ಕರ್ನಾಟಕ

ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ಸಾಮಾಜಿಕ ತಾಣ ನಿರ್ವಹಿಸುತ್ತಿದ್ದ ಮೆಹದಿ ಮಸ್ರೂರ್ ಬಿಸ್ವಾಸ್‌ ಬೆಂಗಳೂರಲ್ಲಿ ಸೆರೆ

Pinterest LinkedIn Tumblr

Mehdi11

ಬೆಂಗಳೂರು: ಇಸ್ಲಾಮಿಕ್‌ ಸ್ಟೇಟ್‌ (ಐ.ಎಸ್‌) ಭಯೋ­ತ್ಪಾದನಾ ಸಂಘಟನೆಯ ‘SHAMI WITNESS’ ಟ್ವಿಟರ್ ಖಾತೆಯನ್ನು ನಿರ್ವಹಣೆ ಮಾಡುತ್ತಿದ್ದ ಮೆಹದಿ ಮಸ್ರೂರ್ ಬಿಸ್ವಾಸ್‌ನನ್ನು (24) ಬೆಂಗಳೂರು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

‘ಜಾಲಹಳ್ಳಿಯ ಸುಜಾತಾ ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯಲ್ಲಿ ವಾಸವಾಗಿದ್ದ ಮೆಹದಿ, ಪಶ್ಚಿಮ ಬಂಗಾಳ ಮೂಲದವನು. ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು ಜಾಲಹಳ್ಳಿಯ ಐಟಿಸಿ ಫುಡ್‌ ಕಂಪೆನಿಯ ಉತ್ಪಾದನಾ ಘಟಕದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ. ಆರೋಪಿ­ಯನ್ನು ರಾತ್ರಿ ಆತನ ಮನೆಯಿಂದಲೇ ಬಂಧಿಸಲಾಯಿತು’ ಎಂದು ರಾಜ್ಯ ಪೊಲೀಸ್ ಮಹಾ­ನಿರ್ದೇಶಕ ಲಾಲ್ ರೋಕುಮ ಪಚಾವೊ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಶಮಿ ವಿಟ್ನೆಸ್’ ಖಾತೆ ನಿರ್ವಹಣೆ ಮಾಡುತ್ತಿರುವ ವ್ಯಕ್ತಿ ಬೆಂಗಳೂರಿನಲ್ಲಿ ನೆಲೆಸಿರುವ ಬಗ್ಗೆ ಇಂಗ್ಲೆಂಡ್‌ನ ಚಾನಲ್‌–4 ಸುದ್ದಿ ವಾಹಿನಿ ವರದಿ ಮಾಡಿತ್ತು. ಅದನ್ನು ಆಧರಿಸಿ ಕೇಂದ್ರ ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಕೇಂದ್ರ ಗುಪ್ತಚರ ದಳ, ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ನೆರವು ಪಡೆದು ಆರೋಪಿಯನ್ನು ಪತ್ತೆ ಮಾಡುವಲ್ಲಿ ಈ ತಂಡ ಯಶಸ್ವಿಯಾಯಿತು’ ಎಂದು ಹೇಳಿದರು.

ದಾಳಿಯ ಮಾಹಿತಿ ಹಂಚುತ್ತಿದ್ದ: ಬೆಂಗಳೂರು ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ ಮಾತನಾಡಿ, ‘ಟರ್ಕಿ, ಸಿರಿಯಾ, ಲೆಬನಾನ್, ಇಸ್ರೇಲ್, ಪ್ಯಾಲೆಸ್ಟೀನ್‌, ಗಾಝಾ ಪಟ್ಟಿ, ಈಜಿಪ್ಟ್‌ ಮತ್ತು ಲಿಬಿಯಾ ಮತ್ತಿತರ ಕಡೆಯ ವಿದ್ಯಮಾನಗಳ ಬಗ್ಗೆ ಮೆಹದಿಗೆ ಅತೀವ ಆಸಕ್ತಿ ಇತ್ತು. ಆ ದೇಶಗಳ ಮೇಲೆ ನಡೆಯುವ ಯುದ್ಧಗಳು, ಭಯೋತ್ಪಾದನಾ ದಾಳಿಗಳು, ಅದರಿಂದ ಆಗಿರುವ ಪರಿಣಾಮಗಳನ್ನು ನಿರಂತರವಾಗಿ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸುತ್ತಿದ್ದ’ ಎಂದು ಹೇಳಿದರು.

Meh

‘ಮಾಸಿಕ 60 ಜಿ.ಬಿ ಯಷ್ಟು ಅಂತ­ರ್ಜಾಲ ಬಳಸುತ್ತಿದ್ದ ಆತ, ಆನ್‌­ಲೈನ್‌­ನಲ್ಲಿ ಪ್ರಕಟವಾಗುವ ಎಲ್ಲ ಸುದ್ದಿಗಳನ್ನು ವೀಕ್ಷಿಸುತ್ತಿದ್ದ. ಅದರಲ್ಲಿ ಐ.ಎಸ್‌ ಸಂಘ­ಟನೆ­ಗಳ ಬಗ್ಗೆ ಬರುವ ಸುದ್ದಿಗಳನ್ನು ಕ್ರೋಡೀ­ಕ­ರಿಸಿ, ಟ್ವಿಟರ್‌ ಖಾತೆಗೆ ಹಾಕು­ತ್ತಿದ್ದ. ಜತೆಗೆ ಆ ಸುದ್ದಿಗೆ ತನ್ನ ಪ್ರತಿ­ಕ್ರಿಯೆಯನ್ನೂ ನೀಡುತ್ತಿದ್ದ. ಬೆಳಿಗ್ಗೆ ಕಂಪೆ­ನಿಯಲ್ಲಿ ಕೆಲಸ ಮಾಡುತ್ತಿದ್ದ. ಮನೆಗೆ ವಾಪ­ಸಾದ ನಂತರ ರಾತ್ರಿ ಟ್ವಿಟರ್‌ ಖಾತೆ­ಯನ್ನು ನಿರ್ವಹಣೆ ಮಾಡು­­ತ್ತಿದ್ದ. 17 ಸಾವಿರ ಮಂದಿ  ಆ ಖಾತೆ­ಯನ್ನು ಅನುಸರಿಸುತ್ತಿದ್ದರು’ ಎಂದು ಹೇಳಿದರು.

‘ಐ.ಎಸ್‌ ಸಂಘಟನೆ ಸೇರಬಯಸುವ ಹಾಗೂ ಉಗ್ರರಿಗೆ ಪ್ರಚೋದನೆ ನೀಡು­ವಂಥ ಕೆಲಸವನ್ನು ಈತ ಮಾಡುತ್ತಿದ್ದ. ಪ್ರಮು­ಖವಾಗಿ ಇಂಗ್ಲಿಷ್ ಮಾತನಾ­ಡುವ ಉಗ್ರರ ಮೇಲೆ ಈತನ ಬರಹ­ಗಳು ಪ್ರಭಾವ ಬೀರಿದ್ದವು. ಏಷ್ಯಾ ರಾಷ್ಟ್ರ­ಗಳ ವಿರುದ್ಧ ಯುದ್ಧ ಮಾಡುವಂತೆ ಐ.ಎಸ್‌ಗೆ ಕುಮ್ಮಕ್ಕು ನೀಡುತ್ತಿದ್ದ. ಬಹಳ ಜಾಣತನದಿಂದ ತನ್ನ ವಿವರವನ್ನು ಮುಚ್ಚಿ­­ಟ್ಟಿದ್ದ. ಇಂಗ್ಲೆಂಡ್‌ನ ಚಾನಲ್‌–4 ವಾಹಿನಿಯ ಕಾರ್ಯಾ­ಚರಣೆಯು ಆತನ ಇರುವಿಕೆಯನ್ನು ಪತ್ತೆ ಮಾಡು­ವಲ್ಲಿ ಪ್ರಮುಖ ಪಾತ್ರ ವಹಿಸಿದೆ’ ಎಂದರು.

‘ಬಂಧಿತನ ವಿರುದ್ಧ ಐಪಿಸಿ 125 (ದೇಶದ ವಿರುದ್ಧ ಯುದ್ಧ ಸಾರು­ವುದು), ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯ ಸೆಕ್ಷನ್‌ 18 (ಒಳಸಂಚು), ಸೆಕ್ಷನ್‌ 39 (ಭಯೋ­ತ್ಪಾದನಾ ಸಂಘಟನೆಗೆ ನೆರವು ನೀಡು­ವುದು) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ 66ರ (ತಂತ್ರಜ್ಞಾನ ದುರ್ಬಳಕೆ) ಅಡಿ ಗಂಗಮ್ಮನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಿಸ­ಲಾಗಿದೆ’ ಎಂದು ರೆಡ್ಡಿ ತಿಳಿಸಿದರು.

ವರ್ಷಕ್ಕೆ ₨ 5.3 ಲಕ್ಷ ಪಗಾರ: ಪಶ್ಚಿಮ ಬಂಗಾಳದ ಗೋಪಾಲಪುರದಲ್ಲಿ ಹುಟ್ಟಿ ಬೆಳೆದ ಮೆಹದಿ ಅಲ್ಲಿಯೇ ಎಂಜಿನಿ­ಯರಿಂಗ್ ಪದವಿ ಮುಗಿಸಿದ. ಕ್ಯಾಂಪಸ್‌ ಸಂದರ್ಶನದಲ್ಲಿ ಐಟಿಸಿ ಕಂಪೆನಿ­ಯಲ್ಲಿ ಕೆಲಸ ಪಡೆದು ಒಂದೂವರೆ ವರ್ಷ ತರ­ಬೇತಿ ಅವಧಿ­ಯಲ್ಲಿದ್ದ. ಕಂಪೆ­ನಿ ಇದೇ ಮಾರ್ಚ್‌ ತಿಂಗಳಲ್ಲಿ ಆತನ ಸೇವೆ­ಯನ್ನು ಕಾಯಂಗೊಳಿಸಿ, ವಾರ್ಷಿಕ ₨ 5.3 ಲಕ್ಷ ವೇತನ ಪ್ಯಾಕೇಜ್‌ ನೀಡಿತ್ತು.

ಕಾಲೇಜಿನಿಂದಲೇ ಸುಳಿವು
‘ಮೆಹದಿಯು ಕ್ಯಾಂಪಸ್‌ ಸಂದ­ರ್ಶನದ ಮೂಲಕ ಬೆಂಗ­ಳೂರಿನ ಕಂಪೆನಿ­ಯಲ್ಲಿ ಕೆಲಸ ಗಿಟ್ಟಿಸಿ­ಕೊಂ­ಡಿ­ರು­ವುದು ‘ಚಾನಲ್‌–4’ ವರದಿಯಿಂದ ಗೊತ್ತಾ­ಯಿತು. ಈ ಬಗ್ಗೆ ಕೋಲ್ಕತ್ತ ಪೊಲೀಸರಿಗೆ ಮಾಹಿತಿ ನೀಡಿದೆವು. ನಂತರ ಆರೋಪಿ ಓದಿದ್ದ ಗುರು­ನಾನಕ್‌ ಕಾಲೇಜಿಗೆ ತೆರಳಿದ ಸ್ಥಳೀಯ ಪೊಲೀಸರು, ಮೆಹದಿಯ ಪ್ರಸ್ತುತ ವಾಸ, ಕೆಲಸಕ್ಕೆ ಸೇರಿದ್ದ ಕಂಪೆನಿಯ ವಿವರಗಳನ್ನು ಪಡೆದು­ಕೊಂಡರು’ ಎಂದು ತನಿಖಾಧಿಕಾರಿಗಳು ವಿವರಿಸಿದರು.

‘ಆ ವಿವರಗಳ ಜತೆಗೆ ಆತನ ಮೊಬೈಲ್ ಸಂಖ್ಯೆ ಹಾಗೂ ಇಂಟರ್‌ನೆಟ್‌ ಪ್ರೊಟೊಕಾಲ್ (ಐಪಿ) ವಿಳಾಸವನ್ನೂ ಪರಿಶೀಲಿಸಲಾಯಿತು. ಹೀಗೆ ತನಿಖಾ ತಂಡಗಳು ಮೆಹದಿ ನೆಲೆಸಿದ್ದ ಅಪಾರ್ಟ್‌ಮೆಂಟನ್ನು ಪತ್ತೆ ಮಾಡುವಲ್ಲಿ ಯಶಸ್ವಿ­ಯಾದವು. ರಾತ್ರಿ 12.10ಕ್ಕೆ ಸಿಬ್ಬಂದಿ ಆತನ ಮನೆ­ಯನ್ನು ಪ್ರವೇಶಿಸಿದಾಗಲು ಸಹ ಮೆಹದಿ ‘ಶಮಿ ವಿಟ್ನೆಸ್‌’ ಖಾತೆಯನ್ನು ನಿರ್ವಹಣೆ ಮಾಡುತ್ತಿದ್ದ. ಯಾವುದೇ ಪ್ರತಿ­ರೋಧ ತೋರದೆ ಶರಣಾದ’ ಎಂದು ಮಾಹಿತಿ ನೀಡಿದರು.

ಭಾವನಾತ್ಮಕ ನಂಟು
‘ದೇಶದ ಉಗ್ರರ ಜತೆ ಆತನಿಗೆ ನಂಟಿಲ್ಲ. ವಿದೇಶಕ್ಕೆ ಎಂದೂ ಪ್ರಯಾಣ ಮಾಡಿದವನಲ್ಲ. ಕೆಲಸ ಮುಗಿಸಿ, ರಾತ್ರಿ ಮನೆಗೆ ಮರಳಿ 4 ತಾಸು ಟ್ವಿಟರ್ ಖಾತೆಯಲ್ಲಿ ತುಂಬ ಭಾವನಾತ್ಮಕವಾಗಿ ತೊಡಗಿಸಿಕೊಳ್ಳುತ್ತಿದ್ದ. ಐ.ಎಸ್‌ ಬಗ್ಗೆ ಕಾಳಜಿ ಇರುವುದನ್ನು ತೋರಿಸಿಕೊಳ್ಳುವ ಉದ್ದೇಶ­ದಿಂದ ಹೀಗೆ ಮಾಡಿದ್ದಾಗಿ ಮೆಹದಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಹಿರಿಯ ಅಧಿಕಾರಿಗಳು ವಿವರಿಸಿದರು.

ತನಿಖೆಗೆ ಸಹಕರಿಸುತ್ತೇವೆ
‘ಮೆಹದಿ ಬಂಧನದ ಸುದ್ದಿ ತಿಳಿದ ನಂತರ ಆತನಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ಪೊಲೀಸರಿಗೆ ತಿಳಿಸಿದ್ದೇವೆ. ಆತ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಬಗ್ಗೆಯೂ ಮಾಹಿತಿ ಕೊಟ್ಟಿದ್ದೇವೆ. ಪ್ರಕರಣ ಸಂಬಂಧ ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ’
–ನಜೀಬ್‌ ಆರೀಫ್‌,ಉಪಾಧ್ಯಕ್ಷ, ಐಟಿಸಿ ಫುಡ್‌ ಕಂಪೆನಿಯ ಕಾರ್ಪೊರೇಟ್‌ ಕಮ್ಯೂನಿಕೇಶನ್‌ ವಿಭಾಗ

ಆತಂಕದಲ್ಲಿ ಮನೆ ಮಾಲೀಕ
‘ರಾತ್ರಿ 11.30ಕ್ಕೆ ಕರೆ ಮಾಡಿದ ಸಿಸಿಬಿ ಪೊಲೀಸರು, ಮೆಹದಿಯ ಕಾನೂನು ಬಾಹಿರ ಚಟುವಟಿಕೆಗಳನ್ನು ವಿವರಿಸಿದರು. ಅಲ್ಲದೆ, ಕೂಡಲೇ ಮನೆ ಸಮೀಪ ಬರುವಂತೆ ಹೇಳಿದರು. ಉಗ್ರರ ಜತೆ ನಂಟು ಇಟ್ಟುಕೊಂಡಿದ್ದ ವ್ಯಕ್ತಿಗೆ ಮನೆ ಬಾಡಿಗೆ ನೀಡಿದ್ದರಿಂದ ಬೇಸರವಾಯಿತು. ಜತೆಗೆ ಆತಂಕವೂ ಆಯಿತು’ ಎಂದು ಮನೆ ಮಾಲೀಕ ಶ್ರೀನಿವಾಸಯ್ಯ ಹೇಳಿದರು.

‘ಪರಿಚಿತ ದಲ್ಲಾಳಿಯೊಬ್ಬರು ಆತನಿಗೆ ಮನೆ ಕೊಡಿಸಿದ್ದರು. ಮೊದಲು ಮೂರನೇ ಮಹಡಿಯ ಕೋಣೆಯಲ್ಲಿದ್ದ ಮೆಹದಿ, ನಂತರ ಪೋಷಕರು ಬಂದು ಹೋಗುತ್ತಾರೆಂದು ಎರಡು ಕೋಣೆಗಳಿರುವ ಮನೆ ಕೇಳಿದ. ಹೀಗಾಗಿ 2ನೇ ಮಹಡಿಯಲ್ಲಿದ್ದ ‘ಎ–14’ ಸಂಖ್ಯೆಯನ್ನು ಬಾಡಿಗೆ ಕೊಟ್ಟಿದ್ದೆ’ ಎಂದು ವಿವರಿಸಿದರು.

‘ಆತ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಒಮ್ಮೆ ಮನೆ ಸೇರಿದರೆ ಮತ್ತೆ ಹೊರ ಬರುತ್ತಿರಲಿಲ್ಲ. ಮಾಧ್ಯಮಗಳಲ್ಲಿ ಮೆಹದಿ ಬಗ್ಗೆ ವರದಿಯಾದ ಸುದ್ದಿ ನೋಡಿ ಆಘಾತವಾಯಿತು’ ಎಂದು ಸ್ಥಳೀಯರು ಆತಂಕದಿಂದ ನುಡಿದರು.

ಆತನದು ಎರಡನೇ ಖಾತೆ
‘2009ರಲ್ಲಿ ‘ಎಲ್‌ ಸಾರ್ಟಡಾರ್’ ಎಂಬ ಹೆಸರಿನಲ್ಲಿ ಖಾತೆ ತೆರಿದಿದ್ದ ಮೆಹದಿ, ಅದರಲ್ಲೂ ಸಹ ಇದೇ ರೀತಿ ಪ್ರಚೋದನಾಕಾರಿ ವಿವರಗಳನ್ನು ಪ್ರಕಟಿಸುತ್ತಿದ್ದ. ನಂತರ ಅದನ್ನು ಬ್ಲಾಕ್‌ ಮಾಡಿ, 2013ರ ಮಾರ್ಚ್‌ ತಿಂಗಳಲ್ಲಿ ‘ಶಮ್ಮಿ ವಿಟ್ನೆಸ್‌’ ಖಾತೆ ತೆರೆದಿದ್ದ. ಬಂಧಿತನಿಂದ ಎರಡು ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ ಜಪ್ತಿ ಮಾಡಲಾಗಿದೆ’
– ಎಂ.ಎನ್.ರೆಡ್ಡಿ, ಬೆಂಗಳೂರು ಕಮಿಷನರ್

ಡಿಸಿಪಿಗೆ ಬೆದರಿಕೆ
ಬೆಂಗಳೂರು: ಮೆಹದಿ ಬಂಧನ ಸಂಬಂಧ ಸಿಸಿಬಿ ಡಿಸಿಪಿ ಅಭಿಷೇಕ್‌ ಗೋಯಲ್‌ ಅವರ ಟ್ವಿಟರ್‌ ಖಾತೆಗೆ (@goyal_abhei) ಶನಿವಾರ ರಾತ್ರಿ ಬೆದರಿಕೆ ಸಂದೇಶವೊಂದು ಬಂದಿದೆ. ಗೋಯಲ್‌ ಅವರು ಮೆಹದಿ ಬಂಧನಕ್ಕೆ ಸಂಬಂಧಿಸಿದ ಪತ್ರಿಕಾ ಪ್ರಕಟಣೆಯನ್ನು ತಮ್ಮ ಖಾತೆಯಲ್ಲಿ ಹಾಕಿದ್ದರು.

ಈ ಸಂದೇಶಕ್ಕೆ @abouanfal6 ಎಂಬ ಖಾತೆಯಿಂದ ಪ್ರತಿಕ್ರಿಯಿಸಿರುವ ವ್ಯಕ್ತಿಯೊಬ್ಬ, ‘ನಮ್ಮ ಸಹೋದರನನ್ನು ನಿಮ್ಮ ವಶದಲ್ಲಿರಲು ಬಿಡುವುದಿಲ್ಲ. ಮೆಹದಿ ಬಂಧನಕ್ಕೆ ಸದ್ಯದಲ್ಲೇ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಕಾದು ನೋಡಿ’ ಎಂದು ಆಂಗ್ಲ ಭಾಷೆಯಲ್ಲಿ ಟ್ವೀಟ್‌ ಮಾಡಿದ್ದಾನೆ.

‘ನನ್ನ ಮಗ ಅಂಥವನಲ್ಲ’
ಕೋಲ್ಕತ್ತ: ಐ.ಎಸ್‌ ಉಗ್ರರ ಟ್ವಿಟರ್‌ ಖಾತೆ ನಿರ್ವಹಿಸುತ್ತಿರುವ ಆರೋಪ­ದಲ್ಲಿ ಮಗ ಮೆಹದಿ ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದರೂ ಆತನ ತಂದೆ ಮಿಖಾಯೆಲ್‌ ಮಾತ್ರ, ತಮ್ಮ ಮಗ ಮುಗ್ಧ ಎಂದೇ ನಂಬಿದ್ದಾರೆ. ತಮ್ಮ ಮಗ ಯಾವುದೇ ಜಿಹಾದಿ ಚಟುವಟಿಕೆಗಳ ಜೊತೆ ಸಂಪರ್ಕ ಹೊಂದಿಲ್ಲ ಎಂದು ಅವರು ಇಲ್ಲಿ ಶನಿ­ವಾರ ‘ಪ್ರಜಾವಾಣಿ’ಯೊಂದಿಗೆ ದೂರವಾಣಿಯಲ್ಲಿ ವಾದಿಸಿದರು.

‘ನನ್ನ ಮಗನನ್ನು ಬಂಧಿಸಲಾಗಿದೆ ಎಂಬ ಸುದ್ದಿ ಮಾಧ್ಯಮದಿಂದ ತಿಳಿದು­ಬಂದಿದೆ. ನನಗೆ ಅಂತಹ ಯಾವುದೇ ಮಾಹಿತಿ ಇಲ್ಲ. ಅವನು ಯಾವುದೇ ಕಾನೂನುಬಾಹಿರ ಮತ್ತು ದೇಶ ವಿರೋಧಿ ಕೃತ್ಯಗಳಲ್ಲಿ ಪಾಲ್ಗೊಂಡಿ­ರುವುದನ್ನು ನಾನು ನಂಬುವುದಿಲ್ಲ’ ಎಂದು ಅವರು ಹೇಳಿದರು.

ವೃತ್ತಿಯಲ್ಲಿ ಹೋಮಿಯೋಪತಿ ವೈದ್ಯ­ರಾಗಿರುವ ಮಿಖಾಯೆಲ್‌ ಅವರ ಪ್ರಕಾರ, ‘ಮಗ ಸದಾ ಅಧ್ಯ­ಯನ ನಿರತನಾಗಿರುತ್ತಿದ್ದ. ಅಲ್ಲದೆ ಜಂಟಿ ಪ್ರವೇಶ ಪರೀಕ್ಷಾ ಮಂಡಳಿ ನಡೆಸಿದ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಎಲೆಕ್ಟ್ರಿಕಲ್‌ ಎಂಜಿನಿ­ಯರಿಂಗ್‌ ಸೇರಿದ್ದ’.

ಮಿಖಾ­ಯೆಲ್‌ ಅವರು ವಿಮಾನ ನಿಲ್ದಾಣದ ಬಳಿ­ಯಿ­ರುವ ಕೈಖಲಿ­ಯಲ್ಲಿ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಜತೆ ನೆಲೆಸಿದ್ದಾರೆ. ಮಗ­ನಿಗೆ ನಿಯಮಿತ­ವಾಗಿ ಕರೆ ಮಾಡುತ್ತಿ­ದ್ದ­ ಅವರು ಶುಕ್ರ­ವಾರ ರಾತ್ರಿಯೂ ಮಾತನಾಡಿ­­ದ್ದ­ರಂತೆ.

‘ಕಳೆದ ರಾತ್ರಿ ದೂರವಾಣಿಯಲ್ಲಿ ಮಾತನಾಡಿದ ಆತ ತನ್ನ ಇ–ಮೇಲ್‌ ಖಾತೆಗೆ ಯಾರೋ ಕನ್ನ (ಹ್ಯಾಕ್‌) ಹಾಕಿದ್ದಾರೆ ಎಂದ. ಈಗ ಪೊಲೀಸರು ಆತನನ್ನು ದೂಷಿಸುತ್ತಿರುವುದಕ್ಕೆ ಇದೇ ಕಾರಣವಿರಬೇಕು. ನನಗೆ ಕಂಪ್ಯೂಟರ್‌ ಬಗ್ಗೆ ಹೆಚ್ಚೇನೂ ತಿಳಿ­ಯದು. ಇದಕ್ಕಿಂತ ಹೆಚ್ಚೇನೂ ಹೇಳ­ಲಾರೆ’ ಎಂದರು.

ಮೊದಲು ರಾಜ್ಯ ವಿದ್ಯುತ್‌ ಮಂಡಳಿ­ಯಲ್ಲಿ ಎಂಜಿನಿಯರ್‌ ಆಗಿ ಕೆಲ ವರ್ಷಗಳ ಕಾಲ ದುಡಿದಿದ್ದ ಮಿಖಾಯೆಲ್‌ 2010ರಲ್ಲಿ ನಿವೃತ್ತಿ­ನಂತರ ಹೋಮಿ­ಯೋಪಥಿ ವೈದ್ಯ ವೃತ್ತಿ ಕೈಗೆತ್ತಿ­ಕೊಂಡಿ­ದ್ದರು. ಮೆಹದಿ ಇಲ್ಲಿನ ಸೋದ್‌ಪುರದ ಗುರು­ ನಾನಕ್‌ ತಾಂತ್ರಿಕ ಸಂಸ್ಥೆಯಲ್ಲಿ ಎರಡು ವರ್ಷಗಳ ಹಿಂದೆ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ನಂತರ ಬೆಂಗ­ಳೂರಿನಲ್ಲಿ ಬಹು­ರಾಷ್ಟ್ರೀಯ ಕಂಪೆನಿ­ಯೊಂದರಲ್ಲಿ ಮೊದಲ ನೌಕರಿಗೆ ಸೇರಿದ್ದ ಎಂದು ಅವರು ಮಾಹಿತಿ ನೀಡಿದರು.

ಮಗನ ಬಗ್ಗೆ ತಂದೆ ಎಷ್ಟೇ ವಿಶ್ವಾಸ ವ್ಯಕ್ತಪಡಿಸಿದರೂ ಮೆಹದಿಯದು ದ್ವಂದ್ವ ಮುಖದ ಬದುಕು ಎಂದೇ ಪೊಲೀಸರು ಬಲವಾಗಿ ನಂಬಿದ್ದಾರೆ. 24ರ ಹರೆಯದ ಯುವಕನೊಬ್ಬ ಎಲ್ಲರಂತೆ ಟ್ವಿಟರ್‌ ಖಾತೆ ತೆರೆದಿರಬಹುದು. ಆದರೆ ಐ.ಎಸ್‌ ಪರವಾಗಿ ಟ್ವೀಟ್‌ ಮಾಡುತ್ತಿದ್ದ ಈ ಖಾತೆಗೆ ಜಗತ್ತಿನೆಲ್ಲೆಡೆಯಿಂದ, ವಿಶೇಷವಾಗಿ ಯೂರೋಪ್‌ನಲ್ಲಿರುವ ಮುಸ್ಲಿಂ ಯುವಕರಿಂದ ಅಪಾರ ಬೆಂಬಲ ವ್ಯಕ್ತವಾಗಿರುವುದು ಪೊಲೀಸರ ಈ ಸಂದೇಹಕ್ಕೆ ಕಾರಣವಾಗಿದೆ.

ಮೆಹದಿಯ ಟ್ವಿಟರ್‌ ಖಾತೆಯ ಐ. ಪಿ ವಿಳಾಸವನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಆದರೆ ಮೆಹದಿ ಆಗಾಗ ಬಳಸುತ್ತಿದ್ದ ‘@EISaltador’ ಹೆಸರಿನ ಪರ್ಯಾಯ ಟ್ವಿಟರ್‌ ಖಾತೆಯನ್ನು ತನಿಖೆಗೆ ಒಳಪಡಿಸಿವೆ.

Write A Comment