ಕರ್ನಾಟಕ

ಮಾತೃಭಾಷೆ ಶಿಕ್ಷಣ ಕಡ್ಡಾಯಕ್ಕೆ ಕೋಟಿ ಸಹಿ ಸಂಗ್ರಹ: ಡಾ.ಕಂಬಾರ

Pinterest LinkedIn Tumblr

kamba

ಬೆಂಗಳೂರು: ಮಾತೃಭಾಷೆಯಲ್ಲಿಯೇ ಕಡ್ಡಾಯವಾಗಿ ಪ್ರಾಥಮಿಕ ಶಿಕ್ಷಣ ನೀಡುವ ಸಂಬಂಧ ಕಾನೂನು ರೂಪಿಸಲು ಒಂದು ಕೋಟಿ ಸಹಿ ಸಂಗ್ರಹ ಚಳವಳಿ ನಡೆಸಬೇಕು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಹೇಳಿದರು.

81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ.ಸಿದ್ದಲಿಂಗಯ್ಯ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷ ಹೋಟೆಲ್‌ವೊಂದರಲ್ಲಿ ಭಾನುವಾರ ಏರ್ಪಡಿಸಿದ್ದ ಗೌರವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

”ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಮಾತೃಭಾಷೆ ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್ ಈಗಾಗಲೇ ತೀರ್ಪು ನೀಡಿದೆ. ಈಗ ಏನಿದ್ದರೂ ಕೇಂದ್ರದ ಮೇಲೆ ಒತ್ತಡ ತಂದು ಕಾನೂನಿನಲ್ಲಿ ಬದಲಾವಣೆ ಮಾಡುವುದೊಂದೇ ಬಾಕಿ ಇದೆ. 1ರಿಂದ 10ನೇ ತರಗತಿವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂದು ಹಲವು ರಾಜ್ಯಗಳು ಒತ್ತಾಯಿಸುತ್ತಿವೆ. ಅದರಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ,” ಎಂದರು.

”ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಈಗಾಗಲೇ 8 ಸಾವಿರ ಸಹಿಗಳನ್ನು ಸಂಗ್ರಹಿಸಲಾಗಿದೆ. ಕನ್ನಡ ಚಳವಳಿ ವಾಟಾಳ್ ಪಕ್ಷ ಸೇರಿದಂತೆ ಕನ್ನಡಪರ ಸಂಘಟನೆಗಳು ಈ ಚಳವಳಿ ಮುಂದುವರಿಸಿ 1 ಕೋಟಿ ಸಹಿಗಳನ್ನು ಸಂಗ್ರಹಿಸಬೇಕು. ಅದನ್ನು ಮಾತೃಭಾಷೆ ದಿನವಾದ ಫೆ.22ರಂದು ಪ್ರಧಾನಮಂತ್ರಿಗಳಿಗೆ ನೀಡಬೇಕು,” ಎಂದು ಹೇಳಿದರು.

”ಕವಿ ಸಿದ್ದಲಿಂಗಯ್ಯ ತಮ್ಮ ಶಿಷ್ಯ ಹಾಗೂ ಆತ್ಮೀಯರು. ಅಂತವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಹೆಮ್ಮೆ ತಂದಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಆರಂಭದಿಂದಲೂ ಹೋರಾಟದಲ್ಲಿ ಜತೆಯಾಗಿದ್ದರು. ತಾವು, ಲಂಕೇಶ್ ಮತ್ತಿತರರು ಭಿನ್ನ ಸಾಹಿತ್ಯದ ಚರ್ಚೆಯಲ್ಲಿ ಇದ್ದಾಗ ಸಿದ್ದಲಿಂಗಯ್ಯ ಕ್ರಾಂತಿ ಕವಿತೆಗಳ ಮೂಲಕ ಹೊಸ ಬಗೆಯ ಸಾಹಿತ್ಯಕ್ಕೆ ನಾಂದಿ ಹಾಡಿದರು,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

”ಇಂದು ಕನ್ನಡಕ್ಕಾಗಿ ದನಿ ಎತ್ತುವವರು ಇಲ್ಲವಾಗಿದೆ. ಕೆಲವರು ದನಿ ಎತ್ತಿದರೂ ಅಧಿಕಾರ ಸಿಕ್ಕಕೂಡಲೇ ಸುಮ್ಮನಾಗುತ್ತಾರೆ. ಆದರೆ ಕನ್ನಡದ ವಿಷಯದ ಹೋರಾಟದಲ್ಲಿ ವಾಟಾಳ್ ನಾಗರಾಜ್ ಮುಂಚೂಣಿಯಲ್ಲಿರುತ್ತಾರೆ,” ಎಂದರು.

kambara

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪುಂಡಲೀಕ ಹಾಲಂಬಿ, ”ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎಂಬುದು ಅವರ ಆಶಯವಾಗಿತ್ತು. ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ಒಬ್ಬ ದಲಿತ ವ್ಯಕ್ತಿಯೂ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೊದಲು ದೇವನೂರು ಮಹಾದೇವ ಅವರನ್ನು ಆಯ್ಕೆ ಮಾಡಲಾಯಿತು. ಅವರು ಅದನ್ನು ಒಪ್ಪಿಕೊಳ್ಳಲಿಲ್ಲ. ತದನಂತರ ಸಿದ್ದಲಿಂಗಯ್ಯ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ,”ಎಂದು ಹೇಳಿದರು.

”ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಚಂಪಾ ಅವರು ನೀಡಿರುವ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಎಲ್ಲ ಸದಸ್ಯರ ಒಪ್ಪಿಗೆ ಪಡೆದೇ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆಯೇ ಹೊರತು ಯಾವುದೇ ಗೊಂದಲಗಳು ಇಲ್ಲ,” ಎಂದು ಸ್ಪಷ್ಟಪಡಿಸಿದರು.

ದೇವನೂರು ಆಶಯದಂತೆ ಚರ್ಚೆ :
81ನೇ ಕನ್ನಡ ಸಾಹಿತ್ಯ ಸಮ್ಮೇಳನ ನಿಯೋಜಿತ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ, ”ಕನ್ನಡ ಭಾಷೆಗೆ ಇರುವ ಆತಂಕಗಳ ನಿವಾರಣೆಗೆ ಸಮ್ಮೇಳನ ಮೂಲಕ ಜನಾಂದೋಲನಕ್ಕೆ ನಾಂದಿ ಆಗಲಿದೆ. ದೇವನೂರು ಮಹಾದೇವ ಅವರು ಸಮ್ಮೇಳನದಲ್ಲಿ ಏನೆಲ್ಲ ಚರ್ಚೆಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೋ ಅದರಂತೆ ಆದ್ಯತೆ ನೀಡಲಾಗುವುದು. ತ್ಯಾಗ ಮತ್ತು ಅಹಿಂಸೆಯ ಪ್ರತೀಕವಾದ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಆಯ್ಕೆ ಮಾಡಿರುವುದು ಸೌಭಾಗ್ಯ,” ಎಂದು ಹೇಳಿದರು.

ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್, ”ಒಂದರಿಂದ ಹತ್ತನೇ ತರಗತಿವರೆಗೆ ಮಾತೃಭಾಷೆಯಲ್ಲಿಯೇ ಕಡ್ಡಾಯ ಶಿಕ್ಷಣ ನೀಡಲು ಕಾನೂನು ತರುವಂತೆ ಒತ್ತಾಯಿಸಿ ಒಂದು ಕೋಟಿ ಸಹಿ ಸಂಗ್ರಹ ಚಳವಳಿ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಪ್ರತಿ ಬಾರಿಯ ಸಾಹಿತ್ಯ ಸಮ್ಮೇಳನದಂತೆ ಈಗಲೂ ಅವೇ ನಿರ್ಣಯಗಳನ್ನು ಕೈಗೊಳ್ಳುವುದು ಬೇಡ. ಹೊಸ ದಿಕ್ಕಿನತ್ತ ಚಳವಳಿ ರೂಪಿಸಬೇಕು,” ಎಂದು ಆಶಿಸಿದರು.

Write A Comment