ಕರ್ನಾಟಕ

ಅರಣ್ಯ ಹಕ್ಕು ಕಾಯ್ದೆ ಜಾರಿ ಗಡುವು ವಿಸ್ತರಣೆ: ಸಚಿವರ ಜೊತೆ ಚರ್ಚೆ: ಕಾಗೋಡು

Pinterest LinkedIn Tumblr

kagodu

ಬೆಂಗಳೂರು: ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸ್ವೀಕಾರ ಮತ್ತು ವಿಲೇವಾರಿಗೆ ನಿಗದಿಪಡಿಸಿರುವ ಗಡುವು ವಿಸ್ತರಿಸುವಂತೆ ಸಂಬಂಧಿಸಿದ ಸಚಿವರ ಜೊತೆ ಮಾತುಕತೆ ನಡೆಸುವುದಾಗಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ತಿಳಿಸಿದರು.

ವಿಧಾನಸೌಧದಲ್ಲಿ ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಅರಣ್ಯ ವಾಸಿಗಳ ಹಕ್ಕು ಖಾತರಿ­ಪಡಿಸುವ ಪ್ರಕ್ರಿಯೆಯನ್ನು ಡಿಸೆಂಬರ್‌ ಅಂತ್ಯದೊಳಗೆ ಪೂರ್ಣ­ಗೊಳಿಸುವಂತೆ ಇದೇ ಜೂನ್‌ನಲ್ಲಿ ಆದೇಶ ಹೊರಡಿಸಲಾಗಿತ್ತು. ವಾಸ್ತವವಾಗಿ ಇದು ಸಾಧ್ಯವಿಲ್ಲ. ಆದ್ದರಿಂದ ಗಡುವು ವಿಸ್ತರಿಸುವಂತೆ ಕೋರಲಾಗುವುದು’ ಎಂದರು.

ಅರಣ್ಯ ಹಕ್ಕು ಕಾಯ್ದೆಯ ಪ್ರಕಾರ ಗ್ರಾಮಗಳ ಮಟ್ಟದಲ್ಲಿ ಅರಣ್ಯ ಹಕ್ಕು ಸಮಿತಿಗಳನ್ನು ರಚಿಸಬೇಕು. ನಂತರ ಅರಣ್ಯವಾಸಿಗಳು ಈ ಸಮಿತಿಗಳಿಗೆ ಅರ್ಜಿ ಸಲ್ಲಿಸಬೇಕು. ಸಮಿತಿಯು ಈ ಅರ್ಜಿಗಳ ಬಗ್ಗೆ ವಿಚಾರಣೆ ನಡೆಸಿ, ಅರ್ಜಿದಾರರಿಗೆ ಹಕ್ಕು ನೀಡುವ ಅಥವಾ ನಿರಾಕರಿಸುವ ತೀರ್ಮಾನ ಕೈಗೊಳ್ಳಬೇಕು. ಬಹುತೇಕ ಜಿಲ್ಲೆಗಳಲ್ಲಿ ಇನ್ನೂ ಸಮಿತಿಗಳ ರಚನೆಯೇ ಆಗಿಲ್ಲ. ಡಿಸೆಂಬರ್‌ ಅಂತ್ಯದೊಳಗೆ ಅರ್ಜಿಗಳ ವಿಲೇವಾರಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

‘ಈ ಪ್ರಕರಣದಲ್ಲಿ ಹಿಂದಿನ ಸರ್ಕಾರ ಕಣ್ಣು ಮುಚ್ಚಿಕೊಂಡು ನಿರ್ಧಾರಗಳನ್ನು ಕೈಗೊಂಡಿತ್ತು. ಈಗಿನ ಸರ್ಕಾರ ಅರ್ಧ ಕಣ್ಣು ಮುಚ್ಚಿಕೊಂಡು ಮುಂದಕ್ಕೆ ಹೋಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುವಂತೆ ಸುಪ್ರೀಂಕೋರ್ಟ್‌ ತೀರ್ಪು ನೀಡಲು ಸರ್ಕಾರದ ಪರ ವಕೀಲರ ವೈಫಲ್ಯ ಕಾರಣ. ಅವರು ಸಮರ್ಥವಾಗಿ ವಾದ ಮಂಡಿಸಿದ್ದರೆ ಇಂತಹ ತೀರ್ಪು ಬರುತ್ತಿರಲಿಲ್ಲ. ಸರ್ಕಾರವೂ ಇಕ್ಕಟ್ಟಿಗೆ ಸಿಲುಕುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅರಣ್ಯ ಸಚಿವ ಬಿ.ರಮಾನಾಥ ರೈ, ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ಮತ್ತು ಕಾನೂನು ಸಚಿವ ಟಿ.ಬಿ.ಜಯ­ಚಂದ್ರ ಅವರೊಂದಿಗೆ ಶೀಘ್ರದಲ್ಲಿ ಸಭೆ ನಡೆಸುತ್ತೇನೆ. ಅರಣ್ಯದಲ್ಲಿ ವಾಸಿಸುವ ಜನರ ಹಿತ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೋರುತ್ತೇನೆ’ ಎಂದರು.

ಕಲಾಪ ವ್ಯರ್ಥಕ್ಕೆ ಅಸಮಾಧಾನ: ‘ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಚರ್ಚೆಗಳು ಆಗಲಿಲ್ಲ. ಅರಣ್ಯ ಜಮೀನು ಒತ್ತುವರಿಗೆ ಸಂಬಂಧಿಸಿದ ಚರ್ಚೆ ಅರ್ಧಕ್ಕೆ ಬಾಕಿ ಉಳಿದಿತ್ತು. ಬಿಪಿಎಲ್ ಪಡಿತರ ಚೀಟಿಗಳ ಸಮಸ್ಯೆ, ಬರ ಮತ್ತು ನೆರೆಯಿಂದ ಹಾನಿಗೀಡಾದ ರೈತರಿಗೆ ಪರಿಹಾರ ವಿತರಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ದೊರೆಯಲಿಲ್ಲ’ ಎಂದು ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದರು.

ಸಚಿವರ ವಿರುದ್ಧದ ಆರೋಪಗಳ ಕುರಿತು ಚರ್ಚೆಗೆ ನಿರಾಕರಿಸಿದ ನಿರ್ಧಾರವನ್ನು ಸಮರ್ಥಿಸಿಕೊಂಡ ಅವರು, ‘ತೀರ್ಮಾನದ ಹಿಂದೆ ರಾಜಕೀಯ ಇಲ್ಲ. ಸದನದ ನಿಯಮಗಳ ಪ್ರಕಾರವೇ ಈ ನಿರ್ಧಾರ ಕೈಗೊಳ್ಳಲಾಗಿತ್ತು’ ಎಂದು ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಜಂಟಿ ಅಧಿವೇಶನ
‘ವಿಧಾನಸಭೆಯ ಸಭಾಂಗಣದ ನವೀಕರಣ ಕಾಮಗಾರಿ ಜನವರಿ ಮಧ್ಯದೊಳಗೆ ಪೂರ್ಣ­ಗೊಳ್ಳಲಿದ್ದು, ಬೆಂಗಳೂರಿನಲ್ಲೇ ವಿಧಾನ­ಮಂಡಲದ ಜಂಟಿ ಅಧಿವೇಶನ ನಡೆಯಲಿದೆ’ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ತಿಳಿಸಿದರು.

ರೂ. 17 ಕೋಟಿ ವೆಚ್ಚದಲ್ಲಿ ನವೀಕರಣ ಕಾಮ­ಗಾರಿ ಕೈಗೆತ್ತಿಕೊಳ್ಳಲಾಗಿದೆ. ರೂ. 12 ಕೊಟಿ ವೆಚ್ಚದ ವಿದ್ಯುದ್ದೀಕರಣ ಕಾಮಗಾರಿ ಮತ್ತು ರೂ. 5 ಕೋಟಿ ವೆಚ್ಚದ ಸಿವಿಲ್ ಕಾಮಗಾರಿಗಳನ್ನು ಕೈಗೊಳ್ಳ­ಲಾಗಿದೆ. ಮೈಕ್‌ಗಳ ಪರೀಕ್ಷೆ ಸೇರಿದಂತೆ ಕೆಲವು ಕೆಲಸ ಬಾಕಿ ಉಳಿದಿದೆ. ಜನವರಿ 15ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಶಾಸಕರ ವೇತನ ಹೆಚ್ಚಳಕ್ಕೆ ಮಸೂದೆ
ಶಾಸಕರ ವೇತನದಲ್ಲಿ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಮುಂದಾ­ಗಿದೆ. ಈ ಸಂಬಂಧ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಮಸೂದೆ ಮಂಡಿಸುವ ಸಾಧ್ಯತೆ ಇದೆ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ತಿಳಿಸಿದರು.

‘ಶಾಸಕರ ವೇತನ ಹೆಚ್ಚಳಕ್ಕೆ ಸರ್ಕಾರದಿಂದ ಪ್ರಸ್ತಾವ ಬಂದಿದೆ. ಈ ಬಗ್ಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಜಂಟಿ ಅಧಿವೇಶನದಲ್ಲಿ ಮಸೂದೆ ಮಂಡಿಸಿ, ಒಪ್ಪಿಗೆ ಪಡೆಯಲು ಸರ್ಕಾರ ಯೋಚಿಸಿದೆ’ ಎಂದರು.
2011ರಲ್ಲಿ ರಾಜ್ಯದ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರ ವೇತನವನ್ನು ಹೆಚ್ಚಳ ಮಾಡಲಾಗಿತ್ತು.

Write A Comment