ಕಲಬುರಗಿ, ಡಿ.21: ಏಳು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ತಲೆ ತಪ್ಪಿಸಿಕೊಂಡಿದ್ದ ನಾಲ್ವರು ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಚಿತ್ತಾಪುರ ಗ್ರಾಮದ ಏಳು ವರ್ಷದ ಬಾಲಕಿ ಶಾಲೆಯಿಂದ ಮನೆಗೆ ಬರುತ್ತಿದ್ದ ಸಂದರ್ಭ ಮೂವರು 6ನೆ ತರಗತಿ ವಿದ್ಯಾರ್ಥಿಗಳು ಹಾಗೂ ಒಬ್ಬ 8ನೆ ತರಗತಿ ವಿದ್ಯಾರ್ಥಿ ಸೇರಿ, ಅವಳನ್ನು ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು.
ಚಿತ್ತಾಪುರ ಗ್ರಾಮದ ಚಿಂದಿ ತಾಂಡಾದ ತನ್ನ ಅಜ್ಜಿಯ ಮನೆಯಲ್ಲಿ ಬಾಲಕಿಯನ್ನು ಬಿಟ್ಟು ಅಪ್ಪ-ಅಮ್ಮ ಇಬ್ಬರೂ ಮುಂಬೈಗೆ ಕೆಲಸ ಅರಸಿಕೊಂಡು ಹೋಗಿದ್ದರು. ಶುಕ್ರವಾರ ಈ ಘಟನೆ ನಡೆದಿದ್ದು, ಅಜ್ಜಿ ವಿಷಯ ತಿಳಿದು ಬಾಲಕಿಯ ಅಪ್ಪ-ಅಮ್ಮಂದಿರಿಗೆ ಫೋನ್ ಮಾಡಿ ಕರೆಸಿಕೊಂಡಿದ್ದಾಳೆ.
ಶನಿವಾರ ಅವರು ಬಂದು ದೂರು ದಾಖಲಿಸಿದ್ದಾರೆ. ಈ ವೇಳೆಗೆ ನಾಲ್ವರೂ ಬಾಲಕರೂ ತಲೆ ಮರೆಸಿಕೊಂಡು ಪರಾರಿಯಾಗಿದ್ದರು. ಈ ಬಾಲಕರ ಪೈಕಿ ಒಬ್ಬ ಬಾಲಕಿಗೆ ಸಂಬಂಧಿಯಾಗಿದ್ದ ಇತರ ಮೂವರು ಬೇರೆ ಹಳ್ಳಿಯವರು. ದೂರು ಪಡೆದು ಕಾರ್ಯಾಚರಣೆಗೆ ಮುಂದಾದ ಪೊಲೀಸರು ಇಂದು ಮುಂಜಾನೆ ನಾಲ್ವರು ಬಾಲಕರನ್ನೂ ಬಂಧಿಸಿದ್ದಾರೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.