ಕರ್ನಾಟಕ

ಸಕಲೇಶಪುರದಲ್ಲಿ ಎತ್ತಿನಹೊಳೆ ಏತ ನೀರಾವರಿ ಯೋಜನೆ ಸಭೆ: ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ

Pinterest LinkedIn Tumblr

ettinahole

ಹಾಸನ: ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಇತರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ‘ಎತ್ತಿನಹೊಳೆ ಏತ ನೀರಾವರಿ ಯೋಜನೆ’ಗೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅಧ್ಯಕ್ಷತೆಯಲ್ಲಿ ಸೋಮವಾರ  ಸಕಲೇಶಪುರದಲ್ಲಿ ಕರೆದಿದ್ದ ಜನಾಭಿ­ಪ್ರಾಯ ಸಂಗ್ರಹ ಸಭೆಯಲ್ಲಿ ಸಚಿವರು ಆಡಿದ ಒಂದು ಮಾತು ಭಾರಿ ಕೋಲಾಹಲಕ್ಕೆ ಕಾರಣವಾಯಿತು.

ಸಭೆಯಲ್ಲಿ ಮಾತನಾಡಿದ ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಕಿಶೋರ್‌ ಕುಮಾರ್‌, ‘ಯಾರಿಗೂ ನೋಟಿಸ್‌ ನೀಡದೆ ಆಯೋಜಿಸಿದ್ದ ಈ ಸಭೆಯನ್ನು ಅಧಿಕೃತ ಜನಾಭಿಪ್ರಾಯ ಸಂಗ್ರಹ ಸಭೆ ಎಂದು ಒಪ್ಪಿಕೊಳ್ಳಲಾಗದು’ ಎಂದರು. ಜತೆಗೆ, ಬಂದಿದ್ದ ಜನಪ್ರತಿನಿಧಿಗಳು, ಸಂಘ–ಸಂಸ್ಥೆ ಪ್ರತಿನಿಧಿಗಳು ಹಾಗೂ ಪರಿಸರವಾದಿಗಳು ಸಹ ಸರ್ಕಾರದ ವಿರುದ್ಧ ಹರಿಹಾಯ್ದರು.

ಈ ಸಂದರ್ಭದಲ್ಲಿ ಪರಿಸರವಾದಿಗಳ ವಿರುದ್ಧ ಸಿಟ್ಟಾದ ಸಚಿವರು, ‘ಕಾನೂನು ಬೇರೆ, ಮಾನವೀಯತೆ ಬೇರೆ. ನಾವು ಮಾನವೀಯತೆ ನೆಲೆ­ಯಲ್ಲಿ ಯೋಜನೆ ಕೈಗೆತ್ತಿಕೊಂಡಿದ್ದೇವೆ. ಪಶ್ಚಿಮಘಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಯೇ ನಡೆಸ­ಬಾರದು ಎಂದಾದರೆ ನೀವೇನು ಆದಿಮಾನವರಂತೆ ಬದುಕುತ್ತೀರಾ?’ ಎಂದು ಪ್ರಶ್ನಿಸಿದರು.

ಈ ಮಾತು ಸ್ಥಳೀಯರನ್ನು ಕೆರಳಿಸಿತು. ಸರ್ಕಾ­ರದ ವಿರುದ್ಧ ಆಕ್ರೋಶ ಇದ್ದರೂ ಶಾಂತವಾಗಿ ಕುಳಿತಿದ್ದ ಜನರು ಸಚಿವರು ಆಡಿದ ಈ ಮಾತಿನ ನಂತರ ವೇದಿಕೆಯತ್ತ ಧಾವಿಸಿ ಮಾತಿನ ಚಕಮಕಿಗೆ ಇಳಿದರು. ‘ಧಮ್ಕಿ ಹಾಕಿ, ದಬ್ಬಾಳಿಕೆ­ಯಿಂದ ನಮ್ಮನ್ನು ಆಳ­ಬಹುದು ಎಂದು ಭಾವಿಸ­ಬೇಡಿ. ನಾವು ಸುಮ್ಮನಿರುವ­ವ­ರಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ಗದ್ದಲ ಮುಂದುವರಿಯಿತು. ಸ್ಥಳ­ದಲ್ಲಿದ್ದ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹ­ಸಪಟ್ಟರು.

ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಜೀವ ವೈವಿಧ್ಯ ನಿರ್ವಹಣಾ ಸಮಿತಿಯ ಅಧ್ಯಕ್ಷ ಕಿಶೋರ್‌ಕುಮಾರ್‌, ‘ಯೋಜನೆಯ ಬಗ್ಗೆ ಸ್ಥಳೀಯರಿಗೆ ಯಾವುದೇ ಮಾಹಿತಿ ಕೊಟ್ಟಿಲ್ಲ, ಭೂಸ್ವಾಧೀನ ಮಾಡದೆಯೇ ಜನರ ಜಮೀನಿನಲ್ಲಿ ಅಧಿಕಾರಿಗಳು ಅಕ್ರಮ ಪ್ರವೇಶ ಮಾಡುತ್ತಿದ್ದಾರೆ. ಜಮೀನು ಸರ್ವೆ ನಡೆಸದೆ ಒತ್ತಾಯಪೂರ್ವಕ­ವಾಗಿ ರೈತರಿಂದ ಒಪ್ಪಂದ ಪತ್ರಗಳಿಗೆ ಸಹಿ ಮಾಡಿಸುತ್ತಿದ್ದಾರೆ.

ಯೋಜನೆಗಾಗಿ ಭೂಮಿ ಕಳೆದುಕೊಳ್ಳುವವರಿಗೆ ಅಧಿಕೃತವಾಗಿ ನೋಟಿಸ್‌ ಕೊಡದಿದ್ದರೆ ಸಭೆಗೆ ಮಾನ್ಯತೆ ಬರುವುದು ಹೇಗೆ? ನಿಯಮದಂತೆ ನೋಟಿಸ್‌ ಕೊಟ್ಟು, ಸಭೆ ಆಯೋಜಿಸಿ ಅದರ ನಡಾವಳಿಗಳನ್ನು ದಾಖಲಿ­ಸ­ಬೇಕು. ವಿಡಿಯೊ ಚಿತ್ರೀಕರಣ ಆಗಬೇಕು. ಇಲ್ಲಿ ಯಾವುದೂ ನಡೆಯದಿರುವುದರಿಂದ ಇದು ಅಧಿಕೃತ ಸಭೆ ಎಂದು ಮಾನ್ಯ ಮಾಡಲು ಆಗುವುದಿಲ್ಲ’ ಎಂದರು.

‘ಸ್ಥಳೀಯರಿಗೆ ಮೂಲ ಸೌಲಭ್ಯ ನೀಡದೆ, ಇಲ್ಲಿಯ ನೀರನ್ನು ಬೇರೆಡೆಗೆ ಕೊಂಡೊಯ್ಯು­ವು­ದಾದರೆ ನಮ್ಮ ಶವಗಳನ್ನೂ ಒಯ್ಯಬೇಕಾ­ಗು­ತ್ತದೆ’ ಎಂದು ಮಾಜಿ ಶಾಸಕ ಎಚ್‌.ಎಂ. ವಿಶ್ವನಾಥ್‌ ಹೇಳಿದರು. ಯೋಜನೆಯ ಪರವಾಗಿ ಮಾತನಾಡಿದ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರೂ ಸ್ಥಳೀಯರಿಂದ ವಿರೋಧ ಎದುರಿಸ­ಬೇಕಾಗಿ ಬಂತು.

ಶಿವಲಿಂಗೇಗೌಡ ಸಭೆಯಿಂದ ಹೋದ ಬಳಿಕ ಮಾತನಾಡಿದ ಸಚಿವ ಪಾಟೀಲ, ‘ನಮ್ಮ ಉದ್ದೇಶ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ನೀರು ಕೊಡುವುದು. ನೀರು ಉಳಿದರೆ ಅರಸೀಕೆರೆಗೂ ಕೊಡು­ತ್ತೇವೆ. ಆದರೆ, ಆ ಬಗ್ಗೆ ಈಗಲೇ ಭರವಸೆ ಕೊಡಲಾಗದು’ ಎಂದರು.
‘ನೀವೇ ಚಿಕ್ಕಬಳ್ಳಾಪುರದಲ್ಲೋ, ಕೋಲಾರ­ದಲ್ಲೋ ಹುಟ್ಟಿದ್ದರೆ ಏನು ಮಾಡುತ್ತಿದ್ದಿರಿ ಎಂಬುದನ್ನು ಒಂದು ಕ್ಷಣ ಚಿಂತಿಸಿ ನಿರ್ಧಾರ ಕೈಗೊಳ್ಳಿ. ಸಭೆ ಆಯೋಜಿಸಲು ತಡವಾಗಿದ್ದಕ್ಕೆ ಕ್ಷಮೆ ಯಾಚಿಸುತ್ತೇನೆ’ ಎಂದು ಸಭೆಯ ಆರಂಭದಲ್ಲೇ ಸಚಿವರು ಹೇಳಿದರೂ ಅವರ ಮಾತನ್ನು ಕೇಳುವ ಸ್ಥಿತಿಯಲ್ಲಿ ಸ್ಥಳೀಯರು ಇರಲಿಲ್ಲ.

ಸಭೆಯಲ್ಲಿದ್ದ ಕೆಲವರು ಆಕ್ರೋಶ­ಭರಿತರಾಗಿ ಸರ್ಕಾರದ ವಿರುದ್ಧ ಹರಿಹಾಯ್ದರು. ಈ ಯೋಜನೆ ನಮ್ಮ ಬದುಕನ್ನು ಹಾಳು ಮಾಡುತ್ತದೆ. ಇದಕ್ಕೆ ನಮ್ಮ ವಿರೋಧವಿದೆ ಎಂದು ಒಕ್ಕೊರಲಿನಿಂದ ಹೇಳಿದರು. ಕೊನೆಗೆ, ‘ಶೀಘ್ರದಲ್ಲೇ ಅಧಿಕೃತವಾಗಿ ಎಲ್ಲರಿಗೂ ನೋಟಿಸ್‌ ಕೊಟ್ಟು ಇನ್ನೊಂದು ಸಭೆ ಆಯೋಜಿಸುತ್ತೇವೆ’ ಎಂದು ಸಚಿವ  ಪಾಟೀಲ ಭರವಸೆ ನೀಡಿದರು.

Write A Comment