ಹೆಚ್.ಡಿ.ಕೋಟೆ,: ಸೃಷ್ಟಿಯ ವಿಸ್ಮಯ ನೋಡಿ ಮೇಕೆಯೊಂದು ಮಗುವಿನ ರೂಪದ ಎರಡು ಮರಿಗಳಿಗೆ ಜನ್ಮ ನೀಡಿದೆ! ಮೇಕೆ ಹಾಕಿದ ಮರಿಗಳು ಮಗುವಿನ ರೀತಿಯಲ್ಲಿರುವುದು ಇಲ್ಲಿನ ಹಾಡಿ ಜನರನ್ನು ಆಶ್ಚರ್ಯಗೊಳಿಸಿದೆ. ಈ ಮೇಕೆ ಮರಿಗಳು ಹುಟ್ಟಿದ ಕೆಲ ಕ್ಷಣಗಳಲ್ಲೇ ಸತ್ತು ಹೋಗಿದೆಯಾದರೂ ಮಗುವಿನ ರೀತಿ ಇರುವುದು ಸಖೇದಾಶ್ಚರ್ಯವನ್ನು ಉಂಟುಮಾಡಿದೆ.
ತಾಲ್ಲೂಕಿನ ಸೊಳ್ಳೆಪುರ ಗಿರಿಜನ ಪುನರ್ವಸತಿ ಯೋಜನೆಯ ಹಾಡಿಯಲ್ಲಿ ಭಾಸ್ಕರ್ ಎಂಬುವವರ ಸುಮಾರು 4 ವರ್ಷದ ಆಡೊಂದು ಮರಿಗಳನ್ನು ಹಾಕಿದ್ದು, ವಿಚಿತ್ರವೆಂದರೆ ಆಡಿನ ಮರಿಗಳು ಸುಮಾರು 2 ಅಡಿ ಉದ್ದವಿದ್ದು ಮೈಮೇಲೆ ಚರ್ಮವಿಲ್ಲ, ಎರಡು ಕೈ, ಎರಡು ಕಾಲು, ಕೈ ಕಾಲಿನಲ್ಲಿ ಆಡಿನಂತೆ ದಪ್ಪದಾದ ತಲಾ ಎರಡು ಗೊರಸುಗಳಿವೆ. ಉಳಿದಂತೆ ತಲೆಯಂಟು, ಕಣ್ಣಿಲ್ಲ, ಕೂದಲಿಲ್ಲ, ಗೋಧಿಮಿಶ್ರಿತ ಕೆಂಪು ವರ್ಣದಲ್ಲಿ ಮನುಷ್ಯನ ಆಕಾರವಿದೆ. ಹೊಟ್ಟೆ, ಬೆನ್ನು ಹೊಕ್ಕುಳು, ಗುದದ್ವಾರ ಎಲ್ಲವೂ ಇದೆ. ಆದರೆ ಮರಿಗಳಿಗೆ ಜೀವವೇ ಇಲ್ಲ.
21ನೇ ಶತಮಾನದಲ್ಲಿ ಕಂಡು ಬರುತ್ತಿರುವ ಈ ವೈಚಿತ್ರಕ್ಕೆ ಸೊಳ್ಳೆಪುರ ಗಿರಿಜನ ಹಾಡಿಯಲ್ಲಿ ಜನತೆ ಇನ್ನಿಲ್ಲದ ಆತಂಕ ಮತ್ತು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆ ಮಗುವಿನ ರೀತಿಯ ಒಂದು ಮರಿಯನ್ನು ಹಾಕಿದ್ದ ಆಡು ಅಸ್ವಸ್ಥಗೊಂಡಿತ್ತು. ಮೂರು ಗಂಟೆಯ ನಂತರ ಮತ್ತೊಂದು ಇದೇ ರೀತಿಯ ವಿಚಿತ್ರ ಮರಿಗೆ ಜನ್ಮ ನೀಡಿದೆ. ಪಶುವೈದ್ಯರು ಹೇಳುವ ಪ್ರಕಾರ ಹಲವೊಮ್ಮೆ ಈ ರೀತಿಯ ಪ್ರಕರಣಗಳು ಜರುಗುತ್ತವೆ. ವಿಚಿತ್ರ ರೀತಿಯಲ್ಲಿ ಜನಿಸಿದ ಇಂತಹ ಮರಿಗಳು ಉಳಿಯುವುದು ಕಡಿಮೆ. ಹಾಗಾಗಿಯೇ ಈ ರೀತಿ ಜನಿಸಿದ ಮರಿಗಳು ಸತ್ತು ಹೋಗಿವೆ ಎಂದು ಹೇಳುತ್ತಾರೆ. ಜನ ಸಾಗರ: ಸೊಳ್ಳೆಪುರದ ಭಾಸ್ಕರ್ ಮನೆಗೆ ಸಾವಿರಾರು ಮಂದಿ ದೌಡಾಯಿಸಿ ವಿಚಿತ್ರ ಆಡಿನ ಮರಿಯನ್ನು ವೀಕ್ಷಿಸಿ ಹಲವು ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದರು.