ಕರ್ನಾಟಕ

ನಂದಿತಾ ತಂದೆ ಅಂಗಡಿಗೆ ದುಷ್ಕರ್ಮಿಗಳಿಂದ ಬೆಂಕಿ: ತೀರ್ಥಹಳ್ಳಿ: ಬಿಗುವಿನ ವಾತಾವರಣ

Pinterest LinkedIn Tumblr

nanditha-father-krishnamurt
ತೀರ್ಥಹಳ್ಳಿ: ನಂದಿತಾ ಸಾವಿನ ಪ್ರಕರಣ ಜನರ ಮನಸ್ಸಿನಿಂದ ಮಾಸುವ ಮುನ್ನ ಆಕೆಯ ತಂದೆ ಟಿ.ಜಿ.ಕೃಷ್ಣ ಅವರ ಅಂಗಡಿ ಶುಕ್ರವಾರ ಬೆಳಗಿನ 2.30ರ ಸುಮಾರಿಗೆ ಬೆಂಕಿಗೆ ಆಹುತಿಯಾಗಿದೆ. ಮಗಳ ಸಾವಿನ ನಂತರ 20 ದಿನ ಮುಚ್ಚಿದ್ದ ಅಂಗಡಿಯನ್ನು ಮತ್ತೆ ತೆರೆದು ಕೃಷ್ಣ ವ್ಯಾಪಾರ ಆರಂಭಿಸಿದ್ದರು. ಸುಮಾರು ಮೂರು ಲಕ್ಷ ಮೌಲ್ಯದ ಸಾಮಗ್ರಿಗಳು ಬೆಂಕಿಯಲ್ಲಿ ಸುಟ್ಟು­ಹೋಗಿವೆ  ಎಂದು ಸ್ಥಳೀಯರು ತಿಳಿಸಿ­ದ್ದಾರೆ.

ಸುದ್ದಿ ಹರಡುತ್ತಿದ್ದಂತೆ ಅಂಗಡಿ ಎದುರು ನೂರಾರು ಜನರು ಜಮಾಯಿ­ಸಿ­ದರು. ಅದೇ ವೇಳೆ ನಂದಿತಾ ಸಾವಿನ ಪ್ರಕರಣದಲ್ಲಿ ವಿಚಾರಣೆಗೆ ಒಳಗಾಗಿದ್ದ ಬಾಳೇಬೈಲಿನ ಇರ್ಫಾನ್‌ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಕೃಷ್ಣ ಕುಟುಂಬ ಮತ್ತು ಇರ್ಫಾನ್‌ ನಡುವೆ ಘರ್ಷಣೆ ಸಂಭವಿಸಿದೆ. ಸ್ಥಳದಲ್ಲಿಯೇ ಇದ್ದ ಪೊಲೀಸರು ಘಟನೆ ವಿಕೋಪಕ್ಕೇ­ರುವುದನ್ನು ತಪ್ಪಿಸಿದ್ದಾರೆ.

ದೂರು, ಪ್ರತಿ ದೂರು ದಾಖಲಾಗಿದೆ. ಕೃಷ್ಣ ಅವರ ಪತ್ನಿ ವಿಮಲಾ ಹಾಗೂ ಅವರ ತಾಯಿ ಗಿರಿಜಾ ಆಸ್ಪತ್ರೆಗೆ ದಾಖ­ಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿ ಬಂದ ಎಸ್‌ಪಿ ಕೌಶಲೇಂದ್ರ ಕುಮಾರ್‌  ವಾತಾವರಣ ತಿಳಿಗೊಳಿಸಲು ಪ್ರಯತ್ನಿಸಿದರು.

pvec13dec14th-3

ಅಳಲು: ‘ನನಗೆ ನ್ಯಾಯ, ರಕ್ಷಣೆ ಸಿಗು­ತ್ತಿಲ್ಲ. ನನ್ನ ಮಗಳನ್ನು ಕೊಂದವರಿಗೆ ರಕ್ಷಣೆ ಸಿಗುತ್ತಿದೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕಷ್ಟ ಹೇಳುತ್ತೇನೆ. ನನ್ನ ಬದುಕು ನಾಶವಾಗುತ್ತಿದೆ’ ಎಂದು ಕೃಷ್ಣ ಅಳಲು ತೋಡಿಕೊಂಡರು.

ಸಿಬಿಐ ತನಿಖೆಗೆ ಒತ್ತಾಯ
ಸುವರ್ಣಸೌಧ (ಬೆಳಗಾವಿ): ಈ ಪ್ರಕರಣ ಕುರಿತು ಸಿಬಿಐನಿಂದ ತನಿಖೆ ನಡೆಸಬೇಕು ಹಾಗೂ ಕೃಷ್ಣ ಪೂಜಾರಿ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸ­ಬೇಕು ಎಂದು ಬಿಜೆಪಿ ಸದಸ್ಯ ಪ್ರೊ. ಕೃಷ್ಣಭಟ್ ಶುಕ್ರವಾರ ವಿಧಾನ ಪರಿಷತ್ತಿ­ನಲ್ಲಿ ಆಗ್ರಹಿಸಿದರು.

ಪೊಲೀಸ್ ಸರ್ಪಗಾವಲು ಇದ್ದರೂ ದುಷ್ಕರ್ಮಿಗಳು ಕೃಷ್ಣ ಅವರ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ ಎಂದರೆ ಆ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡು­ವಲ್ಲಿ ಸರ್ಕಾರ ವಿಫಲವಾಗಿದೆ ಎಂದರ್ಥ ಎಂದು ಟೀಕಿಸಿದರು.

ಈ ಮಾತಿಗೆ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ದನಿ­ಗೂಡಿ­ಸಿದರು. ಈ ಬಗ್ಗೆ ಗೃಹ ಸಚಿವ­ರಿಂದ ಉತ್ತರ ಕೊಡಿಸುವುದಾಗಿ ಸಮಾಜ ಕಲ್ಯಾಣ ಸಚಿವ ಎಚ್.­ಆಂಜನೇಯ ಉತ್ತರಿಸಿದರು.

 

Write A Comment