ಕರ್ನಾಟಕ

ಫಿನಿಕ್ಸ್ ಮಾರ್ಕೆಟ್ ಸಿಟಿ ‘ನೋ ಹಾಂಕಿಂಗ್’ (ಹಾರ್ನ್ ಬೇಡ) ವಿಶೇಷ ಕಲಾಪ್ರದರ್ಶನ

Pinterest LinkedIn Tumblr

psmec01Art Rahul_0

ಬೆಂಗಳೂರಿನಂತಹ ಮೆಟ್ರೊ ನಗರಗಳಲ್ಲಿ ವಾಹನ ದಟ್ಟಣೆ ಒಂದು ಬೃಹತ್ ಸಮಸ್ಯೆಯಾಗಿ ಬೆಳೆದು ನಿಂತಿದೆ. ರಸ್ತೆಯ ಮೇಲೆ ಹೆಜ್ಜೆ ಹಾಕುತ್ತಿದ್ದರೆ ಹೃದಯವೇ ಕೈಗೆ ಬಂದಂತಹ ಸ್ಥಿತಿಗೆ ಸಿಲುಕುತ್ತೇವೆ. ಈ ವಾಹನಗಳು ಉಗುಳುವ ಹೊಗೆ ಹಾಗೂ ವಿನಾಕಾರಣ ಕಿವಿ ಗಡಚಿಕ್ಕುವ ಹಾರ್ನ್‌ಗಳ ಹಿಂಸೆಯಿಂದ ಟ್ರಾಫಿಕ್ ಎಂದರೆ ಜನ ಬೆಚ್ಚಿ ಬೀಳುವಂತಾಗಿದೆ.

ಅತಿಯಾದ ಹಾರ್ನ್‌ ಶಬ್ದಗಳ ಕಾಟ ನಗರ ಜೀವನದಲ್ಲಿ ಒಂದು ರೀತಿಯ ಮನೋವೇದನೆಯನ್ನು ಹುಟ್ಟುಹಾಕುತ್ತಿದೆ. ಇದು ನಮ್ಮ ದೈಹಿಕ, ಮಾನಸಿಕ ಆರೋಗ್ಯದ ಮೇಲೂ ಹಾಗೂ ಪರಿಸರದ ಮೇಲೂ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತಿದೆ. ದಾರಿಯಲ್ಲಿ ಹೋಗುತ್ತಿದ್ದರೆ, ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ, ಅಷ್ಟೇ ಏಕೆ ಮನೆಯಲ್ಲಿ ಮಲಗಿದಾಗಲೂ ಬೆನ್ನು ಬಿಡದ ಈ ಹಾರ್ನ್ ಸದ್ದಿನಿಂದ ತಪ್ಪಿಸಿಕೊಳ್ಳುವುದು ಕಷ್ಟ.

ಮೆಟ್ರೊ ನಗರಗಳ ಈ ದುರಂತವನ್ನು ಗಮನದಲ್ಲಿಟ್ಟುಕೊಂಡು ನಗರದ ಫಿನಿಕ್ಸ್ ಮಾರ್ಕೆಟ್ ಸಿಟಿ ‘ನೋ ಹಾಂಕಿಂಗ್’ (ಹಾರ್ನ್ ಬೇಡ) ಎನ್ನುವ ವಿಶೇಷ ಕಲಾಪ್ರದರ್ಶನವನ್ನು ಏರ್ಪಡಿಸಿದೆ. ಬರೋಡಾ ಸ್ಕೂಲ್ ಆಫ್ ಆರ್ಟ್ಸ್‌ನ 19 ವಿದ್ಯಾರ್ಥಿಗಳು ವಾಹನಗಳ ಹಾರ್ನ್‌ನಿಂದ ಉಂಟಾಗುವ ಮಾನಸಿಕ ಕಿರಿಕಿರಿಯನ್ನು ವಿವಿಧ ರೂಪಗಳಲ್ಲಿ ಅಭಿವ್ಯಕ್ತಿಸಿದ್ದಾರೆ.

ಈ ಕಿರಿಕಿರಿ, ಸದ್ದು–ಗದ್ದಲದ ಅಗತ್ಯವಿದೆಯೇ? ಇಲ್ಲ ಎಂದಾದರೆ ನಾವೆಲ್ಲ ಏಕೆ ಅದನ್ನು ತಡೆಯುವ ಪ್ರಯತ್ನ ಮಾಡುತ್ತಿಲ್ಲ? ತಡೆಯುವುದಾದರೂ ಹೇಗೆ? ಇನ್ನೆಷ್ಟು ಕಾನೂನು ಮಾಡುವುದು? ಕಾನೂನನ್ನು ಮುರಿಯುವುದು ಹೊಸದೇನಲ್ಲ, ಹಾಗಿದ್ದರೆ ಅನ್ಯ ಮಾರ್ಗವೇನಿದೆ? ಕಲಾ ಪ್ರದರ್ಶನಗಳ ಮೂಲಕ ಇಂಥದ್ದೊಂದು ಸಾಮಾಜಿಕ ಬದಲಾವಣೆ ತರಬಹುದೇ? ಎನ್ನುವಂತಹ ಹಲವಾರು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಈ ಬಾರಿಯ ‘ಬೇಡ ಹಾರ್ನ್’ ಕಲಾ ಪ್ರದರ್ಶನ ನಡೆಯುತ್ತಿದೆ. ಹಾರ್ನ್ ತಂದೊಡ್ಡುವ ವ್ಯತಿರಿಕ್ತ ಪರಿಣಾಮಗಳ ಕುರಿತು ಸಂದೇಶ ಸಾರುವ ಬರೋಡಾ ಸ್ಕೂಲ್ ಆಫ್ ಆರ್ಟ್ ಶಾಲೆಯಿಂದ 19 ವೃತ್ತಿಪರ ಕಲಾವಿದರು ಚಿತ್ರಿಸಿರುವ ವರ್ಣಚಿತ್ರಗಳು ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿವೆ.
***
ಕಲೆಯಿಂದ ಬದಲಾವಣೆ ಸಾಧ್ಯ
ಫಿನಿಕ್ಸ್ ಮಾರ್ಕೆಟ್ ಸಿಟಿ ಪ್ರತಿ ಮೂರು ತಿಂಗಳಿಗೊಮ್ಮೆ ಒಂದು ಮಾನವ ಆಸಕ್ತಿಯ/ಸಾಮಾಜಿಕ  ವಿಷಯವನ್ನಿಟ್ಟುಕೊಂಡು ಕಲಾ ಪ್ರದರ್ಶನ ಏರ್ಪಡಿಸುವ ಸಿದ್ಧತೆಯಲ್ಲಿದೆ. ದೇಶದ ವಿವಿಧ ಭಾಗಗಳ ಒಂದೊಂದು ಕಲಾ ಶಾಲೆಗಳಿಂದ ಆಯ್ದ ಕಲಾವಿದರ ಕಲಾ ಪ್ರದರ್ಶನ ಸಂಘಟಿಸುವ ಯೋಜನೆ ಇದೆ. ಈ ಯೋಜನೆಯ ಮೊದಲ ಹೆಜ್ಜೆಯೇ ಈ ಕಲಾ ಪ್ರದರ್ಶನ. ಬಹುತೇಕ ಎಲ್ಲಾ ಮೆಟ್ರೊ ನಗರಗಳ ಸ್ಥಿತಿ ಒಂದೇ. ಶಬ್ದ ಮಾಲಿನ್ಯ ನಗರ ಜೀವನವನ್ನು ನರಕ ಮಾಡುತ್ತಿದೆ. ಇದರ ಪರಿಣಾಮಗಳ ಬಗ್ಗೆ ಸಾರ್ವಜನಿಕರ ಗಮನ ಸೆಳೆಯುವುದೇ ಈ ಪ್ರದರ್ಶನದ ಉದ್ದೇಶ ಎನ್ನುತ್ತಾರೆ ಸಂಘಟಕರು.

***
ಟ್ರಾಫಿಕ್ ಶಾಂತಿಯ ಬದ್ಧತೆ
ಯುದ್ಧಕಾಲದಲ್ಲಿ ಶಾಂತಿಯ ಸಂದೇಶ ಸಾರಿದ ಬುದ್ಧ. ಆದರೆ ಇಂದು ಟ್ರಾಫಿಕ್‌ ಶಾಂತಿಗಾಗಿ ನಾವೆಲ್ಲ ಪ್ರಾರ್ಥಿಸಬೇಕಾದ ಸಮಯ ಬಂದಿದೆ. ಅನಗತ್ಯ ಹಾರ್ನ್ ಹಾಕದೇ ರಸ್ತೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ನಾಗರಿಕ ಕರ್ತವ್ಯಗಳಲ್ಲಿ ಒಂದು ಎನ್ನುವುದು ರಾಹುಲ್ ಮುಖರ್ಜಿ ಚಿತ್ರದ ಸಂದೇಶ.
***
ನಾಯಿಯನ್ನು ಕಟ್ಟಿ
ಕಲಾವಿದ ಕೇತನ್ ಅಮಿನ್ ಅವರ ಈ  ಕ್ಯಾನ್ವಾಸ್ ಮೇಲಿನ ಆಕ್ರಿಲಿಕ್ ವರ್ಣಚಿತ್ರದಲ್ಲಿ ಹಾರ್ನ್ ಅನ್ನು ಅನಗತ್ಯವಾಗಿ ಬೊಗಳುವ ನಾಯಿಯ ಕಂಠಕ್ಕೆ ಹೋಲಿಸಲಾಗಿದೆ. ನಾಯಿಯ ಬಾಯಿಯಿಂದ ಬಾಣದ ರೂಪದಲ್ಲಿ ಬಂದು ಕಿವಿಗೆ ಚುಚ್ಚುವ ಈ ಹಾರ್ನ್ ಎನ್ನುವ ಖಳನನ್ನು ನಿಯಂತ್ರಿಸವರು ಯಾರು, ಹಾರ್ನ್ ಎನ್ನುವ ನಾಯಿಯನ್ನು ಕಟ್ಟಿ ಹಾಕಿ ಶಾಂತಿ ಕಾಪಾಡುವುದು ಯಾವಾಗ ಎಂಬ ಪ್ರಶ್ನೆ ಚಿತ್ರದಲ್ಲಿದೆ.
***
ಚಿಲಿಪಿಲಿ ದನಿ ಎಲ್ಲಿ
ಪ್ರಾಂತಿಕ್ ಚಟ್ಟೋಪಾಧ್ಯಾಯ ಅವರ ಈ ತೈಲಚಿತ್ರ ನಾವು ಹೇಗೆ ಪಕ್ಷಿ ಸಮುದಾಯದ ಇಂಪಾದ ದನಿಯಿಂದ ವಂಚಿತರಾಗುತ್ತ  ಶ್ರವಣ ಶಕ್ತಿಗೆ ಮಾರಕವಾದ ಹಾರ್ನ್ ಶಬ್ದಗಳಿಗೆ ಅನಿವಾರ್ಯವಾಗಿ ತೆರೆದುಕೊಂಡಿದ್ದೇವೆ ಎನ್ನುವ ದುರಂತವನ್ನು ಸಾರುವಂತಿದೆ. ನಮ್ಮ ದಿನವನ್ನು ನಾವು ಹಕ್ಕಿಗಳ ಇಂಚರದ ಬದಲು ವಾಹನಗಳ ಕರ್ಕಶವಾದ ಹಾರ್ನ್‌ಗಳ ಶಬ್ದದಿಂದ ಆರಂಭಿಸುತ್ತಿದ್ದೇವೆ ಎನ್ನುವುದು ಈ ಕಲಾವಿದನ ಸಂಕಟ.
***
ನಾಗರಿಕರಾಗೋಣ
ನಮ್ಮ ದೇಶ ತಾಂತ್ರಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿರಬಹುದು. ಆದರೆ ನಾಗರಿಕ ಕರ್ತವ್ಯಗಳ ವಿಷಯದಲ್ಲಿ ನಾವಿನ್ನೂ ಬಹಳ ಹಿಂದಿದ್ದೇವೆ. ಶಾಲೆ, ಕಾಲೇಜು, ಆಸ್ಪತ್ರೆಗಳನ್ನೂ ಲೆಕ್ಕಿಸದೇ ಅನಗತ್ಯವಾಗಿ ಹಾರ್ನ್ ಹಾಕುತ್ತ ಸುತ್ತ–ಮುತ್ತಲಿನ ಶಾಂತಿಯನ್ನು ನಾಶ ಮಾಡುವುದು ನಮಗೆ ನಾಚಿಕೆ ಅನಿಸುವುದಿಲ್ಲ ಏಕೆ? ಎನ್ನುವುದು ಕಲಾವಿದೆ ಪೂರ್ವಾ ನಿಮ್ಕರ್ ಅವರ ಕಳವಳ.
***
ಸ್ಥಳ: ಫಿನಿಕ್ಸ್ ಮಾರ್ಕೆಟ್‌ಸಿಟಿ, 2ನೇ ಮಹಡಿ, ವೈಟ್‌ಫಿಲ್ಡ್ ರಸ್ತೆ.
ದಿನಾಂಕ: ಏಪ್ರಿಲ್ 12ರವರೆಗೆ
ಸಮಯ: ಬೆಳಿಗ್ಗೆ 11ರಿಂದ ರಾತ್ರಿ 9
(ಉಚಿತ ಪ್ರವೇಶ)

Write A Comment