ಕರ್ನಾಟಕ

ರೈಲಿನಿಂದ ಬಿದ್ದು ಬಿಬಿಎಂಪಿ ಜಂಟಿ ಆಯುಕ್ತ ಸಾವು

Pinterest LinkedIn Tumblr

govindaraj

ಬೆಂಗಳೂರು/ತುಮಕೂರು: ರೈಲಿನಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪೂರ್ವ ವಲಯದ ಜಂಟಿ ಆಯುಕ್ತ ಬಿ.ಇ. ಗೋವಿಂದ­ರಾಜು (58) ಮೃತಪಟ್ಟಿದ್ದಾರೆ.

ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಅರಸೀಕೆರೆ– ಬೆಂಗಳೂರು ರೈಲಿನಲ್ಲಿ ತುಮಕೂರು ಮಾರ್ಗವಾಗಿ ಬರುತ್ತಿದ್ದಾಗ ನಗರದ ಕುರಿಪಾಳ್ಯ ಸಿದ್ಧಾರ್ಥ ಪ್ರೌಢಶಾಲೆಗೆ ಎದುರು ಶುಕ್ರ ವಾರ ಬೆಳಿಗ್ಗೆ ಈ ಅವಘಡ ಸಂಭವಿಸಿದೆ. ಮೂಲತಃ ಚಿಕ್ಕಬಳ್ಳಾಪುರದ ಗೋವಿಂದರಾಜು ಅವರು ಬೆಂಗಳೂರಿನ ತಾವರೆಕೆರೆ ಸೆಂಟ್‌ಜಾನ್ಸ್‌ ಹುಡ್‌ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು.

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶಿವಮೊಗ್ಗದ ಸಾಗರ್‌ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್‌ ಬೆಂಗಳೂರಿಗೆ ರೈಲಿನಲ್ಲಿ ಮರಳುತ್ತಿದ್ದರು. ಶುಕ್ರವಾರ ಬೆಳಿಗ್ಗೆ 6.30ರ ಸುಮಾರಿಗೆ ರೈಲಿನ ಬಾಗಿಲು ಬಳಿ ನಿಂತಿದ್ದರು. ಅಷ್ಟರಲ್ಲಿ ಬೇರೆ ಬೋಗಿಯಿಂದ ಐದಾರು ಮಂದಿ ಅತ್ತ ಕಡೆ ಬಂದಾಗ ಬಾಗಿಲು ಬಳಿ ನಿಂತಿದ್ದ ಗೋವಿಂದರಾಜು ಕಾಲು ಜಾರಿ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಬೆಂಗಳೂರಿನ ಎಪಿಎಂಸಿ ಮಾರುಕಟ್ಟೆ ವಿಭಾಗದ ಹೆಚ್ಚುವರಿ ನಿರ್ದೇಶಕರಾಗಿ ಸಹ ಅವರು ಸೇವೆ ಸಲ್ಲಿಸಿದ್ದರು.

ಗುರುತು ಪತ್ತೆಯಾಗಿದ್ದು ಸಂಜೆ: ಶುಕ್ರವಾರ ಬೆಳಿಗ್ಗೆ ಮಲ್ಲಸಂದ್ರ– ನಗರ ರೈಲು ನಿಲ್ದಾಣದ ನಡುವೆ ಸಿಕ್ಕ ಅಪರಿಚಿತ ಶವದ ಫೋಟೊವನ್ನು ಯಶವಂತಪುರದ ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್‌ ಠಾಣೆಗೆ ಕಳುಹಿಸಿಕೊಡಲಾಗಿತ್ತು. ಈ ಭಾವಚಿತ್ರ ಪರಿಶೀಲಿಸಿ ಸಂಜೆ 5 ಗಂಟೆಗೆ ಗುರುತು ಪತ್ತೆ ಹಚ್ಚಲಾಯಿತು. ಮೃತ ವ್ಯಕ್ತಿ ಬಿಬಿಎಂಪಿ ಜಂಟಿ ಆಯುಕ್ತರಾಗಿದ್ದರು ಎಂಬುದು ಶನಿವಾರ ಬೆಳಿಗ್ಗೆ ಖಚಿತವಾಯಿತು ಎಂದು ತುಮಕೂರು ರೈಲ್ವೆ ಉಪ ಪೊಲೀಸ್‌ ಠಾಣೆ ಮುಖ್ಯ ಆರಕ್ಷಕ ಕಾಂತರಾಜು ತಿಳಿಸಿದರು.

ಕರ್ನಾಟಕ ಮಾರುಕಟ್ಟೆ ಆಡಳಿತ ಸೇವೆ (ಕೆಎಂಎಎಸ್‌) ಅಧಿಕಾರಿಯಾಗಿದ್ದ ಅವರು, ಬಿಬಿಎಂಪಿಗೆ ಎರವಲು ಸೇವೆ ಬಂದ ಮೇಲೆ ಜಂಟಿ ಆಯುಕ್ತ (ಆರೋಗ್ಯ ಹಾಗೂ ಜಾಹೀರಾತು) ಮತ್ತು ಕೌನ್ಸಿಲ್‌ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.
ಅವರು ಈ ಹಿಂದೆ 2008ರಲ್ಲಿ ಆರೋಗ್ಯ ವಿಭಾಗದ ಜಂಟಿ ಆಯುಕ್ತರಾಗಿದ್ದಾಗ ಕಸ ವಿಲೇವಾರಿ ಘಟಕಗಳ ಸ್ಥಾಪನೆಗೆ ತುಂಬಾ ಶ್ರಮಿಸಿದ್ದರು.

ಸೌಮ್ಯ ಸ್ವಭಾವದವರಾಗಿದ್ದ ಅವರು ಯಾರೊಂದಿಗೂ ಕಠಿಣವಾಗಿ ವರ್ತಿಸುತ್ತಿರಲಿಲ್ಲ ಎಂದು ಅವರ ಜತೆ ಕೆಲಸ ಮಾಡಿದ ಬಿಬಿಎಂಪಿ ಅಧಿಕಾರಿಗಳು ಹೇಳಿದರು. ಪೂರ್ವ ವಲಯದ ಜಂಟಿ ಆಯುಕ್ತರಾಗಿ ಕಳೆದ ಮೇ ತಿಂಗಳಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಪ್ರಭಾವಿಗಳಿಂದ ಒತ್ತಡಕ್ಕೆ ಒಳಗಾಗಿದ್ದರು.

ಅನಾರೋಗ್ಯದ ಕಾರಣ ದೀರ್ಘಾವಧಿ ರಜೆ ಪಡೆದಿದ್ದರು ಎಂದು ತಿಳಿಸಿದರು. ಶನಿವಾರ ಬೆಂಗಳೂರು ವಿಲ್ಸನ್‌ ಗಾರ್ಡನ್‌ ರುದ್ರಭೂಮಿಯಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Write A Comment