ಔರಾದ್ (ಬೀದರ್ ಜಿಲ್ಲೆ): ‘ಸದನದಲ್ಲಿ ಮೊಬೈಲ್ ವೀಕ್ಷಣೆ ಪ್ರಕರಣವನ್ನು ದೊಡ್ಡದಾಗಿ ಮಾಡಿ ಕಾಂಗ್ರೆಸ್ನವರು ನನ್ನನ್ನು ಬಲಿಪಶು ಮಾಡಿದ್ದಾರೆ. ಇದರಿಂದ ನಾನು ಮೂರು ದಿನಗಳ ಕಾಲ ಸಾಕಷ್ಟು ಯಾತನೆ ಅನುಭವಿಸಿದ್ದೇನೆ’ ಎಂದು ಶಾಸಕ ಪ್ರಭು ಚವಾಣ್ ನೊಂದುಕೊಂಡರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಮೆಸೇಜ್ ನೋಡುತ್ತಿದದ್ದು ಸತ್ಯ. ಆದರೆ, ಪ್ರಿಯಾಂಕಾ ಗಾಂಧಿ ಭಾವಚಿತ್ರ ವೀಕ್ಷಿಸುವ ಉದ್ದೇಶವಿರಲಿಲ್ಲ. ಅವರು ನನ್ನ ತಂಗಿ ಸಮಾನ. ನಾನು ಎಲ್ಲ ಮಹಿಳೆಯರನ್ನೂ ಗೌರವದಿಂದ ಕಾಣುತ್ತೇನೆ. ಆದರೆ, ಕಾಂಗ್ರೆಸ್ನವರು ಸಣ್ಣ ವಿಷಯ ದೊಡ್ಡದು ಮಾಡಿ ನನ್ನ ಮಾನ ಮರ್ಯಾದೆ ಬೀದಿಗೆ ಹಾಕಿದರು’ ಎಂದು ಕಣ್ಣೀರಿಟ್ಟರು.
‘ಈ ಘಟನೆಯಿಂದ ಪಕ್ಷದ ಕಾರ್ಯಕರ್ತರಿಗೆ ಹಾಗೂ ಕ್ಷೇತ್ರದ ಜನತೆಗೆ ಆಗಿರುವ ಮುಜುಗರಕ್ಕೆ ನಾನು ಕ್ಷಮೆಯಾಚಿಸುತ್ತೇನೆ’ ಎಂದರು.
‘ಒಂದು ತಿಂಗಳ ಕಾಲ ತಾಲ್ಲೂಕಿನಾದ್ಯಂತ ಗ್ರಾಮ ಸಂಚಾರ ನಡೆಸಿ ಜನರು ಎಸುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಕಲೆ ಹಾಕಿದ್ದೇನೆ. ತಾಲ್ಲೂಕಿನಲ್ಲಿ 20 ಸಾವಿರ ಫಲಾನುಭವಿಗಳ ಪಡಿತರ ಚೀಟಿ ರದ್ದಾಗಿವೆ.
ಬರಗಾಲದಿಂದ ಜನ ಎದುರಿಸುತ್ತಿರುವ ಸಮಸ್ಯೆಯನ್ನು ಸದನದಲ್ಲಿ ಹೇಳಲು ಎಲ್ಲ ತಯಾರಿ ಮಾಡಿಕೊಂಡು ಹೋಗಿದ್ದೆ. ಆದರೆ ಕಾಂಗ್ರೆಸ್ನವರ ಬಳಿ ಇದಕ್ಕೆಲ್ಲ ಉತ್ತರ ಹೇಳಲು ಆಗದೆ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ ಮೊಬೈಲ್ ವೀಕ್ಷಣೆ ಪ್ರಕರಣದಲ್ಲಿ ಸಿಕ್ಕಿಸಿದ್ದಾರೆ’ ಎಂದು ದೂರಿದರು.
ಸಚಿವ ಅಂಬರೀಷ್, ಶಾಸಕ ಎಸ್.ಎಸ್.ಮಲ್ಲಿಕಾರ್ಜುನ ಸೇರಿದಂತೆ ಹಲವರು ಮೊಬೈಲ್ ವೀಕ್ಷಣೆ ಮಾಡಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಈ ಯಾರ ವಿರುದ್ಧವೂ ಕ್ರಮ ಕೈಗೊಳ್ಳದ ಸರ್ಕಾರ ನನ್ನನ್ನು ಮಾತ್ರ ಸದನದಿಂದ ಅಮಾನತು ಮಾಡಿದೆ. ನಾನು ಹಿಂದುಳಿದ ಭಾಗದ ತಾಲ್ಲೂಕಿನವನು ಮತ್ತು ಬಂಜಾರಾ ಸಮುದಾಯಕ್ಕೆ ಸೇರಿದವನೆಂಬ ಕಾರಣಕ್ಕೆ ಈ ರೀತಿ ಅವಮಾನ ಮಾಡಿದ್ದಾರೆ’ ಎಂದರು.
‘ಘಟನೆಯಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ. ಜಗದೀಶ ಶೆಟ್ಟರ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಶಾಸಕ ಅಶೋಕ ಖೇಣಿ ಮತ್ತು ಕಾಂಗ್ರೆಸ್ನ ಕೆಲ ಶಾಸಕರು ನೀವು ಅಂಥದ್ದೇನು ತಪ್ಪು ಮಾಡಿಲ್ಲ, ಧೈರ್ಯವಾಗಿರಿ ಎಂದು ಸಮಾಧಾನ ಮಾಡಿದ್ದರು’ ಎಂದು ಹೇಳಿದರು.