ಕರ್ನಾಟಕ

ಉತ್ಕಟ ಜೀವನ ಪ್ರೀತಿಯಿಂದ…

Pinterest LinkedIn Tumblr

kbec02medha_0

-ಪೃಥ್ವಿರಾಜ್ ಎಂ.ಎಚ್
ಯುವ ಸಾಮಾಜಿಕ ಸೇವಾಕರ್ತ ಓಂಕೇಶ್‌ ಮಿಶ್ರಾ ಅವರು ಸ್ಥಾಪಿಸಿದ ಮೇಧಾ ಎಂಬ ಸ್ವಯಂ ಸೇವಾ ಸಂಸ್ಥೆಯ ಯಶಸ್ವಿ ಸಾಧನೆಯ ಕಥೆ ಇದು. ಹೈದರಾ ಬಾದ್‌ ಭಾಗದಲ್ಲಿ ಮೇಧಾ ಸಂಸ್ಥೆ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಗ್ರಾಮೀಣ ಪ್ರದೇಶ ಮತ್ತು ನಗರದಲ್ಲಿ ರುವ ಬಡವರ ಜೀವನ ಮಟ್ಟ ಸುಧಾರಿಸುವುದು ಹಾಗೂ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಉದ್ಯೋಗ ದೊರಕಿಸಿಕೊಡುವುದು ಮೇಧಾ ಸಂಸ್ಥೆಯ ಮುಖ್ಯ ಉದ್ದೇಶಗಳು.

ಕೃಷಿ, ಸಣ್ಣ ವ್ಯಾಪಾರಕ್ಕೆ ಆದ್ಯತೆ ನೀಡಿ ಹತ್ತು ಸಾವಿರ ಜನರಿಗೆ ಕಿರು ಸಾಲ ನೀಡಲಾಗಿದೆ. ಕೌಶಲ್ಯ ಅಭಿವೃದ್ಧಿ ತರಬೇತಿ ಘಟಕದ ಮೂಲಕ ನಿರುದ್ಯೋಗಿ ಯುವಕರಿಗೆ ತರ ಬೇತಿ ನೀಡಿ ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ. ಕೇವಲ 3 ವರ್ಷಗಳ ಹಿಂದೆ ಆರಂಭವಾದ ಈ ತರಬೇತಿ ಸಂಸ್ಥೆಯಿಂದ 20 ಸಾವಿರ ಯುವಕರು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮೇಧಾ ಸಂಸ್ಥೆಯ ಬೆಳವಣಿಗೆ ಹಿಂದೆ ಮಿಶ್ರಾ ಮತ್ತು ಗೆಳೆಯರ ಪರಿಶ್ರಮ ವಿದೆ. ವಿದ್ಯಾರ್ಥಿ ಜೀವನದಲ್ಲಿ ತಾನು ಅನುಭವಿಸಿದ ಸಂಕಷ್ಟಗಳೇ ಈ ಸಂಸ್ಥೆ ಹುಟ್ಟಲು ಕಾರಣ ಎನ್ನುತ್ತಾರೆ ಮಿಶ್ರಾ.

‘ನಾವು ಉತ್ತರ ಭಾರತದಿಂದ ವಲಸೆ ಬಂದು ಹೈದರಾಬಾದ್‌ ಸಮೀಪದ ಗ್ರಾಮದಲ್ಲಿ ವಾಸವಿ ದ್ದೆವು. ಅಪ್ಪ ಸಣ್ಣ ವ್ಯಾಪಾರಿ. ಅವರೊಬ್ಬರ ದುಡಿಮೆ, ಐದಾರು ಜನ ಕುಳಿತು ತಿನ್ನುವ ಪರಿಸ್ಥಿತಿ. ನಾನು ಆರ್ಥಿಕ ಸಂಕಷ್ಟದಲ್ಲೇ ಪದವಿ ಮುಗಿಸಿದೆ. ಸ್ವಯಂ ಸೇವಾ ಸಂಸ್ಥೆಗಳಿಂದ ವಿದ್ಯಾರ್ಥಿ ವೇತನ ಪಡೆದು ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಹೈದರಾಬಾದ್‌ಗೆ ಮರಳಿದೆ. ನನ್ನೂರಿನ ಬಡವರು, ವಿದ್ಯಾರ್ಥಿಗಳು ಹಾಗೂ ಯುವಕರಿಗೆ ನೆರವಾಗ ಬೇಕೆಂಬ ನಿಟ್ಟಿನಲ್ಲಿ ಮೇಧಾ ಸಂಸ್ಥೆ ಕಟ್ಟಿ ಕೆಲಸ ಮಾಡುತ್ತಿದ್ದೇನೆ, ಹಂತ ಹಂತವಾಗಿ ಸಂಸ್ಥೆಯ ಯೋಜನೆಗಳನ್ನು ದೇಶದ ಎಲ್ಲಾ ಭಾಗಕ್ಕೂ ವಿಸ್ತರಿಸುವ ಉದ್ದೇಶವಿದೆ’ ಎಂದು ಮಿಶ್ರಾ ಹೇಳುತ್ತಾರೆ.  www.medha.org
*
ರತಿಕಾ ರಾಮಸ್ವಾಮಿ
ಮದಿಸಿದ ಮದಕರಿಗಳ ಕಾಳಗ, ನೀರಿನಲ್ಲಿ ಮೊಸಳೆಯೊಂದು ಬಿಸಿ ರಕ್ತದ ಕಾಡುಕೋಣ ವನ್ನು ನುಂಗುತ್ತಿರುವುದು, ಹಸಿದ ಹೆಬ್ಬುಲಿ ಬಾಯಿ ತೆರೆದು ಬೇಟೆಗೆ ಕಾಯುತ್ತಿರುವುದು, ಚಿರತೆ ಚಿಗರೆಗಾಗಿ ಹೊಂಚು ಹಾಕುತ್ತಿರುವ ಮೈನವಿರೇಳಿಸುವಂತಹ ಚಿತ್ರಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿವೆ. ಇಂತಹ ಚಿತ್ರಗಳನ್ನು ಕ್ಲಿಕ್ಕಿಸಲು ಗಂಡೆದೆ ಇರಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಪ್ರಾಣದ ಹಂಗು ತೊರೆದು ಈ ಚಿತ್ರಗಳನ್ನು ಸೆರೆ ಹಿಡಿದವರು ಗಂಡೆದೆ ಇರುವ ಯುವತಿ ರತಿಕಾ ರಾಮಸ್ವಾಮಿ.

ಅತಿ ಕಿರಿಯ ವಯಸ್ಸಿಗೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ರತಿಕಾ ಭಾರತದ ಮೊಟ್ಟ ಮೊದಲ ಮಹಿಳಾ ವನ್ಯಜೀವಿ ಛಾಯಾಗ್ರಾಹಕಿ ಎಂಬ ಖ್ಯಾತಿ ಪಡೆದಿದ್ದಾರೆ. ದೆಹಲಿ ಮೂಲದ ರತಿಕಾ ಎಂಜಿನಿಯರಿಂಗ್‌ ಮತ್ತು ಎಂಬಿಎ ಪದವಿ ಪಡೆದಿದ್ದಾರೆ. ಐದಾರು ವರ್ಷ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಕೆಲಸ ಮಾಡಿ ಇಂದು ಫೋಟೊಗ್ರಫಿಯನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ.

ರತಿಕಾಗೆ ಫೋಟೊಗ್ರಫಿ ಮೇಲೆ ಒಲವು ಮೂಡಿದ್ದು ಅಪ್ಪ ಕೊಡಿಸಿದ ಒಂದು ಪುಟ್ಟ ಕ್ಯಾಮೆರಾದಿಂದ. ಆ ಕ್ಯಾಮೆರಾ ರತಿಕಾ ಜೀವನದ ಒಂದು ಭಾಗವೇ ಆಗಿ ಹೋಯಿತು. ಕೆಲಸಕ್ಕೆ ಗುಡ್‌ಬೈ ಹೇಳಿದ ಮೇಲೆ ಕ್ಯಾಮೆರಾ ಹಿಡಿದು ಕಾಡು ಸುತ್ತಲು ಹೊರಟರು. ಇಲ್ಲಿವರೆಗೂ ಹತ್ತು ಸಾವಿರ ವನ್ಯಜೀವಿ ಚಿತ್ರಗಳನ್ನು ಸೆರೆ ಹಿಡಿದಿರುವ ಹೆಗ್ಗಳಿಕೆ ಇವರದ್ದು. ಕೂದಲೆಳೆ ಅಂತರದಲ್ಲಿ ಕಾಡು ಪ್ರಾಣಿಗಳಿಂದ ತಪ್ಪಿಸಿ ಕೊಂಡ ಉದಾಹರಣೆಗಳು ಸಾಕಷ್ಟಿವೆ.

ಹೀಗೆ ಹಲವಾರು ಸಂಕಷ್ಟಗಳ ನಡುವೆಯು ರತಿಕಾ ಫೋಟೊಗ್ರಫಿಯನ್ನು ಅಪ್ಪಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ವನ್ಯಜೀವಿ ಛಾಯಾ ಚಿತ್ರ ಪ್ರದರ್ಶನಗಳನ್ನು ಏರ್ಪಡಿಸಿದ್ದಾರೆ. ಮಹಿಳೆಯರಲ್ಲಿ ಧೈರ್ಯ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಾಗಾರಗಳನ್ನು ಆಯೋಜಿಸಿದ್ದಾರೆ. ಒಟ್ಟಿನಲ್ಲಿ ರತಿಕಾಗೆ ಇದೇ ಕ್ಷೇತ್ರದಲ್ಲಿ ಉನ್ನತವಾದುದನ್ನು ಸಾಧಿಸುವ ಹಂಬಲ.­
*
ಅರುಲ್‌ ಮುರುಗನ್‌
ತಮಿಳುನಾಡು ಮೂಲದ ಮುರುಗನ್‌ ಅವರ ಸಾಧನೆ ಹಿಂದೆ ಅಪರಿಮಿತ ಶ್ರಮವಿದೆ. ಮುರುಗನ್‌ ಅವರದ್ದು ಮಧ್ಯಮ ವರ್ಗದ ರೈತಾಪಿ ಕುಟುಂಬ. ಸಹಜವಾಗಿ ಮುರುಗನ್‌ಗೆ ಕೃಷಿ ಮೇಲೆ ಅಪಾರ ಪ್ರೀತಿ. ಇದೇ ಕ್ಷೇತ್ರದಲ್ಲಿ ಏನಾ ದರೂ ಸಾಧಿಸಿ ರೈತರಿಗೆ ನೆರವಾಗ ಬೇಕೆಂಬ ಹಂಬಲ. ಹಾಗಾಗಿಯೇ ಕೃಷಿ ಪದವಿ ಪಡೆದರು. ಜೀವನ ನಿರ್ವಹಣೆಗೆ ಕೆಲಸಕ್ಕೆ ಸೇರಲೇ ಬೇಕಾದ ಅನಿವಾರ್ಯತೆ.

ಕಾರ್ಪೊರೇಟ್‌ ಕಂಪೆನಿ ಯಲ್ಲಿ ಕೆಲಸಕ್ಕೆ ಸೇರಿದರು. ಆದರೂ ಉದ್ಯಮಿಯಾಗಬೇಕೆಂಬ ಕನಸು ಬತ್ತಲಿಲ್ಲ. ಗೆಳೆಯರ ಜೊತೆ ಸೇರಿ ಕುರುಕಲು ತಿನಿಸುಗಳು, ಹಣ್ಣಿನ ಬೀಜಗಳು, ಹಣ್ಣುಗಳು ಮತ್ತು ಒಣಗಿದ ಹಣ್ಣುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಕಂಪೆನಿ ಆರಂಭಿಸಬೇಕೆಂದು ನಿರ್ಧರಿಸಿ ಕೆಲಸಕ್ಕೆ ರಾಜೀನಾಮೆ ನೀಡಿದರು. ಕೇವಲ ₹ 2.6 ಲಕ್ಷ ಬಂಡವಾಳದೊಂದಿಗೆ ‘ಕ್ಲೋರೊಪ್ಲಾಸ್ಟ್‌ಫುಡ್ಸ್‌’ ಎಂಬ ಕಂಪೆನಿ ಆರಂಭಿಸಿದರು. ಆನ್‌ಲೈನ್‌ ಮಾರಾಟಕ್ಕೆ snackexperts.com ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡರು.

ಇವರ ಕಂಪೆನಿಯ ವ್ಯಾಪಾರ ಗಮನಿಸಿದ ಕೆಲ ವಿದೇಶಿ ಕಂಪೆನಿಗಳು ಕುರುಕಲು ತಿಂಡಿ ಮತ್ತು ಹಣ್ಣುಗಳನ್ನು ಪೂರೈಸುವಂತೆ ಬೇಡಿಕೆ ಇಟ್ಟವು. ಹಾಗಾಗಿ ಕಂಪೆನಿಯ ವಹಿವಾಟು ಒಂದೇ ವರ್ಷಕ್ಕೆ ಗಣನೀಯ ಹೆಚ್ಚಿತ್ತು. ‘ನಮ್ಮ ಕಂಪೆನಿ ಮಧ್ಯವರ್ತಿಗಳನ್ನು ದೂರ ಇಟ್ಟು ರೈತರ ಬೆಳೆಗಳಿಗೆ ಉತ್ತಮ ಬೆಲೆ ನೀಡುತ್ತೇವೆ ಹಾಗೂ ಗ್ರಾಹಕರಿಗೂ ಕಡಿಮೆ ದರದಲ್ಲಿ ತಿನಿಸುಗಳನ್ನು ಸರಬರಾಜು ಮಾಡುತ್ತೇವೆ’ ಎನ್ನುತ್ತಾರೆ ಮುರುಗನ್‌.

Write A Comment