ಕರ್ನಾಟಕ

ಪ್ರಾದೇಶಿಕ ಭಾಷೆಗಳ ರಕ್ಷಣೆಗೆ ಪಕ್ಷಾತೀತ ಹೋರಾಟ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

bangalore

ಜೈನಕಾಶಿ ಶ್ರವಣಬೆಳಗೊಳದಲ್ಲಿ 81ನೇ ನುಡಿಹಬ್ಬಕ್ಕೆ ಅದ್ದೂರಿ ಚಾಲನೆ

ಶ್ರವಣಬೆಳಗೊಳ (ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆ),ಫೆ.1: ಶಿಕ್ಷಣದ ವ್ಯಾಪಾರೀಕರಣದಿಂದಾಗಿ ಪ್ರಾದೇಶಿಕ ಭಾಷೆಗಳು ಅವಸಾನದ ಅಂಚಿನಲ್ಲಿವೆ. ಇದನ್ನು ರಕ್ಷಣೆ ಮಾಡಬೇಕಾದರೆ ಶಾಸನಬದ್ಧವಾದ ಹೊಸ ಕಾನೂನು ಜಾರಿ ಮಾಡಬೇಕಾದ ಅಗತ್ಯವಿದ್ದು, ಸಂವಿಧಾನಕ್ಕೂ ತಿದ್ದುಪಡಿ ಮಾಡಬೇಕಾದ ಪರಿಸ್ಥಿತಿ ಅಗತ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣದ ಜೈನಕಾಶಿ ಶ್ರವಣಬೆಳಗೊಳದಲ್ಲಿಂದು ಆರಂಭವಾದ ಅಖಿಲ ಭಾರತ 81ನೆ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ತಮ್ಮ ಭಾಷಣದುದ್ದಕ್ಕೂ ಕನ್ನಡ ಭಾಷೆಗೆ ಬಂದಿರುವ ಅಪಾಯ, ಜನಪ್ರತಿನಿಧಿಗಳು, ಸಾಹಿತಿಗಳ ಕಳಕಳಿ, ಮಾತೃಭಾಷೆ ಉಳಿವಿಗೆ ಸರ್ಕಾರ ತೆಗೆದುಕೊಂಡಿರುವ ನಿಲುವು, ನಾಡು-ನುಡಿ ರಕ್ಷಣೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಘೋಷಣೆ ಮಾಡಿದರು.

ಇಂಗ್ಲಿಷ್ ಭಾಷೆಯ ಹೆಸರಿನಲ್ಲಿ ಇಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಾದೇಶಿಕ ಭಾಷೆಗಳ ಮೇಲೆ ಸವಾರಿ ಮಾಡುತ್ತಿವೆ. ಇದರಿಂದ ನಮ್ಮ ನೆಲದಲ್ಲೇ ಮಾತೃಭಾಷೆಗೆ ಅಪಾಯ ಬಂದಿದೆ. ಇದನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಕಿವಿಮಾತು ಹೇಳಿದರು.

ಪ್ರಾದೇಶಿಕ ಭಾಷೆಗಳ ರಕ್ಷಣೆಗಾಗಿ ಎಲ್ಲರೂ ಪಕ್ಷಭೇದ ಮರೆತು ಒಗ್ಗೂಡಬೇಕು. ಇದೇ ಬೇಡಿಕೆಯನ್ನು ಮುಂದಿಟ್ಟುಕೊಂಡು ನಮ್ಮ ಸರ್ಕಾರ ಈಗಾಗಲೇ ಸರ್ವಪಕ್ಷಗಳ ನಿಯೋಗದೊಂದಿಗೆ ಪ್ರಧಾನಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಅಲ್ಲದೆ, ಈ ಬಗ್ಗೆ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಪತ್ರ ಬರೆದಿದ್ದೇನೆ ಎಂದು ಹೇಳಿದರು.

ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡುವ ಉದ್ದೇಶದಿಂದಲೇ ನಮ್ಮ ಸರ್ಕಾರವು ಇತ್ತೀಚೆಗಷ್ಟೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ-2012ಕ್ಕೆ ತಿದ್ದುಪಡಿ ಮಾಡಿ ದಿಟ್ಟ ನಿರ್ಧಾರ ಕೈಗೊಂಡಿದೆ. ಈವರೆಗೂ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಮಕ್ಕಳ ಮಾತೃಭಾಷೆಯಲ್ಲಿರಬೇಕೆಂಬ ನಿಯಮವಿತ್ತು. ಇದನ್ನು ತಿದ್ದುಪಡಿ ಮಾಡಿ ಒಂದನೆ ತರಗತಿಯಿಂದ ಐದನೆ ತರಗತಿವರೆಗೂ ಶಿಕ್ಷಣವನ್ನು ಕಡ್ಡಾಯವಾಗಿ ಕನ್ನಡದಲ್ಲೇ ನೀಡಬೇಕೆಂಬ ಕಾಯ್ದೆಯನ್ನು ಜಾರಿ ಮಾಡಲಾಗಿದೆ ಎಂದು ಘೋಷಣೆ ಮಾಡಿದರು.

ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸುವ ಸುಪ್ರೀಂಕೋರ್ಟ್ ಆದೇಶವನ್ನು ರದ್ದುಪಡಿಸುವಂತೆ ಮನವಿ ಮಾಡಲಾಗಿದ್ದರೂ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಆದರೂ ನಮ್ಮ ಸರ್ಕಾರ ತಮಿಳುನಾಡು ಸರ್ಕಾರ ಮಾದರಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಸ್ಥಳೀಯ ಭಾಷೆಯಲ್ಲೇ ಕಡ್ಡಾಯಗೊಳಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರತಿಯೊಂದು ರಾಜ್ಯದಲ್ಲಿಯೂ ಆಯಾ ಸ್ಥಳೀಯ ಭಾಷೆಯೇ ಸಾರ್ವಭೌಮ ಭಾಷೆಯಾಗಬೇಕೆಂಬುದು ನಮ್ಮ ಸರ್ಕಾರದ ಆಶಯ. ಇದನ್ನು ಸಂವಿಧಾನವು ಕೂಡ ಅಂಗೀಕರಿಸಿದೆ. ಶಿಕ್ಷಣದಲ್ಲಿ ಆಯಾ ರಾಜ್ಯಗಳ ಭಾಷೆಗೆ ಪ್ರಾಮುಖ್ಯತೆ ನೀಡಬೇಕೆಂಬ ನಿಯಮವಿದೆ. ಬೇರೆ ಯಾವುದೇ ಭಾಷೆಯೂ ಸ್ಥಳೀಯ ಭಾಷೆಗಳ ಮೇಲೆ ಅಧಿಪತ್ಯ ಮೆರೆಯುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಸ್ಥಳೀಯ ಭಾಷೆಗಳ ಸ್ವಾಯತ್ತತೆಯನ್ನು ಉಳಿಸಿಕೊಂಡೇ ಬೇರೆ ಭಾಷೆಗಳಿಗೂ ಆದ್ಯತೆ ನೀಡಬೇಕು. ಕರ್ನಾಟಕದಲ್ಲಿ ಎಲ್ಲ ಭಾಷೆಗಳನ್ನಾಡುವ ಸಮುದಾಯದವರಿದ್ದಾರೆ. ಆದರೆ, ಇಂಗ್ಲಿಷ್ ಈ ನೆಲದ ಮಾತೃಭಾಷೆಯಲ್ಲ. ಶೇ.0.5ಕ್ಕಿಂತಲೂ ಕಡಿಮೆ ಮಾತನಾಡುವಷ್ಟು ಇರಬಹುದು. ಆದರೂ ಕೆಲವರು ಇಂಗ್ಲಿಷ್ ಭಾಷೆಯನ್ನೇ ಮಾತೃಭಾಷೆ ಎಂದು ಘೋಷಿಸಿ ಕನ್ನಡ ಶಾಲೆಗಳನ್ನು ಕಡೆಗಣಿಸಿ ಇಂಗ್ಲಿಷ್ ಶಾಲೆಗೆ ಕಳುಹಿಸುವುದು ಯಾವ ನ್ಯಾಯ ಎಂದು ಮುಖ್ಯಮಂತ್ರಿ ಪ್ರಶ್ನೆ ಮಾಡಿದರು.

ಬದ್ಧ: ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಅನುಷ್ಠಾನಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಪ್ರತಿಯೊಂದು ಸಾಹಿತ್ಯ ಸಮ್ಮೇಳನದಲ್ಲೂ ನಾಡು-ನುಡಿ, ಭಾಷೆ, ಜಲ, ಸಂಸ್ಕೃತಿ ರಕ್ಷಣೆಗೆ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ. ಯಾವ ಕಾರಣಕ್ಕೂ ನೆಲದ ರಕ್ಷಣೆ ವಿಷಯದಲ್ಲಿ ನಮ್ಮ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ. ಈ ಬಗ್ಗೆ ಅನುಮಾನವೇ ಬೇಡ ಎಂದು ಕನ್ನಡಿಗರಿಗೆ ವಾಗ್ದಾನ ಮಾಡಿದರು. ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಅನುಷ್ಠಾನ ಮಾಡಲು ಪುನರ್ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು. ಇವುಗಳಿಗೆ ಪೂರಕವಾದ ವಿಧಿ-ವಿಧಾನಗಳನ್ನು ಕಾರ್ಯಗತಗೊಳಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಕನ್ನಡ ನಾಡಿನ ಜನತೆಯ ಹಿತರಕ್ಷಣೆ, ಜನತೆಯ ಬದುಕು ಹಸನಾದರೆ ಭಾಷೆ, ಸಂಸ್ಕೃತಿ, ಭವಿಷ್ಯ ಉಜ್ವಲವಾಗುತ್ತದೆ. ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಜರುಗಲಿ ಎಂದು ಆಶಿಸಿದರು. ಸಮ್ಮೇಳನದಲ್ಲಿ ಶ್ರವಣಬೆಳಗೊಳ ಜೈನಮಠದ ಜಗದ್ಗುರು ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಸಮ್ಮೇಳನಾಧ್ಯಕ್ಷ ಡಾ.ಸಿದ್ದಲಿಂಗಯ್ಯ, ಲೋಕಸಭಾ ಸದಸ್ಯ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಮತ್ತಿತರರು ಉಪಸ್ಥಿತರಿದ್ದರು.

ಸಮ್ಮೇಳನಕ್ಕೆ 1 ಕೋಟಿ ಹೆಚ್ಚುವರಿ ಅನುದಾನ: ಸಿಎಂ
ಶ್ರವಣಬೆಳಗೊಳ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಂದು ಕೋಟಿ ರೂ. ಹೆಚ್ಚುವರಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 81ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನಕ್ಕೆ ಆರ್ಥಿಕ ಹೊರೆ ಹೆಚ್ಚಾಗಿದೆ. ಈ ದಿಸೆಯಲ್ಲಿ ಆಯೋಜಕರು ಸರ್ಕಾರದ ಮುಂದೆ ಪ್ರಸ್ತಾಪನೆ ಸಲಿಸಿದ್ದಾರೆ. ಹಾಗಾಗಿ ಒಂದು ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ನೀಡುವ ಭರವಸೆ ನೀಡಿದರು. ಸರ್ಕಾರ ಈಗಾಗಲೇ ಸಾಹಿತ್ಯ ಸಮ್ಮೇಳನಕ್ಕೆ 2 ಕೋಟಿ ರೂ. ನೀಡಿದೆ. ಸಾಹಿತ್ಯ ಸಮ್ಮೇಳನ ನಾಡು, ನುಡಿ, ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾಗಿದೆ. ಆರ್ಥಿಕ ಕೊರತೆಯಿಂದ ನೀರಸವಾಗಬಾರದು. ಸರ್ಕಾರ ಸಾಹಿತ್ಯ ಪರಿಷತ್ತಿನ ಬೆಂಬಲಕ್ಕಿದೆ. ಆಯೋಜಕರ ಬೇಡಿಕೆಯಂತೆ ಸರ್ಕಾರದ ವತಿಯಿಂದ ಒಂದು ಕೋಟಿ ರೂ. ಹೆಚ್ಚುವರಿಯಾಗಿ ನೀಡುವುದಾಗಿ ಹೇಳಿದರು.

ಶಿಲಾಶಾಸನ ಅಧ್ಯಯನ ಪೀಠ ರಚನೆ
ಶ್ರವಣಬೆಳಗೊಳ:  ಶ್ರವಣಬೆಳಗೊಳದಲ್ಲಿ ಶಿಲಾಶಾಸನ ಅಧ್ಯಯನ ಪೀಠ ಸ್ಥಾಪಿಸುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 81ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಶ್ರವಣಬೆಳಗೊಳದಲ್ಲಿ 500ಕ್ಕೂ ಹೆಚ್ಚು ಶಿಲಾಶಾಸನಗಳು ಪತ್ತೆಯಾಗಿದ್ದು, ಇದರ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಳ್ಳಲು ಅನುವಾಗುವಂತೆ ಅಧ್ಯಯನ ಪೀಠ ರಚನೆ ಮಾಡಬೇಕೆಂದು ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮನವಿ ಮಾಡಿದ್ದಾರೆ. ಮನವಿಯನ್ನು ಸರ್ಕಾರ ಪರಿಶೀಲಿಸಿ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ನುಡಿದರು. ಶ್ರವಣಬೆಳಗೊಳ ಜೈನಕಾಶಿ. ಜೈನ ಧರ್ಮದ ತವರೂರು ಆಗಿದೆ. ಇಲ್ಲಿ 500ಕ್ಕೂ ಹೆಚ್ಚು ಶಿಲಾಶಾಸನಗಳು ದೊರೆತಿವೆ. ಇದರ ಅಧ್ಯಯನ ನಡೆಸುವ ಬಗ್ಗೆ ಇರುವ ಆಸಕ್ತಿ ಮನಗಂಡು ಹಂಪಿ ಮಾದರಿಯಲ್ಲಿ ಅಧ್ಯಯನ ಪೀಠ ರಚನೆಗೆ ಶ್ರೀಗಳು ಮನವಿ ಮಾಡಿದ್ದಾರೆ. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Write A Comment