ಚಾಮರಾಜನಗರ: ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಪ್ರಸಕ್ತ ಶೈಕ್ಷಣಿಕ ಸಾಲಿನ ಜೂನ್ನಿಂದ ಡಿಸೆಂಬರ್ವರೆಗೆ ಶಾಲೆ ತೊರೆದ 349 ಮಕ್ಕಳನ್ನು ಪತ್ತೆ ಹಚ್ಚಲಾಗಿದ್ದು, ಅವರಲ್ಲಿ 51 ಹೆಣ್ಣು ಮಕ್ಕಳು ಬಾಲ್ಯ ವಿವಾಹವಾಗಿದ್ದಾರೆ.
ಉಚಿತ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೊಂಡರೂ ಜಿಲ್ಲೆಯಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿರುವುದು ತಪ್ಪಿಲ್ಲ. ರಾಜ್ಯ ಸರ್ಕಾರ ಬಿಸಿಯೂಟ, ಕ್ಷೀರ ಭಾಗ್ಯ, ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಶೈಕ್ಷಣಿಕ ಸವಲತ್ತು ಒದಗಿಸಿದರೂ ಕೌಟುಂಬಿಕ ಸಮಸ್ಯೆಯಿಂದ ಮಕ್ಕಳು ಶಾಲೆ ಬಿಡುತ್ತಿದ್ದಾರೆ.
2013–14ನೇ ಸಾಲಿನಡಿ ಜಿಲ್ಲೆಯಲ್ಲಿ ಒಟ್ಟು 2,195 ಮಕ್ಕಳು ಶಾಲೆ ತೊರೆದಿದ್ದರು. ಈ ಪೈಕಿ 14 ವರ್ಷದ ಒಳಗಿನ 51 ಹೆಣ್ಣುಮಕ್ಕಳು ಬಾಲ್ಯವಿವಾಹವಾಗಿರುವ ಸಂಗತಿ ಸಮೀಕ್ಷೆ ವೇಳೆ ಬಯಲಾಗಿತ್ತು. ಈ ವರದಿಯನ್ನೇ ಶಿಕ್ಷಣ ಇಲಾಖೆಯು ಹೈಕೋರ್ಟ್ಗೆ ಸಲ್ಲಿಸಿದೆ.
ಕಮರಿಹೋಗುವ ಬಾಲ್ಯ: ಜಿಲ್ಲೆಯಲ್ಲಿ ಹಿಂದುಳಿದ ಜನಾಂಗದವರು ಹೆಚ್ಚಾಗಿ ವಾಸಿಸುವ ಹಳ್ಳಿಗಳಲ್ಲಿ ಬಾಲ್ಯವಿವಾಹ ಪದ್ಧತಿ ಇಂದಿಗೂ ಜೀವಂತವಾಗಿದೆ. ಸಾಮಾಜಿಕ ಕಟ್ಟುಪಾಡುಗಳಿಗೆ ಹೆಣ್ಣುಮಕ್ಕಳ ಬಾಲ್ಯ ಕಮರಿಹೋಗುತ್ತಿದೆ. ಕೆಲವು ಜನಾಂಗದಲ್ಲಿ ಹೆಣ್ಣುಮಕ್ಕಳು ಋತುಮತಿಯಾಗುವುದಕ್ಕೂ ಮೊದಲೇ ಮದುವೆ ಮಾಡುವ ಕೆಟ್ಟ ಸಂಪ್ರದಾಯವಿದೆ. ಹೀಗಾಗಿ, ಹೆಣ್ಣುಮಕ್ಕಳು ಅನಿಷ್ಟ ಬಾಲ್ಯವಿವಾಹ ಪದ್ಧತಿಗೆ ಬಲಿಯಾಗುತ್ತಿದ್ದಾರೆ.
2013–14ನೇ ಸಾಲಿನಡಿ ಶಾಲೆ ತೊರೆದಿದ್ದ 2,195 ಮಕ್ಕಳ ಪೈಕಿ 842 ಮಕ್ಕಳನ್ನು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯು ವಿವಿಧ ಚಟುವಟಿಕೆಗಳ ಮೂಲಕ ಸಮಾಜದ ಮುಖ್ಯವಾಹಿನಿಗೆ ತಂದಿದೆ. 231 ಮಕ್ಕಳು ವಲಸೆ ಹೋಗಿದ್ದಾರೆ. 51 ಹೆಣ್ಣುಮಕ್ಕಳಿಗೆ ಬಾಲ್ಯವಿವಾಹ ಮಾಡಲಾಗಿದೆ. 648 ಮಕ್ಕಳು 14 ವರ್ಷ ಮೀರಿದ್ದಾರೆ. 202 ಮಕ್ಕಳು ಪುನರಾವರ್ತನೆಯಾಗಿ ದಾಖಲಾಗಿದ್ದಾರೆ. 213 ಮಕ್ಕಳು ಪೋಷಕರ ನಿರಾಸಕ್ತಿ ಪರಿಣಾಮ ಶಾಲೆಯಿಂದ ವಂಚಿತರಾಗಿದ್ದಾರೆ. 8 ಮಕ್ಕಳು ಮೃತರಾಗಿದ್ದಾರೆ ಎನ್ನುವುದು ಇಲಾಖೆಯ ಅಧಿಕಾರಿಗಳ ವಿವರಣೆ.
2014–15ನೇ ಶೈಕ್ಷಣಿಕ ಸಾಲಿನಡಿ ಜೂನ್ನಿಂದ ಡಿಸೆಂಬರ್ವರೆಗೆ ನಡೆದ ಸಮೀಕ್ಷೆಯಲ್ಲಿ 6ರಿಂದ 13 ವರ್ಷದ ಒಳಗಿನ 185 ಗಂಡು ಮತ್ತು 164 ಹೆಣ್ಣುಮಕ್ಕಳು ಶಾಲೆ ಬಿಟ್ಟಿದ್ದಾರೆ. ಮುಖ್ಯಶಿಕ್ಷಕರು, ಸಹಶಿಕ್ಷಕ ಹಾಗೂ ಅಂಗನವಾಡಿ ಕಾರ್ಯಕರ್ತೆಯನ್ನು ಒಳಗೊಂಡ ತಂಡವು ಮನೆ ಮನೆ ಸಮೀಕ್ಷೆ ನಡೆಸಿ ಇಷ್ಟು ಮಕ್ಕಳನ್ನು ಪತ್ತೆ ಹಚ್ಚಿದೆ.
ಪೋಷಕರ ನಿರ್ಲಕ್ಷ್ಯ: ಜಿಲ್ಲೆಯಲ್ಲಿ ಮಕ್ಕಳು ಶಾಲೆಯಿಂದ ಮಕ್ಕಳು ಹೊರಗುಳಿಯಲು ಪೋಷಕರ ನಿರಾಸಕ್ತಿಯೇ ಕಾರಣವಾಗಿದೆ. ಇಂತಹ ಮಕ್ಕಳು ಬಾಲಕಾರ್ಮಿಕ ಪದ್ಧತಿಯ ಕೂಪಕ್ಕೆ ಸಿಲುಕುವ ಅಪಾಯ ಹೆಚ್ಚಿದೆ.
ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸಂಬಂಧ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಕಳೆದ ವರ್ಷ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ, ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಹೈಕೋರ್ಟ್ ಸೂಚಿಸಿತ್ತು.
ಈ ವರ್ಷವೂ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶಾಲೆ ಬಿಟ್ಟಿರುವ ಮಕ್ಕಳ ಸಮೀಕ್ಷೆ ನಡೆದಿದೆ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯು ಜ. 8ರಂದು ಹೈಕೋರ್ಟ್ಗೆ ಸಮೀಕ್ಷಾ ವರದಿ ಸಲ್ಲಿಸಲಿದೆ.