ಕರ್ನಾಟಕ

ಔಷಧಿ ಗಿಡಮೂಲಿಕೆಗಳ ರಕ್ಷಣೆ ಮುಂದಾಗಿ: ರೈತರಿಗೆ ಮೀನಾಕ್ಷಿ ನೇಗಿ ಕರೆ

Pinterest LinkedIn Tumblr

pvec23Arogya-01

ಬೆಂಗಳೂರು: ‘ದೇಶದಲ್ಲಿ ಔಷಧಿ ಗಿಡಮೂಲಿಕೆ­ಗಳು ದಿನದಿಂದ ದಿನಕ್ಕೆ ವಿನಾಶದ ಅಂಚಿಗೆ ತಲುಪು­ತ್ತಿವೆ’ ಎಂದು ರಾಷ್ಟ್ರೀಯ ಔಷಧಿ ಗಿಡಮೂಲಿಕೆಗಳ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕಿ ಮೀನಾಕ್ಷಿ ನೇಗಿ ಕಳವಳ ವ್ಯಕ್ತಪಡಿಸಿದರು. ಆಯುಷ್‌ ಇಲಾಖೆ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಗುರುವಾರ ಹಲಸೂರಿನ ಆರ್‌ಬಿಎಎನ್‌ಎಂ ಮೈದಾನ­ದಲ್ಲಿ ಆಯೋಜಿಸಿದ್ದ ‘ರೈತರ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಸಸ್ಯ ಸಂಪತ್ತು ಹಾಗೂ ಔಷಧಿ ಗಿಡ­ಮೂಲಿಕೆಗಳನ್ನು ಉಳಿಸಲು ರೈತರು ಮುಂದಾಗ­ಬೇಕು. ಆದ್ದರಿಂದ ಮಂಡಳಿಯು ಔಷಧಿ ಬೆಳೆ­ಗಳನ್ನು ಬೆಳೆಯಲು ರೈತರಿಗೆ ಸಹಾಯ ಧನ ನೀಡುವ ಯೋಜನೆ ಜಾರಿಗೆ ತಂದಿದೆ. ಸದ್ಯ ದೇಶ­ದಲ್ಲಿ­ರುವ ಗಿಡಮೂಲಿಕೆಗಳ ಸಂಪತ್ತನ್ನು ಯಥಾ­ವತ್ತಾಗಿ ಉಳಿಸಿಕೊಂಡು ಹೋಗಲು ಸೂಕ್ತ ಕ್ರಮಗಳನ್ನು ಕೈಗೊಂಡಿದೆ’ ಎಂದರು.

‘ಇದರ ಅಂಗವಾಗಿ ರಾಜ್ಯದಲ್ಲಿ 20 ಔಷಧಿ ಗಿಡಮೂಲಿಕೆಗಳ ಸಂರಕ್ಷಣಾ ಪ್ರದೇಶಗಳನ್ನು ಗುರುತಿ­ಸಿದ್ದು, ಈ ಪ್ರದೇಶಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಅರಣ್ಯ ಇಲಾಖೆಗೆ ನೀಡಲಾಗಿದೆ’ ಎಂದರು. ‘ರೈತರಿಗೆ ಸಹಾಯ ಧನವನ್ನು 3 ರೀತಿಯಾಗಿ ವರ್ಗೀಕರಿಸಲಾಗಿದೆ.  ಸುಲಭವಾಗಿ ಬೆಳೆಯುವ ಹಾಗೂ ಹೇರಳವಾಗಿ ದೊರೆಯುವ ಗಿಡಗಳಿಗೆ ಶೇ 25ರಷ್ಟು, ಅಲ್ಪಪ್ರಮಾಣದಲ್ಲಿ ಲಭ್ಯವಿರುವ ಗಿಡಗಳಿಗೆ ಶೇ 50ರಷ್ಟು ಹಾಗೂ ವಿನಾಶದ ಅಂಚಿ­ನಲ್ಲಿರುವ ಗಿಡಗಳಿಗೆ ಶೇ 75ರಷ್ಟು ಸಹಾಯ ಧನವನ್ನು ನಿಗದಿ ಪಡಿಸಲಾಗಿದೆ’ ಎಂದರು.

‘ರೈತರು ಬೆಳೆದ ಔಷಧಿ ಬೆಳೆಗಳನ್ನು ತೋಟಗಾರಿಕೆ ಇಲಾಖೆ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ನಿರ್ಮಿಸಲಿರುವ ಮಂಡಿಗಳಲ್ಲಿ ರೈತರಿಂದ ನೇರವಾಗಿ ಕೊಳ್ಳಲಾಗುತ್ತದೆ’ ಎಂದು ನೇಗಿ ಹೇಳಿದರು. ನಂತರ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಶಕೀಲ್‌ ಅಹಮ್ಮದ್‌ ಮಾತನಾಡಿ ‘ಪ್ರಸ್ತುತ ರಾಜ್ಯದಲ್ಲಿ 2 ಸಾವಿರ ಹೆಕ್ಟರ್‌ ಪ್ರದೇಶ­ದಲ್ಲಿ ಔಷಧಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. 73 ಔಷಧಿ ಬೆಳೆಗಳಿಗೆ ಇಲಾಖೆಯಿಂದ ಸಹಾಯಧನ­ವನ್ನು ಗಿಡಗಳ ಲಭ್ಯತೆಯ ಆಧಾರದ ಮೇಲೆ ನೀಡಲಾಗುತ್ತಿದೆ’ ಎಂದು ಹೇಳಿದರು.

‘ರೈತರು ತಮಗೆ ತಿಳಿಯದ ಬೆಳೆಗಳನ್ನು ಬೆಳೆದು ನಷ್ಟ ಅನುಭವಿಸುತ್ತಾರೆ. ಆದ್ದರಿಂದ ಔಷಧಿ ಬೆಳೆಗಳ ಕುರಿತು ತೋಟಗಾರಿಕೆ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯಗಳಿಂದ ಮಾಹಿತಿ ಪಡೆದು, ಮಾರುಕಟ್ಟೆ ಆಧಾರದ ಮೇಲೆ ಬೆಳೆಯನ್ನು ಬೆಳೆದಾಗ ಮಾತ್ರ ಹೆಚ್ಚಿನ ಆದಾಯ ಗಳಿಸಲು ಸಾಧ್ಯ’ ಎಂದರು.

‘ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ­ಗಳಿಗೆ ಸುತ್ತೋಲೆಯನ್ನು ಹೊರಡಿಸಿದ್ದು, ಜಿಲ್ಲೆಯ ಎಷ್ಟು ಹೆಕ್ಟರ್‌ ಭೂ ಪ್ರದೇಶವು ಔಷಧಿ ಬೆಳೆಗಳನ್ನು ಬೆಳೆಯಲು ಸಿದ್ಧವಿದೆ ಎಂಬ ವರದಿಯನ್ನು ನೀಡುವಂತೆ ತಿಳಿಸಲಾಗಿದೆ. ವರದಿ ನೀಡಿದ ನಂತರ ಅಲ್ಲಿನ ಪ್ರಮಾಣಕ್ಕೆ ಅನುಗುಣವಾಗಿ  ಯೋಜನೆ­ಗಳನ್ನು ರೂಪಿಸಲಾಗುವುದು’ ಎಂದು ತಿಳಿಸಿದರು.

ಗಾಂಧಿ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ವಸುಂಧರಾ ಅವರು ‘ದೇಶದಲ್ಲಿ ಒಟ್ಟು 1,100 ಔಷಧಿ ಗಿಡಗಳನ್ನು ಗುರುತಿಸಲಾಗಿದ್ದು, ರೈತರು ಕೇವಲ 60 ಬೆಳೆಗಳನ್ನು ಮಾತ್ರ ಬೆಳೆಯಲು ಆಸಕ್ತಿ ತೋರಿಸುತ್ತಿದ್ದಾರೆ. ಇದರಿಂದ ಉಳಿದ ಗಿಡಗಳು ವಿನಾಶದ ಅಂಚಿಗೆ ತಲುಪುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಪ್ರಸ್ತುತ ಸ್ಥಿತಿಯಲ್ಲಿ ಔಷಧಿಗಳ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳ ಪೂರೈಕೆ ಇಳಿಕೆಮುಖ­ವಾಗಿದ್ದು, ರೈತರು ಔಷಧಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಬೆಳೆಗಳನ್ನು ಬೆಳೆಯುವು­ದರಿಂದ  ಆರ್ಥಿಕವಾಗಿ ಅವರ ಜೀವನಮಟ್ಟ ಸುಧಾರಿಸುತ್ತದೆ’ ಎಂದರು.

ಸಮಾವೇಶದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ರೈತರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಹೇಳಿ­ಕೊಂಡರು.  ಆಧುನಿಕ ಯುಗದ ಕೃಷಿಯಲ್ಲಿ ರೈತರು ಪಾಲಿಸಬೇಕಾದ ವಿಧಾನಗಳ ಕುರಿತು ಚರ್ಚೆ ನಡೆಯಿತು. ಸಮಾವೇಶದಲ್ಲಿ ತಮಿಳುನಾಡಿನ ಕೆಲ ರೈತರು ಭಾಗವಹಿಸಿ ಅಲ್ಲಿ ರೈತರು ಬೆಳೆಯುವ ಬೆಳೆಗಳು, ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಹಾಗೂ ಇನ್ನಿತರ ವಿಷಯಗಳ ಕುರಿತು ಮಾತನಾಡಿದರು.

ರೈತರು ಅಧಿಕಾರಿಗಳಿಗೆ ಶ್ರೀಗಂಧದ ಮರಗಳನ್ನು ಕಳ್ಳರಿಂದ ರಕ್ಷಣೆ ಮಾಡಲು ಕಷ್ಟವಾಗುತ್ತಿದ್ದು, ತಂತಿ ಬೇಲಿಯನ್ನು ನಿರ್ಮಿಸಲು ಹೆಚ್ಚಿನ ಹಣ ಖರ್ಚಾಗುತ್ತದೆ. ಆದ್ದರಿಂದ ಸರ್ಕಾರ ಸಹಾಯ ಧನ ನೀಡಬೇಕು ಎಂದು ರೈತರು ಮನವಿ ಮಾಡಿದರು. ರೈತರಿಗಾಗಿ ಸಮಾವೇಶದಲ್ಲಿ ಉಚಿತ ಆರೋಗ್ಯ ತಪಾಸಣೆ ಸಹ ಏರ್ಪಡಿಸಲಾಗಿತ್ತು.

ಕರ್ನಾಟಕ ರಾಜ್ಯ ಗಿಡಮೂಲಿಕಾ ಸಸ್ಯಗಳ ಪ್ರಾಧಿ­ಕಾರದ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ವಿ.­ಸಿಂಗ್‌, ಕರ್ನಾಟಕ ಕೃಷಿ ಅರಣ್ಯ ರೈತರ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಎ.ಎಸ್‌.­ಸದಾಶಿವಯ್ಯ, ರೇಷ್ಮೆ ಇಲಾಖೆಯ ನಿರ್ದೇಶಕ ಜಿ.ಸತೀಶ್‌, ರಾಜ್ಯ ಆಯುಷ್‌ ನಿರ್ದೇಶಕ ವಿಜಯ ಕುಮಾರ್‌ ಗೋಗಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತೋಟಗಾರಿಕೆ ಇಲಾಖೆಯ ಮರ ಬೆಳೆಸುವ ಯೋಜನೆಯಡಿಯಲ್ಲಿ 280 ಮರಗಳನ್ನು ಬೆಳೆಸಿದ್ದು, ಮರಗಳನ್ನು ಸಂರಕ್ಷಣೆ ಮಾಡಿದರೆ, ಮೊದಲ ವರ್ಷ ಪ್ರತಿ ಮರಕ್ಕೆ ₨ 10, ಎರಡನೇ ವರ್ಷಕ್ಕೆ ₨15 ಹಾಗೂ ಮೂರನೇ ವರ್ಷ ₨45 ಕೊಡುವುದಾಗಿ ಆಧಿಕಾರಿಗಳು ಹೇಳಿದ್ದರು. ಆದರೆ, ಮೂರು ವರ್ಷ ಕಳೆದರೂ ಯಾವುದೇ ಹಣ ಬಂದಿಲ್ಲ. ಬೆಳೆಗಳಿಗೆ ಸರ್ಕಾರದಿಂದ ನೀಡುವ ಸಬ್ಸಿಡಿ ಸರಿಯಾಗಿ ಸಿಗುವುದಿಲ್ಲ. –ಕೆ.ಇ.ಶ್ರೀನಿವಾಸ, ಶ್ರೀಗಂಧ ಬೆಳೆಗಾರರು, ಮುಳಬಾಗಿಲು

ಸರ್ಕಾರ ಔಷಧಿಯ ಬೆಳೆಗಳನ್ನು, ಶ್ರೀ ಗಂಧ ಹಾಗೂ ಚಂದನಗಳನ್ನು ಬೆಳೆಯಲು ಪ್ರೋತ್ಸಾಹ ನೀಡುತ್ತದೆ. ಶ್ರೀಗಂಧದ ಮರಗಳನ್ನು ಬೆಳೆ­ಸುವುದು ರೈತರಿಗೆ ಸುಲಭದ ವಿಷಯ. ಆದರೆ, ಅವುಗಳನ್ನು ಕಳ್ಳರಿಂದ ಕಾಪಾಡಿಕೊಳ್ಳುವುದೇ ಕಷ್ಟದ ಕೆಲಸವಾಗಿದೆ. ಆದ್ದರಿಂದ ಸರ್ಕಾರ ರೈತರಿಗೆ ತಂತಿ ಬೇಲಿಗಳನ್ನು ನಿರ್ಮಿಸಲು ಸಹಾಯ ಧನ ನೀಡಬೇಕು.
–ಜಿ.ವೆಂಕಟಪ್ಪ, ಶ್ರೀಗಂಧ ಬೆಳೆಗಾರರು, ಕೋಲಾರ

Write A Comment