ಬೆಂಗಳೂರು: ‘ಎರಡು ವರ್ಷಗಳಿಂದ ಬಾಕಿ ಇರುವ ಸುಮಾರು ರೂ. 1500 ಕೋಟಿ ಮೊತ್ತದ ವಿವಿಧ ಕಾಮಗಾರಿಗಳ ಬಿಲ್ಗಳನ್ನು ಹಂತಹಂತವಾಗಿ ಪಾವತಿ ಮಾಡಲಾಗುವುದು’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಎಂ. ಲಕ್ಷ್ಮಿನಾರಾಯಣ ತಿಳಿಸಿದರು.
ಪಾಲಿಕೆ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಾಲಿಕೆಯು ಆರ್ಥಿಕ ಸಮಸ್ಯೆ ಎದುರಿಸುತ್ತಿದೆ. ಹಾಗಾಗಿ ಹಿರಿತನದ ಮೇಲೆ ಹಂತಹಂತವಾಗಿ ಹಣ ಬಿಡುಗಡೆ ಮಾಡಲಾಗುವುದು. ಇದರ ಪ್ರಕಾರ 2013ರ ಮಾರ್ಚ್ ತಿಂಗಳಿನ ರೂ. 84 ಕೋಟಿ ಬಾಕಿ ಮೊತ್ತವನ್ನು ನಾಲ್ಕೈದು ದಿನಗಳಲ್ಲಿ ಗುತ್ತಿಗೆದಾರರಿಗೆ ಪಾವತಿಸಲಾಗುವುದು’ ಎಂದರು.
ಪೂರ್ಣಗೊಂಡ ಕಾಮಗಾರಿಗಳ ಬಿಲ್ ಪಾವತಿ ಮಾಡುವಂತೆ ನೂರಾರು ಗುತ್ತಿಗೆದಾರರು ತೀವ್ರ ಒತ್ತಡ ಹೇರಿದ ಕಾರಣ ಆಯುಕ್ತರು ಈ ನಿರ್ಧಾರ ಪ್ರಕಟಿಸಿದರು.
‘ಹಣಕಾಸು ಇಲಾಖೆಯಿಂದ ಪಾಲಿಕೆಗೆ ರೂ. 52 ಕೋಟಿ ಬಿಡುಗಡೆಯಾಗಲಿದೆ. ಇನ್ನೂ ರೂ. 32 ಕೋಟಿ ಕಡಿಮೆಯಾಗುತ್ತದೆ. ಅದಕ್ಕಾಗಿ ವಲಯ ಕಚೇರಿಗಳಿಂದ ರೂ. 20 ಕೋಟಿ ವರ್ಗಾಯಿಸಿಕೊಳ್ಳಲಾಗುವುದು. ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್ಸಿ) ಯೋಜನೆಗೆ ವಿಧಿಸುವ ಶುಲ್ಕದಿಂದ ರೂ. 20 ಕೋಟಿ ಬರುತ್ತದೆ. ಇನ್ನು 4– 5 ದಿನಗಳಲ್ಲಿ 2013ರ ಮಾರ್ಚ್ ತಿಂಗಳಿನ ಸಾಮಾನ್ಯ ಎಲ್ಒಸಿ ಅನ್ವಯ (ಸಾಲದ ಹೊಣೆಗಾರಿಕೆ ಪತ್ರ) ಬಿಲ್ ಪಾವತಿಸಲಾಗುವುದು’ ಎಂದರು.
‘ಬೃಹತ್ ರಸ್ತೆ ಕಾಮಗಾರಿ ಸಂಬಂಧಿಸಿದಂತೆ ರೂ. 180 ಕೋಟಿ ಬಿಲ್ ಪಾವತಿ ಬಾಕಿ ಇದೆ. ಘನ ತ್ಯಾಜ್ಯ ನಿರ್ವಹಣೆಗೆ ರೂ. 150 ಕೋಟಿ ಪಾವತಿಸಬೇಕು. ಭೂಸ್ವಾಧೀನ ಉದ್ದೇಶದ ರೂ. 70–80 ಕೋಟಿ ಬಾಕಿ ಇದೆ’ ಎಂದು ಮಾಹಿತಿ ನೀಡಿದರು.
‘ಮಾರ್ಚ್– ಏಪ್ರಿಲ್ ಬಳಿಕ ಪಾಲಿಕೆಯ ಹಣಕಾಸು ಪರಿಸ್ಥಿತಿ ಸುಧಾರಿಸಲಿದೆ. ವಿವಿಧ ಮೂಲಗಳಿಂದ ಹಣ ಸಂದಾಯವಾಗಲಿದೆ. ತೆರಿಗೆಯಿಂದಲೇ ಸುಮಾರು ರೂ. 400–500 ಕೋಟಿ ಸಂಗ್ರಹವಾಗುತ್ತದೆ. ನಗರೋತ್ಥಾನ ಯೋಜನೆಯಡಿ ರೂ. 1000 ಕೋಟಿ ಅನುದಾನ ಲಭಿಸಲಿದೆ. ಇದರಿಂದ ಬಾಕಿ ಮೊತ್ತ ಪಾವತಿಸಬಹುದು’ ಎಂದರು.
ಎಲ್ಒಸಿ ಪರಿಶೀಲನೆ: ‘ಎಲ್ಲಾ ವಿಶೇಷ ಎಲ್ಒಸಿಗಳನ್ನು ಪರಿಶೀಲನೆಗಾಗಿ ಆಯುಕ್ತರ ತಾಂತ್ರಿಕ ಜಾಗೃತ ದಳಕ್ಕೆ (ಟಿವಿಸಿಸಿ) ನೀಡಲಾಗುವುದು’ ಎಂದೂ ಲಕ್ಷ್ಮಿನಾರಾಯಣ ತಿಳಿಸಿದರು.
ಗುತ್ತಿಗೆದಾರರ ಆಕ್ರೋಶ
ಪಾಲಿಕೆಯಲ್ಲಿ ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಸ್ಥಳಕ್ಕೆ ಏಕಾಏಕಿ ನುಗ್ಗಿದ ಗುತ್ತಿಗೆದಾರರು, ಕಾಮಗಾರಿಗಳ ಬಿಲ್ ಪಾವತಿಸುವಂತೆ ಒತ್ತಾಯಿಸಿ, ಪಾಲಿಕೆ ಆಯುಕ್ತ ಎಂ.ಲಕ್ಷ್ಮಿನಾರಾಯಣ ಹಾಗೂ ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ಅವರನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ತಳ್ಳಾಟ ಕೂಡ ನಡೆಯಿತು.
‘ಸಾವಿರಾರು ಕೋಟಿಯನ್ನು ಬಾಕಿ ಉಳಿಸಿಕೊಂಡಿದ್ದಾರೆ. 22 ತಿಂಗಳಿನಿಂದ ಹಣ ನೀಡಿಲ್ಲ. ಬದಲಾಗಿ ವಿಶೇಷ ಎಲ್ಒಸಿ ಎಂದು ಕಮಿಷನ್ ಪಡೆದು ತಮಗೆ ಬೇಕಾದವರಿಗೆ ಬಿಲ್ ಪಾವತಿ ಮಾಡುತ್ತಿದ್ದಾರೆ. ವಿಶೇಷ ಎಲ್ಒಸಿ ಕಿತ್ತು ಹಾಕಿ ಸಾಮಾನ್ಯ ಎಲ್ಒಸಿ ಮಾತ್ರ ಇರಬೇಕು’ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಅಂಬಿಕಾಪತಿ ದೂರಿದರು.
‘ಈಗ ಬಿಲ್ ಪಾವತಿಗೆ ಆನ್ಲೈನ್ ವ್ಯವಸ್ಥೆ ಮಾಡಿದ್ದಾರೆ. ಈ ವ್ಯವಸ್ಥೆಯಲ್ಲೂ ಭ್ರಷ್ಟಾಚಾರ ನಡೆಯುವ ಸಾಧ್ಯತೆ ಇದೆ. ಹಾಗಾಗಿ ಇದರ ಬಗ್ಗೆ ನಮಗೆ ಸ್ವಲ್ಪವೂ ನಂಬಿಕೆ ಇಲ್ಲ’ ಎಂದು ನುಡಿದರು.