ಕರ್ನಾಟಕ

ಜಯಾ ತೀರ್ಪು ಮತ್ತೆ ಪರಿಶೀಲಿಸುತ್ತಿರುವ ಜಡ್ಜ್ ಕುಮಾರಸ್ವಾಮಿ

Pinterest LinkedIn Tumblr

jaya-bb

ಬೆಂಗಳೂರು: ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಖುಲಾಸೆಗೊಳಿಸಿ ನೀಡಿರುವ ತೀರ್ಪಿನಲ್ಲಿ ಸಾಲದ ಲೆಕ್ಕಾಚಾರ ತಪ್ಪಾಗಿದೆ ಎಂಬ ವಾದ ಕೇಳಿ ಬಂದ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾ.ಸಿ.ಆರ್.ಕುಮಾರಸ್ವಾಮಿ ತಾವು ನೀಡಿರುವ ತೀರ್ಪನ್ನು ಪರಿಶೀಲಿಸುತ್ತಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಈಗ ಹೈಕೋರ್ಟ್ ಕಲಾಪಕ್ಕೆ ಬೇಸಿಗೆ ರಜೆ ಇದ್ದರೂ ಕೂಡಾ ಬುಧವಾರ ತಮ್ಮ ಕಚೇರಿಗೆ ಹಾಜರಾಗಿ ಬೆಳಗ್ಗೆ 11ಗಂಟೆಯಿಂದ ಜಡ್ಜ್ ಕುಮಾರಸ್ವಾಮಿ ತೀರ್ಪು ಪರಿಶೀಲನೆ ನಡೆಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಸಾಲದ ಲೆಕ್ಕ:
ಜಯಾ ಪಡೆದ ಸಾಲದ ಮೊತ್ತ 24.17 ಕೋಟಿ ರೂ. ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಆದರೆ ತೀರ್ಪಿನಲ್ಲೇ ನೀಡಿರುವ ಜಯಾ ಅವರ ಸಾಲದ ಮೊತ್ತವನ್ನು ಒಟ್ಟುಗೂಡಿಸಿದಾಗ ಕೇವಲ 10.67 ಕೋಟಿ ರೂ. ಆಗುತ್ತದೆ. ಹೀಗಾಗಿ ಉಳಿದ 14 ಕೋಟಿ ರೂ.ವನ್ನು ಆದಾಯದ ಲೆಕ್ಕಕ್ಕೆ ಸೇರಿಸಿದರೆ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಪ್ರಮಾಣ ಶೇ.8.12ಕ್ಕಿಂತ ಹೆಚ್ಚಾಗುತ್ತದೆ. ಆಗ ಜಯಾ ಅವರು ದೋಷಿಯಾಗುತ್ತಾರೆ. ಆದ್ದರಿಂದ ಆದೇಶವನ್ನು ಪರಿಷ್ಕರಿಸಬೇಕೆಂದು ಡಿಎಂಕೆ ಅಧ್ಯಕ್ಷ ಕರುಣಾನಿಧಿ ಮತ್ತು ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಇಳಂಗೋವನ್ ಆಗ್ರಹಿಸಿದ್ದರು. ದೂರುದಾರ ಸುಬ್ರಮಣಿಯನ್ ಸ್ವಾಮಿ ಹಾಗೂ ಜಯಾ ಪ್ರಕರಣದ ವಿಶೇಷ ಅಭಿಯೋಜಕ ಬಿವಿ ಆಚಾರ್ಯ ಕೂಡಾ ಇದೇ ವಾದ ಮಂಡಿಸಿದ್ದರು.

ಜಯಾ ಆಸ್ತಿ ಲೆಕ್ಕಾಚಾರದಲ್ಲಿ ಭಾರಿ ಪ್ರಮಾದ???
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರನ್ನು ಖುಲಾಸೆಗೊಳಿಸಿ ಹೈಕೋರ್ಟ್‌ ಸೋಮವಾರ ನೀಡಿದ ತೀರ್ಪು ಹೊಸ ತಿರುವು ಪಡೆದುಕೊಂಡಿದೆ. ಹೈಕೋರ್ಟ್‌ ನೀಡಿರುವ ತೀರ್ಪಿನಲ್ಲಿ ಆರೋಪಿಗಳಾಗಿದ್ದ ಜಯಲಲಿತಾ ಮತ್ತಿತರರನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಲು ಪ್ರಮುಖ ಕಾರಣವಾದ ಆದಾಯ ಮೀರಿದ ಆಸ್ತಿ ಲೆಕ್ಕಾಚಾರದಲ್ಲಿ ತಪ್ಪಾಗಿದ್ದು, ಈ ಕಾರಣದಿಂದಾಗಿಯೇ ಆಕೆ ಆರೋಪಮುಕ್ತವಾಗುವಂತಾಗಿದೆ ಎಂಬ ಮಾತು ಕೇಳಿಬಂದಿದೆ.

ಪ್ರಕರಣದಲ್ಲಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿದ್ದ ಹಿರಿಯ ವಕೀಲ ಬಿ.ವಿ.ಆಚಾರ್ಯ ಮತ್ತು ಡಾ.ಸುಬ್ರಮಣಿಯನ್‌ ಸ್ವಾಮಿ ಪರ ವಕೀಲರಾಗಿದ್ದ ಪವನ್‌ಚಂದ್ರ ಅವರು ತೀರ್ಪಿನಲ್ಲಿ ಮಾಡಿರುವ ಸಾಲದ ಲೆಕ್ಕಾಚಾರದಲ್ಲಿ ತಪ್ಪಾಗಿದೆ ಎಂಬುದನ್ನು ಹೇಳಿದ್ದಾರೆ. ಅಲ್ಲದೆ, ಪ್ರಕರಣ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲು ಅರ್ಹವಾಗಿದೆ ಎಂದು ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ.

ಜಯಲಲಿತಾ ಮತ್ತಿತರರ ಆಸ್ತಿ ಲೆಕ್ಕಾಚಾರ ಹಾಕುವಾಗ ಹೈಕೋರ್ಟ್‌ ಅವರ ಬ್ಯಾಂಕ್‌ ಸಾಲವನ್ನು ಆದಾಯ ಎಂದು ಪರಿಗಣಿಸಿತ್ತು. ಅದರಂತೆ, 24.17 ಕೋಟಿ ರೂ. ಸಾಲ ಇದೆ. ಇದನ್ನು ಮತ್ತು ಮದುವೆಗೆ ಮಾಡಿದ ಲೆಕ್ಕವಿಲ್ಲದ ಖರ್ಚನ್ನು ಕಳೆದರೆ ಆಕೆಯ ಒಟ್ಟು ಆಸ್ತಿ 37.59 ಕೋಟಿ ರೂ. ಆಗುತ್ತದೆ. ಆರೋಪಿಗಳ ಒಟ್ಟು ಆದಾಯ 34.76 ಕೋಟಿ ರೂ. ಇದೆ. ಹೀಗಾಗಿ ಅವರು ಹೊಂದಿರುವ ಆದಾಯ ಮೀರಿದ ಆಸ್ತಿ ಕೇವಲ 2.82 ಕೋಟಿ ರೂ. ಆಗಿದ್ದು, ಇದು ಆದಾಯದ ಶೇ. 8.12ರಷ್ಟಾಗುತ್ತದೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಆದಾಯ ಮೀರಿದ ಆಸ್ತಿ ಶೇ. 10ರೊಳಗೆ ಇದ್ದರೆ ಆರೋಪಿಗಳು ಬಿಡುಗಡೆಗೆ ಅರ್ಹರಾಗಿರುತ್ತಾರೆ. ಇದನ್ನು ಪರಿಗಣಿಸಿ ಜಯಲಲಿತಾ ಮತ್ತಿತರರನ್ನು ಖುಲಾಸೆಗೊಳಿಸಲಾಗಿದೆ ಎಂದು ತೀರ್ಪು ನೀಡಲಾಗಿತ್ತು.

ಇದು ತಪ್ಪು ಲೆಕ್ಕಾಚಾರ: ಆದರೆ, ಹೈಕೋರ್ಟ್‌ ತೀರ್ಪಿನಲ್ಲಿ ಜಯಲಲಿತಾ ಮತ್ತಿತರರು ಮಾಡಿದ ಸಾಲ ಲೆಕ್ಕ ಹಾಕುವಾಗ ತಪ್ಪಾಗಿದೆ. ತೀರ್ಪಿನಲ್ಲಿ ಆರೋಪಿಗಳು 10 ಬ್ಯಾಂಕ್‌ಗಳಲ್ಲಿ ಮಾಡಿದ ಸಾಲದ ಮೊತ್ತ 24.17 ಕೋಟಿ ರೂ. ಆಗುತ್ತದೆ ಎಂದು ಹೇಳಲಾಗಿದೆ. ಆದರೆ, ಅದೇ ತೀರ್ಪಿನಲ್ಲಿ ಇರುವ ಅಂಕಿ-ಅಂಶಗಳನ್ನು ಲೆಕ್ಕ ಹಾಕಿದರೆ ಆ ಸಾಲದ ಮೊತ್ತ ಸುಮಾರು 10.6 ಕೋಟಿಯಷ್ಟಾಗುತ್ತದೆ. ಉಳಿದ ಸುಮಾರು 13.5 ಕೋಟಿ. ರೂ.ಗೆ ಯಾವುದೇ ಲೆಕ್ಕ ಇಲ್ಲ. ಈ ಮೊತ್ತ ಮತ್ತು ತೀರ್ಪಿನಲ್ಲಿ ಹೇಳಿರುವಂತೆ ಇರುವ ಆದಾಯ ಮೀರಿದ ಆಸ್ತಿಯನ್ನು ಲೆಕ್ಕಾಚಾರ ಹಾಕಿದಾಗ ಜಯಲಲಿತಾ ಮತ್ತಿತರರು ಹೊಂದಿರುವ ಆದಾಯ ಮೀರಿದ ಆಸ್ತಿ 16 ಕೋಟಿ ರೂ.ಗಿಂತ ಹೆಚ್ಚಾಗಿದ್ದು, ಇದು ಅವರ ಆದಾಯದ ಶೇ. 76ಕ್ಕಿಂತ ಹೆಚ್ಚಾಗುತ್ತದೆ. ಲೆಕ್ಕಾಚಾರದಲ್ಲಿ ತಪ್ಪಾಗಿರುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಪ್ರಕರಣದಲ್ಲಿ ಸ್ಪೆಷಲ್‌ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿದ್ದ ಹಿರಿಯ ವಕೀಲ ಬಿ.ವಿ.ಆಚಾರ್ಯ ಹೇಳಿದ್ದಾರೆ.

ಮೇಲ್ಮನವಿಗೆ ಅರ್ಹ ಪ್ರಕರಣ: ಜಯಲಲಿತಾ ಮತ್ತಿತರರನ್ನು ಖುಲಾಸೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇ ಸಾಲದ ಲೆಕ್ಕಾಚಾರ. ಹೈಕೋರ್ಟ್‌ ನೀಡಿರುವ ತೀರ್ಪಿನಲ್ಲಿ ಈ ಲೆಕ್ಕಾಚಾರದಲ್ಲೇ ತಪ್ಪಾಗಿರುವುದರಿಂದ ಆರೋಪಿಗಳನ್ನು ಖುಲಾಸೆಗೊಳಿಸಿ ಹೈಕೋರ್ಟ್‌ ನೀಡಿರುವ ತೀರ್ಪು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಸೂಕ್ತವಾಗಿದೆ. ಆದರೆ, ಪ್ರಕರಣದಲ್ಲಿ ರಾಜ್ಯ ಸರ್ಕಾರ ಪ್ರತಿವಾದಿಯಾಗಿರುವುದರಿಂದ ಸರ್ಕಾರ ಈ ಕುರಿತು ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದಿದ್ದಾರೆ. ಅಲ್ಲದೆ, ತೀರ್ಪನ್ನು ಸಮಗ್ರವಾಗಿ ಅಧ್ಯಯನ ಮಾಡಿದ ಬಳಿಕ ತಮ್ಮ ಅಭಿಪ್ರಾಯವನ್ನು ಸರ್ಕಾರಕ್ಕೆ ತಿಳಿಸುವುದಾಗಿ ಹೇಳಿದ್ದಾರೆ.

ತೀರ್ಪು ವಾಪಸ್‌ಗೆ ಸ್ವಾಮಿ ವಕೀಲರ ಕೋರಿಕೆ
ಈ ಮಧ್ಯೆ ಸುಬ್ರಮಣಿಯನ್‌ ಸ್ವಾಮಿ ಪರ ವಕೀಲ ಪವನ್‌ಚಂದ್ರ ಪ್ರತಿಕ್ರಿಯೆ ನೀಡಿ, ಹೈಕೋರ್ಟ್‌ ತೀರ್ಪಿನ ಪುಟಸಂಖ್ಯೆ 852ರಲ್ಲಿ ಜಯಲಲಿತಾ ಮತ್ತಿತರರ ಸಾಲದ ಲೆಕ್ಕಾಚಾರ ಹಾಕುವಾಗ ತಪ್ಪಾಗಿದೆ. ಈ ಲೆಕ್ಕಾಚಾರದ ಅನ್ವಯ ಕೋರ್ಟ್‌ ಆರೋಪಿಗಳ ಆದಾಯ ಮೀರಿದ ಆಸ್ತಿ ಶೇ. 8.12ರಷ್ಟಾಗುತ್ತದೆ ಎಂದು ಹೇಳಿದೆ. ತೀರ್ಪಿನಲ್ಲಿರುವ ಅಂಕಿ-ಅಂಶಗಳನ್ನೇ ಸರಿಯಾಗಿ ಲೆಕ್ಕ ಹಾಕಿದರೆ ಆದಾಯ ಮೀರಿದ ಆಸ್ತಿಯ ಪ್ರಮಾಣ ಶೇ. 76ಕ್ಕಿಂತ ಹೆಚ್ಚಾಗಿದೆ. ಹೀಗಾಗಿ ತೀರ್ಪು ಹಿಂದಕ್ಕೆ ಪಡೆಯುವಂತೆ ನ್ಯಾಯಾಲಯನ್ನು ಕೋರಲಾಗುವುದು. ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆ ಎಂದು ಹೇಳಿದ್ದಾರೆ.

ಸಂತೋಷ ತಾಳಲಾರದೆ ಜಯಾ ಅಭಿಮಾನಿ ಸಾವು!
ಕೊಯಮತ್ತೂರು: ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಲಲಿತಾರನ್ನು ಕೋರ್ಟ್‌ ಖುಲಾಸೆ ಮಾಡಿದ ಹಿನ್ನೆಲೆಯಲ್ಲಿ ಅತೀವವಾಗಿ ಸಂತೋಷಗೊಂಡ ಪಕ್ಷದ ಕಾರ್ಯಕರ್ತನೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಕೊಯಮತ್ತೂರಿನ ಇಡಿಯಕರೈ ಘಟಕದ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌. ಪಳನಿಸಾಮಿ (50), ಕರ್ನಾಟಕ ಹೈಕೋರ್ಟ್‌ ಜಯಲಲಿತಾರನ್ನು ಖುಲಾಸೆ ಮಾಡಿದ ಸುದ್ದಿಯನ್ನು ಟೀವಿಯಲ್ಲಿ ನೋಡುತ್ತಿದ್ದರು, ಅಮ್ಮಾ ವಿಜಯವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂದು ಹೇಳುತ್ತಾ ಕೆಲ ಕ್ಷಣಗಳಲ್ಲೇ ಪ್ರಾಣ ಬಿಟ್ಟರು ಎಂದು ಇಡಿಯಕರೈ ಪುರಸಭೆ ಸದಸ್ಯ ಜಿ. ಶಿವಕುಮಾರ್‌ ತಿಳಿಸಿದರು.
-ಉದಯವಾಣಿ

Write A Comment