಅಧಿಕಾರಿಗಳು ಲೇಔಟ್‌ಗಳ ನಿರ್ಮಾಣ ಮಾಡುವುದು, ಬಿಬಿಎಂಪಿಯವರು ಮನೆಗಳನ್ನು ಕಟ್ಟಲು ಬೇಕಾಬಿಟ್ಟಿ ಅನುಮತಿ ನೀಡುವುದು, ಮನೆಗಳ ಚರಂಡಿ ನೀರು ಕೆರೆಗಳಿಗೆ ಹರಿಯಬಿಡುವುದು ಇದಕ್ಕೆ ಕಾರಣವಾಗುತ್ತದೆ ಎಂದು ಪ್ರತ್ಯಾರೋಪ ಮಾಡುತ್ತಾರೆ. ಅತ್ತ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೇರೆ ಕೆರೆಗಳಲ್ಲೂ ಬೆಂಕಿ ಕಾಣಿಸಿಕೊಳ್ಳುವ ಮೊದಲು ಜಲಮಂಡಳಿಯವರು ಎಚ್ಚೆತ್ತುಕೊಂಡು ಸಮರೋಪಾದಿಯಲ್ಲಿ ನೀರು ಸಂಸ್ಕರಣಾ ಘಟಕ ಕಾಮಗಾರಿಯನ್ನು ಪೂರೈಸಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ವಾಮನಾಚಾರ್ಯ ಎಚ್ಚರಿಕೆ:

ಒಳಚರಂಡಿ ನೀರು ಕೆರೆಗೆ ಹರಿಯುವುದರಿಂದ ಮೀಥೈನ್ ಗ್ಯಾಸ್ ಹೆಚ್ಚಾಗಿ ರಾಸಾಯನಿಕ ಪದಾರ್ಥಗಳಿಂದ ಬೆಂಕಿ ಹೊತ್ತಿಕೊಂಡಿದೆ. ಈ ಸಂಬಂಧ ಈಗಾಗಲೇ ಜಲಮಂಡಳಿಯವರಿಗೆ ನೋಟಿಸ್ ನೀಡಲಾಗಿದೆ. ಕೊಳಚೆ ನೀರು ಕೆರೆಗೆ ಹರಿಯುವುದನ್ನು ತಡೆಯಲು ಸೂಚನೆ ನೀಡಲಾಗಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಎಚ್ಚರಿಕೆ ಕೂಡ ನೀಡಲಾಗಿದೆ. ಮಳೆ ನೀರು ಹರಿಯುವ ದೊಡ್ಡ ಕಾಲುವೆಗಳೆಲ್ಲ ಚರಂಡಿ ನೀರಿನ ಕಾಲುವೆಗಳಾಗಿವೆ. ಈ ನೀರೆಲ್ಲ ಕೆರೆಗೆ ಸೇರುತ್ತಿದೆ. ಈ ಕಾರಣದಿಂದ ನೀರಿನಲ್ಲಿ ಕಲ್ಮಷ ಹೆಚ್ಚಾಗುತ್ತಿದೆ.
ಜಲಮಂಡಳಿಯವರು ವಾಟರ್ ಟ್ರೀಟ್‌ಮೆಂಟ್ ಪ್ಲಾಂಟ್ ಕಾಮಗಾರಿಯ ವೇಗವನ್ನು ಹೆಚ್ಚಿಸಬೇಕು. ಬಿಬಿಎಂಪಿ, ಬಿಡಿಎ, ಜಲಮಂಡಳಿಯವರು ಸಹಯೋಗದಲ್ಲಿ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ವಾಮನಾಚಾರ್ಯ ಹೇಳಿದರು.

Write A Comment