ಕರ್ನಾಟಕ

ಕಳವಿಗೆ ಯತ್ನಿಸಿದ ವಿದ್ಯಾರ್ಥಿ ಕೊಲೆ: ಕೆಲವೇ ತಾಸುಗಳಲ್ಲಿ ಆರೋಪಿಗಳ ಬಂಧನ

Pinterest LinkedIn Tumblr

pvec18dec14jTony

ಬೆಂಗಳೂರು: ಮತ್ತೀಕೆರೆ ಸಮೀಪ ಮಂಗಳವಾರ ನಿರ್ಮಾಣ ಹಂತದ ಕಟ್ಟಡದಲ್ಲಿ ಕಳವು ಮಾಡಲೆತ್ನಿಸಿದ ಟೋನಿ ವಿನ್ಸೆಂಟ್‌ (18) ಎಂಬ ವಿದ್ಯಾರ್ಥಿಯನ್ನು ಕಟ್ಟಡದ ಮಾಲೀಕ ಕೊಲೆ ಮಾಡಿದ್ದು, ಘಟನೆ ನಡೆದ ಕೆಲವೇ ತಾಸುಗಳಲ್ಲಿ ಪೊಲೀಸರು ಆರೋಪಿ­ಗಳನ್ನು ಬಂಧಿಸಿದ್ದಾರೆ. ಗಂಗಮ್ಮನಗುಡಿ ಬಳಿಯ ಸಿದ್ಧಾರ್ಥ­ನಗರದ ಟೋನಿ, ಖಾಸಗಿ ಕಾಲೇಜಿನಲ್ಲಿ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌್ ಓದುತ್ತಿದ್ದ.

ಕುಟುಂಬ ಸದಸ್ಯರಿಗೆ ಕಾಲೇಜಿಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಬೆಳಿಗ್ಗೆ ಹೊರ ಹೋಗಿದ್ದ ಆತ, ಮತ್ತೀಕೆರೆ ಬಳಿ ಬಂದು ನಿರ್ಮಾಣ ಹಂತದ ಕಟ್ಟಡದಲ್ಲಿ ಕಬ್ಬಿಣದ ವಸ್ತುಗ­ಳನ್ನು ಕಳವು ಮಾಡಲು ಯತ್ನಿಸಿದ್ದಾನೆ. ಅದೇ ವೇಳೆಗೆ ಅಲ್ಲಿಗೆ ಬಂದ ಕಟ್ಟಡದ ಮಾಲೀಕ ಮಂಜುನಾಥ್‌ ಅವರು ಕಾರ್ಮಿಕರ ಜತೆ ಸೇರಿ ಟೋನಿಯನ್ನು ಹಿಡಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ    ಮಂಜುನಾಥ್‌    ಮತ್ತು ಕಾರ್ಮಿ­­­ಕರು ಟೋನಿ­ಯನ್ನು ಕಟ್ಟಡ­ದೊ­ಳಗೆ  ಸಂಜೆವರೆಗೆ  ಕಟ್ಟಿಹಾಕಿ   ದೊಣ್ಣೆ­ಯಿಂದ ಹಿಗ್ಗಾ­ಮುಗ್ಗಾ ಥಳಿಸಿದ್ದಾರೆ. ಇದರಿಂದ ಆತ ಸ್ಥಳ­ದಲ್ಲೇ ಸಾವನ್ನಪ್ಪಿ­ದ್ದಾನೆ. ಬಳಿಕ ಮಂಜುನಾಥ್‌ ಕಾರ್ಮಿ­ಕರ ಜತೆ ಸೇರಿ ಶವವನ್ನು ಕಾರಿ­ನಲ್ಲಿ   ಎಚ್‌ಎಂಟಿ   ವಸತಿ    ಸಮುಚ್ಚ­ಯದ  ಬಳಿಗೆ  ಸಾಗಿಸಿಕೊಂಡು  ಬಂದು ರಸ್ತೆ ಬದಿಯ ಪೊದೆಗೆ ಎಸೆದು ಹೋಗಿ­ದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪೊದೆಯ ಪಕ್ಕ ಶವ ಬಿದ್ದಿರುವು­ದನ್ನು ನೋಡಿದ ಸ್ಥಳೀಯರು ಠಾಣೆಗೆ ಬುಧ­ವಾರ ಮಾಹಿತಿ ನೀಡಿದರು. ಆ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂತು. ಪ್ರಕರಣ ಸಂಬಂಧ ಮಂಜು­ನಾಥ್‌ ಮತ್ತು ಹನುಮಂತಪ್ಪ ಎಂಬ ಕೂಲಿ ಕಾರ್ಮಿಕನನ್ನು ಬಂಧಿ­ಸಲಾಗಿದೆ. ಇತರೆ ಆರೋಪಿಗಳು ತಲೆಮರೆಸಿ­ಕೊಂಡಿ­ದ್ದಾರೆ.

ಚಾಕುವಿನಿಂದ ಇರಿದು ರೌಡಿಯ ಕೊಲೆ: ಯಶವಂತಪುರ ಸಮೀಪದ ಅಂಬೇಡ್ಕರ್‌ ನಗರದಲ್ಲಿ ದುಷ್ಕರ್ಮಿಗಳು ಮಂಗಳ­ವಾರ ರಾತ್ರಿ ರವಿ (25) ಎಂಬ ರೌಡಿ­ಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಮತ್ತೀಕೆರೆ ಬಳಿಯ ಮೋಹನ್‌­ಕುಮಾರ್‌ ನಗರದ ರವಿ, ಗಾರೆ ಕೆಲಸ ಮಾಡುತ್ತಿದ್ದ. ರಾತ್ರಿ ಊಟ ಮಾಡಿದ ನಂತರ ಸ್ನೇಹಿತರನ್ನು ಭೇಟಿಯಾಗಿ ಬರುತ್ತೇ­ನೆಂದು ಕುಟುಂಬ ಸದಸ್ಯರಿಗೆ ಹೇಳಿ ಹೋಗಿದ್ದ ಆತ ಮನೆಗೆ ವಾಪಸ್ ಬಂದಿರಲಿಲ್ಲ. ಬಳಿಕ ಬುಧವಾರ ಬೆಳಗಿನ ಜಾವ ಅಂಬೇಡ್ಕರ್‌ ನಗರದಲ್ಲಿ ರೈಲು ಹಳಿ ಸಮೀಪ ಆತನ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಶವಂತಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment