ಕರ್ನಾಟಕ

‘ಕೂಲಿ ಕೈಗೆ ಹತ್‌ಲಿಲ್ಲ; ಊಟಕ್ಕ ಸಾಕಾಗ್ಲಿಲ್ಲ’: ದೇಸಿ ಕೈಮಗ್ಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಚ್ಚಿಕೊಂಡ ಕಥನ

Pinterest LinkedIn Tumblr

kaimagga

ಬೆಂಗಳೂರು: ‘ಕೈಮಗ್ಗ ಯಾಕ ಕಮ್ಮಿ ಆಗ್ಯಾವ ಹೇಳ್ರಿ… ಯಾಕಂದ್ರ ಕೂಲಿ ಕೈಗೆ ಹತ್‌ಲಿಲ್ಲ. ದಗದ (ದುಡಿತ)ದಿಂದ ಸಿಕ್ಕ ರೊಕ್ಕ ಊಟಕ್ಕ ಸಾಕಾಗ್ಲಿಲ್ಲ. ಅದ್ಕss ನೇಕಾರರೆಲ್ಲ ಗುಳೆ ಹೊಂಟಾರ. ಕೈಮಗ್ಗ ಸತ್ತು ಹೋಗಲಾರದ್ಹಂಗ ಸರ್ಕಾರ ಕಸುವು ತುಂಬಬೇಕಾಗೈತಿ’

–ನಗರದಲ್ಲಿ ಭಾನುವಾರ ದೇಸಿ ಟ್ರಸ್ಟ್‌ ಏರ್ಪಡಿಸಿದ್ದ ಸಮಾರಂಭದಲ್ಲಿ ‘ದೇಸಿ ರಾಷ್ಟ್ರೀಯ ಕೈಮಗ್ಗ ಪ್ರಶಸ್ತಿ’ ಪಡೆದ ಯಾದಗಿರಿ ಜಿಲ್ಲೆ ಕೊಡೇಕಲ್‌ ಗ್ರಾಮದ 88ರ ಹರೆಯದ ಅಜ್ಜ ಸಂಗಪ್ಪ ಮಂಟೆ, ಕೈಮಗ್ಗ ಕ್ಷೇತ್ರದ ದಾರುಣ ಸ್ಥಿತಿಯನ್ನು ಮನಸ್ಸಿಗೆ ತಟ್ಟುವಂತೆ ತೆರೆದಿಟ್ಟರು.

ಸ್ವಾತಂತ್ರ್ಯ ಹೋರಾಟ ಹಾಗೂ ಹೈದರಾಬಾದ್‌ ವಿಮೋಚನಾ ಚಳವಳಿ ಎರಡರಲ್ಲೂ ಭಾಗವಹಿಸಿದ ಸಂಗಪ್ಪ, ತಮ್ಮೂರಿನಲ್ಲಿ ಸ್ವಾತಂತ್ರ್ಯಕ್ಕೂ ಪೂರ್ವ­ದಲ್ಲೇ ಖಾದಿ ಕೇಂದ್ರವನ್ನು ಆರಂಭಿಸಿ-ದವರು. ಸಾಂಪ್ರದಾಯಿಕ ಚಂದ್ರಕಾಳಿ ಸೀರೆ ತಯಾರಿಕೆಯಲ್ಲಿ ಸಿದ್ಧಹಸ್ತರಾದ ಅವರು, ಧೋತಿ, ಪಂಚೆ, ಖಾದಿ ಬಟ್ಟೆ-ಗಳ ನೇಯ್ಗೆಯಲ್ಲಿ ಹೈ–ಕ ಭಾಗದಲ್ಲಿ ಕ್ರಾಂತಿ ಉಂಟು ಮಾಡಿದವರು.
ಈ ಇಳಿ ವಯಸ್ಸಿನಲ್ಲೂ ಸಂಗಪ್ಪ ನೇಯ್ಗೆ ವೃತ್ತಿಯನ್ನು ಬಿಟ್ಟಿಲ್ಲ. ‘ಬಾಪೂಜಿ ನಮ್ಗ ಸರಳ ಜೀವನದ ದೀಕ್ಷೆ ಕೊಟ್ಟಾರ. ಅದss ನನ್ನ ವ್ರತ’ ಎಂದು ಹೇಳಿದರು.

ಮಹಾಲಿಂಗಪುರದ ಶಿವಶಂಕರ ಮೂಡಲಗಿ ಪ್ರಶಸ್ತಿ ಪಡೆದ ಮತ್ತೊಬ್ಬ ಹಿರಿಯರು. ಆರು ವರ್ಷದ ಹಿಂದೆ ಸುಮಾರು 25 ಜನ ನೇಕಾರರೊಂದಿಗೆ ಅವರು ಆರಂಭಿಸಿದ ದಾನೇಶ್ವರಿ ಕೈಮಗ್ಗ ಸ್ವ–ಸಹಾಯ ಸಂಘ, ಈಗ ವರ್ಷಕ್ಕೆ 40 ಸಾವಿರ ಮೀಟರ್‌ ಬಟ್ಟೆಯನ್ನು ತಯಾ-ರಿಸು-ತ್ತದೆ.

ಇಳಕಲ್‌ ಸೀರೆ ನೇಯ್ಗೆ ಸೂತ್ರವನ್ನು ಅರಿತಿರುವ ಶಿವಶಂಕರ, ಕುಣಿಮಗ್ಗ ತಂತ್ರಜ್ಞಾನದಲ್ಲಿ ಸಿದ್ಧಹಸ್ತರು. ತೋಪ-ತೆನೆ, ಚಿಕ್ಕಿಫರಾಸ, ಚಂದ್ರಕಾಳಿ ಹಾಗೂ ಗೋಮಿ ಸೀರೆಗಳ ತಯಾರಿಕೆ­ಯಲ್ಲಿ ನಿಸ್ಸೀಮರು. ವಿದ್ಯುತ್‌ ಮಗ್ಗಗಳ ಹಾವಳಿಯಲ್ಲಿ ಕೈಮಗ್ಗಗಳ ಉಳಿವಿಗೆ ಯತ್ನಿಸುತ್ತಿದ್ದಾರೆ.

ತೆಲಂಗಾಣದ ಮೆಹದಿಪಟ್ಟಣದಿಂದ ಬಂದಿದ್ದ ಜಗದಾ ರಾಜಪ್ಪ, ಬಟ್ಟೆಗೆ ಹಾಕುವ ನೈಸರ್ಗಿಕ ಬಣ್ಣಗಳ ತಯಾರಿ­ಕೆಯಲ್ಲಿ ಮಾಡಿದ ಸಾಧನೆಗಾಗಿ ಪ್ರಶಸ್ತಿ ಪಡೆದರು. ಜಾಮಧಾನಿ ಸೀರೆಗಳಿಗೆ ನೀಲಿ ಬಣ್ಣ ಬಳಕೆ ಕುರಿತು ವಿಶೇಷ ಸಂಶೋ-ಧನೆ ಕೈಗೊಂಡಿರುವ ಅವರು, ‘ಟೆಕ್ನಿಕ್ಸ್‌ ಆಫ್‌ ನ್ಯಾಚುರಲ್‌ ಡೈಯಿಂಗ್‌’ ಎಂಬ ಕೃತಿಯನ್ನೂ ರಚಿಸಿದ್ದಾರೆ.

‘ಹವಾಮಾನ ಬದಲಾವಣೆ ಕುರಿತು ಜಗತ್ತಿನ ತುಂಬ ಈಗ ಚರ್ಚೆ ನಡೆದಿದೆ. ಆದರೆ, ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸಲು ಪೂರಕವಾದ ನಮ್ಮ ಹಳೆಯ ತಂತ್ರಜ್ಞಾನವನ್ನು ನಮ್ಮ ದೇಶ ಮರೆ­ಯುತ್ತಿದೆ’ ಎಂದು ಜಗದಾ ವಿಷಾದಿಂದ ಹೇಳಿದರು. ‘ನಮಗೆ ಹಳೆಯ ತಂತ್ರ­ಜ್ಞಾನವೇ ಬೇಕು. ಅಲ್ಲಿನ ತಯಾರಿಕೆ-ಗಳಿಗೆ ಅತ್ಯುತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು’ ಎಂದು ಸಲಹೆ ನೀಡಿದರು.

‘ಮೆಟಫರ್‌ ರಚ’ ಸಂಸ್ಥೆ ಸ್ಥಾಪಿಸಿದ ವಸ್ತ್ರ ವಿನ್ಯಾಸಕಾರರಾದ ಎಂ.ವಿ. ಚಂದ್ರ-ಶೇಖರ್‌ ಹಾಗೂ ಯು.ರವಿಕಿರಣ್‌ ಅವ-ರಿಗೂ ಪ್ರಶಸ್ತಿ ನೀಡಿ ಗೌರವಿಸ-ಲಾ-ಯಿತು.  ಪ್ರಶಸ್ತಿ ಪ್ರದಾನ ಮಾಡಿದ ಖ್ಯಾತ ಚಿತ್ರ ನಿರ್ದೇಶಕ ಶ್ಯಾಮ್‌ ಬೆನ-ಗಲ್‌, ‘ಕುಶಲಕರ್ಮಿಯೂ ಒಬ್ಬ ಕಲಾವಿದ. ಆನ್ವಯಿಕ ಕಲೆಗಳಿಂದ ಆತ ಅದ್ಭುತ­ವಾದುದನ್ನು ಸೃಷ್ಟಿ ಮಾಡು-ತ್ತಾನೆ. ನೇಕಾರ ನೇಯ್ದ ಬಟ್ಟೆ ಎಷ್ಟೊಂದು ಕಲೆಗಾರಿಕೆಯಿಂದ ಕೂಡಿ-ರು-ತ್ತದೆ’ ಎಂದು ಉದ್ಗಾರ ತೆಗೆದರು.

‘ನಮ್ಮ ಎಲ್ಲ ಪುರಾತನ ಕಲೆಗಳಿಗೂ ಪುನಶ್ಚೇತನ ನೀಡುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.
ನಿವೃತ್ತ ಐಜಿಪಿ ಅಜಯಕುಮಾರ್‌ ಸಿಂಗ್‌, ‘ದೇಶದ ಜನರ ಬದುಕಿಗೆ ಅತೀ ಹತ್ತಿರವಾದ ಕ್ಷೇತ್ರ ಕೈಮಗ್ಗ’ ಎಂದು ವ್ಯಾಖ್ಯಾನಿಸಿದರು. ‘ಸ್ತ್ರೀ ಸಬಲೀಕರಣಕ್ಕೆ ಈ ಕ್ಷೇತ್ರ ಕೊಟ್ಟಿರುವ ಕೊಡುಗೆ ದೊಡ್ಡದು’ ಎಂದು ಕೊಂಡಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಂಗಕರ್ಮಿ ಪ್ರಸನ್ನ, ‘ದೇಶದಲ್ಲಿ ಅತ್ಯ-ಧಿಕ ಉದ್ಯೋಗ ಸೃಷ್ಟಿ ಮಾಡುವ ಸಾಮರ್ಥ್ಯ ಹೊಂದಿರುವ ಕೈಮಗ್ಗ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ಅಗತ್ಯವಿದೆ’ ಎಂದು ಹೇಳಿದರು.

ದೇಸಿ ಟ್ರಸ್ಟ್‌ನಿಂದ ಐದು ಜನ ಸಾಧಕರಿಗೆ ನೀಡಲಾದ 2012–13ನೇ ಸಾಲಿನ ಈ ಪ್ರಶಸ್ತಿ ತಲಾ ₨ 50 ಸಾವಿರ ನಗದು, ಗಾಂಧೀಜಿ ಕಂಚಿನ ಪುತ್ಥಳಿ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.

***
ಪ್ರಶಸ್ತಿ ಪುರಸ್ಕೃತರಿಗೆ ನೀಡಿದ ಗಾಂಧೀಜಿ ಪುತ್ಥಳಿ ತುಂಬಾ ಭಾರ­ವಾಗಿದೆ. ಅದು ಈ ಮಹನೀಯರ ಸಾಧನೆಯ ತೂಕ ವನ್ನು ಸೂಚ್ಯವಾಗಿ ಪ್ರತಿಬಿಂಬಿಸುತ್ತಿದೆ

–ಶ್ಯಾಮ್‌ ಬೆನಗಲ್‌

Write A Comment