ಕರ್ನಾಟಕ

ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳ: ಮುಳುಗಡೆ ಭೂಮಿ ಗುತ್ತಿಗೆ?

Pinterest LinkedIn Tumblr

alamatti

ಬಾಗಲಕೋಟೆ: ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524.256 ಮೀಟರ್‌ಗೆ ಹೆಚ್ಚಿಸು­ವುದರಿಂದ ಮುಳುಗಡೆ­ಯಾ­ಗಲಿ­ರುವ ಭೂಮಿಯನ್ನು ರೈತರಿಂದ ಸ್ವಾಧೀನ ಪಡಿಸಿಕೊಳ್ಳುವ ಬದಲು ಗುತ್ತಿಗೆ ಆಧಾರದ ಮೇಲೆ (ಲೀಸ್‌) ಪಡೆಯಲು ಕೃಷ್ಣಾ ಮೇಲ್ದಂಡೆ ಯೋಜ­ನೆಯ ಪುನರ್ವಸತಿ ಮತ್ತು ಪುನರ್‌ ನಿರ್ಮಾಣ ವಿಭಾಗ ಗಂಭೀರ ಚಿಂತನೆ ನಡೆಸಿದೆ.

ಕೃಷ್ಣಾ ಮೇಲ್ದಂಡೆ ಯೋಜನೆಯ (ಯುಕೆಪಿ) ಮೂರನೇ ಹಂತದ ಅನುಷ್ಠಾನ­ದಿಂದ ಹೊಸದಾಗಿ ಮುಳು­ಗಡೆ­ಯಾಗುವ 75 ಸಾವಿರ ಎಕರೆ ಭೂಮಿಯಲ್ಲಿ ಆಲಮಟ್ಟಿ ಜಲಾಶಯದ ಹಿನ್ನೀರು ವರ್ಷದಲ್ಲಿ ಗರಿಷ್ಠ 4 ತಿಂಗಳು ಮಾತ್ರ ಸಂಗ್ರಹವಿ­ರುತ್ತದೆ. ಉಳಿದ 8 ತಿಂಗಳು ನೀರು ಇರುವುದಿಲ್ಲ. ನಾಲ್ಕು ತಿಂಗಳು ಮಾತ್ರ ಹಿನ್ನೀರಿನಲ್ಲಿ ಮುಳುಗಡೆಯಾಗುವ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವ ಬದಲು 30ರಿಂದ 50 ವರ್ಷದ ಅವಧಿಗೆ ಗುತ್ತಿಗೆ ಪಡೆದು ಕೊಳ್ಳುವ ಉದ್ದೇಶ ಸರ್ಕಾರದ್ದು.

ಕಾಯ್ದೆಯಲ್ಲಿ ಅವಕಾಶ: ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಯುಕೆಪಿ ಪುನರ್ವಸತಿ ಆಯುಕ್ತ ಶಿವ­ಯೋಗಿ ಕಳಸದ, ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಭೂಸ್ವಾ­ಧೀನ ಕಾಯ್ದೆ–2013ರ ಕಲಂ 104ರಲ್ಲಿ ಭೂಸ್ವಾಧೀನದ ಬದಲು ಗುತ್ತಿಗೆ ರೂಪದಲ್ಲಿ ಪಡೆಯಲು ಅವ­ಕಾಶವಿದೆ. ಇದನ್ನು ಬಳಸಿಕೊಂಡು ರೈತರಿಂದ ಗುತ್ತಿಗೆ ರೂಪದಲ್ಲಿ ಜಮೀನು ಪಡೆಯುವ ಚಿಂತನೆ ನಡೆ­ದಿದೆ.

ಮುಳುಗಡೆಯಾಗುವ ಭೂಮಿ ಮಾಲೀಕನಿಂದ ಕಾಲ­ಮಿತಿಯಲ್ಲಿ ಗುತ್ತಿಗೆ ಪಡೆಯುವುದರಿಂದ ಆತ ಭೂಮಿಯ ಮಾಲೀಕನಾಗಿ ಮುಂದುವರಿಯುತ್ತಾನೆ’ ಎಂದರು. ‘ಜಲಾಶಯ ಹಿನ್ನೀರು ಖಾಲಿ­ಯಾದ ಬಳಿಕ 8 ತಿಂಗಳು ರೈತರು ಮೊದಲಿನಂತೆ ಕೃಷಿ ಚಟುವಟಿಕೆ ಮಾಡಿಕೊಳ್ಳಬಹುದು ಎಂದರು.

ಭೂಮಿಯನ್ನು ಗುತ್ತಿಗೆ ಪಡೆಯು­ವುದರಿಂದ ಉದ್ದೇಶಿತ ಯೋಜನಾ ವೆಚ್ಚ ಕಡಿಮೆಯಾಗಲಿದೆ ಮತ್ತು ಯೋಜನೆ­ಯನ್ನು ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಲು ಅನುಕೂಲವಾಗುವ ಜತೆಗೆ ರೈತರು ಮತ್ತು ಸರ್ಕಾರಕ್ಕೆ ಸಹ ಅನುಕೂಲವಾಗಲಿದೆ. ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಸರ್ಕಾರದ ಗಮನಕ್ಕೆ ತರಲಾಗಿದೆ. ರೈತರ ವಿಶ್ವಾಸ ಪಡೆದು ಮುಂದುವರಿಯಲಾಗುವುದು’ ಎಂದು ಹೇಳಿದರು.

‘ಯುಕೆಪಿ ಮೂರನೇ ಹಂತದ ಅನುಷ್ಠಾನಕ್ಕೆ ಬೇಕಿರುವ ಒಂದು ಲಕ್ಷ ಎಕರೆ ಭೂಮಿಯಲ್ಲಿ ನಾಲೆಗಳ ನಿರ್ಮಾಣಕ್ಕೆ 20 ಸಾವಿರ ಎಕರೆ, ಪುನರ್ವಸತಿ ಕೇಂದ್ರಕ್ಕಾಗಿ 5 ಸಾವಿರ ಎಕರೆಯನ್ನು ಸ್ವಾಧೀನ ಪಡಿಸಿಕೊಳ್ಳ­ಲಾಗುವುದು, ಜಲಾಶಯದ ನೀರು ಸಂಗ್ರಹವಾಗಲಿರುವ 75 ಸಾವಿರ ಎಕರೆಯನ್ನು ಮಾತ್ರ ಸ್ವಾಧೀನ ಬದಲು ಗುತ್ತಿಗೆ ರೂಪದಲ್ಲಿ ಪಡೆಯಲು ಅವಕಾಶವಿದೆ ಎಂದರು.

ಮುಳುಗಡೆಯಾಗುವ ಭೂಮಿ­ಯನ್ನು ರೈತರಿಂದ ಎಷ್ಟು ವರ್ಷ ಗುತ್ತಿಗೆ ಪಡೆಯಬೇಕು ಮತ್ತು ಎಕರೆವಾರು ಎಷ್ಟು ಹಣ ನೀಡಬೇಕು ಎಂಬುದು ಇನ್ನೂ ನಿರ್ಧಾರವಾಗಬೇಕಿದೆ’ ಎಂದು ತಿಳಿಸಿದರು. ‘ಆಲಮಟ್ಟಿ ಜಲಾಶಯ ವ್ಯಾಪ್ತಿ­ಯಲ್ಲಿ ಮುಳುಗಡೆಯಾಗಿರುವ ಭೂಮಿ­ಯಲ್ಲಿ ಈಗ ಹಿನ್ನೀರು ಕಡಿಮೆಯಾದಂತೆ ರೈತರು ಒಂದೆರಡು ಬೆಳೆ ಬೆಳೆದು­ಕೊಳ್ಳುತ್ತಿದ್ದಾರೆ’ ಎಂದರು.

ಮೂರು ವರ್ಷದಲ್ಲಿ ಪೂರ್ಣ: ‘ಯುಕೆಪಿ 3ನೇ ಹಂತಕ್ಕೆ ಅಗತ್ಯ­ವಿರುವ ಒಂದು ಲಕ್ಷ ಎಕರೆಯನ್ನು ಸರ್ಕಾರದ ಅನುದಾನ ಲಭ್ಯತೆ ಆಧರಿಸಿ ಮೂರು ವರ್ಷದ ಒಳಗಾಗಿ ಸ್ವಾಧೀನ ಅಥವಾ ಗುತ್ತಿಗೆ ರೂಪದಲ್ಲಿ ಹಂತಹಂತವಾಗಿ ಪಡೆದುಕೊಳ್ಳ­ಲಾಗುವುದು. ಈಗಾಗಲೇ 20 ಸಾವಿರ ಎಕರೆ ಭೂಮಿ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ (4/1) ಹೊರಡಿಸ­ಲಾಗಿದೆ’ ಎಂದು ಕಳಸದ ತಿಳಿಸಿದ್ದಾರೆ.

Write A Comment