ಕರ್ನಾಟಕ

ಸೋಲಿಗರ ಗೊರುಕನ ನೃತ್ಯಕ್ಕೆ ಸಚಿವರ ಸಾಥ್‌: ಚಳಿಗೆ ನಡುಗಿದ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ

Pinterest LinkedIn Tumblr

anjaneya

ಚಾಮರಾಜನಗರ: ಸೋಲಿಗರ ಕಂಠಸಿರಿಯಿಂದ ಗೊರು ಗೊರುಕ ಗೊರುಕನ… ಹಾಡು ಅನುರಣಿಸು­ತ್ತಿತ್ತು. ಬೆಟ್ಟಗಳ ಬದಿಯಿಂದ ತಂಗಾಳಿ ಬೀಸುತ್ತಿತ್ತು. ಬುಧವಾರ ಮಧ್ಯಾಹ್ನವೇ ಕೆರೆದಿಂಬದಲ್ಲಿ ಸೋಲಿಗರ ಜೀವನಶೈಲಿ ಕಂಡಿದ್ದ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಗೊಂಬೆಗಲ್ಲು ಪೋಡಿಗೆ ಬಂದು ಸೋಲಿಗರ ಕಷ್ಟ–ಸುಖ ಆಲಿಸಿದರು.

ರಾತ್ರಿ ಉಪ್ಪುಸಾರು, ರಾಗಿಮುದ್ದೆ, ರಾಗಿರೊಟ್ಟಿ ಸವಿದರು. ಅದಾಗಲೇ ಸೋಲಿಗರು ತಮ್ಮ ಇಷ್ಟದ ದೇವರು­ಗಳನ್ನು ಕುರಿತ ಹಾಡುಗಳನ್ನು ಹೇಳಿ ಹೊಸ ವರ್ಷದ ಸ್ವಾಗತಕ್ಕೆ ಸಜ್ಜಾಗಿದ್ದರು. ಅವರ ಬಳಿಗೆ ಬಂದ ಆಂಜನೇಯ ತಮಟೆ ಬಾರಿಸಿ, ಗೊರು ಗೊರುಕ ಗೊರುಕನ… ನೃತ್ಯಕ್ಕೆ ಸಾಥ್‌ ನೀಡಿದರು. ಗೊಂಬೆಗಲ್ಲು ಪೋಡು ಹುಲಿ ರಕ್ಷಿತಾರಣ್ಯದ ಕೋರ್‌ ವಲಯದಲ್ಲಿದೆ. ಸುತ್ತಲೂ ಬೆಟ್ಟಗುಡ್ಡ­ಗಳಿವೆ. ಇಲ್ಲಿನ ಹಳ್ಳಕೊಳ್ಳಗಳಲ್ಲಿ ನೀರು ಹರಿಯು­ತ್ತದೆ. ಹೀಗಾಗಿ, ರಾತ್ರಿ ವೇಳೆ ಮೈಕೊರೆಯುವ ಚಳಿ ಸರ್ವೇಸಾಮಾನ್ಯ.

ಮಧ್ಯರಾತ್ರಿಯಾಗುತ್ತಲೇ ಚಳಿ ಹೆಚ್ಚಿತು. ಕಿವಿಗಳ ತುಂಬಾ ಟೋಪಿ, ಮುಂಗೈವರೆಗೆ ಟಿ–ಶರ್ಟ್‌ ತೊಟ್ಟಿದ್ದ ಆಂಜನೇಯ ಕಾಡಿನ ಚಳಿಗೆ ಅಕ್ಷರಶಃ ನಡುಗಿದರು. ಸೋಲಿಗರು ಬೆಂಕಿ ಹಾಕಿಕೊಂಡು ಕುಳಿತಿದ್ದ ಸ್ಥಳಕ್ಕೆ ಬಂದ ಅವರು ಸೋಲಿಗರ ಆಹಾರ ಪದ್ಧತಿ, ಜೀವನಶೈಲಿ, ವೈವಾಹಿಕ ಬದುಕಿನ ಬಗ್ಗೆ ಕೇಳುತ್ತಾ ಬೆಂಕಿ ಕಾಯಿಸಿಕೊಂಡರು. ಸಚಿವರೊಟ್ಟಿಗೆ ಮಾತನಾಡಿದ ಸೋಲಿಗರು ಪುಳಕಿತಗೊಂಡರು.

ಹೊಸ ವರ್ಷ ಸ್ವಾಗತಿಸಿ ಮಧ್ಯರಾತ್ರಿ 12.30ರವರೆಗೆ ಸೋಲಿಗರೊಟ್ಟಿಗೆ ಮಾತುಕತೆ ನಡೆಸಿದರು. ಬಳಿಕ ನಿದ್ದೆ ಮಾಡಲು ಹೊರಟರು. ಆಂಜನೇಯ ಅವರೊಂದಿಗೆ ಹನೂರು ಶಾಸಕ ಆರ್‌. ನರೇಂದ್ರ, ಕರ್ನಾಟಕ ರೇಷ್ಮೆ ಉದ್ಯಮ­ಗಳ ನಿಗಮದ ಅಧ್ಯಕ್ಷ ಡಿ. ಬಸವರಾಜ ಅವರು ಪದಮ್ಮ– ಬಸವ ದಂಪತಿಯ ಮನೆಯಲ್ಲಿಯೇ ನಿದ್ರೆಗೆ ಜಾರಿದರು.

ಹೊರಬಂದರೆ 2 ಎಕರೆ ಜಮೀನು: ‘ಯಾವುದೇ, ಕಾರಣಕ್ಕೂ ಅರಣ್ಯ­ದಲ್ಲಿರುವ ಗಿರಿಜನರನ್ನು ಸರ್ಕಾರ ಒಕ್ಕಲೆಬ್ಬಿಸುವುದಿಲ್ಲ. ಆದರೆ, ನೀವು ಬಿಆರ್‌ಟಿ ಹುಲಿ ರಕ್ಷಿತಾರಣ್ಯದಿಂದ ಹೊರಬರಲು ಇಚ್ಛಿಸಿದರೆ ಎಲ್ಲರಿಗೂ ಮನೆ ನಿರ್ಮಿಸಿಕೊಡುತ್ತೇವೆ. ಜತೆಗೆ, ತಲಾ 2 ಎಕರೆ ಜಮೀನು ನೀಡಲಾ­ಗುವುದು’ ಎಂದು ಸಚಿವ ಆಂಜನೇಯ ಹೇಳಿದರು.

‘ನೀವು ಕಾಡಿನಿಂದ ಹೊರಬರಬೇಕು ಎಂದು ಒತ್ತಾಯಿಸುವುದಿಲ್ಲ. ನೀವು ಇಚ್ಛಿಸಿದರೆ ಮಾತ್ರ ಸರ್ಕಾರ ಸೌಲಭ್ಯ ಕಲ್ಪಿಸಲಿದೆ. ಸಂವಿಧಾನದಡಿ ಕಲ್ಪಿಸಿರುವ ಸೌಲಭ್ಯಗಳು ನಿಮಗೂ ಸಿಗಲಿ ಎಂಬುದೇ ನನ್ನ ಆಸೆಯಾಗಿದೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸೋಲಿಗರು, ‘ನಾವು ಕಾಡು ಬಿಟ್ಟು ನಾಡಿಗೆ ಬರುವುದಿಲ್ಲ. ಇಲ್ಲಿಯೇ ನಮಗೆ ಮೂಲ ಸೌಕರ್ಯ ಕಲ್ಪಿಸಬೇಕು’ ಎಂದು ಕೋರಿದರು.

‘ಸೋಲಿಗರಿಗೆ ಶೇ 100 ಸಹಾಯ­ಧನದಡಿ ಹಸು ಖರೀದಿಗೆ ಅನುದಾನ ನೀಡಲಾಗುವುದು. ಗಿರಿಜನ ಉಪ ಯೋಜನೆಯಡಿ ವಿಶೇಷ ಸೌಲಭ್ಯ ಒದಗಿಸಲಾಗುವುದು. ಈಗಾಗಲೇ, ಅಗತ್ಯವಿರುವ ಮನೆಗಳ ಮಂಜೂರಾತಿಗೆ ಕ್ರಮ ವಹಿಸಲಾಗುತ್ತದೆ’ ಎಂದು ಸಚಿವರು ಭರವಸೆ ನೀಡಿದರು. ಗುರುವಾರ ಮುಂಜಾನೆ ಎದ್ದ ಆಂಜನೇಯ ಅಧಿಕಾರಿಗಳೊಟ್ಟಿಗೆ ಚರ್ಚಿ­ಸಿದರು. ಬಳಿಕ ಸೋಲಿಗರು ಬೆಳಗಿನ ಉಪಾಹಾರಕ್ಕೆ ತಯಾರಿಸಿಕೊಟ್ಟ ಅವಲಕ್ಕಿ ಸವಿದು ಬೆಂಗಳೂರಿನತ್ತ ಪಯಣ ಬೆಳೆಸಿದರು.

Write A Comment