ಕರ್ನಾಟಕ

ಹೈ.ಕ.ದಲ್ಲಿ ಸರ್ಕಾರದ ವಿವಿಧ ಇಲಾಖೆಗಳ 30,174 ಹುದ್ದೆ ಖಾಲಿ

Pinterest LinkedIn Tumblr

hysda

ಕಲಬುರ್ಗಿ: ಹೈದರಾಬಾದ್‌ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 30,174 ಹುದ್ದೆಗಳು ಖಾಲಿ ಇರುವುದನ್ನು ಪ್ರಾದೇಶಿಕ ಆಯುಕ್ತರ ನೇತೃತ್ವದ ಅಧಿಕಾರಿಗಳ ಸಮಿತಿ ಗುರುತಿಸಿದೆ. ಈ  ಪೈಕಿ ‘ಸಿ’ ವೃಂದದ ಖಾಲಿ ಹುದ್ದೆಗಳ ಸಂಖ್ಯೆಯೇ 20,866ರಷ್ಟಿದೆ.

ಈ ಭಾಗದಲ್ಲಿ ಖಾಲಿ ಇರುವ ಹುದ್ದೆಗಳ ನಿಖರ ಮಾಹಿತಿಯನ್ನು 2014ರ ಡಿಸೆಂಬರ್‌ ಅಂತ್ಯದೊಳಗೆ ಗುರುತಿಸಲು ಮತ್ತು 2015ರ ಜನವರಿಯಿಂದಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ, 2015ರ ಜೂನ್‌ ವೇಳೆಗೆ ಎಲ್ಲ ಹುದ್ದೆ ಭರ್ತಿ ಮಾಡಲು ಕಲಬುರ್ಗಿಯಲ್ಲಿ ನ.28 ರಂದು ನಡೆದಿದ್ದ ಸಚಿವ ಸಂಪುಟ ಸಭೆ ನಿರ್ಧರಿಸಿತ್ತು.

ಇದಕ್ಕಾಗಿ ಪ್ರಾದೇಶಿಕ ಆಯುಕ್ತ ಆಮ್ಲನ್‌ ಆದಿತ್ಯ ಬಿಸ್ವಾಸ್‌ ಅಧ್ಯಕ್ಷತೆ­ಯಲ್ಲಿ ಈಶಾನ್ಯ ವಲಯ ಐಜಿಪಿ ಡಾ.ಸುರೇಶ ಕೆ.ಮಹಮ್ಮದ್‌, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪೆನಿ (ಜೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕರನ್ನು ಒಳ­ಗೊಂಡ ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು.

‘ರಾಜ್ಯದಲ್ಲಿ ಒಟ್ಟು 7.50 ಲಕ್ಷ ಸರ್ಕಾರಿ ಹುದ್ದೆಗಳಿದ್ದು, 5.56 ಲಕ್ಷ ನೌಕ­ರರು ಇದ್ದಾರೆ. 1.94 ಲಕ್ಷ ಹುದ್ದೆ­ಗಳು ಖಾಲಿ ಇದ್ದು, ಈ ಪೈಕಿ ಹೈದ­ರಾಬಾದ್‌ ಕರ್ನಾಟಕ ಪ್ರದೇಶ­ಗಳಲ್ಲಿ ಅಂದಾಜು 50 ಸಾವಿರ ಹುದ್ದೆ­ಗಳು ಖಾಲಿ ಇರುವ ಸಾಧ್ಯತೆ ಇದೆ’ ಎಂದು ಅಂದಿನ ಸಂಪುಟ ಸಭೆಯಲ್ಲಿ ಅಂದಾಜು ಮಾಡಲಾಗಿತ್ತು. ಅನುದಾನ ಬಳಕೆಯಾಗದೆ ಈ ಭಾಗದ ಅಭಿವೃದ್ಧಿ ಕುಂಠಿತಗೊಳ್ಳಲು ಸಿಬ್ಬಂದಿ ಕೊರತೆಯೂ ಪ್ರಮುಖ ಕಾರಣ ಎಂಬುದನ್ನು ಮನಗಂಡು ಸರ್ಕಾರ ಈ ನಿರ್ಧಾರ ಕೈಗೊಂಡಿತ್ತು.

‘ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಮಾತ್ರ ನಾವು ಗುರುತಿಸಿದ್ದೇವೆ. ವಿಶ್ವವಿದ್ಯಾಲ­ಯಗಳು ಮತ್ತಿತರ ಸ್ವಾಯತ್ತ ಸಂಸ್ಥೆ­ಗಳಲ್ಲಿಯ ಖಾಲಿ ಹುದ್ದೆಗಳ ವಿವರವನ್ನು ಈ ವರದಿ ಒಳಗೊಂಡಿಲ್ಲ’ ಎಂದು ಪ್ರಾದೇಶಿಕ ಆಯುಕ್ತ ಆಮ್ಲನ್‌ ಆದಿತ್ಯ ಬಿಸ್ವಾಸ್‌  ತಿಳಿಸಿದರು.

ಸಿಂಹ ಪಾಲು: ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ 371 (ಜೆ) ಅಡಿ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ಈ ಪ್ರದೇಶದಲ್ಲಿಯ ‘ಎ’ ಮತ್ತು ‘ಬಿ’ ವೃಂದದ ಹುದ್ದೆಗಳಿಗೆ ಸ್ಥಳೀಯರಿಗೆ ಶೇ 75, ‘ಸಿ’ ವೃಂದ ಹುದ್ದೆಗಳಿಗೆ ಶೇ 80 ಮತ್ತು ‘ಡಿ’ ವೃಂದದ ಹುದ್ದೆಗಳಿಗೆ ಶೇ 85ರಷ್ಟು ಮೀಸಲಾತಿ ಕಲ್ಪಿಸ­ಲಾಗಿದೆ. ಹೀಗಾಗಿ ಈ ಹುದ್ದೆಗಳಿಗೆ ನೇಮಕಾತಿ ನಡೆಸಿದರೆ ಈ ಭಾಗದ ಅಭ್ಯರ್ಥಿಗಳಿಗೆ ಸಿಂಹಪಾಲು ದೊರೆಯಲಿದೆ.

ಹುದ್ದೆ ಭರ್ತಿ ಎಂದು?: ‘ಹೈದರಾಬಾದ್‌ ಕರ್ನಾ­ಟಕ ಪ್ರದೇಶಕ್ಕೆ ಸೀಮಿತವಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದೊ ಅಥವಾ ಇಡೀ ರಾಜ್ಯ ವ್ಯಾಪ್ತಿಗೊಳಪಟ್ಟು ನೇಮಕಾತಿ ನಡೆಸಲಾಗು­ತ್ತದೆಯೊ ಎಂಬು­ದನ್ನು ರಾಜ್ಯ ಸರ್ಕಾರ ಇನ್ನೂ ಪ್ರಕಟಿಸಿಲ್ಲ.
‘ಸಿ’ ಮತ್ತು ‘ಡಿ’ ವೃಂದದ ಹುದ್ದೆಗಳಿಗೆ ಮಾತ್ರ ಈ ಭಾಗಕ್ಕೆ ಸೀಮಿತವಾಗಿ ನೇಮಕಾತಿ ಮಾಡಿ­ಕೊಳ್ಳಲು ಅವಕಾಶ ಇದೆ.
ಆದರೆ, ‘ಎ’ ಮತ್ತು ‘ಬಿ’ ವೃಂದದ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಇಡೀ ರಾಜ್ಯ ವ್ಯಾಪ್ತಿಗೊಳಪಟ್ಟು ನಡೆಸಬೇಕಾಗುತ್ತದೆ’ ಎಂಬುದು ತಜ್ಞರು ಹೇಳುವ ಮಾತು.

Write A Comment