ಕರ್ನಾಟಕ

ನಾನು ಮತ್ತೆ ಚುನಾವಣೆಗೆ ನಿಂತು ಕಾಂಗ್ರೆಸ್ ಗೆಲ್ಲಿಸುತ್ತೇನೆ : ಸಿದ್ದರಾಮಯ್ಯ

Pinterest LinkedIn Tumblr

Siddaramaiha-Speech

ಬೆಂಗಳೂರು, ಮೇ 16-ಬಿಜೆಪಿ ಕಾಂಗ್ರೆಸ್ ಮುಕ್ತ ಕರ್ನಾಟಕದ ಕನಸು ಕಾಣುತ್ತಿದೆ. ಅದು ಎಂದಿಗೂ ಈಡೇರುವುದಿಲ್ಲ. ಆದರೆ 2018ರ ಚುನಾವಣೆಗೆ ಕಾಂಗ್ರೆಸ್ ಕಾರ್ಯಕರ್ತರೆಲ್ಲ ಪಣ ತೊಟ್ಟು ಬಿಜೆಪಿ ಮುಕ್ತ ಕರ್ನಾಟಕ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳೀದರು.

ಸರ್ವೋದಯ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ನ್ನು ಏರಿದ ದನಿಯಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಬಡವರಿಗೆ ಅಕ್ಕಿ ಕೊಟ್ಟರೆ, ಕೂಲಿ ಕೆಲಸಕ್ಕೆ ಜನ ಸಿಗುವುದಿಲ್ಲ ಎಂದು ಲೇವಡಿ ಮಾಡುತ್ತಾರೆ. ಇಷ್ಟು ವರ್ಷ ದುಡಿದವರು ಸ್ವಲ್ಪ ದಿನ ವಿಶ್ರಾಂತಿ ತೆಗೆದುಕೊಳ್ಳಲಿ ಎಂದು ತಿರುಗೇಟು ನೀಡಿದ್ದೇನೆ ಎಂದು ಸಮರ್ಥಿಸಿಕೊಂಡರು. ಬಿಜೆಪಿಯವರು ಅಧಿಕಾರ ನಡೆಸಿದಾಗ ಶಾಸಕರು, ಸಚಿವರು ಸೇರಿ 13 ಜನ ಜೈಲಿಗೆ ಹೋಗಿದ್ದರು. ನಮ್ಮ ಸರ್ಕಾರದಲ್ಲಿ ಅಂಥ ಯಾವ ಆರೋಪ, ಹಗರಣಗಳು ಇಲ್ಲ. ಜನ ಪ್ರೀತಿಯಿಂದ ಆಶೀರ್ವಾದ ಮಾಡಿದ್ದಾರೆ. ನಮ್ಮ ಸರ್ಕಾರ ಅದಕ್ಕೆ ತಕ್ಕಂತೆ ಬಡವರ, ಶೋಷಿತರ ಪರವಾದ ಯೋಜನೆಗಳನ್ನು ರೂಪಿಸುತ್ತಿದೆ. ಮುಂದಿನ ಚುನಾವಣೆಯಲ್ಲೂ ನಮ್ಮನ್ನು ಆಶೀರ್ವದಿಸುತ್ತಾರೆ. ಬಿಜೆಪಿಯವರು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವುದಾಗಿ ಹೇಳಿದ ನಂತರ ಚುನಾವಣೆಗೆ ಸ್ಪರ್ಧಿಸಬಾರದು ಎಂಬ ನನ್ನ ನಿಲುವನ್ನು ಬದಲಾವಣೆ ಮಾಡಿಕೊಂಡಿದ್ದೇನೆ. ಮತ್ತೆ ಚುನಾವಣೆಗೆ ಸ್ಪರ್ಧಿಸುತ್ತೇನೆ. ಎಲ್ಲರೂ ಸೇರಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಘೋಷಿಸಿದರು.

ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಪ್ರಣಾಳಿಕೆಯಲ್ಲಿನ ಒಂದು ಭರವಸೆಯನ್ನೂ ಈಡೇರಿಸಿಲ್ಲ. ನಮ್ಮ ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ಕಾಂಗ್ರೆಸ್  ಹೇಳಿದ್ದ 165 ಭರವಸೆಗಳ ಪೈಕಿ 100ಕ್ಕೂ ಹೆಚ್ಚು  ಭರವಸೆಗಳನ್ನು ಈಡೇರಿಸಿದ್ದೇವೆ. ಬಿಜೆಪಿ ಮಾಡಿರುವ ಸಾಲವನ್ನು ತೀರಿಸಿದ್ದೇವೆ. ಕೃಷಿ, ನೀರಾವರಿ, ಕೈಗಾರಿಕೆ, ದಲಿತರ ಅಭಿವೃದ್ಧಿ ಸೇರಿದಂತೆ ನಾನಾ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನಮ್ಮದು ಅಹಿಂದ ಸರ್ಕಾರ ಎಂದು ಹೇಳಿಕೊಳ್ಳಲು ಮುಜುಗರ ಪಡುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಲೋಕಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಬಡವರ ತೆರಿಗೆಯ ಹಣವನ್ನು ಶ್ರೀಮಂತ ಕಾರ್ಪೋರೇಟ್ ಸಂಸ್ಥೆಗಳಿಗೆ ರಿಯಾಯಿತಿ ರೂಪದಲ್ಲಿ ನೀಡಿ ಜನರನ್ನು ವಂಚಿಸುತ್ತಿದೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಸರ್ಕಾರ ಎರಡು ವರ್ಷದಲ್ಲಿ ಎಷ್ಟೆಲ್ಲಾ ಕೆಲಸ ಮಾಡಿದೆ ಎಂಬ ಪಟ್ಟಿ ನೀಡಲು ನಾವು ಸಿದ್ಧ. ಅದೇ ರೀತಿ ನರೇಂದ್ರ ಮೋದಿ ಸರ್ಕಾರ ಒಂದು ವರ್ಷದಲ್ಲಿ ಎಷ್ಟು ಕೆಲಸಮಾಡಿದೆ ಎಂದು ಪಟ್ಟಿ ನೀಡಲು ಸಾಧ್ಯವೇ ಎಂದು ಸವಾಲು ಹಾಕಿದರು.
ಇತ್ತೀಚೆಗೆ ಸಂಸದೀಯ ಮಂಡಳಿ ಸಭೆಯಲ್ಲಿ ಬಿಜೆಪಿಯ ಪ್ರಮುಖ ಸಂಸದರೊಬ್ಬರು ಮೋದಿ ಸರ್ಕಾರ ಒಂದು ವರ್ಷದಲ್ಲಿ ಯಾವ ಸಾಧನೆಯನ್ನೂ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿರುವುದು ವರದಿಯಾಗಿದೆ. ಇಂದಿನ ನಮ್ಮ ಸರ್ಕಾರ ರೂಪಿಸಿದ್ದ ಕಾನೂನು ಕಾಯ್ದೆಗಳನ್ನೇ ತಿರುಚಿ ಜಾರಿಗೆ ತರಲಾಗುತ್ತಿದೆ. ಜನಪರ ಯೋಜನೆಗಳನ್ನು ನಿಲ್ಲಿಸಲಾಗಿದೆ ಎಂದು ಕಿಡಿಕಾರಿದರು. ಬಡವರ ಶೋಷಿತರ ಸಾಮಾಜಿಕ ಕ್ಷೇತ್ರದ ಕಾರ್ಯಗಳಿಗೆ ಮೋದಿ ಸರ್ಕಾರ ಸುಮಾರು 80 ಸಾವಿರ ಕೋಟಿ ಅನುದಾನವನ್ನು ಕಡಿತ ಮಾಡಿದೆ. ಅದೇ ರೀತಿ ಸೇವಾ ತೆರಿಗೆ ಹೆಚ್ಚಿಸಿ ಬಡ ಜನರ ಮೇಲೆ ಬರೆ ಎಳೆದಿದೆ. ಸೇವಾ ತೆರಿಗೆ ರೂಪದಲ್ಲಿ ವಸೂಲಿಯಾಗುವ 60 ಸಾವಿರ ಕೋಟಿ ರೂ.ಗಳನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ ರಿಯಾಯ್ತಿ ರೂಪದಲ್ಲಿ ನೀಡಿ ಚುನಾವಣೆ ಸಂದರ್ಭದಲ್ಲಿ ಮೋದಿಯವರಿಗೆ ನೆರವು ನೀಡಿದ್ದ ಬಂಡವಾಳಶಾಹಿಗಳ ಋಣ ತೀರಿಸಲಾಗುತ್ತಿದೆ ಎಂದು ಖರ್ಗೆ ಟೀಕಿಸಿದರು. ಕೇಂದ್ರದ ಮಾಜಿ ಸಚಿವ ಗುಲಾಮ್ ನಬಿ ಆಜಾದ್ ಮಾತನಾಡಿ, ನರೇಂದ್ರ ಮೋದಿ ಬಡವರ, ಮಹಿಳೆಯರ, ರೈತರ ವಿರೋಧಿ ಸರ್ಕಾರ. ಭೂಸ್ವಾಧೀನಗೊಳ್ಳುವ ಜಮೀನಿನ ಮಾಲೀಕರಾದ ರೈತರಿಗೆ ಅನುಕೂಲವಾಗುವಂತೆ ಯುಪಿಎ ಸರ್ಕಾರ ರೂಪಿಸಿದ್ದ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಿ ಮೋದಿ ಸರ್ಕಾರ ರೈತರನ್ನು ನಾಶ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

—————————-

* ಬಿಜೆಪಿ ವಿರುದ್ಧ ಪರಮೇಶ್ವರ್ ಲೇವಡಿ
ದಾವಣಗೆರೆ, ಏ.16- ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ ಭರವಸೆಯಂತೆ ಸಿದ್ದರಾಮಯ್ಯ ಅವರ ಸರ್ಕಾರ ಎರಡು ವರ್ಷದಲ್ಲಿ ದಕ್ಷ ಹಾಗೂ ಉತ್ತಮ ಆಡಳಿತ ನೀಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.
ದಾವಣಗೆರೆಯಲ್ಲಿಂದು ನಡೆದ ಸರ್ವೋದಯ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳಾದ ಜೆಡಿಎಸ್-ಬಿಜೆಪಿ ಹೊಟ್ಟೆ ಉರಿಯಿಂದ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು. ನಮ್ಮ ಸರ್ಕಾರ ಬಡವರ ಪರವಾಗಿ ಯೋಜನೆಗಳನ್ನು ರೂಪಿಸಿದರೆ ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ಬಿಜೆಪಿ ಯಾರ ಪರವಾಗಿದೆ ಎಂಬುದು ತೀರ್ಮಾನವಾಗಬೇಕು. ಕಾಂಗ್ರೆಸ್ ಶೋಷಿತರ ಹಾಗೂ ಬಡವರ ಪರವಾಗಿದೆ ಎಂದು ಶ್ಲಾಘಿಸಿದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದು ಒಂದು ವರ್ಷವಾಗಿದೆ. ಎಲ್ಲಿ ಅಚ್ಚೇದಿನ್ ಬಂದಿದೆ ಎಂದು ತೋರಿಸಲಿ, ಮತ ಹಾಕಿದ ಜನ ಒಂದು ವರ್ಷದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಕರ್ನಾಟಕ ಸರ್ಕಾರದ ಕುರಿತು ಜನರಲ್ಲಿ ಮೆಚ್ಚುಗೆಯಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಸರ್ಕಾರದ ಜೊತೆಗಿದೆ ಎಂದು ಹೇಳಿದ್ದಲ್ಲದೆ, ಕೆಲ ಇಲಾಖೆಗಳ ಸಾಧನೆಯನ್ನು ಚುಟುಕಾಗಿ ವಿವರಿಸಿದರು.

ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಹಿಂದೆ ಬಿಜೆಪಿಯವರು ಆಡಳಿತದಲ್ಲಿದ್ದ ದಂಡ-ಪಿಂಡ ಸರ್ಕಾರದಲ್ಲಿ ಸಚಿವರು ಎಲ್ಲಿಯೋ ಮಲಗಿ ಇನ್ನೇಲ್ಲಿಯೋ ಏಳುತ್ತಿದ್ದರು. ಆದರೆ ಸಿದ್ದರಾಮಯ್ಯ ಅವರ ಸರ್ಕಾರದ ಸಚಿವರು ಎಲ್ಲಿ ಮಲಗುತ್ತಾರೋ ಅಲ್ಲಿಯೇ ಏಳುತ್ತಾರೆ, ಈಗಿನ ಯಾವ ಸಚಿವರ ಮೇಲೆಯೂ ಹಿಂದಿನ ಬಿಜೆಪಿ ಸರ್ಕಾರದ ಸಚಿವರ ಮೇಲಿದ್ದ ಆರೋಪಗಳು ಇಲ್ಲ ಎಂದು ಲೇವಡಿ ಮಾಡಿದರು.  ಬಿಜೆಪಿಯವರು ಮಾತಿಗೆ ಮೊದಲು ಹಿಂದೂ ಎನ್ನುತ್ತಾರೆ, ಅಧಿಕಾರ ಸಿಕ್ಕ ಮೇಲೆ ಅಮ್ಮಣ್ಣಿ ಮುಂದೆ, ಹಿಂದೂ ಹಿಂದೆ ಎಂಬಂತೆ ವರ್ತಿಸುತ್ತಾರೆ. ಆದರೆ ಸಿದ್ದರಾಮಯ್ಯ ಅವರ ಸರ್ಕಾರ ನಾಲ್ಕು ಸಾವಿರ ಅರ್ಚಕರಿಗೂ ವೇತನ ಹೆಚ್ಚಿಸಿದೆ. ನಮ್ಮ ಸರ್ಕಾರದಲ್ಲಿ ಎಲ್ಲಾ ಜಾತಿಯವರು ನೆಮ್ಮದಿಯಿಂದ ಇದ್ದಾರೆ. ಕ್ಷೀರ ಭಾಗ್ಯ, ಅನ್ನ ಭಾಗ್ಯ ಯೋಜನೆಗಳಿಂದ ಪ್ರತಿಪಕ್ಷಗಳ ಹೊಟ್ಟೆ ಉರಿಯುತ್ತಿದೆ. ಅದಕ್ಕಾಗಿ ಅರ್ಕಾವತಿ ಬಡಾವಣೆ ಡಿ-ನೋಡಿಫಿಕೇಷನ್ ಎಂದು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

Write A Comment