ಕರ್ನಾಟಕ

‘ಜೆಡಿಎಸ್‌ ಪಕ್ಷದ ಕಚೇರಿ ಹಿಂಭಾಗದ ಜಾಗ ಕಾಂಗ್ರೆಸ್‌ಗೆ ಸೇರಿದ್ದು’: ಕಾಂಗ್ರೆಸ್‌ ಪ್ರತಿಭಟನೆ

Pinterest LinkedIn Tumblr

pvec23115Cong-JD(S)-03

ಬೆಂಗಳೂರು: ಜೆಡಿಎಸ್‌ ಪಕ್ಷದ ಕಚೇರಿ ಹಿಂಭಾಗದಲ್ಲಿರುವ ಜಾಗ ಕೂಡ ತಮಗೆ ಸೇರಿದ್ದು ಎಂದು ಕಾಂಗ್ರೆಸ್‌ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು. ಆ ಜಾಗದಲ್ಲಿ ಜೆಡಿಎಸ್‌ಗೆ ತಾತ್ಕಾಲಿಕ ಕಚೇರಿ ತೆರೆಯಲು ಶೆಡ್‌ ನಿರ್ಮಾಣಕ್ಕೆ ಅವಕಾಶ ಕೊಡಬಾರದು ಎಂದು ಅವರು ಆಗ್ರಹಿಸಿದರು.

ಪಕ್ಷದ ಕಚೇರಿ ಹಿಂಭಾಗ ಇರುವ ಈ ಜಾಗ ಖಾಲಿ ಇದ್ದು, ಅಲ್ಲಿ ತಾತ್ಕಾಲಿಕ ಶೆಡ್‌ ನಿರ್ಮಿಸಿ ಪಕ್ಷದ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಮುಂದಾ­ಗಿದ್ದಾರೆ. ಆದರೆ ಈ ಜಾಗ ಕೂಡ ಕಾಂಗ್ರೆಸ್ಸಿಗೆ ಸೇರಿದ್ದು ಎಂಬುದು ಮುಖಂಡ­ರಾದ ಆರ್.ವಿ. ವೆಂಕಟೇಶ್, ಎಸ್.ಜಿ. ನಂಜಯ್ಯನಮಠ, ರಾಮ­ಚಂದ್ರಪ್ಪ ಮತ್ತಿತರರ ವಾದ.

ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದು ಜೆಡಿಎಸ್ ಶಾಸಕ ವೈ.ಎಸ್‌.ವಿ ದತ್ತ ಕೂಡ ಸ್ಥಳಕ್ಕೆ ಧಾವಿಸಿದರು.
‘ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಜಮೀನಿಗೆ ಸಂಬಂಧಿಸಿದ ವಿವಾದವು ಪಕ್ಷದ ಕಚೇರಿ ಕಟ್ಟಡ ಇರುವ ಜಾಗಕ್ಕೆ ಮಾತ್ರ ಸೀಮಿತ. ಈಗ ಶೆಡ್‌ ನಿರ್ಮಿಸಲು ಗುರುತಿಸಿರುವ ಜಾಗಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯ ರಾಮಲಿಂಗೇಶ್ವರ ಮಠ ಮತ್ತು ನಮ್ಮ ಪಕ್ಷದ ನಡುವೆ ತಕರಾರು ಇದೆ. ಇಲ್ಲಿ ಕಾಂಗ್ರೆಸ್ಸಿಗೆ ತಕ­ರಾರು ತೆಗೆಯಲು ಅಧಿಕಾರವಿಲ್ಲ. ಕಾಂಗ್ರೆಸ್ಸಿಗರು ಆಡಳಿತದಲ್ಲಿರುವ ಕಾರಣ, ತಮ್ಮ ಬಲ ಪ್ರದರ್ಶಿಸಲು ಮುಂದಾ­ಗಿದ್ದಾರೆ’ ಎಂದು ದತ್ತ ದೂರಿದರು.

‘ಸುಪ್ರೀಂ ಕೋರ್ಟ್‌ ಆದೇಶದ ಅನು­ಸಾರ 21 ಸಾವಿರ ಚದರ ಅಡಿ ವಿಸ್ತೀರ್ಣದ ನಿವೇಶನ ನಮಗೇ ಸೇರು­ತ್ತದೆ. ಜೆಡಿಎಸ್‌ನವರು ಈಗ ಶೆಡ್‌ ನಿರ್ಮಿಸಲು ಮುಂದಾಗಿರುವ ಜಾಗ ಕೂಡ ನಮ್ಮ ಪಕ್ಷಕ್ಕೇ ಸೇರುತ್ತದೆ’ ಎಂದು ವೆಂಕಟೇಶ್‌ ಹೇಳಿದರು. ಸುಪ್ರೀಂ ಕೋರ್ಟ್‌ ಆದೇಶವನ್ನು ಕಾರ್ಯರೂಪಕ್ಕೆ ತರಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿ ಶನಿವಾರ ವಿಚಾರಣೆಗೆ ಬರಲಿದೆ.

ನ್ಯಾಯಾಲಯದ ಆದೇಶ ದೊರೆತ ತಕ್ಷಣ ಕೋರ್ಟ್‌ ಅಮೀನ್‌ ಬಂದು ಜಾಗವನ್ನು ಕಾಂಗ್ರೆಸ್ಸಿಗೆ ಹಸ್ತಾಂತರ ಮಾಡುತ್ತಾರೆ ಎಂದು ವೆಂಕಟೇಶ್ ಹೇಳಿದರು. ಪರಿಸ್ಥಿತಿ ತಿಳಿಗೊಳಿಸಲು ಮಧ್ಯ­ಪ್ರವೇಶಿಸಿದ ಪೊಲೀಸರು, ಎರಡೂ ಪಕ್ಷಗಳ ಕಾರ್ಯಕರ್ತರನ್ನು ಅಲ್ಲಿಂದ  ಚದುರಿಸಿದರು.

Write A Comment