ಇಂದು ಬೆಳಿಗ್ಗೆ ಅಥವಾ ಸಂಜೆ ಸಮಯ ಸಿಕ್ಕಾಗ ಹಾಗೇ ಸುಮ್ಮನೇ ತಾಜ್ ವೆಸ್ಟ್ ಎಂಡ್ ಹೋಟೆಲ್‌ನ ಆರ್ಟ್ ಕಾರಿಡಾರ್‌ನಲ್ಲಿ ಒಂದು ಸುತ್ತು ಹಾಕಿ ಬನ್ನಿ. ‘ಗ್ಯಾಲರಿ ಜಿ’ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಏರ್ಪಡಿಸಿರುವ ಲೆಸ್ಲಿ ಜಾನ್ಸನ್ ಅವರ ಆಕರ್ಷಕ ಬೊಟಾನಿಕಲ್ ಆರ್ಟ್ ಷೋ (ಸಸ್ಯವಿಜ್ಞಾನಕ್ಕೆ ಸಂಬಂಧಿಸಿದ ಪ್ರದರ್ಶನ) ನಿಮ್ಮ ಕಣ್ಮನಕ್ಕೆ ಹಿತಾನುಭವ ನೀಡುವುದು ಖಂಡಿತ.
‘ವಾಕ್ ದಿ ಗ್ರೀನ್ ಕಾರ್ಪೆಟ್’ ಇದು ಈ ಕಲಾವಿದ ಆಯ್ಕೆ ಮಾಡಿಕೊಂಡಿರುವ ವಿಷಯ. ಫ್ಯಾಷನ್ ಜಗತ್ತಿಗೆ ಸಂಬಂಧಿಸಿದ ‘ರೆಡ್ ಕಾರ್ಪೆಟ್’ ಪರಿಕಲ್ಪನೆಯೇ ಈ ಕಲಾವಂತಿಕೆಗೆ ಸ್ಫೂರ್ತಿ ಎನ್ನುತ್ತಾರೆ ಲೆಸ್ಲಿ ಜಾನ್ಸನ್. ‘ರೆಡ್ ಕಾರ್ಪೆಟ್ ಶ್ರೀಮಂತಿಕೆಯ, ವೈಭವದ, ಅದ್ದೂರಿಯ ಸಂಕೇತವಾದರೆ, ಗ್ರೀನ್ ಕಾರ್ಪೆಟ್ ನೈಸರ್ಗಿಕವಾದ, ಸರಳವೂ, ಅಪ್ಯಾಯಮಾನವೂ ಆದ ತಂಪನೆಯ ಭಾವನೆಗೆ ಸ್ಫೂರ್ತಿ’ ಎನ್ನುವುದು ಅವರು ನೀಡುವ ವಿವರಣೆ.
ಕಲಾವಿದನ ಕೈಯಲ್ಲಿ ಮೂಡಿ ಬಂದಿರುವ ಮರದ ಕೆತ್ತನೆಗಳು ಹಾಗೂ ಮರಗಳಲ್ಲಿ ಕಂಡು ಬರುವ ಗಂಟುಗಳ ಚಿತ್ರಗಳು ಈ ಪ್ರದರ್ಶನದ ಪ್ರಮುಖ ಆಕರ್ಷಣೆ. ಈ ಮೂಲಕ ಸಸ್ಯಗಳನ್ನು ಒಂದು ಮಾಧ್ಯಮವಾಗಿ ಹಾಗೂ ಪರಿಸರಕ್ಕೆ ಸಂಬಂಧಪಟ್ಟಂತಹ ಸಂದೇಶಗಳನ್ನು ಪರಿಣಾಮಕಾರಿಯಾಗಿ ಹರಡುವ ಪ್ರಯತ್ನ ಅವರದು.
‘ವಾಕ್ ದಿ ಗ್ರೀನ್ ಕಾರ್ಪೆಟ್’ ಒಂದು ಸಾರ್ವಜನಿಕ ಪ್ರದರ್ಶನವಾಗಿದ್ದು, ಮನರಂಜನಾ ಕ್ಷೇತ್ರದೊಂದಿಗೆ ಸಹಯೋಗ ಹೊಂದಿರುವ ತನ್ನದೇ ಆದ ಸೌಂದರ್ಯಶಾಸ್ತ್ರವನ್ನು ಆಧರಿಸಿದೆ. ಈ ಪ್ರದರ್ಶನಕ್ಕೆ ಆಗಮಿಸುವ ಪ್ರೇಕ್ಷಕರಿಗೆ ನಿಸರ್ಗದ ಮಧ್ಯೆ ನಡೆಯುವ ಭಾವನೆಯನ್ನು ಉಂಟುಮಾಡುವುದೇ ಈ ಪ್ರದರ್ಶನದ ಪ್ರಮುಖ ಗುರಿ ಎನ್ನುತ್ತಾರೆ ಕಲಾವಿದ.
ಕಲೆ ಕೇವಲ ಪ್ರದರ್ಶನವಲ್ಲ
ಇಂದ್ರಿಯಗಳಿಗೆ ಲೆಸ್ಲಿ ಜಾನ್ಸನ್ ಅವರಂತಹ ವಿಶ್ವವಿಖ್ಯಾತ ಕಲಾವಿದೆಯ ಕಲಾ ಪ್ರದರ್ಶನವನ್ನು ನಮ್ಮ ನಗರದ ಜನತೆಯ ಮುಂದಿಡುತ್ತಿರುವುದಕ್ಕೆ ಸಂತಸವಿದೆ. ಕಲೆ ಕೇವಲ ಒಂದು ಪ್ರದರ್ಶನವಲ್ಲದೇ, ಇಂದ್ರಿಯಗಳಿಗೆ ಆನಂದವನ್ನು ಒದಗಿಸುವ, ಮನಸ್ಸಿಗೆ ಮುದ ನೀಡುವ ಒಂದು ಒಪರೂಪದ ಅನುಭೂತಿಯಾಗಿದೆ. ಇದು ಭಾರತದ ಮೊಟ್ಟ ಮೊದಲ ಸಸ್ಯವಿಜ್ಞಾನಕ್ಕೆ ಸಂಬಂಧಪಟ್ಟಂತಹ ಸಾರ್ವಜನಿಕ ಚಿತ್ರಕಲಾ ಪ್ರದರ್ಶನ ಎನ್ನುವುದು ಇನ್ನೊಂದು ಹೆಮ್ಮೆ. ಅಲ್ಲದೇ, ಇಲ್ಲಿ ಪ್ರದರ್ಶನಗೊಳ್ಳುವ ಕಲಾಕೃತಿಗಳು ಮಾರಾಟಕ್ಕಿಲ್ಲ. ಅಸಾಂಪ್ರದಾಯಿಕ ವಿಧಾನಗಳ ಮೂಲಕ ಜನರನ್ನು ಶಿಕ್ಷಿತರನ್ನಾಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
-ಗೀತಾಂಜಲಿ ಮೈನಿ, ಗ್ಯಾಲರಿ-ಜಿ
ಅವರ ಸಾವಿರಾರು ಮರದ ಕೆತ್ತನೆಗಳಿಂದ ಮೂಡಿ ಬಂದಿರುವಂತಹ ಈ ಗ್ರೀನ್ ಕಾರ್ಪೆಟ್ ಮರದ ಸ್ಥಾಪನೆಗಳು, ಹಸಿರು ಬಣ್ಣದ ವಿವಿಧ ಛಾಯೆಗಳಿಂದ ಕೂಡಿದ್ದು, ಕಲಾಪ್ರೇಮಿಗಳಿಗೆ ಹಸಿರುವ ಜಗತ್ತಿನ ಮೋಹಕ ಅನುಭವವನ್ನು ಕಟ್ಟಿಕೊಡುತ್ತದೆ.
ಇಲ್ಲಿ ಪ್ರದರ್ಶನಗೊಳ್ಳುವ ಪ್ರಮುಖ ಸ್ಥಾಪನೆಗಳ ಪೈಕಿ ವಾಲ್ ಆಫ್ ನಾಟ್ಸ್ ಒಂದು ಮುಖ್ಯ ಆಕರ್ಷಣೆಯಾಗಿದ್ದು, ನಿಸರ್ಗದಲ್ಲಿರುವ ವಿವಿಧ ಮರಗಳ ಗಂಟುಗಳ ಚಿತ್ರಗಳ ಜೋಡಣೆಯಾಗಿದೆ. ವಾಸ್ತವದಲ್ಲಿ ಇದು ಮರಗಳ ಕೊಂಬೆಗಳನ್ನು ವರ್ಗೀಕರಿಸುವ ಹಾಗೂ ಅವುಗಳಿಗೆ ಹೊಸ ದಿಕ್ಕುಗಳನ್ನು ನೀಡುವಂತಹ ಬಿಂದುಗಳಾಗಿವೆ ಎನ್ನುವುದು ಅವರ ವಿವರಣೆ.
ಜನಪ್ರಿಯ ಕಲಾಕೃತಿ
ಅಮೆರಿಕದ ಕನೆಕ್ಟಿಕಟ್‌ನ ಚಿತ್ರಕಲಾಶಾಸ್ತ್ರದಲ್ಲಿ ತರಬೇತಿ ಪಡೆದ ನಂತರ ಕಲಾವಿದೆ ಲೆಸ್ಲಿ ಜಾನ್ಸನ್ ಅವರು ಸ್ವೀಡನ್, ಮಾಸ್ಕೊ ಹಾಗೂ ನ್ಯೂಯಾರ್ಕ್‌ಗಳಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದರು. ನ್ಯೂಯಾರ್ಕ್ ನಗರದಲ್ಲಿ, ‘ಡೇಸ್ ಟು ಗೋ’ ಎಂಬ ಶೀರ್ಷಿಕೆಯಡಿ ಪ್ರದರ್ಶನಗೊಂಡ ಈಕೆಯ ಚಿತ್ರಕಲೆಗಳು, ಬೆಂಗಳೂರಿನಲ್ಲಿ ಕ್ಯಾಸ್ಟಿಂಗ್ ಇನ್/ಕ್ಯಾಸ್ಟಿಂಗ್ ಔಟ್ ಹಾಗೂ ಗೋಟೆಬಾರ್ಗ್‌ನಲ್ಲಿ ವಾಸ್ ಐ ಥಿಂಕಿಂಗ್ ಇನ್ ವುಡ್‌ಗ್ರೇನ್… ಅಥವಾ ಜಸ್ಟ್ ಬೋರ್‍ಡ್ ಇನ್ ದಿ ವಂಡರ್‌ಕ್ಯಾಮ್ಮರ್ ವಿಷಯ ಶೀರ್ಷಿಕೆಗಳಡಿ ಪ್ರದರ್ಶನಗೊಂಡ ಚಿತ್ರಕಲೆಗಳು ಅವರ ಜನಪ್ರಿಯ ಕಲಾಕೃತಿಗಳಾಗಿವೆ.
ಸ್ವೀಡನ್‌ನಲ್ಲಿ ನೇಚರ್: ಎ ಗುಡ್ ಐಡಿಯಾ ಹಾಗೂ ಸ್ವೀಡನ್‌ನ ಮೋಲ್ನ್‌ಡಲ್‌ನ ಅಗ್ರಿಕಲ್ಚರಲ್ ಹಿಸ್ಟರಿ ಮ್ಯೂಸಿಯಂನ ಹೊರಗೆ, ಹೊರಾಂಗಣ ಹಾಸಿನಂತೆ ಸ್ಥಾಪಿಸಲಾಗಿದ್ದ ವಾಕ್ ದಿ ಗ್ರೀನ್ ಕಾರ್ಪೆಟ್ ವಿಡಿಯೊ ಈ ಕಲಾವಿದೆಯ ಅದ್ಭುತ ಕಲೆಗಳ ಪೈಕಿ ಸೇರಿವೆ.
ಸ್ಥಳ: ಆರ್ಟ್ ಕಾರಿಡಾರ್, ತಾಜ್ ವೆಸ್ಟ್ ಎಂಡ್ ಹೋಟೆಲ್, ರೇಸ್ ಕೋರ್ಸ್.
ದಿನಾಂಕ: ಮಾರ್ಚ್ 27
ಸಮಯ: ಬೆಳಿಗ್ಗೆ 7. 30 ರಿಂದ 9. 30.