ಕರ್ನಾಟಕ

81ನೇ ಕನ್ನಡ ಸಾಹಿತ್ಯ ಸಮ್ಮೇಳನ: ಬದುಕಿಗೆ ಸ್ಫೂರ್ತಿ ಶ್ರವಣಬೆಳಗೊಳ

Pinterest LinkedIn Tumblr

bela

ಶ್ರವಣಬೆಳಗೊಳ ಕನ್ನಡನಾಡಿನ ಸಾಂಸ್ಕೃತಿಕ ಹೆಮ್ಮೆಗಳಲ್ಲೊಂದಾದ ಊರು. ಗಾಂಭೀರ್ಯಕ್ಕೆ ಹೆಸರಾದ ಅಲ್ಲಿನ ಬೆಟ್ಟ, ಗಾಂಭೀರ್ಯವೇ ತಾನಾದ ಗೊಮ್ಮಟ ಮೂರ್ತಿಯಿಂದಾಗಿ ಬೆಳಗೊಳ ವಿಶ್ವಪ್ರಸಿದ್ಧ. ತ್ಯಾಗ, ವಿರಾಗ ಹಾಗೂ ಬದುಕಿನ ಅರ್ಥವಂತಿಕೆಯ ರೂಪಕದಂತಿರುವ ಈ ಊರಿನೊಂದಿಗಿನ ತಮ್ಮ ನಂಟನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ಲೇಖಕ ಡಾ. ನಲ್ಲೂರು ಪ್ರಸಾದ್‌ ಇಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ, 81ನೇ ಕನ್ನಡ ಸಾಹಿತ್ಯ ಸಮ್ಮೇಳನ (ಫೆ. 1–3, 2015) ನಡೆಯುವುದು ಇದೇ ಬೆಳಗೊಳದಲ್ಲಿ.

ನನ್ನ ಬದುಕಿನಲ್ಲಿ ಎಂದೂ ಮರೆಯದ ಸ್ಥಳ ಹಾಗೂ ನನ್ನ ಬದುಕು, ಸಾಹಿತ್ಯ ಮತ್ತು ಆಲೋಚನಾ ಕ್ರಮವನ್ನು ಬದಲಿಸಿದ ನೆಲೆ ಶ್ರವಣಬೆಳಗೊಳ. ತ್ಯಾಗದ ಪ್ರತೀಕವಾದ ಬಾಹುಬಲಿ ನೆಲೆಸಿರುವ ಶ್ರವಣಬೆಳಗೊಳ ನನ್ನೂರು ಹಾಸನ ಜಿಲ್ಲೆಯ ನಲ್ಲೂರಿನಿಂದ ಕೆಲವೇ ಮೈಲಿಗಳ ದೂರಲ್ಲಿದೆ. ದನ, ಕುರಿ ಕಾಯುತ್ತಿದ್ದ, ಜಮೀನಿಗೆ ಗೋಡು–ಗೊಬ್ಬರ ಸಾಗಿಸುತ್ತಿದ್ದ ಬಬ್ಬ ಹುಡುಗನಿಗೆ ಈಗ ನಾಡಿನಲ್ಲಿ ಒಂದು ಸ್ಥಾನವಿದೆ ಎಂದರೆ ಅದಕ್ಕೆ ಕಾರಣ ಶ್ರವಣಬೆಳಗೊಳ.

ನನಗೆ ಇಷ್ಟವಿಲ್ಲದಿದ್ದರೂ ನಮ್ಮ ಅಪ್ಪ ಸಂಜೀವಯ್ಯ ಚನ್ನರಾಯಪಟ್ಟಣದ ನವೋದಯ ಶಾಲೆಯಲ್ಲಿ ಪದವಿಪೂರ್ವ ಶಿಕ್ಷಣಕ್ಕೆ ಸೇರಿಸಿ, ವಿಜ್ಞಾನ (ಪಿಸಿಬಿ) ವಿಷಯ ಕೊಡಿಸಿದರು. ನನಗೆ ಇಂಗ್ಲಿಷ್ ಎಂದೂ ತಲೆಗೆ ಹತ್ತದ ವಿಷಯ. ದ್ವಿತೀಯ ಪಿಯುಸಿಯಲ್ಲಿ ದಯನೀಯವಾಗಿ ಅನುತ್ತೀರ್ಣನಾದೆ. ಕನ್ನಡ ಹೊರತುಪಡಿಸಿದರೆ ಉಳಿದೆಲ್ಲ ವಿಷಯಗಳಲ್ಲಿ ಒಟ್ಟು 20–30 ಅಂಕ ಪಡೆದಿದ್ದೆ ಎನಿಸುತ್ತದೆ. ಮರುಪರೀಕ್ಷೆಯಲ್ಲೂ ಅದೇ ಸ್ಥಿತಿ. ನಮ್ಮಪ್ಪನಿಗೋ ಮಗನನ್ನು ಡಾಕ್ಟರ್ ಓದಿಸಬೇಕು, ಹಳ್ಳಿಯಲ್ಲಿಯೇ ವೈದ್ಯಕೀಯ ವೃತ್ತಿ ಮಾಡಿಸಬೇಕು ಎನ್ನುವ ಹಂಬಲ–ಹಟ.

‘ಓದದಿದ್ದರೆ ಅಷ್ಟೇ; ಜಮೀನು ಮಾಡಿಸಿಕೊಂಡು ಇರ್‌ತದೆ ಬುಡ್ಲ. ಮಗವ ಹೀಗೆ ಹೊಡಿಬ್ಯಾಡ’ ಎಂದು ನಮ್ಮಜ್ಜಿ ನಿಂಗಮ್ಮಜ್ಜಿ ನನಗೆ ಬೆಂಬಲವಾದಳು. ‘ಸಾಯಿ ಮಗನೇ’ ಎಂದು ನಮ್ಮಪ್ಪ ತನ್ನ ಆಸೆ ಕೈಗೂಡದ್ದಕ್ಕೆ ಸುಮ್ಮನಾದರು. ನಾಲ್ಕೈದು ವರುಷಗಳ ಕಾಲ ನಾನು ದನ–ಕುರಿ ಕಾಯುತ್ತ ಜಮೀನು ವ್ಯವಸಾಯ ಮಾಡುತ್ತ ಮನೆಯಲ್ಲಿಯೇ ಕಳೆದೆ.

ನಮ್ಮೂರಿನ ಸ್ಕೂಲಿನ ಮುಖ್ಯೋಪಾಧ್ಯಾಯರಾದ ಭೈರಶೆಟ್ಟರ ಬಳಿ ಪುಸ್ತಕಗಳನ್ನು ಪಡೆದುಕೊಂಡು ದನಕಾಯುವ ವೇಳೆ ಓದಲು ತೆಗೆದುಕೊಂಡು ಹೋಗುತ್ತಿದ್ದೆ. ದನವನ್ನು ಹೊಡೆದುಕೊಂಡು ಹೋಗುತ್ತಿದ್ದ ಬಾರೆಗೆ ಗೊಮ್ಮಟೇಶ್ವರನ ಮೂರ್ತಿ ಕಾಣಿಸುತ್ತಿತ್ತು. ಇಂದ್ರಗಿರಿ–ಚಂದ್ರಗಿರಿಯನ್ನು ಕಂಡು ಆ ಸಮಯದಲ್ಲಿಯೇ ಪದ್ಯ ಬರೆದಿದ್ದೆ. ಒಂದು ದಿನ ಗೆಳೆಯ ನಾರಾಯಣ ತೋಟಕ್ಕೆ ಬಂದ. ನನ್ನ ಶಾಲಾ ಸಹಪಾಠಿಯಾದ ಆತ ಅದಾಗಲೇ ಶಿಕ್ಷಕನಾಗಿದ್ದ. ‘ನಾವೆಲ್ಲ ಚೆನ್ನಾಗಿ ಓದುತ್ತಿರಲಿಲ್ಲ. ಪಾಸಾಗಿ ಪಾಸಾಗಿ ಮುಂದೆ ಹೋದೆವು. ನೀನು ಚೆನ್ನಾಗಿ ಓದುತ್ತಿದ್ದವನು. ಈಗ ನೋಡಿದರೆ…’ ಎಂದು ಕಣ್ಣೀರಿಟ್ಟ. ಆ ವೇಳೆಗಾಗಲೇ ನನ್ನ ಮನಸ್ಸಿನಲ್ಲಿ ಕಲಿಯಬೇಕು ಎನ್ನುವ ಛಲ ಮೂಡಿತ್ತು. ಅದಕ್ಕೆ ಕಾರಣ ನೆಂಟರಿಷ್ಟರ ಹೀಗಳಿಕೆ. ‘ಈ ಸಂಜೀವಯ್ಯನ ಮಗ ಓದದೇ ಪೋಲಿ ಬಿದ್ದುಬಿಟ್ಟ’ ಎನ್ನುವ ಮಾತುಗಳನ್ನು ಕೇಳಿ ಅವಮಾನಿತನಾಗಿದ್ದೆ.

‘ನಾನು ಈ ಮುಂಚೆ ಅನುತ್ತೀರ್ಣವಾಗಿದ್ದ ನವೋದಯ ಕಾಲೇಜಿಗೆ ಹೋಗುವುದಿಲ್ಲ, ಶ್ರವಣಬೆಳಗೊಳದ ಗೊಮ್ಮಟೇಶ್ವರ ವಿದ್ಯಾಲಯಕ್ಕೆ ಹೋಗುವೆ’ ಎಂದು ತೀರ್ಮಾನಿಸಿದೆ. ನಾನು ಕಾಲೇಜಿಗೆ ಹೋಗುವೆ ಎಂದು ಹೇಳಿದ್ದೇ ಅಪ್ಪನಿಗೆ ಸಂಭ್ರಮ. ನಮ್ಮೂರ ಬಾರೆಯ ಮೇಲಿಂದ ಗೊಮ್ಮಟನನ್ನು ನೋಡಿದ್ದ ನಾನು ಮೊದಲ ಬಾರಿಗೆ ಅವನ ಪದತಲಕ್ಕೆ ಬಂದಿದ್ದೆ.

ಎಂದಿನಂತೆ ಮತ್ತೊಮ್ಮೆ ನಮ್ಮಪ್ಪ ವಿಜ್ಞಾನ ವಿಷಯ ತೆಗೆದುಕೊಳ್ಳುವಂತೆ ಅಲ್ಲೂ ಹಟ ಮಾಡಿದರು. ಅಲ್ಲಿನ ಪ್ರಾಂಶುಪಾಲರಾಗಿದ್ದ ಜಿ. ಬ್ರಹ್ಮಯ್ಯನವರು ಮಧ್ಯಪ್ರವೇಶಿಸಿದರು. ಅವರು ಜೈನ ಸಾಹಿತ್ಯದ ವಿದ್ವಾಂಸರು. ‘ನನಗೆ ಇಂಗ್ಲಿಷ್ ಬರುವುದಿಲ್ಲ, ಕನ್ನಡ ಓದುವೆ’ ಎಂದೆ. ನಾನು ಬರೆದಿದ್ದ ಪದ್ಯಗಳನ್ನು ಕೇಳಿಸಿಕೊಂಡರು. ‘ಗೌಡರೇ ನಿಮ್ಮ ಮಗನನ್ನು ಸೈನ್ಸ್‌ಗೆ ಸೇರಿಸುತ್ತೇನೆ, ನೀವು ಹೋಗಿ’ ಎಂದು ಅಪ್ಪನನ್ನು ಕಳುಹಿಸಿ, ನನ್ನನ್ನು ಕಲಾವಿಭಾಗಕ್ಕೆ ದಾಖಲಿಸಿದರು. ಮರುದಿನ ಇದು ಅಪ್ಪನಿಗೆ ತಿಳಿಯಿತು. ಅವರು ನಮ್ಮಿಬ್ಬರ ಮೇಲೆ ಕುದ್ದುಹೋದರು.

ಕೆಲದಿನಗಳಲ್ಲಿ ಅಪ್ಪನಿಗೆ ಬ್ರಹ್ಮಯ್ಯನವರಿಂದ ಒಂದು ಪತ್ರ ಬಂದಿತು. ‘ಸಂಜೀವಯ್ಯನವರೆ ದಯವಿಟ್ಟು ಕ್ಷಮಿಸಿ. ನಿಮ್ಮ ಮಗನ ಆಸಕ್ತಿಯ ಕ್ಷೇತ್ರವೇ ಬೇರೆ. ಆ ಕಾರಣಕ್ಕೆ ಕಲಾವಿಭಾಗಕ್ಕೆ ಸೇರಿಸಿದ್ದು. ಒಂದು ಮಾತು, ಈ ಹುಡುಗ ಒಂದು ಅಪರಂಜಿ, ನಿಮಗೆ ಕಲಾತ್ಮಕ ಒಡವೆಯಾಗುತ್ತಾನೆ’ ಎಂದು ಬರೆದಿದ್ದರು.

ಬಾಹುಬಲಿಯ ಪದತಲದ ಪರಿಸರ ನನ್ನ ಎಲ್ಲ ನೋವುಗಳಿಗೆ ಪರಿಹಾರ ಕೊಡುವ ಜಾಗವಾಗಿ ಕಾಣಿಸಿತು. ನಾನು ಓದಿದ್ದೆಲ್ಲವೂ ಇಂದ್ರಗಿರಿ ಮತ್ತು ಚಂದ್ರಗಿರಿಯ ಕಲ್ಲುಬಂಡೆಗಳ ಮೇಲೆ, ಕಲ್ಯಾಣಿಯ ತಂಪಿನ ಪರಿಸರದಲ್ಲಿ. ಬೆಟ್ಟದ ಪ್ರತಿ ಸ್ಥಳವೂ ವ್ಯಾಸಂಗದ ತಾಣವಾಯಿತು. ಬೆಳಗೊಳ ನನ್ನ ಅಂತರಂಗವನ್ನು ಆವರಿಸುತ್ತಾ ಹೋಯಿತು. ‘ಇದು ಪರಮ ಪವಿತ್ರ ನೆಲೆ. ಸಾವಿರಾರು ಪುಣ್ಯಪುರುಷರು, ಯತೀಶ್ವರರು, ರನ್ನ, ಪಂಪ ಸೇರಿದಂತೆ ಕವಿವರ್ಯರು ನಡೆದಾಡಿದ ತಪೋಗೈದ ಸ್ಥಳ’ ಎಂದು ಬೆಳಗೊಳದ ಚರಿತ್ರೆ ಮತ್ತು ಸಾಹಿತ್ಯವನ್ನು ಗುರುಗಳಾದ ಬ್ರಹ್ಮಯ್ಯ ನನಗೆ ಕಟ್ಟಿಕೊಟ್ಟರು.
ಬೆಳಗೊಳ ಕುರಿತಂತೆ ಹಲವು ಪದ್ಯಗಳನ್ನು ಬರೆದಿದ್ದೇನೆ. ಕಲ್ಲು ಬೆಟ್ಟಗಳನ್ನು ಮೀರಿದ ಅನುಭವ ನನಗಲ್ಲಿ ದೊರೆಯಿತು.

ಬೆಟ್ಟದ ಮೇಲಿರುವ ರನ್ನನ ಹಸ್ತಾಕ್ಷರಗಳನ್ನು ಮುಟ್ಟಿ ರೋಮಾಂಚಿತನಾಗುತ್ತಿದ್ದೆ. ಗವಿಗಳಲ್ಲಿ ಮೈಮರೆತು ಕುಳಿತಿದ್ದಿದೆ. ಮೆಟ್ಟಿಲುಗಳು ಅನವಶ್ಯಕ ಎನ್ನುವಂತೆ ಬೆಳಗೊಳದ ಬೆಟ್ಟವನ್ನು ಯಾವುದೋ ಕಡೆಯಿಂದ ಏರಿ ಮತ್ತಾವುದೋ ಕಡೆಯಿಂದ ಇಳಿದಿದ್ದೇನೆ. ಇಡೀ ಬೆಟ್ಟವನ್ನೇ ತಡಕಾಡಿದ್ದೇನೆ. ಎಡದಿಂದ, ಬಲದಿಂದ, ನೇರವಾಗಿ, ಓರೆಯಾಗಿ ಬಾಹುಬಲಿಯ ಮುಖ ಯಾವ ರೀತಿ ಕಾಣಿಸುತ್ತದೆ, ಬೆಟ್ಟವನ್ನು ಯಾವ ಕೋನದಿಂದ ನೋಡಿದರೆ ಯಾವ ಆಕಾರದಲ್ಲಿದೆ… ಹೀಗೆ ನನ್ನದೇ ಪರಿಕಲ್ಪನೆಯಡಿ ಗೊಮ್ಮಟ ಮೂರ್ತಿಯನ್ನು ನೋಡಿದ್ದೇನೆ.

ಶ್ರವಣಬೆಳಗೊಳ ತ್ಯಾಗ, ಅಹಿಂಸೆಯನ್ನು ಮನುಕುಲಕ್ಕೆ ಸಾರಿದ ನೆಲ. 1974ರಲ್ಲಿ ಜೈನರ ‘ಧರ್ಮಚಕ್ರ ಶ್ರೀವಿಹಾರ’ ಯಾತ್ರೆ ದೇಶದಾದ್ಯಂತ ನಡೆಯಿತು. ಆ ಯಾತ್ರೆಯ ವಾಹನ ಶ್ರವಣಬೆಳಗೊಳಕ್ಕೂ ಬಂದಿತು. ಆಗ ಬೆಟ್ಟದ ಮೇಲೆ ‘ಭರತ–ಬಾಹುಬಲಿ’ ನಾಟಕ ಅಭಿನಯಿಸಲಾಯಿತು. ಆ ನಾಟಕಕ್ಕೆ ಬಣ್ಣ ಹಚ್ಚುವ ಮೂಲಕ ನಾನು ಮೊದಲ ಬಾರಿ ನಟನಾದೆ.  ಬೆಳಗೊಳದಿಂದ ನನ್ನ ಬದುಕು ಬೆಳಗಲು ಆರಂಭವಾಯಿತು. ನನ್ನ ಪಾಲಿಗೆ, ಪಂಪನ ‘ಮನುಷ್ಯ ಜಾತಿ ತಾನೊಂದು ವಲಂ’ ಎನ್ನುವ ಮಾತು ಪದೇ ಪದೇ ಅನುರಣಿಸುವುದು ಬೆಳಗೊಳ, ಕೂಡಲಸಂಗಮದಂಥ ರೂಪಕಗಳ ಮೂಲಕ.

Write A Comment