ಕರ್ನಾಟಕ

ಸಿದ್ದು ಸರ್ಕಾರದ ಸಾಧನೆಗೆ ಜನ ಏನಂತಾರೆ?

Pinterest LinkedIn Tumblr

Siddaramaiha--Govt

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ೨ ವರ್ಷ ಪೂರೈಸಿದೆ. ಈ ಸರ್ಕಾರ ಹತ್ತು ಹಲವು ಅಭಿವೃದ್ಧಿಯ ಮೂಲಮಂತ್ರಗಳನ್ನು ಆಡಳಿತದ ಜೊತೆಗೆ ತಳುಕು ಹಾಕಿಕೊಂಡು ಹುಳುಕುಗಳನ್ನು ಬೆನ್ನಿಗೆ ಕಟ್ಟಿಕೊಂಡು ಬಂದಿದೆ.  ಅನ್ನಭಾಗ್ಯ, ಶಾದಿಭಾಗ್ಯ, ಸಾಲಮನ್ನಾ, ಮೀಸಲಾತಿ, ಕ್ಷೀರಭಾಗ್ಯ,

ಪ್ರೋತ್ಸಾಹಧನ ಸೇರಿದಂತೆ ಬಜೆಟ್‌ನಲ್ಲಿ ವಿವಿಧ ವರ್ಗದ ಜನರಿಗೆ  ಉತ್ತಮವಾದ ಕೊಡುಗೆಗಳನ್ನು ನೀಡುವ ಮೂಲಕ ಈ ಸರ್ಕಾರ ಪ್ರಜೆಗಳಿಗೆ ಕೊಂಚ ನೆಮ್ಮದಿ ಕೊಟ್ಟಿದ್ದರೂ ಇದರ ಹತ್ತು ಪಟ್ಟು ವಿವಾದಗಳನ್ನು ಮತ್ತು ಸಮಸ್ಯೆಗಳನ್ನು ಈ ಭಾಗ್ಯಗಳಿಂದ ಎದುರಿಸಬೇಕಾಗಿದೆ. ಇಂದು ದಾವಣಗೆರೆಯಲ್ಲಿ ಪಕ್ಷದ ವತಿಯಿಂದ ಸಿದ್ದು ಸರ್ಕಾರದ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.  ಅಲ್ಲಿ ಸರ್ಕಾರದ ಸಾಧನೆಗಳು ಹಾಗೂ  ಮುಂದಿನ ೩ ವರ್ಷಗಳ ಆಡಳಿತದ ಸುಗಮ ಹಾದಿಯ ಬಗ್ಗೆ ಪ್ರಸ್ತಾಪ ನಡೆಯಿತು. ೨೦೧೩, ಮೇ ೧೩ರಂದು  ಆಡಳಿತಕ್ಕೆ ಬಂದ ಸರ್ಕಾರ ಜನರಲ್ಲಿ ನೆಮ್ಮದಿಯ ನಿಟ್ಟುಸಿರು ತಂದಿತ್ತಾದರೂ ನಂತರ ಆಡಳಿತ  ವ್ಯವಸ್ಥೆಯಿಂದಾಗಿ ಪ್ರಜೆಗಳು ರೋಸಿ ಹೋಗಿದ್ದು ನಿಜ.

ಪೆಟ್ರೋಲ್ ಬೆಲೆ ಸೇರಿದಂತೆ ಬಸ್ ದರ, ಸುಂಕ, ಆಹಾರ ಧಾನ್ಯಗಳ ಬೆಲೆ ಏರಿಕೆ ಹೀಗೆ ಜನರಲ್ಲಿ ಬರೀ ಆತಂಕಗಳನ್ನು ಸೃಷ್ಟಿಸಿತೇ ಹೊರತು ಬಂದ ಭಾಗ್ಯಗಳು ಯಾವುವು ಬಡವರ ಪಾಲಿಗೆ ಶಾಶ್ವತವಾಗಿ ಉಳಿಯಲಿಲ್ಲ. ಬದಲಾಗಿ ಪ್ರಜೆಗಳ ಸೋಮಾರಿತನಕ್ಕೆ ಮಾರ್ಗವಾಯಿತು ಎಂಬುದು ಸದ್ಯ ಭಾರೀ ಚರ್ಚೆಯ ವಸ್ತು. ಸಚಿವ ಸಂಪುಟದ ಜೊತೆಗೆ ಸಮತೋಲನ ಕಾಪಾಡಿ ಕೊಳ್ಳುವುದು ಸಿದ್ದುರವರಿಗೆ ಭಾರೀ ಕಷ್ಟವೇ ಆಯಿತು. ಅಧಿಕಾರಿಗಳ  ವರ್ಗಾವಣೆ ಸೇರಿದಂತೆ ಲೋಕಾಯುಕ್ತ ನೇಮಕದಲ್ಲಿ ಹಸ್ತಕ್ಷೇಪ. ಕೆಪಿಎಸ್‌ಸಿ ಹಗರಣ ಕುರಿತ ರದ್ಧತಿ, ಕೃಷಿ ಸಾಲಗಳಲ್ಲಿ ವಿಳಂಬ, ರೈತರ ಕಡೆಗಣನೆ, ಸರ್ಕಾರಿ ನೌಕರರ ನೇಮಕದಲ್ಲಿ ಗೊಂದಲ, ದಕ್ಷ ಅಧಿಕಾರಿ ನಿಗೂಢ ಸಾವು, ಪ್ರಾಮಾಣಿಕ ಅಧಿಕಾರಿಗಳ ಮೇಲೆ ಹಲ್ಲೆ ಸೇರಿದಂತೆ ಹಲವು ಘಟನೆಗಳು ಸಿದ್ದು ಸರ್ಕಾರಕ್ಕೆ ಮುಖಭಂಗ ತಂದ ಅಂಶಗಳು…!
ಆದರೆ ಸಿಎಂ ಹೇಳುವ ಪ್ರಕಾರ ನಾನು ಮಾಡುವ ಕೆಲಸಗಳು ಸರಿಯಾಗಿಯೇ ಇವೆ. ನನ್ನ ಸಾಧನೆ ನನಗೆ ತೃಪ್ತಿ ತಂದಿದೆ ಎಂದು ಯಾವಾಗಲೂ ಹೇಳುವುದನ್ನು ನೋಡಿ ದರೆ ಏಕಚಕ್ರಾಧಿಪತ್ಯದ ನೆನಪಾಗುತ್ತದೆ ಎನ್ನುತ್ತಾರೆ ಜನ.
ಸಾವಿರಾರು ಕೋಟಿ ವ್ಯಯಿಸಿ ವಿದ್ಯಾಸಿರಿ, ಹಾಲಿಗೆ ಸಬ್ಸಿಡಿ, ಕೈಗಾರಿಕಾ ನೀತಿಗಳು ಅಹಿಂದಾ ಸಾಲ ಮನ್ನಾ ಇವೆಲ್ಲ ಅರ್ಥಪೂರ್ಣವೇ ಸರಿ. ಆದರೆ, ಇವೆಲ್ಲಾ ಉಳಿದ ವ್ಯವಸ್ಥೆಗಳ ಮೇಲೆ ಅನಿವಾರ್ಯವಾಗಿ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂಬುದು ಪ್ರಜೆಗಳ ವಾದ. ಸಚಿವ ಸಂಪುಟದ  ಕೆಲ ಸಚಿವರಿಂದ ರಾಜೀನಾಮೆ ಕೊಡಿಸಿದರಾದರೂ ಹುಳುಕು ಇರುವ ಸಚಿವರನ್ನು ಇಂದಿಗೂ ಜೊತೆಯಲ್ಲಿಟ್ಟುಕೊಂಡು ಮುಂದಿನ ೩ ವರ್ಷದ ಹಾದಿ ಸವೆಸಬೇಕಿದೆ.
ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣ, ಬಿಬಿಎಂಪಿ ವಿಭಜನೆ ವಿವಾದ,  ಧಾರ್ಮಿಕ ದತ್ತಿ ಇಲಾಖೆಯಲ್ಲಿನ ಕಾಯ್ದೆಗಳು, ಮದ್ಯದ ಬೆಲೆ ಹೆಚ್ಚಳದಿಂದ ಮದ್ಯಪ್ರಿಯರ ಕೆಂಗಣ್ಣಿಗೆ ಗುರಿಯಾಯಿತು. ಸರ್ಕಾರವು ಒತ್ತುವರಿ ಪ್ರಕರಣಗಳಲ್ಲಿ ಹಾಗೂ ಸರ್ಕಾರದ ಆಡಳಿತ ಜಾರಿಯಾದಾಗಿನಿಂದಲೂ ಒಂದಲ್ಲ ಒಂದು ವಿವಾದದ ಸುಳಿಯಲ್ಲಿ ಸಿಕ್ಕು ನರಳುತ್ತಾ ಆಮೆಗತಿಯಲ್ಲಿ ಆಡಳಿತ ನಡೆಸುತ್ತಿದೆ. ಜೊತೆಗೆ ಇನ್ನು ೩ ವರ್ಷ ಸಚಿವ ಸಂಪುಟದ ಜೊತೆ ಉತ್ತಮ ಆಡಳಿತದೊಂದಿಗೆ ಯಾವ ರೀತಿ ಆಡಳಿತವನ್ನು ನಡೆಸುತ್ತದೆಯೋ?ಹಿಂದೆ ಸರಿಯುತ್ತದೆಯೋ ಎಂಬುದು ಗೊಂದಲದ ವಿಷಯ! ಅದೇನೇ ಇರಲಿ ಈ ಕುರಿತಂತೆ ಸಿದ್ದು ಸರ್ಕಾರ  ೨ ವರ್ಷದ ಅವರ ಸಾಧನೆಗಳನ್ನೂ ಮತ್ತು ಲೋಪಗಳನ್ನು ಜನರಿಂದಲೇ ಕೇಳೋಣ ಬನ್ನಿ.

ಮುಕುಂದ, ಎಳನೀರು ವ್ಯಾಪಾರಿ, ರಾಜಾಜಿನಗರ
ಕಾಂಗ್ರೆಸ್ ಸರ್ಕಾರದಿಂದ ಕೊಂಚ ನೆಮ್ಮದಿ. ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿ ಕೊಡುತ್ತಿರುವುದು ಒಳ್ಳೆದೇ ಆಯಿತು. ನಮಗೆ ಅಂಗಡಿಯಲ್ಲಿ ೨೫ ರೂ. ಕೊಟ್ಟು ಕೊಳ್ಳುವುದು ಕಷ್ಟವಾಗುತ್ತದೆ. ಇನ್ನುಳಿದ ೩ ವರ್ಷ ಸಿದ್ದರಾಮಯ್ಯನವರೇ ಇರಲಿ.

ಎಸ್‌ಜೆಆರ್‌ಸಿ ಮಹಿಳಾ ಪದವಿ ಕಾಲೇಜು
ವಿದ್ಯಾಸಿರಿ ಯೋಜನೆ ಒಳ್ಳೆಯದೆ. ಆದರೂ ಅದು ಅನೇಕ ಗೊಂದಲಗಳ ಗೂಡಾಗಿದೆ. ಅದು ಯಾವ ಲೆಕ್ಕಾಚಾರದಲ್ಲಿ ಕೊಡ್ತಾಯಿದಾರೋ ಗೊತ್ತಿಲ್ಲ. ಲಾಪ್‌ಟಾಪ್ ಕೊಡ್ತೇನಿ ಅಂದ್ರು ಕೊಡ್ಲೆ ಇಲ್ಲ. ವಿದ್ಯಾಸಿರಿ ಉಳಿದ ಸ್ಕಾಲರ್‌ಶಿಪ್ಸ್ ಬಗ್ಗೆ ಸರಿಯಾದ ಮಾಹಿತಿನೇ ನಮಗಿಲ್ಲ. ಎಲ್ಲಕ್ಕಿಂತ ಫಸ್ಟ್ ಲೈಂಗಿಕ ಕಿರುಕುಳದ ಬಗ್ಗೆ ಕ್ರಮಬೇಕು.

ಮೂರ್ತಿ,  ದೋಬಿ ಅಂಗಡಿ, ಗಾಂಧಿನಗರ
ನಾವು ಸಿದ್ದರಾಮಯ್ಯ ಅಭಿಮಾನಿಗಳೇ ಆದರೂ ನಮಗೆ ಸರ್ಕಾರದಿಂದ ಯಾವುದೇ  ಸವಲತ್ತು ಸಿಗುತ್ತಿಲ್ಲ. ೫೦ ವರ್ಷಗಳಿಂದ ರಸ್ತೆ ಬದಿಯಲ್ಲೇ ಲಾಂಡ್ರಿ. ಮಲಗೋದು ಇಲ್ಲೇ, ಜೀವನಾನೂ ಇಲ್ಲೆ. ಮಳೆ ಬಿಸಿಲು ಲೆಕ್ಕಿಸದೆ ಕೆಲಸ ಮಾಡ್ಬೇಕು. ಬಿಬಿಎಂಪಿಯವರು ಪ್ರತಿ ಸಾರಿ ಜಗಳ ಮಾಡ್ತಾರೆ. ಜಾಸ್ತಿ ಎಸ್ಸಿ-ಎಸ್ಟಿಗೆ ಕೊಟ್ರೆ  ನಮ್ಮಂಥೋರಿಗೆ ಏನು ಶಿವಾ!!!

ಹೊಟೇಲ್ ನಾಗರಾಜ್, (ಸುನೀತ ಹೊಟೇಲ್) ಗಾಂಧಿನಗರ.
ಸ್ವಾಮಿ ನೋಡಿ ಈ ಸರ್ಕಾರದವ್ರು ಅಕ್ಕಿ ಕಡ್ಮೆ ಮಾಡಿ ಉಳಿದ ಪದಾರ್ಥಗಳ ಮೇಲೆ ಬೆಲೆ ಜಾಸ್ತಿ ಮಾಡಿದ್ದಾರೆ… ಹೊಟೇಲ್ ಮಾಲೀಕರ ತಲೆ ಮೇಲೆ ಹೊಡೆಯುತ್ತಿದ್ದಾರ. ೧ ರೂ.ಗೆ ಅಕ್ಕಿ ಮಾಡಿದ್ದು ತಪ್ಪು. ನಮ್ಮ ದೇಶದಲ್ಲಿ ಯಾರೂ ಬಡವರಿಲ್ಲ. ಎಂಥಾ ಕೂಲಿಯವನಾದರೂ ದಿನಕ್ಕೆ ೧೦೦ ರೂ. ದುಡಿದೇ ದುಡಿಯುತ್ತಾನೆ. ಸರ್ಕಾರದ ಆಡಳಿತ ಸರಿಯಿದೆ. ಅವರ ಜೊತೆ ಇರುವವರು ಸರಿಯಾಗ್ಬೇಕು. ಕೊಟ್ಟಿರೋ ಭರವಸೆಗಳು ಸರಿಯಾಗಿ ಈಡೇರಿಸಬೇಕು.

ಕಿರಣ್ ಮೋಹನ್, ಶೇಷಾದ್ರಿಪುರಂ ಕಾಲೇಜು : ಪದವಿ ವಿದ್ಯಾರ್ಥಿಗಳು
ಅಯ್ಯೋ ಬಿಡಿ ಸಾರ್. ಒಬ್ಬರಿಗೆ ಕೊಟ್ರೆ ಒಬ್ಬರಿಗೆ ಕೊಡಲ್ಲ. ಅದ್ಯಾವುದೋ ೨ ಕಾರ್ಯಕ್ರಮಗಳನ್ನು ಡಿಗ್ರಿ ವಿದ್ಯಾರ್ಥಿಗಳಿಗೆ ನೀಡಿ ಕೈಕೊಟ್ಟರು. ಸಿಕ್ಕವರಿಗೆ ಸಿಕ್ತು. ಇಲ್ಲದವರಿಗೆ ಇಲ್ಲ. ಸಖತ್ ಕನ್‌ಫ್ಯೂಸನ್ ಸರ್! ವಿದ್ಯಾಸಿರಿ ಯೋಜನೆಯಲ್ಲಿ ಶ್ರೀಮಂತರಿಗೆಲ್ಲಾ ದುಡ್ಡು ಸಿಕ್ತು ನಮಗೆ ಸಿಗೊಲ್ಲ. ಲೋನ್ ಕೊಡ್ತೀನಿ ಅಂದ್ರು ಇನ್ನು ಸಿಗ್ಲಿಲ್ಲ. ಬೆಂ.ವಿ.ವಿ ಅದ್ವಾನದ ಬಗ್ಗೆ ಸ್ವಲ್ಪ ಸಿಎಂ ಗಮನ ಕೊಡ್ಬೇಕು ಅಷ್ಟೇ!

ಮುನಿಯಮ್ಮ, ಶ್ರೀರಾಂಪುರ (ಬಿಬಿಎಂಪಿ ಸ್ವಚ್ಛತಾ ಸಿಬ್ಬಂದಿ)
ಹೋಗಿ ಸ್ವಾಮಿ ಎಂಥಾ ಸರ್ಕಾರ ಈ ಬಿಬಿಎಂಪಿ ಅಧಿಕಾರಿಗಳ ಗಲಾಟೆಯಿಂದ. ನಮ್ಮೊಂಥರಾ ಹೊಟ್ಟೆ ಮೇಲೆ ಹೊಡೀತಾರೆ. ನಾವು — ಕೆಲಸ ಮಾಡ್ತೀವಿ. ಆದ್ರೂ ಕೆಲವೊಂದು ಸಾರಿ ಅವರ್ ತಪ್ಪುಗಳನು ನಮ್ಮೇಲೆ ಎಳೀತಾರೆ. ಎಷ್ಟು ಅಂಥ ಕಷ್ಟ ಪಡೋದ್ ಸ್ವಾಮಿ. ಸೌಲಭ್ಯಗಳು ಬೇಕು ಸಾಕಾಗಲ್ಲ. ಕೊಂಚ ನೆಮ್ಮದಿ ಅಷ್ಟೆ ಸರ್ಕಾರದಿಂದ

ಉದಯ್, ಅಂಗವಿಕಲ,  ರಸ್ತೆ ಬದಿಯ ಹಣ್ಣು ವ್ಯಾಪಾರಿ
ಎಸ್.ಎಂ.ಕೃಷ್ಣ ಸರ್ಕಾರವೇ ಮೇಲು ಎಂದು  ನಾನೇನು ಹೇಳಲ್ಲ. ಯಾವ ಸರ್ಕಾರವೋ ಗೊತ್ತಿಲ್ಲ. ಇವರು ಆಡಳಿತಕ್ಕೆ ಬಂದಾಗಿನಿಂದ ಬರೀ ತಲೆನೋವು ನೋಡ್ರಿ. ಸರಿಯಾಗಿ ನಮಗೆ ಸಿಗೋ ಮಾಸಾಶನ ಕೂಡ ಸಿಗಂಗಿಲ್ಲಾ ನೋಡ್ರಿ. ಬಾಳಾ ತ್ರಾಸ ಆಗೈತ್ರೀ ಸಾರ್… ದುಡ್ಡು ಬಿಡುಗಡೆ ಆದ್ರೂ ನಮಗೆ ಸರಿಯಾಗಿ ತಲುಪುತ್ತಿಲ್ಲ. ಅಧಿಕಾರಿಗಳೇ ಒಳಗೆ ತಿಂತಾ ಇದಾರೆ ಬಿಡ್ರೀ ಗೊತ್ತು.

ಪ್ರಕಾಶ್, ಬಟ್ಟೆ ಅಂಗಡಿ, ಆನಂದ್‌ರಾವ್ ಸರ್ಕಲ್
ನೋಡ್ರೀ ಸರ್ಕಾರದ ಬಗ್ಗೆ ಏನೂ ಗೊತ್ತಿಲ್ಲ ಅನ್ನೋದೇ ಬೆಟರ್. ಖರ್ಗೆ ಇದ್ರೆ ಏನಂತೆ ಹೆಗ್ಡೆ ಇದ್ರೆ ಏನಂತೆ ! ನಮ್ಮ ಹೊಟ್ಟೆಪಾಡು ನಮಗೆ ನಮ್ಮ ಸಮಸ್ಯೆಗಳು ನಮಗೆ. ಒಬ್ರಿಗೆ ಕೊಟ್ಟು ಇನ್ನೊಬ್ರಿಂದ ಕಿತ್ಕೊತಾಯಿರ್ತಾಗರೆ. ಬಟ್ಟೆಗಳ ಮೇಲೂ ಕೊಳ್ಳುವುದರ ಮಾರುವುದರ ಮೇಲೆ ಸಾಕಷ್ಟು ಬದಲಾವಣೆ ಮಾಡೀದಾರೆ. ಇದರಿಂದ ಗ್ರಾಹಕರಲ್ಲಿ ವ್ಯತ್ಯಾಸ ಆಗ್ತಾ ಇದೆ.

ಪ್ರಕಾಶ್, ಪುಸ್ತಕ ವ್ಯಾಪಾರಿ, ಮೆಜೆಸ್ಟಿಕ್
ಉಳಿದ ಸರ್ಕಾರಕ್ಕಿಂತ ಭಿನ್ನವೇನಿಲ್ಲ. ಅದೇ ಆಡಳಿತ ಅದೇ ತರಹದ ಕಾರ್ಯಕ್ರಮ. ಒಳ್ಳೆಯ ಸರ್ಕಾರ, ಆದರೆ ಜನಸಾಮಾನ್ಯರನ್ನು ಸ್ವಲ್ಪ ಲೆಕ್ಕಕ್ಕಿಟ್ಟುಕೊಂಡು ಆಡಳಿತ ಕಾರ್ಯಕ್ರಮ ಮಾಡಿದ್ರೆ ಒಳ್ಳೇದು ಎಲ್ರಿಗೂ ಅಷ್ಟೇ. ವೋಟ್ ಹಾಕೋದ್ ನಮ್ಮ ಧರ್ಮ ಹಾಕ್ತೀವಿ ಅಷ್ಟೇ.

ಮಹಾದೇವ್, ಕಲ್ಯಾಣ್ ವೈನ್ಸ್,  ಮಲ್ಲೇಶ್ವರಂ
ನೋಡಿ ಸರ್ಕಾರ ವೈನ್ಸ್‌ಗೆ ಜಾಸ್ತಿ ಮಾರ್ಜಿನ್ ಕೊಟ್ಟಿಲ್ಲ. ರೇಟ್ ಜಾಸ್ತಿ ಮಾಡ್ತಾ ಇದೆ. ವಿನಾಕಾರಣ ಅದರ ಬೊಕ್ಕಸಕ್ಕೆ ಹಣವೆಲ್ಲಾ ಅಷ್ಟೇ. ವ್ಯಾಪಾರಿಗಳು ಇದರಿಂದ ಹಿಂದೆ-ಮುಂದೆ ನೋಡ್ತಾ ಇದಾರೆ. ಬಾಟಲ್‌ಗೆ ಶೇ.೧೦ ರಷ್ಟು ಮಾರ್ಜಿನ್‌ನಲ್ಲಿ ನಮಗೆ ಸಿಗೋದ್ ಶೇ.೩ ರಷ್ಟು ಅಷ್ಟೇ ರೀ. ೧,೫೦೦ ರೂ. ಪ್ರತಿದಿನ ಲೈಸೆನ್ಸ್ ಕಟ್ಬೇಕು. ಇತ್ತೀಚೆಗೆ ಯಾಕೋ ಸರ್ಕಾರ ವೈನ್ಸ್ ವ್ಯಾಪಾರದಲ್ಲಿ ಅದ್ವಾನ ಮಾಡ್ತಾ ಇದ್ದು ಸರ್ಕಾರಕ್ಕೆ ಲಾಭವಿಲ್ಲ. ಸಿದ್ದರಾಮಯ್ಯ ಸರ್ಕಾರದಿಂದ ಬೇಸರವಿದೆ.

ಉಮೇಶ್, ಆಟೋ ಚಾಲಕ, ಬಸವೇಶ್ವರ ನಗರ.
ಹಾಸನದಿಂದ ಬಂದು ದಿನಗಟ್ಟಲೇ ದುಡಿದ್ರೂ ಏನೂ ಲಾಭವಾಗ್ತಿಲ್ಲ. ಇವಾಗ ಬಂದಿರೋ ರೂಲ್ಸ್‌ಗಳು ನೋಡಿದ್ರೆ ಆಟೋಗಳ ಸಹವಾಸವೇ ಬೇಡ ಅನ್ಸುತ್ತೆ! ಇವೆಲ್ಲಾ ಅವರ ಅನುಕೂಲಕ್ಕೆ ಜಾರಿ ಮಾಡೀದ್ದಾರೆ. ಎಲ್ಲಾ ಅನುಕೂಲಗಳು ಕೆಳವರ್ಗದವರಿಗಷ್ಟೇ! ಇವರ ಕಿತ್ತಾಟದಿಂದ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರ್ತಾದ ಇದೆ. ಈ ಸರ್ಕಾರದ ರೂಲ್ಸ್‌ಗಳಿಂದಾಗಿ ಪ್ರಯಾಣಿಕರಲ್ಲಿ ಕೊಂಚ ಏರುಪೇರಾಗಿದೆ. ಎಲ್ಲರನ್ನೂ ಸಮಾನ ರೀತಿಯಲ್ಲಿ ಕಾಣ್ಬೇಕು ಸರ್ಕಾರ. ಆಗ ಎಲ್ಲಾ ಸರಿ ಹೋಗುತ್ತದೆ. ಇನ್ನು ೩ ವರ್ಷ ಇರ್ಬೇರಕು ಅಂದ್ರೆ ಜನರಿಗೆ ಮೊದಲು ಸಮಸ್ಯೆಗಳಿಗೆ ಸ್ಪಂದಿಸಿದರೆ ಮಾತ್ರ. ಇಲ್ಲ ಎಲ್ರಿಗೂ ಮನೆ ಗ್ಯಾರಂಟಿ!

ರಾಧ , ಸಾಯಿ ಟೆಂಪಲ್, ಆನಂದ್‌ರಾವ್ ವೃತ್ತ
ಅಯ್ಯೋ ಹೋಗಪ್ಪಾ ನಿನ್ ಕೆಲ್ಸ ನೋಡ್ಕೋ. ನಾವೇನ್ ನಮ್ ಕಷ್ಟ ಹೇಳಿದ್ರೆ ಏನಾರೂ ಬಂದು ನೋಡ್ತಾರೋ… ಹೋಗ್ಲಿ ಪರಿಹಾರ ಸಿಗ್ತದೋ… ಅನೇಕಲ್‌ನಿಂದ ಬಂದು ೨೦೦-೩೦೦ ರೂ. ವ್ಯಾಪಾರ ಮಾಡ್ಕೊಂಡು ಹೋಗ್ತೀವಿ. ಸರ್ಕಾರದಿಂದ ಅಕ್ಕಿ ಬಿಟ್ರೇ ಏನ್ ಸಿಗ್ತದೆ ಸ್ವಾಮೀ? ಬೇಡವಾಗಿರೋದಕ್ಕೆಲ್ಲ ಸಾವಿರಾರು ಕೋಟಿ ಕೊಡ್ತಾರೆ. ನಮ್ಮೊಂಥರಿಗೆ ಒಂದ್ ಸಣ್ಣ ಶೆಟ್ ಆದ್ರೂ  ಬೇಡ್ವಾ! ಸರ್ಕಾರ ಇದ್ರೆಷ್ಟು ಹೋದ್ರೆಷ್ಟು  ಹೋಗ್ರಿ!!

ಸುರೇಶ್, ಕೂಲಿ ಕಾರ್ಮಿಕ
ಮಂಡ್ಯದಿಂದ ಬೆಂಗಳೂರಿಗೆ ದುಡಿಯೋಕೆ ಬಂದೀವಿ. ೨೦೦ರೂ. ಕೂಲಿ ಸಿಗದೆ ಬೇರೆ ಏನೂ ಸವಲತ್ತಿಲ್ಲ. ತಿನ್ನೋಕೆ ಆಗ್ತಾದೆ ದುಡ್ಡು. ರೈಲ್ವೆ ಅಧಿಕಾರಿಗಳದು ನಮ್ಮೇಲೆ ಬರೀ ದರ್ಪ ಅಷ್ಟೇ. ಸರ್ಕಾರದಿಂದ ಬಂದ ದುಡ್ಡನ್ನು ಸರಿಯಾಗಿ ಕೊಡ್ಲಿಲ್ಲ. ಸರ್ಕಾರದ ರೂಲ್ಸ್‌ಗಳೆಲ್ಲಾ ಅವರು ತಿನ್ನೋಕೆ ಮಾಡ್ಕೊಂಡಿರೋದು ಅಷ್ಟೇ. ಸಿದ್ದರಾಮಯ್ಯ ಒಳ್ಳೆ ಮನುಷ್ಯನೇ ಆದರೆ ಅವರ ಸರ್ಕಾರದಿಂದ ಜನಗಳಿಗೆ ನೆಮ್ಮದಿ ಇಲ್ಲ ರೀ ಶೆಡ್‌ನಲ್ಲೇ ಇದೀವಿ ನೋಡ್ರೀ!! ಅದೆಷ್ಟು ಭ್ರಷ್ಟಾಚಾರ ನಡೀತಿದೆಯೋ ನಡೀತಿದೆ ನಡೀಲಿ ಬಿಡಿ ಜನಗಳೇ ಉತ್ತರ ಕೊಡ್ತಾರೆ.

ಮುದ್ದುಕೃಷ್ಣ, ಹಿರಿಯ ನಾಗರಿಕರು, ವಿಜಯನಗರ.
ಸರ್ಕಾರದ ಆಡಳಿತ ನ್ಯಾಯ ಯುತವಾಗಿಯೇ ಇದೆ. ಆದರೆ ಅದನ್ನು ಸಾಕಾರಗೊಳಿಸಲು ವಿಫಲವಾಗುತ್ತಿದೆ ಅಷ್ಟೆ. ಸಿದ್ದ ರಾಮಯ್ಯನವರು ಆದಷ್ಟು ಭ್ರಷ್ಟಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿರುವುದು ನಿಜ. ಆದರೆ ಅವರ ಜೊತೆ ಇರುವ ಸಚಿವರು ಸರಿಯಿಲ್ಲ. ನಿಜಲಿಂಗಪ್ಪ, ರಾಮಕೃಷ್ಣ ಹೆಗ್ಡೆಯವರ ತತ್ವವನ್ನಾಧರಿಸಿದ ಸರ್ಕಾರ ಮುಖ್ಯಮಂತ್ರಿಗಳ ಕನಸು. ಜನರು ಅದಕ್ಕೆ ಸ್ಪಂದಿಸಬೇಕಿದೆ.

ಶೈಲಜಾ ಲಕ್ಷ್ಮಣ್, ಉಪನ್ಯಾಸಕರು,  ಸಾಮಾಜಿಕ ಚಿಂತಕರು
ಕಳೆದ ಸರ್ಕಾರಗಳಿಗೆ ಹೋಲಿಸಿ ದರೆ ಪ್ರಸ್ತುತ ಸರ್ಕಾರ ಶಿಕ್ಷಣ ಮತ್ತು ಕೃಷಿಯನ್ನು ಕಡೆಗಣಿ ಸಿದೆ. ಅತ್ಯಾಚಾರ ಪ್ರಕರಣಗಳೇ ಹೆಚ್ಚಾಗುತ್ತಿವೆ. ಸಮಾಜ ಭಯಭೀತ ವಾತಾವರಣದಲ್ಲಿ ಬದುಕುತ್ತಿದೆ. ಸಾಮಾಜಿಕ ಅಭಿವೃದ್ಧಿಗೆ ಮನ್ನಣೆ ಇಲ್ಲದಿದ್ದರೂ ಭೂ ಹಗರಣಗಳು ಹೆಚ್ಚಾಗಿವೆ.  ಸರ್ಕಾರದ ಕಾರ್ಯಕ್ರಮಗಳು ಅರ್ಥಗರ್ಭಿತವಾಗಿದ್ದರೂ ಫಲಾನುಭವಿಗಳಿಗೆ ಸರಿಯಾಗಿ ತಲುಪಕಬೇಕಿವೆ. ಇನ್ನುಳಿದ  ಇಲಾಖೆಯವರು ಬದಲಾವಣೆ  ಜೊತೆಗೆ ನಿಷ್ಠರಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಸಂತಸ.

1 Comment

Write A Comment